ವಿಜಯ ದರ್ಪಣ ನ್ಯೂಸ್…..
ವರ್ಷದ ಪ್ರತಿ ದಿನವೂ ಕನ್ನಡ ಭಾಷೆ ಬಳಕೆ, ಬೆಳವಣಿಗೆಗೆ ಆದ್ಯತೆ ನೀಡಬೇಕು : ಬಿ.ಆರ್.ಅನಂತಕೃಷ್ಣ

ಶಿಡ್ಲಘಟ್ಟ : ಕನ್ನಡ ರಾಜ್ಯೋತ್ಸವವು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷದ ಪ್ರತಿ ದಿನವೂ ಕನ್ನಡ ಭಾಷೆ ಬಳಕೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡುವ ಸಂಕಲ್ಪದ ದಿನವಾಗಬೇಕು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಉಲ್ಲೂರುಪೇಟೆ ಬಳಿಯ ‘ಪುನೀತ್ ರಾಜ್‌ಕುಮಾರ್ ವೃತ್ತ’ದಲ್ಲಿ ಸ್ನೇಹ ಯುವಕರ ಸಂಘದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವಿದೆ ಇಂದಿನ ಆಧುನಿಕ ಯುಗದಲ್ಲಿ ಕನ್ನಡದ ಅಸ್ತಿತ್ವ ಮತ್ತು ಸ್ವಾಭಿಮಾನ, ಉಳಿಸಿ, ಬೆಳೆಸುವುದು
ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಅಭಿಮಾನ ಮತ್ತು ಗೌರವ ಇರಬೇಕು ಮನೆ, ಶಾಲೆ, ಸಾರ್ವಜನಿಕ ವಲಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವ ಮೂಲಕ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವವನ್ನು ಪರಿಚಯಿಸಬೇಕು ಎಂದರು.
ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್ ಮಾತನಾಡಿ,
ಯುವಕರು ಕನ್ನಡ ಭಾಷೆ ಮತ್ತು ಸಂಸ್ಕೃತಿ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ,
ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಪ್ರತಿವರ್ಷ
ಹಮ್ಮಿಕೊಳ್ಳಲಾಗುತ್ತಿದ್ದು ಈ ಮೂಲಕ ಕನ್ನಡಾಭಿಮಾನ ಬೆಳೆಸಲು ಶ್ರಮಿಸಲಾಗುತ್ತಿದೆ ಎಂದು ನುಡಿದರು.
ಇದೇ ವೇಳೆ ತಾಯಿ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ್, ಮುನಿರಾಜು,
ವೆಂಕಟೇಶ್, ನವೀನ್,ಉದಯ್, ಶೇಖರ್, ಶ್ರೀಧರ್ ಸುನಿಲ್ ಹಾಗು ಸ್ಥಳಿಯರು ಪಾಲ್ಗೊಂಡಿದ್ದರು.










