ಹಿರಿಯ ನಾಗರೀಕರಿಗೆ ಕಾನೂನು ಅರಿವು ಮೂಡಿಸಬೇಕು : ಜಿ. ಪಂ. ಉಪ ಕಾರ್ಯದರ್ಶಿ ಶಿವಕುಮಾರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ನ.12:
ಹಿರಿಯ ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಮತ್ತು ಸಮಾಜದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಿರಿಯ ನಾಗರಿಕರ ಆರೋಗ್ಯ, ಸಮಾಜಿಕ ಭದ್ರತೆ, ಕಾನೂನು ನೆರವು ಹಾಗೂ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರಾಧಿಕಾರ, ಮಹಿಳಾ ಮತ್ತು ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಇವರ ಸಹಯೋಗದಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಗಳಿಗೆ ಪೋಷಕರು ಮತ್ತು ಹಿರಿಯ ನಾಗರೀಕರ ನಿರ್ವಹಣೆ ಕಲ್ಯಾಣ ಕಾಯ್ದೆ-2007 ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವರು ಹಿರಿಯರಿಗೆ ವಯಸ್ಸಾಗಿದೆ ಎಂದು ಉದಾಸೀನಭಾವದಿಂದ ನೋಡುತ್ತಾರೆ. ಆದರೆ ಸಮಾಜದ ನಿರ್ಮಾಣದಲ್ಲಿ ಮತ್ತು ಕುಟುಂಬದೆ ಬೆಳವಣಿಗೆಯಲ್ಲಿ ಹಿರಿಯರ ಪಾತ್ರ ದೊಡ್ಡದು. ಅವರಿಗೆ ಗೌರವ ನೀಡಬೇಕು. ಅವರು ಅನುಭವದ ಗಣಿ. ಅನಭವದ ಮುಖಾಂತರ ಹಿರಿಯರು ಮಕ್ಕಳು, ಮೊಮ್ಮಕ್ಕಳಿಗೆ ನೈತಿಕ ಪಾಠ ತಿಳಿಸಿಕೊಡುತ್ತಾರೆ. ಮನೆಯನ್ನು ಕಾಯುತ್ತಾರೆ ಹಾಗೂ ಭದ್ರತೆಯನ್ನು ಒದಗಿಸಿಕೊಡುತ್ತಾರೆ. ಮನೆಯ ಸದಸ್ಯರೆಲ್ಲರನ್ನೂ ಗಮನಿಸುತ್ತಿರುತ್ತಾರೆ. ಹಿರಿಯರು ಮನೆಯಲ್ಲಿ ಇದ್ದರೆ ಮನೆಯು ಸುಭದ್ರವಾಗಿರುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ ಅವರು ಮಾತನಾಡಿ, ನಾವು ತಂದೆ ತಾಯಿಯನ್ನ ಹೇಗೆ ಗೌರವಿಸುತ್ತೇವೋ ನಮ್ಮ ಮಕ್ಕಳು ಕೂಡ ಅದೇ ರೀತಿ ನೋಡಿಕೊಳ್ಳುತ್ತಾರೆ. ಹಿರಿಯರನ್ನ ಗೌರವದಿಂದ ಕಾಣಬೇಕು. ಗುರು, ಹಿರಿಯರ ಬಗ್ಗೆ ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ತಿಳಿಸಬೇಕು ಎಂದರು.
ಆಧುನಿಕ ಜೀವನ ಶೈಲಿ, ತಂತ್ರಜ್ಞಾನದ ಬೆಳವಣಿಗೆ, ನಗರೀಕರಣ, ಅವಿಭಕ್ತ ಕುಟುಂಬ ಪದ್ಧತಿ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗುತಿ ದ್ದಾರೆ. ಅವರಿಗೆ ಪೋಷಣೆ ಮತ್ತು ರಕ್ಷಣೆ ಅತ್ಯವಶ್ಯಕವಾಗಿ ಬೇಕಾಗಿದೆ. ಇಂತಹ ಹಿರಿಯ ನಾಗರಿಕರ ರಕ್ಷಣೆಗಾಗಿಯೇ ‘ಪಾಲಕರ ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007’ನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಅನ್ವಯ ಮಕ್ಕಳು ಅಥವಾ ಸಂಬಂಧಿಕರು ತಮ್ಮ ಪೋಷಕರಿಗೆ ಆಹಾರ, ವಸತಿ, ಬಟ್ಟೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೇಳಿದರು.
ಹಿರಿಯ ನಾಗರಿಕರಿಗೆ ಕೆಟ್ಟದಾಗಿ ವರ್ತಿಸುವುದು, ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು. ಹಿರಿಯರಿಗೆ ಬೇಕಾದ ಆರೈಕೆ, ಪಾಲನೆ, ಪೋಷಣೆ ಮಾಡಿರುವುದು ಮಾಡಿದರೆ ಹಿರಿಯ ನಾಗರಿಕರು ತಕ್ಷಣವೇ ಹಿರಿಯ ನಾಗರಿಕರ ಸಹಾಯವಾಣಿ 1090 ಸಂಖ್ಯೆ ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಗಳಾದ ಅನಿತ ಲಕ್ಷ್ಮಿ ಅವರು ಮಾತನಾಡಿ ಕುಟುಂಬವಿಲ್ಲದ ಮಕ್ಕಳಿಗೆ ಕಾನೂನು ಬದ್ಧವಾಗಿ ಕುಟುಂಬವನ್ನು ಒದಗಿಸುರುವು. ಅನಾಥ, ಒಪ್ಪಿಸಲ್ಪಟ್ಟ, ನಿರ್ಗತಿಕ ಮತ್ತು ಪರಿತ್ಯಕ್ತ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098/112ಗೆ ಕರೆ ಮಾಡುವುದರ ಮುಖಾಂತರ ಮಕ್ಕಳ ಭವಿಷ್ಯತ್ತಿನ ಹಿತಾಸಕ್ತಿಗಾಗಿ ಎಲ್ಲರೂ ಕೈಜೋಡಿಸಿ ಎಂದು ತಿಳಿಸಿದರು. 2026-27ನೇ ಸಾಲಿನ ಘೋಷವಾಕ್ಯ “ಪೋಷಕರಾಗಲು ಅಡ್ಡದಾರಿಗಳಿಲ್ಲ. ಕಾನೂನು ಬದ್ದ ದತ್ತು ಸ್ವೀಕರವೊಂದೇ ಸರಿಯಾದ ಮಾರ್ಗ” ಪ್ರತಿಜ್ಞಾ ವಿಧಿ ಬೊಧಿಸಿದರು.
ಪ್ಯಾನಲ್ ಅಡ್ವೋಕೇಟ್ ಮುಧುಸೂದನ್ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಆಪ್ತ ಸಮಾಲೋಚಕರಾದ ಶಿವಕುಮಾರ್ ಹಿರಿಯ ನಾಗರಿಕ ಕುರಿತು ಕಾನೂನಿನ ಅರಿವು ಕುರಿತು ಸಮಗ್ರ ಮಾಹಿತಿ ನೀಡಿದರು. ಅವಿಭಕ್ತ ಕುಟುಂಬದ ಮಹತ್ವವನ್ನು ತಿಳಿಸಿದರು.
ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮುದ್ದಣ್ಣ, ಮಕ್ಕಳ ರಕ್ಷಣಾಧಿಕಾರಿ ಅನಿತ ಲಕ್ಷ್ಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹಿರಿಯ ನಾಗರೀಕರು, ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.








