--Ads--

ಇಂದು ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿಯಾಗಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಪಟ್ಟಾಭಿಷೇಕ

On: December 14, 2024 3:12 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಇಂದು ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿಯಾಗಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಪಟ್ಟಾಭಿಷೇಕ

ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ, ಉತ್ತರಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿರುವ ಕೆಎಎಸ್ ಅಧಿಕಾರಿ 49 ವರ್ಷದ ಡಾ. ಎಚ್ಎಲ್ ನಾಗರಾಜ್ ಅವರನ್ನು ನೇಮಿಸಲಾಗಿದ್ದು, ಶನಿವಾರ (ಡಿಸೆಂಬರ್.14) ವಿಧಿ ವಿಧಾನಗಳೊಂದಿಗೆ ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ನನಗೆ ಈಗ 81 ವರ್ಷ ಆಗಿದೆ. ಹೀಗಾಗಿ, ನಮ್ಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಸೇವಾ ಕಾರ್ಯಗಳನ್ನು ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರನ್ನು ಉತ್ತರಾಧಿಕಾರಿಯಾಗಿ ಭಗವಂತನ ಇಚ್ಛೆಯಂತೆ ಆಯ್ಕೆ ಮಾಡಲಾಗಿದೆ. ಈ ಆಯ್ಕೆಗೆ ಮಠದ ಟ್ರಸ್ಟ್‌ನ ಎಲ್ಲಾ ಸದಸ್ಯರು ಸರ್ವಾನುಮಂತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಮಠದ ಉತ್ತರಾಧಿಕಾರಿಯಾಗಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು ‘ನಾಥ’ ಪರಂಪರೆಯಂತೆ ನಡೆಸಿಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು. ಶನಿವಾರ (ಡಿ.14) ಸಂಜೆ ಆರಂಭವಾಗುವ ವಿಧಿ ವಿಧಾನಗಳು, ಕಾರ್ಯಕ್ರಮಗಳು ಭಾನುವಾರ ಸಂಜೆವರೆಗೂ ಜರುಗಲಿವೆ. ಹತ್ತು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಆದಿಚುಂಚನಗಿರಿ ಪೀಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಜಗದ್ಗುರು ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಗಳ ಪೀಠಾಧ್ಯಕ್ಷರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ನೀಡಿ ಉತ್ತರಾಧಿಕಾರಿಯಾಗಿ ನೇಮಿಸಲಾಗುತ್ತದೆ ಎಂದು ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು. ಧಾರ್ಮಿಕತೆ ಮತ್ತು ಸಮಾಜ ಸೇವಾ ಮನೋಭಾವ ಹೊಂದಿದ್ದ ನಾಗರಾಜ್ ಅವರು ಅವಿವಾಹಿತರಾಗಿಯೇ ಇದ್ದಾರೆ. ಅವರು ಶನಿವಾರದಿಂದ ವಿಶ್ವ ಒಕ್ಕಲಿಗೆ ಮಹಾಸಂಸ್ಥಾನ ಮಠದ ಮಹಾಸ್ವಾಮೀಜಿಯಾಗಿ ಮಠದ ಕಾರ್ಯಗಳು, ಶ್ರೀಮಠದ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲಿದ್ದಾರೆ. ಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋಗುತ್ತಾರೆ ಎಂದು ವಿವರಿಸಿದರು. ಮಠದ ಟ್ರಸ್ಟಿಗಳಾದ ದೊಡ್ಡಮನೆ ವೆಂಕಟೇಶ, ಆಡಿಟರ್ ನಾಗರಾಜ್, ಪಂಚಲಿಂಗಯ್ಯ, ಶಿವಲಿಂಗಯ್ಯ, ಮಾರಪ್ಪಣ್ಣ, ವಕೀಲರಾದ ಸಿದ್ದರಾಜು ಇದ್ದರು.

ಡಾ.ಎಚ್.ಎಲ್.ನಾಗರಾಜ್ ಅವರ ಹಿನ್ನೆಲೆ:

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದ ಲಿಂಗಯ್ಯ ಮತ್ತು ಗಂಗಮ್ಮನವರ ಸುಪುತ್ರರಾಗಿರುವ ಡಾ.ಎಚ್.ಎಲ್.ನಾಗರಾಜ್ ಅವರು ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮುಗಿಸಿದ್ದಾರೆ.

ನಂತರ ಪದವಿ ಮುಗಿಸಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಕ್ರೋಫೈನಾನ್ಸ್‌ನಲ್ಲಿ ಸಂಶೋಧನೆ (ಪಿಎಚ್‌ಡಿ) ಮಾಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುವಾಗಿನಿಂದಲೂ ಡಾ.ಎಚ್.ಎಲ್.ನಾಗರಾಜ್ ಅವರಿಗೆ ಧಾರ್ಮಿಕ ಕಾರ್ಯಗಳ ಕುರಿತು ಆಸಕ್ತಿ ಬೆಳೆದಿತ್ತು. ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆದರ್ಶವಾಗಿ ತೆಗೆದುಕೊಂಡಿದ್ದರು. ಶಿಕ್ಷಣ ಮುಂದುವರೆಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ಅವರು ಆದಿಚುಂಚನಗಿರಿ ಮಠದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ಅವಧಿಯಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೇವಾ ಕಾರ್ಯಗಳಿಂದ ಪ್ರಭಾವಿತರಾದರು. ಸನ್ಯಾಸತ್ವ ಮತ್ತು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವಾ ಕಾರ್ಯ ಮಾಡಬೇಕು ಎನ್ನುವ ಮನಸ್ಸು ಮಾಡಿದರು. ತಹಸೀಲ್ದಾರ್ ಆಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ, ಮೈಶುಗ‌ರ್ ಕಾರ್ಖಾನೆಯ ‘ಎಂ.ಡಿ. ಆಗಿ ಕೆಲಸ ಮಾಡಿದ್ದಾರೆ.

WhatsApp

Join Now

Telegram

Join Now

Instagram

Join Now