ನಗರಸಭೆ ಸದಸ್ಯತ್ವದಿಂದ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿದ್ದ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್  ತಡೆ

ವಿಜಯ ದರ್ಪಣ ನ್ಯೂಸ್…

ನಗರಸಭೆ ಸದಸ್ಯತ್ವದಿಂದ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿದ್ದ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್  ತಡೆ

ಶಿಡ್ಲಘಟ್ಟ : ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ನಗರಸಭೆಯ 7 ಮಂದಿ ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿ ಆದೇಶ ಮಾಡಿದೆ.

ಕಳೆದ 2024 ರ ಸೆಪ್ಟೆಂಬರ್ 5 ರಂದು ನಡೆದಿದ್ದ ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದ ಕಾಂಗ್ರೆಸ್‌ನ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಏಪ್ರಿಲ್ 29 ರಂದು ಆದೇಶ ನೀಡಿದ್ದರು.

ಜಿಲ್ಲಾಧಿಕಾರಿಗಳ ಅನರ್ಹ ಆದೇಶದ ವಿರುದ್ದ 7 ಮಂದಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಾಧೀಶರು ಮುಂದಿನ ಜೂನ್ 3 ರವರೆಗೂ ಜಿಲ್ಲಾಧಿಕಾರಿಗಳ ಅನರ್ಹತೆಯ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿದ್ದಾರೆ.

ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದಾರೆ ಎಂದು ದೂರು ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಮತ್ತು ನಗರಸಭೆ ಸದಸ್ಯ ಹಾಗೂ ಅಧ್ಯಕ್ಷ ಸ್ಥಾನಕ್ಕೆ ರ್ಸ್ಪಸಿದ್ದ ಎಂ.ಶ್ರೀನಿವಾಸ್ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ 3ನೇ ವಾರ್ಡ್ ನ ಸದಸ್ಯೆ ಎಸ್.ಚಿತ್ರಮನೋಹರ್, 10 ನೇ ವಾರ್ಡ್ ನ ಸದಸ್ಯ ಎಸ್.ಎಂ.ಮಂಜುನಾಥ್, 11 ನೇ ವಾರ್ಡ್ ನ ಸದಸ್ಯ ಎಲ್.ಅನಿಲ್ ಕುಮಾರ್, 16 ನೇ ವಾರ್ಡ್ ನ ಸದಸ್ಯ ಎನ್.ಕೃಷ್ಣಮೂರ್ತಿ, 22 ನೇ ವಾರ್ಡ್ ನ ಟಿ.ಮಂಜುನಾಥ್, 28 ನೇ ವಾರ್ಡ್ ನ ಜಭೀವುಲ್ಲಾ ಮತ್ತು 7 ನೇ ವಾರ್ಡ್ ನ ಶಿವಮ್ಮ ಮುನಿರಾಜು ಅವರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು, ಇದೀಗ ಈ ಆದೇಶಕ್ಕೆ ಹೈ ಕೋರ್ಟ್ ತಾತ್ಕಾಲಿಕ ತಡೆ ನೀಡಿ ಆದೇಶ ಮಾಡಿದೆ.