ಭೂಮಿಯೊಳಗೆ ಹೊಡೆದು ಸೀಳಿರುವ ಕ್ಯಾರೇಟ್ ಬೆಳೆ:ರೈತರಿಗೆ ಲಕ್ಷಾಂತರ ರೂ.ಗಳ ನಷ್ಟ

ವಿಜಯ ದರ್ಪಣ ನ್ಯೂಸ್…..

ಭೂಮಿಯೊಳಗೆ ಹೊಡೆದು ಸೀಳಿರುವ ಕ್ಯಾರೇಟ್ ಬೆಳೆ: ರೈತರಿಗೆ ಲಕ್ಷಾಂತರ ರೂ.ಗಳ ನಷ್ಟ

ಶಿಡ್ಲಘಟ್ಟ : ರೈತರು ಬೆಳೆದಿರುವ ಕ್ಯಾರೇಟ್ ಭೂಮಿಯಲ್ಲೆ ಹೊಡೆದು ಹೋಗುತ್ತಿದ್ದು, ಮಾರಾಟವಾಗದೆ ಪರದಾಡುವಂತಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ರೈತ ಒತ್ತಾಯ ಮಾಡಿದ್ಧಾರೆ.
ಸಾವಿರಾರು ಅಡಿಗಳಿಂದ ಬೋರವೆಲ್ ನೀರನ್ನು ತಗೆದು ಹನಿ ನೀರಾವರಿಯನ್ನು ಅಳವಡಿಸಿಕೊಂಡು, ಲಕ್ಷಾಂತರ ರೂಪಾಯಿಗಳು ಬಂಡವಾಳ ಹೂಡಿಕೆ ಮಾಡಿ, ಬೆಳೆದಿರುವ ಕ್ಯಾರೆಟ್ ಬೆಳೆಯು, ಭೂಮಿಯಲ್ಲೆ, ಹೊಡೆದುಕೊಂಡಿರುವ ಕಾರಣ, ಮಾರಾಟ ಮಾಡಲೂ ಆಗದೆ, ತೋಟದಲ್ಲೆ ಬಿಟ್ಟಿರಲು ಸಾಧ್ಯವಾಗದೆ, ನಷ್ಟ ಮಾಡಿಕೊಂಡು ಪರದಾಡುವಂತಾಗಿದೆ ಎಂದು ರೈತರಾದ ಹಂಡಿಗನಾಳ ಅರುಣ್ ಕುಮಾರ್ ತಮಗಾದ ನೋವನ್ನು ತೋಡಿಕೊಂಡರು.

ಜಂಗಮಕೋಟೆಯಿಂದ ಬಿತ್ತನೆ ಬೀಜ ತಂದು ನಾಟಿ, ಮಾಡಿರುವ ಕ್ಯಾರೆಟ್ ಬೆಳೆಯು, ಕಟಾವಿಗೆ ಬಂದಿದ್ದು, ತೋಟದಲ್ಲಿ ಕ್ಯಾರೇಟ್ ಗಡ್ಡೆಗಳನ್ನು ಕಿತ್ತು ನೋಡಿದರೆ 60 ರಿಂದ 70 ರಷ್ಟು ಭಾಗ ಗಡ್ಡೆಯೂ ಒಡೆದು ಹೋಗಿದೆ, ವ್ಯಾಪಾರಕ್ಕೆ ಬರುತ್ತಿರುವ ವ್ಯಾಪಾರಿಗಳು ಗಡ್ಡೆ ಒಡೆದಿರುವುದನ್ನು ನೋಡಿ, ವಾಪಸ್ಸು ಹೋಗುತ್ತಿದ್ದಾರೆ ತೋಟಗಳಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ನಾವು ಈಗ ತೀವ್ರ ನಷ್ಟವನ್ನು ಅನುಭವಿಸುವಂತಾಗಿದೆ ಎಂದರು.

ನಾವು ಮಣ್ಣು ಪರೀಕ್ಷೆ ಮಾಡಿಸಿದ್ದೇವೆ , ಕೊಟ್ಟಿಗೆ ಗೊಬ್ಬರ ಕೊಟ್ಟಿದ್ದೇವೆ ,ಹಿಂಡಿ ಹಾಕಿದ್ದೇವೆ ಭೂಮಿಯನ್ನು ಫಲವತ್ತಾಗಿ ಮಾಡಿದ್ದೇವೆ ಜತೆಗೆ ಇತ್ತೀಚಿನ ದಿನಗಳಲ್ಲಿ ಕೂಲಿ ಆಳುಗಳು ಸಿಗುವುದೇ ಕಷ್ಟ ಅಂತಹುದರಲ್ಲಿ ಕೂಲಿ ಆಳುಗಳನ್ನು ಇಟ್ಟುಕೊಂಡು ಕೆಲಸ ಮಾಡಿಸಿದ್ದೇವೆ ಇವೆಲ್ಲಗಳ ಮಧ್ಯೆ ಕಳಪೆ ಬಿತ್ತನೆ ಬೀಜದಿಂದ ಈಗಾದರೆ ರೈತರ ಕಷ್ಟ ಕೇಳುವುರಾರು ದೇವರೆ ಬಲ್ಲ ಎನ್ನುತ್ತಾರೆ ಅವರು.

ಕ್ಯಾರೆಟ್ ಅಲ್ಪಾವಧಿ ಬೆಳೆಯಾಗಿದ್ದು 2 ವರೆಯಿಂದ 3 ತಿಂಗಳಲ್ಲಿ ಫಸಲು ಕೈಗೆ ಸಿಗಲಿದೆ ಬಿತ್ತನೆ ಬೀಜ ಕೊಟ್ಟ ಅಂಗಡಿಯವರು ಹೇಳಿದಂತೆ ಕ್ಯಾರೆಟ್ ಬೆಳೆಗೆ ಗೊಬ್ಬರ, ಔಷಧಿ ನೀಡಿ ಆರೈಕೆ ಮಾಡಲಾಗಿದೆ ಇನ್ನೇನು ಕ್ಯಾರೆಟ್ ಫಸಲು ಕೀಳುವ ಹಂತದಲ್ಲಿ ಸೀಳು ಬಿಟ್ಟಿದೆ ,ನಾನು ಮುಕ್ಕಾಲು ಎಕರೆಗೆ ಸುಮಾರು 60 ರಿಂದ 70 ಸಾವಿರ ರೂ.ಗಳ ಬಂಡವಾಳ ಹೂಡಿಕೆ ಮಾಡಿದ್ದೇನೆ ಬೆಳೆಯು ಉತ್ತಮವಾಗಿ ಬಂದಿದೆ ಈಗಿನ ಬೆಲೆಗಳಲ್ಲಿ, ಸುಮಾರು 100 ಮೂಟೆಯಾಗುತ್ತಿತ್ತು ಒಂದು ಮೂಟೆಗೆ 3 ಸಾವಿರ ರೂ.ಗಳಿಂದ 3 ಸಾವಿರ 500 ರೂ.ಗಳು ಇದೆ ಅಂದರೂ ಸುಮಾರು 3 ಲಕ್ಷ ದಿಂದ 3 ಲಕ್ಷ 50 ಸಾವಿರ ರೂ.ಗಳು ಆಗುತ್ತಿತ್ತು ಆದರೆ ಈಗ ಕೇಳುವವರೇ ಇಲ್ಲದಂತಾಗಿದೆ ಮನದಾಳದ ನೋವನ್ನು ಹೇಳಿಕೊಂಡರು.

ಕ್ಯಾರೆಟ್ ಸೀಳು ಬಿಟ್ಟಿರುವ ಬಗ್ಗೆ ಬಿತ್ತನೆ ಬೀಜ ಕೊಟ್ಟ ಅಂಗಡಿಯವರಲ್ಲಿ ಕೇಳಿದಾಗ ನಮಗೇನು ಗೊತ್ತಿಲ್ಲ ಕಂಪನಿ ಕೊಟ್ಟ ಬೀಜವನ್ನು ನಾವು ವಿತರಿಸಿದ್ದೇವಷ್ಟೆ ನೀವು ಏನಿದ್ದರೂ ಕಂಪನಿ ಅವರ ಬಳಿ ಕೇಳಿಕೊಳ್ಳಿ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದರು.

ಈ ಬಗ್ಗೆ ಸಂಬಂದಿಸಿದ ಅಧಿಕಾರಿಗಳು ನಷ್ಟವನ್ನು ಭರಿಸಿಕೊಡಲು ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಬೇಕೆಂದು ಅವರು ಮನವಿ ಮಾಡಿದರು.