ಬೆಂಗಳೂರಿನಲ್ಲಿ ಫೆಬ್ರವರಿ 6 ರಿಂದ ಮೂರು ದಿನ ‘ಜವಳಿ’ ಹಬ್ಬ! ಎಫ್ & ಎ ಶೋ ಮತ್ತು ಸಿದ್ಧ ಉಡುಪುಗಳ ಮೇಳಕ್ಕೆ ವೇದಿಕೆ ಸಿದ್ಧ! 

ವಿಜಯ ದರ್ಪಣ ನ್ಯೂಸ್…..

ಬೆಂಗಳೂರಿನಲ್ಲಿ ಫೆಬ್ರವರಿ 6 ರಿಂದ ಮೂರು ದಿನ ‘ಜವಳಿ’ ಹಬ್ಬ! ಎಫ್ & ಎ ಶೋ ಮತ್ತು ಸಿದ್ಧ ಉಡುಪುಗಳ ಮೇಳಕ್ಕೆ ವೇದಿಕೆ ಸಿದ್ಧ!

ವೈಟ್‌ಫೀಲ್ಡ್‌ನ ಕೆಟಿಪಿಒ ಟ್ರೇಡ್‌ ಸೆಂಟರ್‌ನ ಹಾಲ್‌ ಬಿನಲ್ಲಿ ಆಯೋಜಿಸಲಾಗಿದೆ

ಬೆಂಗಳೂರು, ಫೆಬ್ರವರಿ 3, 2026 : ಬಹುನಿರೀಕ್ಷಿತ ಜವಳಿ ವಾಣಿಜ್ಯ ಪ್ರದರ್ಶನಗಳಿಗೆ ಬೆಂಗಳೂರು ಸಜ್ಜಾಗಿದೆ. ಫೆಬ್ರವರಿ 6, 7 ಮತ್ತು 8 ರಂದು ಎಫ್‌&ಎ ಶೋ (ಜವಳಿ ಮತ್ತು ಪರಿಕರಗಳ ವಾಣಿಜ್ಯ ಪ್ರದರ್ಶನ) ಹಾಗೂ ಎಎಸ್‌ಎಫ್‌ (ಸಿದ್ಧ ಉಡುಪು ಮೇಳವು) ವೈಟ್‌ಫೀಲ್ಡ್‌ನ ಕೆಟಿಪಿಒ ಟ್ರೇಡ್‌ ಸೆಂಟರ್‌ನ ಹಾಲ್‌ ಬಿನಲ್ಲಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಪ್ರಮುಖ ಮೇಳವು ಜವಳಿ ಉದ್ಯಮದ ವೃತ್ತಿಪರರಿಗೆ ಒಂದು ಉತ್ತಮ ವೇದಿಕೆಯಾಗಲಿದ್ದು, ಬಟ್ಟೆಗಳು, ಪರಿಕರಗಳು ಹಾಗೂ ಸಿದ್ಧ ಉಡುಪುಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಒಂದೇ ಸೂರಿನಡಿ ವೀಕ್ಷಿಸುವ, ಖರೀದಿಸುವ ಅವಕಾಶವನ್ನು ಕಲ್ಪಿಸುತ್ತದೆ.

ಈ ಅವಳಿ ಪ್ರದರ್ಶನಗಳ ಉದ್ಘಾಟನಾ ಸಮಾರಂಭವು ಫೆಬ್ರವರಿ 6ರಂದು ಬೆಳಗ್ಗೆ 11 ಗಂಟೆಗೆ ಕೆಟಿಪಿಒ ಟ್ರೇಡ್‌ ಸೆಂಟರ್‌ನಲ್ಲಿ ನೆರವೇರಲಿದೆ. ಪಿವಿಎಚ್‌ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕರು, ಭಾರತೀಯ ಉಪಖಂಡದ ಹಬ್‌ ಲೀಡ್‌ ಆಗಿರುವ ಶ್ರೀಮತಿ ದೀಪ್ತಿ ಬೋಪಯ್ಯ ಹಾಗೂ ಮಿಂತ್ರಾ ಸಂಸ್ಥೆಯ ಸ್ಟ್ರಾಟೆಜಿಕ್‌ ಪಾಲುದಾರಿಕೆ ಹಾಗೂ ಒಮ್ನಿಚಾನೆಲ್‌ನ ಮುಖ್ಯಸ್ಥರಾದ ಶ್ರೀ ವೇಣು ನಾಯರ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅವರಿಗೆ ಉದ್ಯಮದ ಇತರೆ ಗಣ್ಯರು ಸಾಥ್‌ ನೀಡಲಿದ್ದಾರೆ.

ಕಳೆದ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಎಫ್‌&ಎ ಪ್ರದರ್ಶನ ಹಾಗೂ ಸಿದ್ಧ ಉಡುಪುಗಳ ಮೇಳವು ಬೆಂಗಳೂರಿನ ಜವಳಿ ಹಾಗೂ ಸಿದ್ಧ ಉಡುಪುಗಳ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ವಾರ್ಷಿಕ ಸಂಗಮದ ತಾಣವಾಗಿದೆ. ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪಾಲುದಾರರು, ಉದ್ಯಮಿಗಳು ಇಲ್ಲಿ ನಿಯಮಿತವಾಗಿ ಭೇಟಿಯಾಗಿ, ಕಚ್ಚಾ ವಸ್ತುಗಳ ಬಗ್ಗೆ, ಹೊಸ ಟ್ರೇಂಡ್‌ಗಳ ಅನ್ವೇಷಣೆ, ಪಾಲುದಾರಿಕೆಗಳ ಸ್ಥಾಪನೆ ಮತ್ತು ಜಾಗತಿಕ ಫ್ಯಾಷನ್‌ ಉದ್ಯಮದಲ್ಲಿ ಮುಂದೆ ಬರುವ ಅವಕಾಶಗಳನ್ನು ಚರ್ಚಿಸಲು ಹಾಗೂ ಪಡೆಯಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಈ ಆವೃತ್ತಿಯ ಜವಳಿ ಪ್ರದರ್ಶನದಲ್ಲಿ ಫ್ಯಾಬ್ರಿಕ್ಸ್, ಟ್ರಿಮ್ಸ್, ಅಲಂಕಾರಿಕ ವಸ್ತುಗಳು, ಉಡುಪುಗಳು ಮತ್ತು ಸೇವೆಗಳನ್ನು ಪ್ರತಿನಿಧಿಸುವ 103ಕ್ಕೂ ಹೆಚ್ಚು ಪ್ರಮುಖ ಉತ್ಪಾದಕರು ಮತ್ತು ಪೂರೈಕೆದಾರರು ಭಾಗವಹಿಸಲಿದ್ದಾರೆ. ಈ ಎಲ್ಲ ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಮಾರುಕಟ್ಟೆಯಲ್ಲಿ ನಾಯಕರಾಗಿ ಗುರುತಿಸಿಕೊಂಡಿವೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಖರೀದಿದಾರರಿಗೆ ಗುಣಮಟ್ಟ ಮತ್ತು ನಾವೀನ್ಯತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಪ್ರದರ್ಶನವು ಪ್ರಮುಖ ಸೋರ್ಸಿಂಗ್ ಹಾಗೂ ನೆಟ್‌ವರ್ಕಿಂಗ್‌ ತಾಣವಾಗಿದ್ದು, ಭಾರತ ಹಾಗೂ ವಿದೇಶಿ ಪೂರೈಕೆದಾರರಿಗೆ ಪ್ರಮುಖವಾಗಿದೆ.

ಈ ವೇದಿಕೆಯ ನಿರಂತರ ಯಶಸ್ಸಿನ ಬಗ್ಗೆ ಮಾತನಾಡಿರುವ ಭಾರತೀಯ ಜವಳಿ ಪ್ರದರ್ಶನಗಳ ಸಿಇಒ ಶ್ರೀ ಪಿ.ಎನ್. ಕೃಷ್ಣಮೂರ್ತಿ ಅವರು, ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ನಮ್ಮ ಪ್ರದರ್ಶನಗಳು ಉದ್ಯಮದ ಜೊತೆಯಲ್ಲಿ ಬೆಳೆದಿವೆ ಮತ್ತು ಗಂಭೀರ ವ್ಯವಹಾರಗಳು ನಡೆಯುವ ವಿಶ್ವಾಸಾರ್ಹ ಮಾರುಕಟ್ಟೆಯಾಗಿ ರೂಪುಗೊಂಡಿವೆ. ಪ್ರತಿ ಆವೃತ್ತಿಯೂ ನಮ್ಮ ವೇದಿಕೆಯ ಮೇಲಿರುವ ವಿಶ್ವಾಸವನ್ನು ಹೆಚ್ಚು ಮಾಡುತ್ತಾ ಹೋಗುತ್ತಿದೆ.

ಇದರಲ್ಲಿ ಭಾಗವಹಿಸಿದವರಿಗೆ ಪ್ರಬಲ ಫಲಿತಾಂಶಗಳನ್ನು ನಿರಂತರವಾಗಿ ನೀಡುತ್ತಿರುವುದರಿಂದ ಪ್ರದರ್ಶನಗಳು ಯಶಸ್ವಿಯಾಗುತ್ತಿವೆ. 2026ರ ಬೆಂಗಳೂರು ಆವೃತ್ತಿಯು ಮತ್ತೊಮ್ಮೆ ದಾಖಲೆಯ ವಹಿವಾಟು ಮತ್ತು ಗುಣಮಟ್ಟದ ಖರೀದಿದಾರರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸ ನಮಗಿದೆ. ಇಂದು ಜಾಗತಿಕ ಜವಳಿ ಕ್ಷೇತ್ರವು ಭಾರತದತ್ತ ಮುಖ ಮಾಡುತ್ತಿದ್ದು, ಈ ರೀತಿಯ ವೇದಿಕೆಗಳು ಜಾಗತಿಕ ಸಂಪರ್ಕವನ್ನು ಕಲ್ಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.