ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಕೊಡಬಾರದು: ಯತೀಂದ್ರ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್….

ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಕೊಡಬಾರದು: ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಫೆಬ್ರುವರಿ ಆರು ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಕೊಡಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಶುಕ್ರವಾರ ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿಗಳ ಬಳಗದ ಎಂಟನೇ ವಾರ್ಷಿಕೋತ್ಸವ, ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಪದಗ್ರಹಣ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭವನ್ನು ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಾವು ಯಾರಿಗೆ ಅಧಿಕಾರ ಕೊಡ್ತೀವಿ ಎಂಬುದು ಮುಖ್ಯವಾಗುತ್ತದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಸಾಮಾಜಿಕ ನ್ಯಾಯ ಕೊಡುವವರಿಗೆ ಕೈಗೆ ಅಧಿಕಾರ ನೀಡಿದರೆ ಸಂವಿಧಾನ ಉಳಿಯುತ್ತದೆ. ಆದರೆ, ಇತ್ತೀಚಿನ ದಿನಮಾನಗಳಲ್ಲಿ ಸಂವಿಧಾನ ವಿರೋಧಿಗಳು ಪ್ರಬಲರಾಗುತ್ತಿದ್ದಾರೆ. ಅವರಿಗೆ ಹೆಚ್ಚೆಚ್ಚು ಅಧಿಕಾರಕ್ಕೆ ಬರುತ್ತಿದ್ದಾರೆ. ಇದು ಅಪಾಯಕಾರಿ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಡಾ.ಎಚ್‌.ಸಿ. ಮಹದೇವಪ್ಪ ಅವರು ಅಪರೂಪದ ರಾಜಕಾರಣಿ ಹಾಗೂ ಅಪರೂಪದ ನಾಯಕರು, ಡಾ.ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನದ ಆಶಯಗಳಲ್ಲಿ ತಿಳಿಸಿರುವಂತೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಶ್ಲಾಘಿಸಿದರು.

ಡಾ. ಮಹದೇವಪ್ಪ ಅವರು ನಮ್ಮ ತಂದೆ ಸಿದ್ದರಾಮಯ್ಯ ಅವರ ಪರಮಾಪ್ತರು. ಸದಾ ಅವರೊಂದಿಗೆ ಇದ್ದು ಕೆಲಸ ಮಾಡುತ್ತಾ ಬಂದಿದ್ದಾರೆ. ಜೆಡಿಎಸ್‌ನಿಂದ ತಂದೆಯವರನ್ನು ಉಚ್ಚಾಟಿಸಿದಾಗ ಅವರೊಂದಿಗೆ ಗಟ್ಟಿಯಾಗಿ ನಿಂತರು. ನಂತರ ಎಬಿಪಿಜೆಡಿಗೆ ಬಂದರು. ಅಲ್ಲಿಂದ ಕಾಂಗ್ರೆಸ್‌ಗೆ ಬಂದರು. ಟಿ. ನರಸೀಪುರದಿಂದ ಆರು ಬಾರಿ ಶಾಸಕರಾಗಿ, ಸಚಿವರಾಗಿ ತಂದೆಯವರ ಜೊತೆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಯಶಸ್ಸಿನಲ್ಲಿ ಮಹದೇವಪ್ಪ ಅವರ ಪಾಲು ಕೂಡ ಇದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ಸಾಹಿತಿ ಪ್ರೊ.ರಾಜಪ್ಪ ದಳವಾಯಿ, ಮೈವಿವಿ ಹಿರಿಯ ಪ್ರಾಧ್ಯಾಪಕ ಡಾ.ಡಿ. ಆನಂದ್‌ ಮುಖ್ಯ ಅತಿಥಿಗಳಾಗಿದ್ದರು. ಬಳಗದ ಗೌರವಾಧ್ಯಕ್ಷ ಬನ್ನೂರಿನ ಎಂ.ಎನ್‌.ಸ್ವಾಮಿ, ರಾಜ್ಯಾಧ್ಯಕ್ಷ ಹಿನ್ಕಲ್‌ ನಂಜುಂಡ, ಉಪಾಧ್ಯಕ್ಷ ಕಡಕೊಳ ಕೆ.ವಿ.ಭರತರಾಜ್‌, ಕಾರ್ಯದರ್ಶಿ ಹರದನಹಳ್ಳಿ ಆರ್.ಮಹೇಶ್‌, ಖಜಾಂಚಿ ದಡದಹಳ್ಳಿ ಬಿ.ಎಂ.ಮಹದೇವ್‌, ಮಾಧ್ಯಮ ಸಲಹೆಗಾರ ಕೋಟೆ ಎಚ್‌.ಕೆ.ಮಂಜುನಾಥ್‌, ನಿರ್ದೇಶಕರಾದ ಮಾವಿನಹಳ್ಳಿ ನಾಗೇಶ್‌, ಹುಲ್ಲಹಳ್ಳಿ ಬಾಬು, ಬೆನಕನಹಳ್ಳಿ ಎಂ.ಹರೀಶ್‌ಕುಮಾರ್‌ ಇದ್ದರು. ಕಾರ್ಯಾಧ್ಯಕ್ಷ ಕುರಬೂರು ಡಾ.ಕೆ.ಎನ್‌.ಬಸವರಾಜು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬೆನಕನಹಳ್ಳಿ ಡಾ.ಬಿ.ಆರ್‌. ನಾಗರಾಜು ಸಂವಿಧಾನಪೀಠಿಕೆ ಬೋಧಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಗ್ಗಲಿಪುರ ಮಧುಕುಮಾರ್‌, ನಲ್ಲೂರು ಮಹದೇವಸ್ವಾಮಿ, ರಂಗಸ್ವಾಮಿ ಡೊನಾಲ್ಡ್‌, ವಿಶಾಲ್‌ ನಂದಕುಮಾರ್‌, ಕೆ.ಕಬ್ಬಾಳಯ್ಯಗೆ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನೇಮಕಾತಿ ಆದೇಶ ಪತ್ರ ವಿತರಿಸಿದರು.

ವಿವಿಧ ಕ್ಷೇತ್ರಗಳ 10 ಸಾಧಕರಿಗೆ ಸನ್ಮಾನ
ಅಖಿಲ ಕರ್ನಾಟಕ ಡಾ.ಎಚ್‌.ಸಿ. ಮಹದೇವಪ್ಪ ಅಭಿಮಾನಿ ಬಳಗದಿಂದ ವಿವಿಧ ಕ್ಷೇತ್ರಗಳ 10 ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌(ಮಾಧ್ಯಮ), ಮಂಡ್ಯದ ದಸಂಸ ಹಿರಿಯ ಹೋರಾಟಗಾರ ಗುರುಪ್ರಸಾದ್‌ ಕೆರೆಗೋಡು(ಸಂಘಟನೆ), ಜಯದೇವ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಪಶುಪತಿ(ಆರೋಗ್ಯ), ಸರಗೂರು ತಾ.ಪ್ರಗತಿಪರ ರೈತ ಕೆ.ಜಿ.ಗೋಪಾಲಯ್ಯ, ಆಕಾಶವಾಣಿ ಕಲಾವಿದೆ, ಸೋಬಾನೆ ಗಿರಿಜಮ್ಮ, ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ಕುರುಬೂರಿನ ಬಿ.ಚೈತ್ರಾ, ಮಲಬಾರ್‌ ಗೋಲ್ಡ್‌ ದಕ್ಷಿಣ ವಲಯ ಮುಖ್ಯಸ್ಥ ಶರ್ಫುದ್ದೀನ್‌, ವಾಸ್ತುಶಿಲ್ಪ ಕಲಾವಿದ ಬನ್ನೂರಿನ ರಮೇಶ್‌ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹನೂರು ತಾ.ಗೆ ಪ್ರಥಮ ಸ್ಥಾನ ಗಳಿಸಿದ ಆರ್‌.ಸಂಜನಾ ಸನ್ಮಾನಿತರು.