*ಮಾದಕ ವಸ್ತುಗಳ ಮಾಯಾಜಾಲ*
ವಿಜಯ ದರ್ಪಣ ನ್ಯೂಸ್….
*ಮಾದಕ ವಸ್ತುಗಳ ಮಾಯಾಜಾಲ*

ಮನುಷ್ಯನು ಸಾಮಾನ್ಯವಾಗಿ ತನಗೆ ತಿಳಿದೊ ತಿಳಿಯದೆಯೋ ಅನೇಕ ಚಟಗಳ ದಾಸನಾಗಿರುತ್ತಾನೆ. ಕೆಲವು ಚಟಗಳು ಸಾದಾರಣ ಪರಿಣಾಮವನ್ನು ಉಂಟು ಮಾಡುವ ಚಟಗಳಾದರೆ, ಇನ್ನು ಕೆಲವು ಉತ್ತೇಜನಕಾರಿಯಾದ ಪರಿಣಾಮ ಬೀರುವ ಚಟಗಳ ಜಾಲದೊಳಗೆ ಬಂಧಿಯಾಗಿರುತ್ತಾನೆ. ಈ ಚಟಗಳು ಆ ವ್ಯಕ್ತಿಯ ಬದುಕು ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ತೀವ್ರ ಪರಿಣಾಮವನ್ನು ಬೀರುತ್ತದೆ.
ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತುಗಳ ವ್ಯಸನಿಗಳಾಗಿದ್ದು ದಿನನಿತ್ಯ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಸುದ್ದಿಯಾಗುತ್ತಿರುವುದು ಹಾಗೂ ನಮ್ಮ ಸುತ್ತಮುತ್ತ ಕಾಣುತ್ತಿರುವುದು ಆತಂಕದ ವಿಚಾರವಾಗಿದೆ. ಮಾದಕ ವಸ್ತುಗಳ ಬಳಕೆಯು ಹೆಚ್ಚಾಗಿ ಯುವಜನರಲ್ಲಿ ಕಂಡುಬರುತ್ತಿರುವ ಪಿಡುಗಾಗಿದೆ. ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಇದರ ಚಟಕ್ಕೆ ಬಿದ್ದವರೇಷ್ಟೋ ಮಂದಿ . ಈ ಚಟದ ಜಾಲದೊಳಗೆ ಒಮ್ಮೆ ಸಿಲುಕಿಕೊಂಡರೆ ಹೊರಬರುವುದು ಕ್ಷಣವೇ ಸರಿ.
ಇಂದು ಹೆಚ್ಚಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪ್ರಾರಂಭದಲ್ಲಿ ಕುತೂಹಲ ಹಾಗೂ ಸ್ನೇಹಿತರ ಒತ್ತಾಯದಿಂದ ಆರಂಭವಾಗುವ ಮಧ್ಯ ಹಾಗೂ ಕಡಿಮೆ ಬೆಲೆಗೆ ಸಿಗುವ ಪಾನ್ , ಪಾಲಿಶ್, ವೈಟ್ನರ್, ಮುಂತಾದ ವಸ್ತುಗಳ ಸೇವನೆ ಕೊನೆಗೆ ಮಾದಕ ಪದಾರ್ಥಗಳಾದ ಗಾಂಜಾ, ಆಫೀಮು ಚರಸ್ ಬ್ರೌನ್ ಶುಗರ್ ಮುಂತಾದವುಗಳಿಗೆ ದಾಸರಾಗುತ್ತಾರೆ.ಇನ್ನಷ್ಟು ಸೇವಿಸುವಂತೆ ಪ್ರೇರೇಪಿಸುವ ಅಮಲು ಅಪರಾಧಿ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ.

ಮನದ ಮೂಲೆಯಲ್ಲಿ ಅಡಗಿದ್ದ ದುಃಖ, ನೋವು, ಸಂತೋಷ ,ಆಕ್ರೋಶ,ಕೋಪ ಪ್ರೀತಿ ವಿರಹ ಮಾದಕ ಪದಾರ್ಥಗಳ ಸೇವನೆಯಿಂದ ಉದ್ವೇಗಗೊಳ್ಳುತ್ತದೆ. ತಮಗರಿವಿಲ್ಲದೆಯೆ ಬೇರೊಂದು ಮಾಯಾಜಾಲದೊಳಗೆ ಬಂಧಿಯಾಗುತ್ತಾರೆ ಆಗಲೇ ಅನೇಕ ಅಸಹಜ ಅನೈತಿಕ ಅಪರಾಧಗಳು ಸಂಭವಿಸುವ ಸಾಧ್ಯತೆ ಹೆಚ್ಟಾಗಿರುತ್ತದೆ. ಕೆಲವು ವರ್ಷಗಳವರೆಗೆ ನಗರ ಪ್ರದೇಶಗಳಿಗೆ ಅವರಿಸಿದ್ದ ಡ್ರಗ್ಸ್ ಮಾಫಿಯಾ ಹಳ್ಳಿಗಳಿಗೂ ತನ್ನ ವ್ಯಾಪ್ತಿಯನ್ನು ಹರಡಿದೆ.
ಸಾಮಾನ್ಯ ಸ್ಥಿತಿಯಲ್ಲಿರುವ ಓರ್ವ ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡಲು ಅನೇಕ ಬಾರಿ ಯೋಚಿಸುತ್ತಾನೆ. ಆದರೆ ಮಾದಕ ಸೇವನೆ ಮಾಡಿದ ವ್ಯಕ್ತಿಯು ಯಾವುದೇ ರೀತಿಯ ಅಪರಾಧಗಳನ್ನು ಎಸಗಲು ಸಿದ್ದನಿರುತ್ತಾನೆ ಆತನ ಮನಸ್ಥಿತಿಯು ಮಾದಕ ಪದಾರ್ಥಗಳ ಅಮಲಿನಲ್ಲಿ ತನ್ನತನವನ್ನು ಕಳೆದುಕೊಂಡಿರುತ್ತಾನೆ.
ಇತ್ತೀಚಿನ ಕೆಲವೊಂದು ಚಲನಚಿತ್ರದ ಸನ್ನಿವೇಶಗಳು ಕೂಡ ಯುವಜನರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ.ಇಂತಹ ಪಾತ್ರಗಳು ಹದಿಹರೆಯದ ಯುವ ಸಮೂಹದಲ್ಲಿ ಒಂದು ಆಕರ್ಷಣೆ ಉಂಟು ಮಾಡಿ ವಾಸ್ತವ ಸ್ಥಿತಿಯ ಯೋಚಿಸದಂತೆ ಮಾಡುತ್ತದೆ. ನಕಾರಾತ್ಮಕ ಚಿಂತನೆಗಳು ಹೆಚ್ಚಾದಂತೆ ಸಮಾಜದ ಕಟ್ಟುಪಾಡುಗಳು ವ್ಯಸನಿಗಳಿಗೆ ಸಮಸ್ಯೆಯಂತೆ ತೋರುತ್ತದೆ. ಅಮಲು ಪದಾರ್ಥಗಳು ಕೆಲವು ನಿಮಿಷದ ಆನಂದವನ್ನು ನೀಡಬಹುದು ಆದರೆ ಆ ವ್ಯಕ್ತಿಯ ಬದುಕನ್ನು ಆತನಿಗೆ ಗೊತ್ತಿಲ್ಲದೆ ಬಲಿ ತೆಗೆದುಕೊಳ್ಳುತ್ತದೆ. ವ್ಯಸನಿಯ ಬದುಕಿನ ಜೊತೆಗೆ ಕುಟುಂಬದ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ.
ಮಾದಕ ಪದಾರ್ಥಗಳನ್ನು ವಿತರಿಸುವ ಜಾಲವನ್ನು
ಮಟ್ಟ ಹಾಕಲು ಕಾನೂನಿನೊಂದಿಗೆ ಸಹಕರಿಸುವುದು ಪ್ರತಿಯೊಬ್ಬ ಜವಬ್ಧಾರಿಯುತ ನಾಗರಿಕರ ಕರ್ತವ್ಯವಾಗಿದೆ. ಡ್ರಗ್ಸ್ ಪೆಡ್ಲರ್ ಗಳ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದು ಮುಖ್ಯವಾಗಿದೆ. ಪೆಡ್ಲರ್ ಹಾಗೂ ವ್ಯಸನಿಗಳಿಗೆ ಕಾನೂನಿನ ಭಯವಿಲ್ಲವಾಗಿದೆ. ಬಂಧಿಸಿದರೂ ಜಾಮೀನು ಪಡೆದು ಬಿಡುಗಡೆಗೊಳ್ಳುವರು. ಬಿಡುಗಡೆಯ ನಂತರ ಪುನಃ ಅದೇ ಚಾಳಿಯನ್ನು ಮುಂದುವರೆಸುತ್ತಾರೆ. ಕಾನೂನು ಇವರಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು.ಇದರಿಂದ ಉಳಿದವರಿಗೂ ಕಾನೂನಿನ ಭಯ ಹುಟ್ಟಬಹುದು.
ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧಿತರಾಗುವ ವ್ಯಸನಿಗಳು ಯಾವುದೇ ರೀತಿಯ ಸಂಕೋಚ ಭಯ ಪಶ್ಚತ್ತಾಪದಿಂದ ಬಳಲುವುದಿಲ್ಲ. ಅವರನ್ನು ಬಿಡುಗಡೆಗೊಳಿಸಲು ಅವರ ಕುಟುಂಬದವರು ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಕುಗ್ಗಿರುತ್ತಾರೆ. ವಿದ್ಯಾವಂತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ಜಾಲದಲ್ಲಿ ಬಂಧಿಗಳಾಗಿದ್ದಾರೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಆತಂಕಗೊಂಡಿರುತ್ತಾರೆ.
ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರ ಸಂಘ ಸಂಸ್ಥೆಗಳು ಅನೇಕ ಅಭಿಯಾನಗಳನ್ನು ನಡೆಸುತ್ತಿವೆ. ಅಭಿಯಾನದ ಜೊತೆಗೆ ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದೆ. ವ್ಯಸನಿಗಳನ್ನು ಚಿಕಿತ್ಸೆಯ ಜೊತೆಗೆ ಮನಪರಿವರ್ತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಕರ್ತವ್ಯ.

ಮದ್ಯ ಹಾಗೂ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡಲು ಅನೇಕ ಶಿಬಿರಗಳು ಹಾಗೂ ಖಾಸಗಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಅವುಗಳಲ್ಲಿ ದಾಖಲಾಗಲು ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯ ಬಡ ಕುಟುಂಬದ ಯುವಕರು ಮಾದಕ ವ್ಯಸನಿಗಳಾಗಿದ್ದು ಅವರಿಗೆ ಚಿಕಿತ್ಸೆ ನೀಡಲು ಆರ್ಥಿಕ ಸ್ಥಿತಿಗತಿಯು ತೊಡಕಾಗುತ್ತದೆ. ವ್ಯಸನ ಮುಕ್ತ ಕೇಂದ್ರಗಳು ವ್ಯಸನಿಗಳಿಂದಲೇ ಹಣ ಸಂಗ್ರಹ ಮಾಡಿ ಚಿಕಿತ್ಸೆ ನೀಡುತ್ತಿದೆ. ಡಿ. ಎಡಿಕ್ಷನ್ ಕೇಂದ್ರದವರು ಒಬ್ಬ ವ್ಯಸನಿಗೆ ಚಿಕಿತ್ಸೆ ನೀಡಲು ತಿಂಗಳಿಗೆ ಸುಮಾರು ಹದಿನೈದು ಸಾವಿರ ರೂಪಾಯಿಯಿಂದ ಇಪ್ಪತ್ತು ಸಾವಿರ ರೂಪಾಯಿಯವರೆಗೆ ಹಣವನ್ನು ಪಡೆಯುತ್ತಾರೆ. ಕೇಂದ್ರದಲ್ಲಿರುವ ಕೌನ್ಸಿಲರ್, ಸೈಕ್ರಿಯಾಟಿಸ್ಟ್, ಯೋಗ ಥೆರಪಿಸ್ಟ್, ಡಾಕ್ಟರ್, ನರ್ಸ್ ವಾರ್ಡ್ಬಾಯ್ ಇವರಿಗೆ ವೇತನ ಹಾಗೂ ವ್ಯಸನಿಯ ದೈನಂದಿನ ಖರ್ಚುವೆಚ್ಚಗಳು ಸೇರಿ ವ್ಯಸನಿಯಿಂದ ಹೆಚ್ಚಿನ ಹಣ ತೆಗೆದುಕೊಳ್ಳುವುದು ಅನಿವಾರ್ಯ ಕೂಡ.
ಕೇವಲ ಅಭಿಯಾನ , ಮಾಹಿತಿ ಕಾರ್ಯಾಗಾರ, ಅರಿವು ಕಾರ್ಯಕ್ರಮ ಮಾಡುವುದರಿಂದ ಮಾದಕ ವ್ಯಸನಿಗಳಲ್ಲಿ ಸುಧಾರಣೆ ತರುವುದು ಅಸಾಧ್ಯ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನ ಇರುವ ಕೇಂದ್ರಗಳಿಗೆ ಹೆಚ್ಚಿನ ಗಮನ ಹರಿಸಿ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಂಡು ವ್ಯಸನ ಮುಕ್ತ ಕೇಂದ್ರಗಳನ್ನು ನಡೆಸಿದರೆ ಬಡಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.
ಮಾದಕ ವ್ಯಸನಿಗಳಾದವರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬ ಜವಬ್ಧಾರಿಯುತ ಜನರು ಸಹಕರಿಸಬೇಕು. ಯಾವುದೋ ಕಾರಣದಿಂದ ದುಶ್ಚಟಗಳಿಗೆ ಬಲಿಯಾದವರನ್ನು ಚಿಕಿತ್ಸೆ ಪ್ರೀತಿ ವಿಶ್ವಾಸ ಅನುಕಂಪ ತೋರಿ ಹೊಸ ಬದುಕನ್ನು ಕಟ್ಟಿಕೊಡಬೇಕು. ಟೀಕಿಸುವುದು ,ಹೀಯಾಳಿಸುವುದು , ಕೆಟ್ಟ ನೋಟದಿಂದ ಅವರನ್ನು ಕಾಣುವುದನ್ನು ಬಿಡಬೇಕು.

ಜಯಂತಿ ರೈ
ಮಡಿಕೇರಿ
