--Ads--

ಮಹಾತ್ಮಾ ಗಾಂಧೀಜಿ ಮತ್ತು  ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳಂತೆ ನಾವೆಲ್ಲರು ಮನುಜರು ಎನ್ನುವ ವಿಶಾಲ ಚಿಂತನೆಗಳಡಿ ಕರ್ತವ್ಯ ಪರರಾಗಬೇಕು 

On: July 6, 2026 6:34 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಹಾತ್ಮಾ ಗಾಂಧೀಜಿ ಮತ್ತು  ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳಂತೆ ನಾವೆಲ್ಲರು ಮನುಜರು ಎನ್ನುವ ವಿಶಾಲ ಚಿಂತನೆಗಳಡಿ ಕರ್ತವ್ಯ ಪರರಾಗಬೇಕು 

ಮಡಿಕೇರಿ: ಅರೆ ಬೆತ್ತಲೆಯ ಪಕೀರ ಮಹಾತ್ಮಾ ಗಾಂಧೀಜಿ ಮತ್ತು ಜ್ಞಾನ ಸಂಪನ್ನರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳಂತೆ ನಾವೆಲ್ಲರು ಮನುಜರು ಎನ್ನುವ ವಿಶಾಲ ಚಿಂತನೆಗಳಡಿ ನಾವೆಲ್ಲರೂ ಕರ್ತವ್ಯ ಪರರಾಗಬೇಕೆಂದು ಸಮಾಜಸೇವಕರು ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸಾಬು ವರ್ಗಿಸ್ ಕರೆ ನೀಡಿದರು.

ಕೊಡಗು ಪತ್ರಕರ್ತರದ ಸಂಘದ ವತಿಯಿಂದ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ “ಪತ್ರಿಕಾ ದಿನಾಚರಣೆ” ಮತ್ತು ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬರು ಮೈಮುಚ್ಚುವಂತೆ ವಸ್ತ್ರವನ್ನು ತೊಡುವವರೆಗೂ ತಾನು ಅವರಂತೆಯೇ ಇರುವುದಾಗಿ ಬದುಕಿನುದ್ದಕ್ಕೂ ಅರೆಬೆತ್ತಲೆಯಾಗಿ ಬದುಕು ನಡೆಸಿದ ಮಹಾತ್ಮಾ ಗಾಂಧೀಜಿ ಹಾಗೂ ಹಲವಾರು ಪದವಿಗಳನ್ನು ಪಡೆದ ಡಾ.ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಹಾಗೂ ಅವರ  ತತ್ವಾದರ್ಶ ಚಿಂತನೆಗಳಿಗೆ ತಕ್ಕಂತೆ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸುವವರು ಪ್ರಾಮಾಣಿಕವಾದ ಸೇವೆಯನ್ನು ಸಮಾಜಕ್ಕೆ ನೀಡುವಂತಾಗಲೆಂದು ಹಾರೈಸಿದರು.

ಸ್ವತಂತ್ರ ಅಭ್ಯರ್ಥಿಯಾಗಿ ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿಗೆ ಆಯ್ಕೆಯಾಗಿ ೨೦೨೨-೨೩ನೇ ಸಾಲಿನಲ್ಲಿ ತಾನು ಅಧ್ಯಕ್ಷನಾದ ಸಂದರ್ಭ, ಗ್ರಾಮಸ್ಥರ ದೇವಾಲಯವೇ ಆಗಿರುವ ಪಂಚಾಯ್ತಿಯಲ್ಲಿ ಜನಸಾಮಾನ್ಯರಿಗೆ ಅಗತ್ಯ ದಾಖಲೆಗಳು ದೊರಕದಿರುವ ವಿಚಾರ ನನ್ನನ್ನು ಸಾಕಷ್ಟು ಚಿಂತನೆಗೊಡ್ಡಿತು. ಮಹಾನ್ ವ್ಯಕ್ತಿಗಳ ಚಿಂತನೆಗಳಂತೆ ಗ್ರಾಮದ ಪ್ರತಿಯೊಬ್ಬರನ್ನು ಗೌರವಯುತವಾಗಿ ನಡೆಸಿಕೊಳ್ಳುವುದರೊಂದಿಗೆ, ಅವರಿಗ ಅಗತ್ಯ ಸೌಲಭ್ಯ ಒದಗಿಸಿಕೊಡುವ ಪ್ರಯತ್ನಗಳಿಗೆ ಅಡಿ ಇಟ್ಟೆ. ತನ್ನ ಅಧಿಕಾರದ ಅವಧಿಯಲ್ಲಿ ೧.೫೦ ಕೋಟಿ ವೆಚ್ಚದ ಉದ್ಯೋಗ ಖಾತರಿ ಯೋಜನಾ ಕಾಮಗಾರಿ ಪಂಚಾಯ್ತಿಯಲ್ಲಿ ನಡೆದುದಲ್ಲದೆ, ೪.೫೦ ಕೋಟಿಗೂ ಹೆಚ್ಚಿನ ಇತರೆ ಅಭಿವೃದ್ಧಿ ಕಾರ್ಯಗಳು ನಡೆದವು. ಪ್ರಾಮಾಣಿಕವಾದ ನಿಷ್ಠೆಯ ಕೆಲಸ ಕಾರ್ಯಗಳು ಗುರುತಿಸಲ್ಪಡುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿ, ನೆಲ್ಯಹುದಿಕೇರಿ ಪಂಚಾಯ್ತಿ ತನ್ನ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪಂಚಾಯ್ತಿಯಾಗಿ ಗುರುತಿಸಲ್ಪಟ್ಟಿತೆಂದು ಸಂತಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಹಿರಿಯರ ಸ್ಮರಣೆಯಲ್ಲಿ ಕೊಡಗು ಪತ್ರಕರ್ತರ ಸಂಘಕ್ಕೆ ದತ್ತಿಯನ್ನು ನೀಡಿದ ದಾನಿಗಳನ್ನು ನಾವು ಯಾವತ್ತು ಸ್ಮರಿಸಬೇಕು. ಇಂತಹ ದತ್ತಿ ಪ್ರಶಸ್ತಿಗಳ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸುವ ಮೂಲಕ ಇತರರಿಗೂ ಪ್ರೇರಣೆ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಂಘದಲ್ಲಿ ಇಂತಹ ದತ್ತಿಗಳು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಲೆಂದು ಹಾರೈಸಿದರು.

ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಕ್ರಿಶ್ಚಿಯನ್ ಮಿಷನರಿಗಳ ಮೂಲಕ ಧರ್ಮ ಪ್ರಚಾರಕ್ಕೆ ಬಂದ ಹರ್ಮನ್ ಮೋಗ್ಲಿಂಗ್ ಅವರು ಕರ್ನಾಟಕದ ಮೊದಲ ಪತ್ರಿಕ “ಮಂಗಳೂರು ಸಮಾಚಾರ” ಪತ್ರಿಕೆಯನ್ನು ಆರಂಭಿಸಿದವರಾಗಿದ್ದು, ಅವರು ಹಾಗೂ ಕನ್ನಡಕ್ಕೆ ನಿಘಂಟನ್ನು ನೀಡಿದ ಕಿಟ್ಟೆಲ್ ಅವರು ಕೊಡಗಿನಲ್ಲಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಿದರಲ್ಲದೆ, ಕೊಡಗಿನ ಪತ್ರಿಕಾ ಕ್ಷೇತ್ರದ ಭೀಷ್ಮರೆಂದೇ ಖ್ಯಾತರಾದ ಬಿ.ಎಸ್.ಗೋಪಾಲಕೃಷ್ಣ ಅವರು ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಂದ ಇಂದು ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರ ಸಶಕ್ತವಾಗಿ ಬೆಳೆದು ನಿಲ್ಲುವಂತಾಗಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ. ರವಿ ಕುಮಾರ್ ಮಾತನಾಡಿ, ಸಾರ್ವಜನಿಕರು ಪತ್ರಿಕೆಗಳಿಗೆ ನೀಡುವ ಗೌರವಕ್ಕೆ ತಕ್ಕಂತೆ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಅತ್ಯಂತ ಜವಾಬ್ದಾರಿಯುತವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವುದು ಅತ್ಯವಶ್ಯ. ಸಮಾಜದ ಸ್ವಾಸ್ಥ್ಯ ಸಂರಕ್ಷಣೆ ಮತ್ತು ನಮ್ಮನ್ನಾಳುವ ವ್ಯವಸ್ಥೆಯ ಲೋಪಗಳನ್ನು ತಿಳಿಸುವ ಮೂಲಕ ಆಡಳಿತ ವ್ಯವಸ್ಥೆ ಸರಿಯಾದ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಪತ್ರಿಕೆಗಳದ್ದೆಂದು ಅಭಿಪ್ರಾಯಿಸಿ, ಬರವಣಿಗೆ ಮತ್ತು ಕ್ಯಾಮರಗಳು ಸಮಾಜದ ಧ್ವನಿಯಾಗಲೆಂದು ನುಡಿದರು.

ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಪತ್ರಕರ್ತರ ಬದುಕು ಅತಂತ್ರ. ಈ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಅಗತ್ಯ ಸಂದರ್ಭಗಳಲ್ಲಿ ಸಂಘದಿಂದ ನೆರವಿನ ಹಸ್ತವನ್ನು ನೀಡಬೇಕೆನ್ನುವ ಚಿಂತನೆಗಳಡಿ, ಕ್ಷೇಮಾಭಿವೃದ್ಧಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಇದರಲ್ಲಿನ ನಿಧಿಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆಯೆಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರು, ರೆ.ಫಾ. ಹರ್ಮನ್ ಮೋಗ್ಲಿಂಗ್ ಅವರು ೧೮೩೪ರ ಜು.೧ ರಂದು “ಮಂಗಳೂರು ಸಮಾಚಾರ” ಪತ್ರಿಕೆಯನ್ನು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಈ ದಿನವನ್ನು ಪತ್ರ‍್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಂಗಳೂರು ಸಮಾಚಾರ ಆರಂಭsದೊಂದಿಗೆ ರಾಜ್ಯದಲ್ಲಿ ಪತ್ರಿಕಾ ಮಾಧ್ಯಮ ಇಲ್ಲಿಯವರೆಗೆ ೧೮೩ ವರ್ಷಗಳ ಹಾದಿಯನ್ನು ಸವೆಸುವುದರೊಂದಿಗೆ, ಪತ್ರ‍್ರಿಕಾ ಕ್ಷೇತ್ರಕ್ಕೆ ಭದ್ರ ಬುನಾದಿಯನ್ನೆ ಹಾಕಿದೆ. ರಾಜ್ಯವ್ಯಾಪಿ ೧೨೫೨ ಪತ್ರ‍್ರಿಕೆಗಳಿದ್ದು, ಇವುಗಳಲ್ಲಿ ೫೪೦ ಪತ್ರ‍್ರಿಕೆಗಳು ದಿನಪತ್ರಿಕೆಗಳು ಹಾಗೂ ಪ್ರಾದೇಶಿಕ ಆವೃತ್ತಿಗಳಿವೆ. ಸುಮಾರು ೮೪ ಪತ್ರಿಕೆಗಳು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿತ್ತೆಂದು ಬೇಸರ ವ್ಯಕ್ತಪಡಿಸಿದರು.

ಕನ್ನಡದ ಬೆಳವಣಿಗೆ ಕಡಿಮೆ- ಸುಮಾರು ೨.೫ ರಿಂದ ೩ ಕೋಟಿ ಜನರು ಪತ್ರ‍್ರಿಕೆಗಳನ್ನು ಓದುತ್ತಾರೆ ಎನ್ನುವುದೊಂದು ಲೆಕ್ಕಾಚಾರ. ಇದರಲ್ಲಿ ಇಂಗ್ಲೀಷ್ ಪತ್ರ‍್ರಿಕೆಗಳ ಓದಿನ ಸಂಖ್ಯೆ ಹೆಚ್ಚಿದೆಯಾದರೆ, ಕನ್ನಡದ ಓದಿನ ಸಂಖ್ಯೆ ನಿರೀಕ್ಷೆಯ ಪ್ರಮಾಣದ ಬೆಳವಣಿಗೆಯನ್ನು ಕಾಣದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಬದಲಾದ ಕಾಲಮಾನಕ್ಕೆ ತಕ್ಕಂತೆ ಪತ್ರಿಕಾ ಕ್ಷೆತ್ರವು ಬದಲಾವಣೆಗಳಿಗೆ ತನ್ನನ್ನು ತೆರೆದುಕೊಳ್ಳುವುದರೊಂದಿಗೆ, ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾಗಿ ಪರಿಣಾಮಕಾರಿಯಾಗಿ ಬೆಳೆದು ನಿಂತಿದೆ. ಸಾಮಾಜಿಕ ಜಾಲತಾಣಗಳ ಹಿನ್ನೆಲೆಯಲ್ಲಿ ಪ್ರಸ್ತುತ “ರೀಲ್ಸ್” ಮಾಡುವ ಮಂದಿಯೂ ಪತ್ರಕರ್ತರೆನಿಸಿಕೊಳ್ಳುವ ಮೂಲಕ ಪತ್ರಿಕಾ ಕ್ಷೇತ್ರದ ಮೌಲ್ಯಗಳು ಕುಸಿತಕ್ಕೆ ಒಳಗಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೆ.ಫಾ.ಮೋಗ್ಲಿಂಗ್‌ರಿಗೆ ಪುಷ್ಪನಮನ- ಮಂಗಳೂರಿನಿAದ ಪ್ರಪ್ರಥಮವಾಗಿ ಪತ್ರಿಕೆಯನ್ನು ಆರಂಭಿಸಿದ ರೆ.ಫಾ. ಹರ್ಮನ್ ಮೋಗ್ಲಿಂಗ್ ಅವರ ಭಾವ ಚಿತ್ರಕ್ಕೆ ಅತಿಥಿ ಗಣ್ಯರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಎಂಟು ಮಂದಿಗೆ ದತ್ತಿ ಪ್ರಶಸ್ತಿ ಪ್ರದಾನ – ಸಮಾರಂಭದಲ್ಲಿ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಅತ್ಯುತ್ತಮ ಮಾನವೀಯ ವರದಿಗಾಗಿ ತಮ್ಮ ಮಾತೃಶ್ರೀ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟಿತ “ನಿಸ್ವಾರ್ಥ ಸೇವೆ ಮೂಲಕ ಮೂಕಪ್ರಾಣಿಗಳಿಗೆ ಆಸರೆಯಾದ ಭವಾನಿ ಎಂಬ ಶೀರ್ಷಿಕೆಯ ವರದಿಗಾಗಿ ಅಶ್ರಫ್ ಕರಡ ಅವರಿಗೆ, ಸಮಾಜಸೇವಕ ನಾಪಂಡ ಮುತ್ತಪ್ಪ ಅನರು ಮಾತ್ರಶ್ರೀ ನಾಪಂಡ ಬೋಜಮ್ಮ ಅವರ ಹೆಸರಿನಲ್ಲಿ ಸ್ಫಾಪಿಸಿರುವ ಅತ್ಯುತ್ತಮ ರಾಜಕೀಯ ವರದಿಗಾಗಿನ ದತ್ತಿ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಜನಸಂಖ್ಯೆಯೇ ಕೊಡಗು ಎಂ.ಪಿ. ಸ್ಥಾನಕ್ಕೆ ಉರಳು ಎಂಬ ಶೀರ್ಷಿಕೆಯ ವರದಿಗಾಗಿ ಎಸ್ .ಜಿ. ಉಮೇಶ್ ಅವರಿಗೆ ಪ್ರದಾನ ಮಾಡಲಾಯಿತು.

ಸಮಾಜಸೇವಕ ನಾಪಂಡ ಮುದ್ದಪ್ಪ ಅವರು ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದ ಅತ್ಯುತ್ತಮ ವರದಿಗಾಗಿ ತಮ್ಮ ತಂದೆ ದಿವಂಗತ ನಾಪಂಡ ಮುತ್ತಣ್ಣ ಸ್ಮರಣಾರ್ಥ ನೀಡಿರುವ ದತ್ತಿ ಪ್ರಶಸ್ತಿಯನ್ನು ಟಿವಿ ೧ ಮಾಧ್ಯಮದಲ್ಲಿ ಪ್ರಸಾರವಾದ ಬಾರಿಕಾಡಿನಲ್ಲಿ ಹಾರಿಹೋದ ಆದಿವಾಸಿಗಳ ಸೂರು ಶೀರ್ಷಿಕೆಯ ವರದಿಗಾಗಿ ಸೈಯದ್ ಇರ್ಫಾನ್ ಅವರಿಗೆ, ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಮತ್ತು ಅಂಜನ್ ಪ್ರಸಾದ್ ಅವರು ಬಿ.ಆರ್.ಶಶಿರಮ್ಮ ಮತ್ತು ಬಿ.ಟಿ. ರಾಮದಾಸ ಶೆಟ್ಟಿ ಅವರ ಜ್ಞಾಪಕಾರ್ಥ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿಗಾಗಿನ ದತ್ತಿ ಪ್ರಶಸಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಮೂಲಭೂತ ಸೌಕರ್ಯಗಳಿಲ್ಲದೇ ನಲಗುತ್ತಿರುವ ಮುಕ್ಕೋಡ್ಲು ಎಂಬ ಶೀರ್ಷಿಕೆಯ ವರದಿಗಾಗಿ ಕುಡೆಕಲ್ ಸಂತೋಷ್ ಅವರಿಗೆ ನೀಡಿ ಗೌರವಿಸಲಾಯಿತು.

ಕೊಡಗು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಅವರು ತಮ್ಮ ಪೋಷಕರಾದ ದಿ.ಮೀರಾ ಕಾಮತ್ ಮತ್ತು ದಿ ಎಂ.ಜಿ. ಪದ್ಮನಾಭ ಕಾಮತ್ ಅವರ ಹೆಸರಿನಲ್ಲಿ ಸ್ಫಾಪಿಸಿರುವ ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಅತ್ಯುತ್ತಮ ಮಾನವೀಯ ವರದಿಗಾಗಿನ ಪ್ರಶಸ್ತಿಯನ್ನು ಕೊಡಗು ಚಾನಲ್ ಮಾಧ್ಯಮದಲ್ಲಿ ಪ್ರಸಾರವಾದ ರಸ್ತೆಗಾಗಿ ಅಂಗಲಾಚುತ್ತಿದೆ ವಿಕಲಚೇತನ ಕುಟುಂಬ ಶೀರ್ಷಿಕೆಯ ವರದಿಗಾಗಿ ಟಿ.ಜೆ. ಪ್ರವೀಣ್ ಕುಮಾರ್ ಪ್ರದಾನ ಮಾಡಲಾಯಿತು.

ತಿಪಟೂರಿನ ಕೆ.ಎಂ.ಭಾಗೀರಥಿ ಮಹಂತೇಶ್ ಅವರು ಹಿರಿಯ ಪತ್ರಕರ್ತ ಕೆ.ಬಿ. ಮಹಂತೇಶ್ ಅವರ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗಾಗಿನ ದತ್ತಿ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಐಸ್ ಹಾಕಿಯಲ್ಲಿ ವಿದ್ಯಾರ್ಥಿನಿ ಆರ್ಯ ಛಾಪು ಎಂಬ ಶೀರ್ಷಿಕೆಯ ವರದಿಗಾಗಿ ಸೋಮವಾರಪೇಟೆಯ ಡಿ.ಪಿ.ಲೋಕೇಶ್‌ರಿಗೆ ಪ್ರದಾನ ಮಾಡಲಾಯಿತು.

ವಿರಾಜಪೇಟೆಯ ಸಮಾಜಸೇವಕರಾದ ಮನೆಯಪಂಡ ಕಾಂತಿ ಸತೀಶ್ ಅವರು ಅತ್ಯುತ್ತಮ ಕೃಷಿ ವರದಿಗೆ ನೀಡಿರುವ ದತ್ತಿ ನಿಧಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ೫೭ ತಳಿಯ ಭತ್ತ ನಾಟಿ – ಮಾದರಿಯಾದ ಹೊದೂರು ಗ್ರಾಮದ ರೈತ ರವಿಶಂಕರ್ ಎಂಬ ಶೀರ್ಷಿಕೆಯ ವರದಿಗಾಗಿ ವಿನೋದ್ ಮೂಡಗದ್ದೆ ಅವರಿಗೆ ಹಾಗೂ ಗುಡ್ಡೆಹೂಸೂರಿನ ಹಿರಿಯ ಛಾಯಾಗ್ರಾಹಕ ಗುಡ್ಡೆಮನೆ ವಿಶುಕುಮಾರ್ ಅವರು ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿಗಾಗಿನ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸೂರಿಗಾಗಿ ವೃದ್ಧೆಯ ಪ್ರಾರ್ಥನೆ ಶೀರ್ಷಿಕೆಯ ವರದಿಗಾಗಿ ಸುಂಟಿಕೊಪ್ಪದ ಸುನಿಲ್ ಎಂ.ಎಸ್. ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ಸನ್ಮಾನಿತರ ಪರವಾಗಿ ಅಶ್ರಫ್ ಕರಡ, ಎಸ್ . ಜಿ. ಉಮೇಶ್, ಕುಡೆಕಲ್ ಸಂತೋಷ್, ಟಿ.ಜೆ. ಪ್ರವೀಣ್ ಕುಮಾರ್ ಮಾತನಾಡಿದರು.ಸಂಘದ ನಿರ್ದೇಶಕ ಟಿ.ಜೆ. ಪ್ರವೀಣ್ ಪ್ರಾರ್ಥಿಸಿ, ಸಂಘದ ನಿರ್ದೇಶಕರು ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು.

ಸನ್ಮಾನಿತರನ್ನು ಅನಿಲ್ ಕುಮಾರ್ ಕೆ.ಎಸ್., ನವೀನ್ ಚಿಣ್ಣಪ್ಪ, ಹನೀಫ್, ಪಿ.ಎಂ.ರವಿ, ಟೋಮಿ ಥೋಮಸ್, ಬಿ.ಎನ್.ರವಿ ಅರುಣ್ ಕೂರ್ಗ್, ಮೋಹನ್ ರಾಜ್ ಅವರು ಪರಿಚಯಿಸಿದರು. ನಿರ್ದೇಶಕ ರಂಜಿತ್ ಕವಲಪಾರ ಕಾರ್ಯಕ್ರಮ ನಿರೂಪಿಸಿದರು.

WhatsApp

Join Now

Telegram

Join Now

Instagram

Join Now