--Ads--

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ……..

On: March 10, 2026 6:01 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ……..

ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ?
ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ?
ಸಾಂದರ್ಭಿಕ ತೀರ್ಮಾನಗಳೇ ?
ವಿಶ್ವ ಶಾಂತಿ – ಸಾಮರಸ್ಯದ ಬದ್ದತೆಯೇ ?

ಹೀಗೊಂದಿಷ್ಟು ಚರ್ಚೆಗಳು ದೇಶದಾದ್ಯಂತ ನಡೆಯುತ್ತಿದೆ. ಏಕೆಂದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಅಮೆರಿಕ, ಇಸ್ರೇಲ್, ಪ್ಯಾಲಿಸ್ಟೇನ್, ಇರಾನ್, ಲೆಬನಾನ್, ಯುಎಇ ಮುಂತಾದ ದೇಶಗಳ ನಡುವಿನ ಸಂಘರ್ಷ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾದ ಪ್ರತಿರೋಧಕ ನಿಲುವುಗಳು,, ಇವುಗಳ ಮಧ್ಯೆ ಭಾರತದ ಹೇಳಿಕೆಗಳು ಒಂದಷ್ಟು ಗೊಂದಲ ಮೂಡಿಸುತ್ತಿರುವುದು ನಿಜ…

ಭಾರತದಂತ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ, 4ನೇ ಆರ್ಥಿಕ ಶಕ್ತಿಯ, ವೈವಿಧ್ಯಮಯ ದೇಶ ಜಾಗತಿಕವಾಗಿ ಪ್ರಭಾವಶಾಲಿಯಾಗಬೇಕಾದರೆ ನಮ್ಮ ದೇಶದ ವಿದೇಶಾಂಗ ನೀತಿಯೂ ಸಹ ಅಷ್ಟೇ ಸತ್ವಯುತವೂ, ಮೌಲ್ಯಯುತವೂ ಆಗಿರಬೇಕಾಗುತ್ತದೆ.

ಈಗಿನ ಸನ್ನಿವೇಶದಲ್ಲಿ ಸ್ಪೇನ್ ದೇಶದ ಅಧ್ಯಕ್ಷರಾದ ಪೆಡ್ರೋ ಸ್ಯಾಂಚೇಜ್ ಒಂದು ನಿಲುವನ್ನು ಪ್ರಕಟಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ
” ಸ್ಪೇನ್ ಸದಾ ಮಾನವೀಯ ಮೌಲ್ಯಗಳ ಪರವಾಗಿರುತ್ತದೆ. ಯುದ್ಧಕ್ಕೆ ಪ್ರತ್ಯಕ್ಷ ಅಥವಾ ಪ್ರರೋಕ್ಷ ಸಹಾಯ ಮಾಡುವುದಿಲ್ಲ. ಅಂತರಾಷ್ಟ್ರೀಯ ಕಾನೂನುಗಳನ್ನು ಗೌರವಿಸುತ್ತದೆ. ಜಗತ್ತಿನಲ್ಲಿ ಮಾತುಕತೆಯ ಮೂಲಕವೇ ಯಾವುದೇ ಸಮಸ್ಯೆ ಬಗೆಹರಿಯಬೇಕೆ ಹೊರತು, ಯುದ್ಧ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಆದ್ದರಿಂದ ತಮ್ಮ ದೇಶದ ವಾಯುನೆಲೆ ಅಥವಾ ಭೂ ಪ್ರದೇಶವನ್ನು ಇರಾನ್ ಮೇಲೆ ದಾಳಿ ಮಾಡಲು ತಾವು ಅವಕಾಶ ಕೊಡುವುದಿಲ್ಲ ” ಎನ್ನುವ ಅವರ ಮಾತುಗಳು ಜಗತ್ತಿನ ಗಮನ ಸೆಳೆದಿದೆ. ಅಮೆರಿಕಾದಂತಹ ಬಲಿಷ್ಠ ರಾಷ್ಟ್ರದ ಎದುರು ಸಟೆದು ನಿಂತು ಈ ರೀತಿಯ ಹೇಳಿಕೆಯನ್ನು ಯುರೋಪಿನ ಚಿಕ್ಕ ರಾಷ್ಟ್ರ ಸ್ಪೇನ್ ನೀಡಿರುವುದು ನಿಜಕ್ಕೂ ಅಭಿನಂದನಾರ್ಹ….

ಅಮೆರಿಕಾದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೈತಿಕವಾಗಿ, ಮಾನಸಿಕವಾಗಿ ಆರೋಗ್ಯವಂತ ವ್ಯಕ್ತಿ ಎಂದು ಹೇಳಲು ಸಾಧ್ಯವಿಲ್ಲದಂತಹ ಸರ್ವಾಧಿಕಾರಿ ಮತ್ತು ಕ್ರೂರಿ. ಅಹಂಕಾರ, ದುರಹಂಕಾರವನ್ನು ಮೀರಿ ತಿಕ್ಕಲುತನವನ್ನು ಮೈಗೂಡಿಸಿಕೊಂಡಿರುವ, ವಿಶ್ವಶಾಂತಿಗೆ ಅತೀ ಹೆಚ್ಚು ಅಪಾಯ ಉಂಟುಮಾಡುತ್ತಿರುವ, ಭೂಮಿಯನ್ನು, ಅದರ ಪರಿಸರವನ್ನು ನಾಶ ಮಾಡುತ್ತಿರುವ ಒಬ್ಬ ಜೀವ ವಿರೋಧಿ…

ಹೌದು, ಮಧ್ಯಪ್ರಾಚ್ಯದ ಕೆಲವು ದೇಶಗಳು ಮಹಾ ಆದರ್ಶ ದೇಶಗಳೇನು ಅಲ್ಲ. ಅವು ಮತಾಂಧ ಶಕ್ತಿಗಳ ಕೈಗೆ ಸಿಕ್ಕು ಅಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನೊಂದಿಷ್ಟು ಅರಬ್ ದೇಶಗಳು ಅಮೆರಿಕಾಗೆ ಗುಲಾಮಗಿರಿ ಮಾಡಿಕೊಂಡಿವೆ. ಆದರೂ ಆ ದೇಶಗಳ ಸಾರ್ವಭೌಮತ್ವವನ್ನು ಈ ಜಗತ್ತು ಗೌರವಿಸಲೇಬೇಕು. ಒಂದು ವೇಳೆ ಆ ದೇಶದ ಆಡಳಿತ ವ್ಯವಸ್ಥೆ ಸರಿಯಿಲ್ಲದಿದ್ದರೆ, ಆಡಳಿತದ ಮುಖ್ಯಸ್ಥ ದುಷ್ಟನಾಗಿದ್ದರೆ, ಬದಲಾವಣೆ ಅನಿವಾರ್ಯವಾಗಿದ್ದರೆ ಅದನ್ನು ಅಲ್ಲಿನ ಮೂಲನಿವಾಸಿ ಜನರೇ ಪ್ರಯತ್ನಿಸಬೇಕು ಇಲ್ಲವೇ ಅನುಭವಿಸಬೇಕು ಮತ್ತು ಪರಿಸ್ಥಿತಿ ಎದುರಿಸಬೇಕು. ಅತಿಹೆಚ್ಚು ಎಂದರೆ ಇತರ ಅಕ್ಕಪಕ್ಕದ ದೇಶಗಳ ಸಹಾಯವನ್ನು ಪಡೆಯಬಹುದು. ಅದನ್ನು ಮೀರಿ ಬೇರೆ ಆಯ್ಕೆಗಳಿಲ್ಲ. ಏಕೆಂದರೆ ಒಂದು ದೇಶದ ಜನರೇ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದರೆ ಎಂತಹ ಬಲಿಷ್ಠ ಸರ್ಕಾರಗಳಿಗೂ ಅದನ್ನು ಎದುರಿಸುವುದು ತುಂಬಾ ತುಂಬಾ ಕಷ್ಟ……

ಆದರೆ, ಈಗಿನ ಮಾನಸಿಕ ಅಸ್ವಸ್ಥನಾಗಿರುವ ಅಮೆರಿಕಾದ ಅಧ್ಯಕ್ಷ ಇತರ ದೇಶಗಳ ಮೇಲೆ ಅಧಿಕಾರ ಚಲಾಯಿಸುತ್ತಿರುವುದು ತೀರಾ ಅಪಾಯಕಾರಿ. ಇದನ್ನು ನೇರ ಮಾತುಗಳಲ್ಲಿ ಖಂಡಿಸಬೇಕಾದ ಭಾರತ ಸ್ವಲ್ಪ ಮಟ್ಟಿಗೆ ಹಿನ್ನೆಲೆಗೆ ಬಂದಿದ್ದು ಉತ್ತಮ ನಡೆಯಲ್ಲ.

ಭಾರತದ ಮೊದಲ ಪ್ರಧಾನಿ ಮತ್ತು ಆಗಿನ ಕಾಲಕ್ಕೆ ಅಂತರಾಷ್ಟೀಯವಾಗಿ ಅತ್ಯುತ್ತಮ ಸ್ಟೇಟ್ಸ್ ಮನ್ ಎಂದು ಹೆಸರಾಗಿದ್ದ ಜವಹರಲಾಲ್ ನೆಹರು ಅವರು, ಭಾರತದ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ, ವಿಶ್ವದ ಎರಡು ಬಲಿಷ್ಠ ಶಕ್ತಿಗಳಾದ ಅಮೆರಿಕ ಮತ್ತು ರಷ್ಯಾ ಶೀತಲ ಸಮರದಲ್ಲಿ ಭಾಗಿಯಾಗಿದ್ದಾಗ, ವಿಶ್ವ ಎರಡು ಮಹಾ ಯುದ್ಧಗಳನ್ನು ಕಂಡು ಕೆಲವೇ ವರ್ಷಗಳು ಕಳೆದಿದ್ದಾಗ, ಈ ದೇಶಕ್ಕೆ ಅತ್ಯಂತ ಅಗತ್ಯವಾಗಿದ್ದ ನೀತಿಯನ್ನು ತಮ್ಮ ವಿದೇಶಾಂಗ ನೀತಿಯಾಗಿ ಅಳವಡಿಸಿಕೊಳ್ಳುತ್ತಾರೆ. ಅದೇ ಭಾರತವನ್ನು ವಿಶ್ವದ ಬಲಿಷ್ಠ ಮತ್ತು ಮುಂಚೂಣಿ ರಾಷ್ಟ್ರವಾಗಿ ರೂಪಿಸಿತು.
ಅದೇ ಅಲಿಪ್ತ ನೀತಿ ಅಥವಾ ತಟಸ್ಥ ನೀತಿ. ಭಾರತ ಆ ನೀತಿಯ ಮುಂಚೂಣಿ ದೇಶವಾಯಿತು.

ಅಲ್ಲಿಂದ ಭಾರತವನ್ನು ಆಳಿದ
ಡಾ. ಮನಮೋಹನ್ ಸಿಂಗ್ ಅವಧಿಯವರೆಗೆ ಎಲ್ಲಾ ಪ್ರಧಾನಿಗಳು ಅತ್ಯಂತ ಶ್ರದ್ಧೆಯಿಂದ ಆ ನೀತಿಯನ್ನೇ ಮುಂದುವರಿಸಿಕೊಂಡು ಬಂದರು.
ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ವಿರೋಧ ಪಕ್ಷದ ಪ್ರಧಾನಿಗಳಾಗಿದ್ದ ಮುರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ವಿಪಿ ಸಿಂಗ್, ಐ. ಕೆ. ಗುಜ್ರಾಲ್, ಎಚ್. ಡಿ. ದೇವೇಗೌಡ ಮುಂತಾದವರೇ ಇರಲಿ, ರಾಜೀವ್ ಗಾಂಧಿ, ನರಸಿಂಹರಾವ್ ಅವರೇ ಇರಲಿ ಎಲ್ಲರೂ ಅನುಸರಿಸಿದ್ದು ಇದೇ ಅಲಿಪ್ತ ಅಥವಾ ತಟಸ್ಥ ನೀತಿ.

ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ಸಾಹದಿಂದ ಈ ವಿಷಯದಲ್ಲಿ ಸ್ವಲ್ಪ ಎಡವಿದರು ಎಂದೆನಿಸುತ್ತದೆ ಅಥವಾ ತಮ್ಮ ಆಕ್ರಮಣಕಾರಿ ಮನೋಭಾವದಿಂದ, childish ಸ್ವಭಾವದಿಂದ ಎಲ್ಲೆಂದರಲ್ಲಿ ನುಗ್ಗಿ ವ್ಯಾವಹಾರಿಕತೆಗೆ ಒತ್ತು ಕೊಟ್ಟಿದ್ದರಿಂದ ಇಂದು ಸಂಕಷ್ಟದ ಸಮಯದಲ್ಲಿ ಭಾರತ ಒಂದು ಸ್ವಲ್ಪ ಹಾದಿ ತಪ್ಪಿದೆ ಎನಿಸುತ್ತಿದೆ.

ಚುನಾವಣೆಯಲ್ಲಿ ಗೆಲ್ಲಿಸಲು ಅಮೆರಿಕಾದ ಚುನಾವಣಾ ರಾಜಕೀಯದಲ್ಲಿ ಮೂಗು ತೂರಿಸಿ
” ಅಬ್ ಕಿ ಬಾರ್ ಟ್ರಂಪ್ಕಿ ಸರ್ಕಾರ್” ಎಂದು ಚುನಾವಣಾ ಪ್ರಚಾರ ಭಾಷಣ ಮಾಡಿ ಬಂದ ಮೇಲೆ ಭಾರತದ ನೀತಿ ಹಳಿ ತಪ್ಪಿತು. ಏಕೆಂದರೆ ಒಂದು ವಿದೇಶಾಂಗ ನೀತಿಯನ್ನು ಹೇಗಂದರೆ ಹಾಗೆ ಮುನ್ನಡೆಸಲು ಸಾಧ್ಯವಿಲ್ಲ. ಭಾರತದಂತ ದೇಶಕ್ಕೆ ಮೌಲ್ಯಯುತ ವಿದೇಶಾಂಗ ನೀತಿಯ ಅವಶ್ಯಕತೆ ಇದೆ. ಅದಕ್ಕೆ ಅಲಿಪ್ತ ನೀತಿಯೇ ಅತ್ಯಂತ ಸೂಕ್ತವಾದದ್ದು. ಆದರೆ ಮೋದಿಯವರು ಅದನ್ನು ಮುರಿದರು.

ತದನಂತರ ವ್ಯಾವಹಾರಿಕವಾಗಿ ಅಮೆರಿಕಾದೊಂದಿಗೆ ಸ್ವಲ್ಪ ಸಂಘರ್ಷ ಏರ್ಪಟ್ಟು, ರಷ್ಯಾ ಮತ್ತು ಚೀನಾದೊಂದಿಗೆ, ಜೊತೆಗೆ ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಂಡ ಕೆಲವು ವ್ಯಾವಹಾರಿಕ ಒಪ್ಪಂದಗಳು, ಇಸ್ರೇಲ್ಗೆ ಪದೇಪದೇ ಭೇಟಿ, ಆಪರೇಷನ್ ಸಿಂಧೂರ ಸಮಯದಲ್ಲಿ ಅಮೆರಿಕಾದ ಮಧ್ಯ ಪ್ರವೇಶ, ಭಾರತದ ನಿರಾಕರಣೆ, ಹದಗೆಟ್ಟಿದ್ದ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಅಮೆರಿಕ ಸುಧಾರಣೆ ಮಾಡಿಕೊಂಡಿದ್ದು, ಪ್ರತೀಕಾರವಾಗಿ ಟ್ರಂಪ್ ಘೋಷಿಸಿದ ವಾಣಿಜ್ಯ ತೆರಿಗೆ ಅಕ್ರಮಣ ಎಲ್ಲವೂ ಭಾರತ ಹಾದಿ ತಪ್ಪಿದ ವಿದೇಶಾಂಗ ನೀತಿಗೆ ಉದಾಹರಣೆಯಾಗಿದೆ.

ಇದೀಗ ಕಚ್ಚಾತೈಲದ ವಿಷಯದಲ್ಲಿ ಅಮೆರಿಕ ಭಾರತಕ್ಕೆ ನಿರ್ದೇಶನ ನೀಡುವ ಮಟ್ಟಕ್ಕೆ ದಾಷ್ಟ್ಯ ತೋರಿಸುತ್ತಿದೆ. ಭಾರತದ ನೆರೆಹೊರೆ ದೇಶಗಳು ಸಹ ಭಾರತದೊಂದಿಗೆ ಹಿಂದಿನಷ್ಟು ಸ್ನೇಹ ಸೌಹಾರ್ದತೆ ಹೊಂದಿಲ್ಲ. ಇದೆಲ್ಲವೂ ಭಾರತದ ವಿದೇಶಾಂಗ ನೀತಿಯ ವಿಫಲತೆಗೆ ಸಾಕ್ಷಿ.

ಇತ್ತೀಚೆಗೆ ಅಂತರಾಷ್ಟೀಯ ಪತ್ರಿಕೆಯೊಂದು ಪ್ರಕಟಿಸಿದ ವರದಿಯಲ್ಲಿ ವಿದೇಶದ ಕೆಲವು ದೇಶಗಳ ಜನರು ಭಾರತವನ್ನು ಟಾರ್ಗೆಟ್ ಮಾಡಿ ಟೀಕಿಸುತ್ತಿರುವ, ಭಾರತೀಯ ಉದ್ಯೋಗಿ ಮತ್ತು ವಿದ್ಯಾರ್ಥಿಗಳನ್ನು ದ್ವೇಷಿಸಿ ಹಲ್ಲೆ ನಡೆಸುತ್ತಿರುವ ಘಟನೆಗಳು ಜಾಸ್ತಿ ಆಗುತ್ತಿರುವುದು ಇದೇ ಕಾರಣದಿಂದ. ಏಕೆಂದರೆ ಅಲಿಪ್ತ ನೀತಿ ಬದಲಾದರೆ ಒಂದು ದೇಶಕ್ಕೆ ಹತ್ತಿರವಾಗಿ ಇನ್ನೊಂದು ದೇಶ ದೂರವಾದಾಗ ಆ ದೇಶದ ಜನ ಸಹಜವಾಗಿಯೇ ದ್ವೇಷ ಬೆಳೆಸಿಕೊಳ್ಳುತ್ತಾರೆ ಅದರ ಪರಿಣಾಮ ಇದು. ಸಂಘರ್ಷದ ಸಮಯದಲ್ಲಿ ಇದು ಹೆಚ್ಚು ಕಣ್ಣಿಗೆ ಕಾಣುತ್ತದೆ.

ಅಲಿಪ್ತ ನೀತಿ ಎಂದರೆ ತಟಸ್ಥ ಎಂದರ್ಥವಲ್ಲ. ಅಂತರಾಷ್ಟ್ರೀಯವಾಗಿ ಅಲಿಪ್ತತೆ ಎಂದರೆ ಯಾರ ಪರವೂ ಭಾಗವಹಿಸದ, ಆದರೆ ಶಾಂತಿ, ಸೌಹಾರ್ದತೆ, ಸಹಕಾರ, ಸಮನ್ವಯದ ತತ್ವವನ್ನು ದೇಶ ಸದಾ ಬೆಂಬಲಿಸುತ್ತದೆ. ಯುದ್ಧ ಮತ್ತು ಹಿಂಸೆಯನ್ನು, ಆಕ್ರಮಣವನ್ನು ವಿರೋಧಿಸುತ್ತದೆ ಎಂದರ್ಥ.

ಅದನ್ನು ಇನ್ನು ಮುಂದೆಯಾದರೂ ಈ ದೇಶದ ಪ್ರಧಾನಿಗಳು ಪಾಲಿಸಿಕೊಂಡು ಹೋಗುತ್ತಾರೆ. ಅದೇ ಭಾರತದ ನಿಜವಾದ ವಿದೇಶಾಂಗ ನೀತಿ ಮತ್ತು ಇಲ್ಲಿನ ಸಾಂಸ್ಕೃತಿಕ ಮತ್ತು ರಾಜಕೀಯ ವ್ಯಕ್ತಿತ್ವ ಎಂದು ಭಾವಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now