ವಿಜಯ ದರ್ಪಣ ನ್ಯೂಸ್….
ವಿಜೃಂಭಣೆಯಿಂದ ನಡೆದ ಒಕ್ಕಲಿಗರ ಹಬ್ಬ ಬಂಡಿ ದ್ಯಾವರ ಕರಗ ಮಹೋತ್ಸವ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೊಮ್ಮವಾರ, ಸಾವಕನಹಳ್ಳಿ, ಮಾಳ್ಗೆನಳ್ಳಿ, ಶಾನಪ್ಪನಹಳ್ಳಿ ,ತಿಂಡ್ಲು ಗ್ರಾಮಗಳಲ್ಲಿ ಭಾನುವಾರ ಒಕ್ಕಲಿಗ ಸಮುದಾಯದವರಿಂದ ಬಂಡಿದ್ಯಾವರು, ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮ ದೇವತೆ ಆರಾಧನೆಗೆ ವಿಶೇಷವಾದ ಈ ಬಂಡಿ ದೇವರ ಮಹೋತ್ಸವವನ್ನು ಒಕ್ಕಲಿಗ ಸಮುದಾಯದವರು ಆಚರಿಸುವುದು ವಿಶೇಷ. ಸಂಪ್ರದಾಯದಂತೆ ಬಂಡಿಯನ್ನು ಮತ್ತು ಎತ್ತುಗಳಿಗೆ ಅಲಂಕರಿಸಿ ದೇವರ ಉತ್ಸವ ಮೂರ್ತಿಯನ್ನು ಅದರಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುವುದು. ಶಕ್ತಿ ದೇವತೆ ಸಂಕೇತವಾದ ಹೂವಿನ ಕಳಸವನ್ನು ದಂಪತಿಗಳು ತಲೆ ಮೇಲೆ ಹೊತ್ತು , ತಮ್ಮ ಮಕ್ಕಳೊಂದಿಗೆ ಸಾಗುವ ಕರಗ ಮೆರವಣಿಗೆ ಜನಸಾಗರದ ಜೊತೆ ಗ್ರಾಮದ ಗಡಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ.
ಬೊಮ್ಮುವಾರ ಗ್ರಾಮದಲ್ಲಿ 97 ಕುಟುಂಬಗಳು, ತಿಂಡ್ಲು ಗ್ರಾಮದಲ್ಲಿ 35 ಕುಟುಂಬಗಳು,ಮಾಳಿಗೇನಹಳ್ಳಿ ಗ್ರಾಮದಲ್ಲಿ 60 ಕುಟುಂಬಗಳು, ಶ್ಯಾನಪನಹಳ್ಳಿಯಲ್ಲಿ 50 ಕುಟುಂಬಗಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂಪ್ರದಾಯ ಬದ್ಧವಾಗಿ ಬಂಡಿದ್ಯಾವರು ಹಬ್ಬವನ್ನು ಆಚರಿಸಿದರು.
ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದ್ದು ,ಗ್ರಾಮಗಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ,ಬರುವಂತ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಒಕ್ಕಲಿಗರ ಕುಟುಂಬಗಳಲ್ಲಿ ತಮ್ಮ ಮಕ್ಕಳಿಗೆ ಬಂಡಿದ್ಯಾವರು ಆಗದೆ ಮದುವೆ ಕಾರ್ಯಗಳನ್ನು ಮಾಡುವುದಿಲ್ಲ. ಹಾಗಾಗಿ ಬಂಡಿದೇವರ ನಡೆದ ಮಾರನೆಯ ದಿವಸ ಎಲ್ಲಾ ಕುಟುಂಬಗಳು ಕರಗದ ಮನೆಯಲ್ಲಿ ಸೇರಿ ತಮ್ಮ ತಮ್ಮ ಮಕ್ಕಳಿಗೆ ಸಂಪ್ರದಾಯದಂತೆ ಹೂ ಮೂಡಿಸುವ ಕಾರ್ಯವನ್ನು ವಿಶೇಷವಾಗಿ ನೆರವೇರಿಸುತ್ತಾರೆ.











