ವಿಜಯ ದರ್ಪಣ ನ್ಯೂಸ್…
ನಿಮಾನ್ಸ್ ಘಟಕ ಆರಂಭಕ್ಕೆ ಅಂಜಿ ಆಗ್ರಹ

ತಾಂಡವಪುರ ಮೇ 11 ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಗುಡುಮಾದನಹಳ್ಳಿಯೇ ನಿಮಾನ್ಸ್ ಘಟಕ ನಿರ್ಮಾಣಕ್ಕೆ ಸೂಕ್ತ, ಯಾರದೇ ವಿರೋಧವಿದ್ದರೂ ನಿರ್ಮಾಣ ಕಾರ್ಯ ಶೀಘ್ರ ಆರಂಭಿಸಿ ಕರ್ನಾಟಕ ಪೌರ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ಪದಾಧಿಕಾರಿ ಅಂಜಿ ಆಗ್ರಹಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಗುಡುಮಾರನಹಳ್ಳಿಯ ಸರ್ವೆ ನಂ. ೮, ೬೦, ೬೮ ರಲ್ಲಿ ಸುಮಾರು ೨೦ ಎಕರೆ ಸರ್ಕಾರಿ ಜಾಗವಿದೆ. ಈ ಹಿಂದೆ ವಿಮಾನ ನಿಲ್ದಾಣ ವಿಸ್ತರಣೆಗೆ ಎಕರೆಗೆ ಸುಮಾರು ಒಂದೂವರೆ ಕೋಟಿ ಪರಿಹಾರ ನೀಡಿದ ಉದಾಹರಣೆಯಿದೆ.
ಇದು ಸರ್ಕಾರಿ ಜಾಗವಾಗಿದ್ದು, ಹಲವಾರು ಮಂದಿ ಇದರಲ್ಲಿ ವ್ಯವಸಾಯ ಮಾಡಿ ಈಗಾಗಲೇ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ. ಹೀಗಾಗಿ ನಿಜಕ್ಕೂ ಇವರು ಬಡವರಾಗಿದ್ದರೆ ಬೇರೆ ಕಡೆ ಜಾಗ ಕೊಡಲಿ. ಆದರೆ ಇದೇ ಜಾಗದಲ್ಲಿ ನಿಮಾನ್ಸ್ ನಿರ್ಮಾಣವಾಗಲೆಂದು ಒತ್ತಾಯಿಸಿದರು.
ಇಲ್ಲಿ ನಿರ್ಮಾಣ ಮಾಡುವುದರಿಂದ ಮೈಸೂರು ಜಿಲ್ಲೆಯವರು ಮಾತ್ರವಲ್ಲ, ಮಂಡ್ಯು, ಚಾಮರಾಜನಗರ ಜಿಲ್ಲೆಯವರಿಗೂ ಮಾನಸಿಕ ಅನಾರೋಗ್ಯ ಮತ್ತು ನರರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಈಗ ಇದಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿ ಬಂದಿದ್ದು, ಇದು ತಪ್ಪುತ್ತದೆ. ಈ ಕಾರಣದಿಂದಾಗಿ ಇಲ್ಲಿಯೇ ನಿರ್ಮಾಣ ಆಗ್ರಹಿಸಿ ಮೇ ೧೩ ರಂದು ಬೆಳಗ್ಗೆ ೧೧ಕ್ಕೆ ಡಿಸಿ ಕಚೇರಿ ಎದುರು ಒಕ್ಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಇನ್ನಿತರ ಪದಾಧಿಕಾರಿಗಳಾದ ಡಿ.ಆರ್. ರಾಜು, ಶಿವಶ್ರೀನಿವಾಸ್, ಸಿ.ಆರ್. ವಿಜಯ್, ವಸಂತಕುಮಾರಿ ಇದ್ದರು.









