ವಿಜಯ ದರ್ಪಣ ನ್ಯೂಸ್…
ಕ್ಲಾಕ್ ಟವರ್ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಂದ ಭೂಮಿ ಪೂಜೆ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರವನ್ನು ಸೌಂದ ರ್ಯಕರಣಗೊಳಿಸುವ ನಿಟ್ಟಿನಲ್ಲಿ ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಕ್ಲಾಕ್ ಟವರ್ (ಗೋಡೆ ಗಡಿಯಾರ) ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಭೂಮಿ ಪೂಜೆ ನೆರವೇರಿಸಿದರು.
ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ಇರುವ ಸ್ಥಳವನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇದೀಗ ವಾಟರ್ ಟ್ಯಾಂಕ್ ವೃತ್ತದಲ್ಲಿ 49.99 ಲಕ್ಷ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಾಣಕ್ಕೂ ಕೆ.ಶೇಷಾದ್ರಿ ಚಾಲನೆ ನೀಡಿದ್ದಾರೆ.
ಕ್ಲಾಕ್ ಟವರ್ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದ ಅವರು, ನಗರದಲ್ಲಿನ ಪ್ರಮುಖ ವೃತ್ತಗಳ ಸೌಂದರ್ಯೀಕರಣ ಹೆಚ್ಚಿಸಲು ನಗರಸಭೆ ಮಹತ್ವದ ನಿರ್ಧಾರ ಕೈಗೊಂಡಿತ್ತು. ಅದರಂತೆ ವಾಟರ್ ಟ್ಯಾಂಕ್ ವೃತ್ತದಲ್ಲಿ 49.99ಲಕ್ಷ ರುಪಾಯಿ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ವಾಟರ್ ಟ್ಯಾಂಕ್ ವೃತ್ತದ ನಂತರ ರೇಲ್ವೆ ನಿಲ್ದಾಣ ವೃತ್ತ, ಕೆಂಪೇಗೌಡ ವೃತ್ತ ಹಾಗೂ ಪೊಲೀಸ್ ಭವನದ ಬಳಿ ಐ ರಾಮನಗರ ವಿನ್ಯಾಸವನ್ನು ಸ್ಥಾಪಿಸಲಾಗುವುದು. ಈ ಎಲ್ಲಾ ಸೌಂದರ್ಯೀಕರಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಂಡು ಪೂರ್ಣ ಗೊಳಿಸಲಾಗುವುದು ಎಂದರು.
ಜಿಲ್ಲಾ ಕೇಂದ್ರವನ್ನು ಮತ್ತಷ್ಟು ಸೌಂದರ್ಯೀಕರಣ ಮಾಡುವ ನಿಟ್ಟಿನಲ್ಲಿ ನಗರಸಭೆ ಕೈಗೆತ್ತಿಕೊಂಡಿರುವ ಕಾರ್ಯಗಳಿಗೆ ಜನರ ಸಹಕಾರ ನೀಡಬೇಕು. ನಾಳೆ ಬಯೋ ಗ್ಯಾಸ್ ಘಟಕ ಉದ್ಘಾಟನೆ ಜೊತೆಗೆ ಫುಡ್ ಕೋರ್ಟ್ ನಿರ್ಮಾಣಕ್ಕೂ ಶಂಕು ಸ್ಥಾಪನೆ ನೆರವೇರಿಸುತ್ತೇವೆ ಎಂದು ಕೆ.ಶೇಷಾದ್ರಿ ಹೇಳಿದರು.
ಈವೇಳೆ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯರಾದ ಪಾರ್ವತಮ್ಮ, ನರಸಿಂಹ, ಸೋಮಶೇಖರ್, ಪವಿತ್ರ, ಮಹಾಲಕ್ಷ್ಮಿ, ಸಮದ್, ಆಯುಕ್ತ ಜಯಣ್ಣ, ಎಂಜಿನಿಯರ್ಗಳಾದ ವಿಶ್ವನಾಥ್, ಪವಿತ್ರ, ಬಿ.ಎಸ್.ನಿರ್ಮಲಾ ಮತ್ತಿತರರು ಹಾಜರಿದ್ದರು.








