ವಿಜಯ ದರ್ಪಣ ನ್ಯೂಸ್….
ಔಷಧಿ ಕೇವಲ ವಸ್ತುವಲ್ಲ – ಜೀವದ ಜವಾಬ್ದಾರಿ.”
ಆನ್‌ಲೈನ್ ಔಷಧ ಮಾರಾಟ ಹಾಗೂ ಅಸಹಜ ಡಿಸ್ಕೌಂಟ್ ವಿರುದ್ಧ 20 ಮೇ 2026 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಬಂದ್‌ಗೆ ಕರ್ನಾಟಕ ಫಾರ್ಮಾ ರಿಟೈಲರ್ಸ್ &ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಶನ್ ಭಾಗವಹಿಸುವುದಿಲ್ಲ : ರಾಜ್ಯಾಧ್ಯಕ್ಷ ಸಿ .ಜಯರಾಮ್

ಬೆಂಗಳೂರು ಮೇ.16 :ಆನ್‌ಲೈನ್ ಔಷಧ ಮಾರಾಟ ಹಾಗೂ ಅಸಹಜ ರಿಯಾಯಿತಿಗಳ ವಿರುದ್ಧ 20 ಮೇ 2026 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಬಂದ್‌ಗೆ ಕರ್ನಾಟಕ ಫಾರ್ಮಾ ರಿಟೈಲರ್ಸ್ & ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಶನ್ ಭಾಗವಹಿಸುವುದಿಲ್ಲ ಎಂದು ಕೆ ಟಿ ಆರ್ ಡಿ ಓ ರಾಜ್ಯಾಧ್ಯಕ್ಷ ಸಿ .ಜಯರಾಮ್ ಹೇಳಿದರು
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಕರ್ನಾಟಕ ಫಾರ್ಮಾ ರಿಟೈಲರ್ಸ್ & ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಶನ್ (KPRDO) ಸಂಸ್ಥೆಯು ರಾಜ್ಯಮಟ್ಟದ ನೊಂದಾಯಿತ, ಸಕ್ರಿಯ ಹಾಗೂ ಜವಾಬ್ದಾರಿಯುತ ಔಷಧ ವ್ಯಾಪಾರಿಗಳ ಸಂಘಟನೆಯಾಗಿದ್ದು, ಕರ್ನಾಟಕ ರಾಜ್ಯದ ಚಿಲ್ಲರೆ ಹಾಗೂ ಸಗಟು ಔಷಧ ವ್ಯಾಪಾರಿಗಳ ಹಿತಾಸಕ್ತಿ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ಎಂದು ತಿಳಿಸಿದರು.
KPRDO ಸಂಸ್ಥೆಯು ಅನಧಿಕೃತ ಆನ್‌ಲೈನ್ ಔಷಧ ವ್ಯಾಪಾರ, ಜೀವ ರಕ್ಷಕ ಔಷಧಿಗಳ ಮೇಲೆ ನೀಡಲಾಗುತ್ತಿರುವ ಅಸಹಜ ಹಾಗೂ ಅತಿಯಾದ ರಿಯಾಯಿತಿಗಳು, ಹಾಗೂ ಕ್ವಿಕ್ ಕಾಮರ್ಸ್ ಔಷಧ ಡೆಲಿವರಿ ಆ್ಯಪ್‌ಗಳು ಮಾಡುತ್ತಿರುವ ಕಾನೂನು ಉಲ್ಲಂಘನೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಅನೇಕ ಆನ್‌ಲೈನ್ ಪೋರ್ಟಲ್‌ಗಳು ಜೀವ ರಕ್ಷಕ ಔಷಧಿಗಳ ಮೇಲೆಯೂ ಅತಿಯಾದ ರಿಯಾಯಿತಿಗಳನ್ನು ಘೋಷಿಸಿ, ಸಾಮಾಜಿಕ ಜಾಲತಾಣಗಳು ಹಾಗೂ ಜಾಹೀರಾತುಗಳ ಮೂಲಕ ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದು, ಇದು ತಪ್ಪು ಸಂದೇಶವನ್ನು ರವಾನಿಸುವಂತಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯಾನಂತರದಿಂದಲೂ ಸಾರ್ವಜನಿಕರಿಗೆ ಹಗಲು-ರಾತ್ರಿ ನಿರಂತರ ಸೇವೆ ನೀಡುತ್ತಾ ಬಂದಿರುವ ಸಾಂಪ್ರದಾಯಿಕ ಔಷಧ ವ್ಯಾಪಾರಿಗಳು (Brick-and-Mortar Pharmacies) ಇಂತಹ ಅನ್ಯಾಯಕರ ಸ್ಪರ್ಧೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಅಸ್ತಿತ್ವವೇ ಅಪಾಯಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಬೆಳವಣಿಗೆಗಳು ಸಾಂಪ್ರದಾಯಿಕ ಫಾರ್ಮಸಿ ಕ್ಷೇತ್ರಕ್ಕೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆಯೂ ದುಷ್ಪರಿಣಾಮ ಬೀರುತ್ತಿವೆ ಎಂದರು.
ಈ ಹಿನ್ನೆಲೆಯಲ್ಲಿ, KPRDO ಸಂಸ್ಥೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಅನೇಕ ಮನವಿಗಳನ್ನು ಸಲ್ಲಿಸಿದ್ದು, ಸಂಬಂಧಿತ ಸಚಿವರು ಹಾಗೂ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ ಎಂದು ತಿಳಿಸಿದ ಅವರು KPRDO ಸಂಸ್ಥೆಯ ಸತತ ಹೋರಾಟದ ಫಲವಾಗಿ ಸಂಬಂಧಪಟ್ಟ ಸಚಿವಾಲಯಗಳು ಹಾಗೂ ಔಷಧ ನಿಯಂತ್ರಣ ಇಲಾಖೆಗಳು ಹಲವು ತೃಪ್ತಿಕರ ಆದೇಶಗಳು ಹಾಗೂ ಸುತ್ತೋಲೆಗಳನ್ನು ಹೊರಡಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಇದಲ್ಲದೆ, ಅನಧಿಕೃತ ಆನ್‌ಲೈನ್ ಔಷಧ ಮಾರಾಟ ಹಾಗೂ ಕ್ಲಿಕ್ ಕಾಮರ್ಸ್ ಔಷಧ ಡೆಲಿವರಿ ಆ್ಯಪ್‌ಗಳು ಡ್ರಗ್ಸ್ ಅಂಡ್ ಕಾಸ್ಕೆಟಿಕ್ಸ್ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಕುರಿತು KPRDO ಸಂಸ್ಥೆಯು ಗೌರವಾನ್ವಿತ ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಯಫ್ ಡಿ ಎ) ಅವರಿಗೆ ಅನೇಕ ಬಾರಿ ವಿವರವಾದ ಮನವಿಗಳನ್ನು ಸಲ್ಲಿಸಿ, ಕಾನೂನು ಉಲ್ಲಂಘನೆಗಳ ಕುರಿತು ಗಮನ ಸೆಳೆದಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ವೇಗವಾಗಿ ಕುಸಿಯುತ್ತಿರುವ ಸಾಂಪ್ರದಾಯಿಕ ಔಷಧ ವ್ಯಾಪಾರವನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ KPRDO ಈ ಹಿಂದೆಯೇ ಆಗ್ರಹಿಸಿತ್ತು ಎಂದು ಹೇಳಿದರು.
KPRDO ಸಂಸ್ಥೆಯ ಮನವಿಗಳಿಗೆ ಸ್ಪಂದಿಸಿದ ಗೌರವಾನ್ವಿತ ಆಯುಕ್ತರು, FDA ಅವರು ದಿನಾಂಕ 03.03.2026 ರಂದು ಐತಿಹಾಸಿಕ ಸುತ್ತೋಲೆಯನ್ನು ಹೊರಡಿಸಿ, ಕರ್ನಾಟಕದಾದ್ಯಂತ ಎಲ್ಲಾ ಅಮಲುಜಾರಿ ಅಧಿಕಾರಿಗಳಿಗೆ ಅನಧಿಕೃತ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿರುತ್ತಾರೆ. ಈ ಸಂಬಂಧ ಅಮಲುಜಾರಿ ಅಧಿಕಾರಿಗಳು ಹಂತ ಹಂತವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೆಯ ಎಂದರು.
ಇದೇ ವೇಳೆ, ದಿನಾಂಕ 12.05.2026 ರಂದು ರಾಷ್ಟ್ರವ್ಯಾಪಿ ಬಂದ್ ಕುರಿತು ವರದಿ ಪಡೆಯುವ ಉದ್ದೇಶದಿಂದ ಗೌರವಾನ್ವಿತ ಆಯುಕ್ತರು, FDA ಅವರು Zoom ಸಭೆಯನ್ನು ಆಯೋಜಿಸಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳ ಔಷಧ ವ್ಯಾಪಾರ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಸಾರ್ವಜನಿಕರಿಗೆ ಔಷಧ ಕೊರತೆ ಅಥವಾ ತೊಂದರೆ ಉಂಟಾಗದಂತೆ ನೋಡಿಕೊಳ್ಳುವಂತೆ ಆಯುಕ್ತರು ಸಂಘಟನೆಗಳಿಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಪ್ರತಿನಿಧಿಗಳು ರಾಷ್ಟ್ರವ್ಯಾಪಿ ಬಂದ್‌ನಲ್ಲಿ ಭಾಗವಹಿಸುವುದಿಲ್ಲವೆಂದು ಭರವಸೆ ನೀಡಿದರು.ಈ ಹಿಂದೆಯೂ ಹಲವಾರು ಬಾರಿ ಬಂದ್‌ಗಳನ್ನು ಆಚರಿಸಿದ ಸಂದರ್ಭಗಳಲ್ಲಿ ಸರ್ಕಾರಗಳಿಂದ ಯಾವುದೇ ತೃಪ್ತಿಕರ ಫಲಿತಾಂಶಗಳು ದೊರಕದಿರುವುದನ್ನು ಹಾಗೂ ಬಂದ್ ದಿನಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿಂದ ರೋಗಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸಿರುವುದನ್ನು ನಾವು ಕಂಡಿದ್ದೇವೆ ಎಂದು ಹೇಳಿದರು.

ಆದ್ದರಿಂದ, ಅನಧಿಕೃತ ಆನ್‌ಲೈನ್ ಔಷಧ ವ್ಯಾಪಾರ ಮತ್ತು ಅಸಹಜ ರಿಯಾಯಿತಿಗಳನ್ನು ವಿರೋಧಿಸಿ ದಿನಾಂಕ 20.05.2026 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಬಂದ್‌ಗೆ ನೈತಿಕ ಬೆಂಬಲ ಸೂಚಿಸುವ ಉದ್ದೇಶದಿಂದ ಕರ್ನಾಟಕದ ಔಷಧ ವ್ಯಾಪಾರಿಗಳು ಕಪ್ಪು ಬ್ಯಾಡ್ಜ್/ರಿಬ್ಬನ್ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಅಂಗಡಿಗಳನ್ನು ಮುಚ್ಚದೇ, ಎಂದಿನಂತೆ ಕಾರ್ಯನಿರ್ವಹಿಸಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ಮುಂದುವರಿಯಲಿದೆ ಎಂದರು.
ಕರ್ನಾಟಕದ ವಿವಿಧ ಜಿಲ್ಲಾ ಸಂಘಟನೆಗಳು ಕೈಗೊಂಡಿರುವ ನಿರ್ಣಯಗಳಂತೆ, ರಾಜ್ಯಮಟ್ಟದ ಜವಾಬ್ದಾರಿಯುತ ಹಾಗೂ ಸಕ್ರಿಯ ಔಷಧ ವ್ಯಾಪಾರಿಗಳ ಸಂಘಟನೆಯಾದ KARNATAKA PHARMA RETAILERS & DISTRIBUTORS ORGANIZATION (KPRDO) ದಿನಾಂಕ 20.05.2026 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಬಂದ್ ಸಂದರ್ಭದಲ್ಲಿ ಕಪ್ಪು ಬ್ಯಾಡ್ಜ್/ರಿಬ್ಬನ್ ಧರಿಸುವ ಮೂಲಕ ವಿಷಯಾಧಾರಿತ ಹಾಗೂ ನೈತಿಕ ಬೆಂಬಲ ಸೂಚಿಸಲಿದೆ. ಜೊತೆಗೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಾದ್ಯಂತ ಔಷಧ ಅಂಗಡಿಗಳು ತೆರೆಯಲ್ಪಟ್ಟು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು. ಇದರ ಮೂಲಕ ಕರ್ನಾಟಕದಾದ್ಯಂತ ರೋಗಿಗಳು ಹಾಗೂ ಸಾರ್ವಜನಿಕರಿಗೆ ಔಷಧ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.

KPRDO ಸಂಸ್ಥೆಯು ಅನಧಿಕೃತ ಆನ್‌ಲೈನ್ ಫಾರ್ಮಸಿಗಳು, ಕಾನೂನುಬಾಹಿರ ಔಷಧ ಡೆಲಿವರಿ ವ್ಯವಸ್ಥೆಗಳು ಹಾಗೂ ಅಸಹಜ ರಿಯಾಯಿತಿಗಳ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುವುದರ ಜೊತೆಗೆ, ಸಾರ್ವಜನಿಕರಿಗೆ ನಿರಂತರ ಸೇವೆ ನೀಡಲು ಬದ್ಧವಾಗಿದ್ದೇವೆ ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಫಾರ್ಮಾ ರಿಟೇಲರ್ಸ್ & ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಶನ್ (ಕೆಪಿಆರ್ಡಿಒ) ಪದಾಧಿಕಾರಿಗಳು ಉಪಸ್ಥಿತರಿದ್ದರು.











