ವಿಜಯ ದರ್ಪಣ ನ್ಯೂಸ್….
ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗುವುದನ್ನು ಸ್ಥಗಿತಗೊಳಿಸಿ :ಅಧ್ಯಕ್ಷ ಬಿ. ರಾಜಣ್ಣ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೇ 29 :
ಗೃಹಲಕ್ಷ್ಮಿ ಹಣ ಮೃತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿರುವುದನ್ನು ಪತ್ತೆ ಹಚ್ಚಿ ಅಂತಹ ಖಾತೆಗಳಿಗೆ ಹಣ ಜಮೆ ಆಗುವುದನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣಲ್ಲಿ ಹಮ್ಮಿಕೊಳ್ಳಲಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ 2000 ರೂ.ಗಳನ್ನು ನೀಡುತ್ತಿದ್ದು. ರಾಜ್ಯದಲ್ಲಿ ಪ್ರತಿ ತಿಂಗಳು 200 ಕೋಟಿ ಗೃಹಲಕ್ಷ್ಮಿ ಹಣ ಮೃತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಈಗಾಗಲೇ ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸಿ ಎಲ್ಲಾ ಜಿಲ್ಲೆಗಳಲ್ಲಿ ಮೃತರ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಸ್ಥಗಿತಗೊಳಿಸಲು ಕ್ರಮ ವಹಿಸಬೇಕು ಎಂದು ತೀರ್ಮಾನಿಸಲಾಗಿದೆ. ಅದರಂತೆ ನಮ್ಮ ಜಿಲ್ಲೆಯಲ್ಲಿ ಮೃತರ ಹೆಸರಿನಲ್ಲಿರುವ ಖಾತೆಗಳನ್ನು ಪತ್ತೆ ಹಚ್ಚಬೇಕು.
ಮರಣ ಹೊಂದಿದ ನಂತರ ಎಷ್ಟು ತಿಂಗಳು ಅವರ ಖಾತೆಗೆ ಹಣ ಜಮೆ ಆಗಿದೆ ಅಷ್ಟು ಹಣವನ್ನು ವಾಪಸ್ಸು ಪಡೆಯಬೇಕು. ಜೊತೆಗೆ ಆ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಹಣ ಜಮೆ ಆಗದಂತೆ ನಿಲ್ಲಿಸಬೇಕು. ಮೃತರ ಹೆಸರಿನಲ್ಲಿ ಬೇರೆಯವರು ಹಣ ಬಳಸಿಕೊಂಡರೆ ಅದಕ್ಕೆ ಅರ್ಥವಿಲ್ಲ ಹಾಗಾಗಿ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ವರದಿ ನೀಡಿ ಎಂದರು.
ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಟ್ಟಿದ್ದ ಖಾಸಗಿ ವ್ಯಕ್ತಿಯ ವಿರುದ್ಧ ಏನು ಕ್ರಮ ಜರುಗಿಸಲಾಗಿದೆ? ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಡವರಿಗೆ, ದೀನದಲಿತರಿಗೆ ಸಿಗಬೇಕಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ತಪ್ಪು ಎಂದು ಉಪಾಧ್ಯಕ್ಷರೊಬ್ಬರು ಪ್ರಸ್ತಾಪಿಸಿದರು. ಇದಕ್ಕೆ ಆಹಾರ ಇಲಾಖೆ ಅಧಿಕಾರಿ ಉತ್ತರಿಸಿ ಈಗಾಗಲೇ ಆ ವ್ಯಕ್ತಿಯ ವಿರುದ್ಧ ಎಫ್ಐಆರ್ ಮೂಲಕ ಪ್ರಕರಣ ದಾಖಲಿಸಿ, ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿದೆ ಎಂದರು.
ಬಿಪಿಎಲ್ ಕಾರ್ಡ್ ಗಳ ಏಕಾಏಕಿ ರದ್ದತಿಗೆ ಅಸಮಾಧಾನ ವ್ಯಕ್ತಪಡಿಸಿದ ಗ್ಯಾರಂಟಿ ಯೋಜನೆ ಸದಸ್ಯರು ಬಡವರು, ಮಧ್ಯಮ ವರ್ಗದವರು ಮಕ್ಕಳ ಶೈಕ್ಷಣಿಕ ಬಿಲ್ ಪಾವತಿ ಉದ್ದೇಶಕ್ಕಾಗಿ, ಅಂಗವಿಕಲರ ಪಿಂಚಣಿ ಸೇರಿದಂತೆ ಇತರೆ ಸರ್ಕಾರಿ ಕೆಲಸಗಳಿಗೆ ರೇಷನ್ ಕಾರ್ಡ್ ಉಪಯೋಗಿಸಲಾಗುತ್ತಿತ್ತು. ಆದರೆ ಏಕಾಏಕಿ ಬಿಪಿಎಲ್ ಕಾರ್ಡ್ ರದ್ದತಿಯಿಂದ ಹಲವರಿಗೆ ಅನಾನುಕೂಲವಾಗಿದೆ. ವಜಾ ಆಗಿರುವ ಬಿಪಿಎಲ್ ಕಾರ್ಡ್ಗ ಗಳನ್ನು ಖುದ್ದಾಗಿ ಭೇಟಿ ನೀಡಿ ಮರು ಪರಿಶೀಲಿಸಿ ಮತ್ತೆ ಅವರಿಗೆ ಕಾರ್ಡ್ ನೀಡಬೇಕು ಎಂದರು. ಇದಕ್ಕೆ ಆಹಾರ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಅಂದಾಜು 10,000/- ಬಿಪಿಎಲ್ ಕಾರ್ಡ್ ಸ್ಥಗಿತವಾಗಿದೆ, ಹಣಕಾಸು ವಹಿವಾಟು, ಆರ್ಥಿಕ ಸ್ಥಿತಿಗತಿಯನ್ನಾಧರಿಸಿ ಆಟೋಮ್ಯಾಟಿಕ್ ಆಗಿ ಬಿಪಿಎಲ್ ಕಾರ್ಡ್ ಸ್ಥಗಿತವಾಗಿದೆ. ಸದ್ಯಕ್ಕೆ ವಾರ್ಷಿಕ ಆದಾಯದ ಮಿತಿ 1.5 ಲಕ್ಷ ರೂ ಇದೆ. ಮುಂದೆ 3 ಲಕ್ಷಕ್ಕೆ ಆದಾಯದ ಮಿತಿ ಏರಿಕೆ ಮಾಡುವ ಸನ್ನಿವೇಶ ಇದ್ದು ಇದರಿಂದ ಬಿಪಿಎಲ್ ಕಾರ್ಡ್ ದಾರರಿಗೆ ಅನುಕೂಲ ಆಗಿಲಿದೆ ಎಂದರು.
ಗೃಹ ಜ್ಯೋತಿ ಯೋಜನೆಯಡಿ ಪ್ರತಿ ತಿಂಗಳ ಬಿಲ್ ಪಾವತಿಗೆ ಬಿಲ್ ಕಲೆಕ್ಟರ್ ಖುದ್ದು ಮೀಟರ್ ರೀಡರ್ ಪರಿಶೀಲಿಸಿ ಎಷ್ಟು ಯೂನಿಟ್ ಬಳಸಿದ್ದಾರೆ ಎಂದು ನಂತರ ಬಿಲ್ ಅನ್ನು ನೀಡಬೇಕು. ಆದ್ರೇ ಕೆಲವು ಭಾಗಗಳಲ್ಲಿ ಏಕಾಏಕಿ ಬಂದು ಮೀಟರ್ ನೋಡದೆ ಬಿಲ್ ನೀಡುವುದು, ದೂರದಲ್ಲಿಯೇ ಬಿಲ್ ಕೊಡುವಂತಹ ಘಟನೆಗಳು ನಡೆದಿವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಬಿಲ್ ಕಲೆಕ್ಟರ್ ಗಳಿಗೆ ಸೂಕ್ತ ತರಬೇತಿ ನೀಡಿ ಎಂದು ಅಧ್ಯಕ್ಷರು ತಿಳಿಸಿದರು.
ಶಕ್ತಿ ಯೋಜನೆಯಿಂದ ಜಿಲ್ಲೆಯ ಮಹಿಳೆಯರಿಗೆ ಸಾಕಷ್ಟು ಅನುಕೂಲ ವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲಿ ಸರ್ಕಾರಿ ಬಸ್ಸುಗಳ ಕೊರತೆ ಇದೆ ಅಲ್ಲಿಗೆ ಬೇಡಿಕೆ ಅನುಗುಣವಾಗಿ ಬಸ್ ಗಳನ್ನು ಒದಗಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ದೇವನಹಳ್ಳಿ ಟೌನ್ ಹಾಗೂ ವಿಜಯಪುರ ಟೌನ್ ಹೈಟೆಕ್ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ತ್ವರಿತ ಕಾಮಗಾರಿ ಅನುಷ್ಠಾನಕ್ಕೆ ಮೇಲಿನ ಹಂತದಲ್ಲಿ ಚರ್ಚಿಸಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಇದುವರೆಗೆ ಗ್ಯಾರಂಟಿ ಯೋಜನೆಗಳು ತಲುಪದೇ ಇರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಆಧಾರ್ ಕಾರ್ಡ್ ಲಿಂಕ್, ಈ ಕೆವೈಸಿ, ಬ್ಯಾಂಕ್ ಸಮಸ್ಯೆ ಇನ್ನಿತರ ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಪರಿಹರಿಸಿ. ಇದರಿಂದ ಇತ್ತಿಚಿನ ಬೆಲೆ ಏರಿಕೆ ನಡುವೆ ನಮ್ಮ ಗ್ಯಾರಂಟಿ ಯೋಜನೆಗಳು ಬಡವರಿಗೆ, ಮಧ್ಯಮ ವರ್ಗದವರಿಗೆ ಆಶಾದಾಯಕ ಜೀವನಕ್ಕೆ ಸಹಕಾರಿ ಆಗಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳಿಂದ ಯಾರು ಕೂಡ ದೂರ ಉಳಿಯದಂತೆ ನೋಡಿಕೊಳ್ಳಿ ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಡಾ.ವಸಂತಿ ಅಮರ್ ಅವರು ಮಾತನಾಡಿ ಪಂಚಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವನಿಧಿಗೆ ಪ್ರಾಮುಖ್ಯತೆ ನೀಡಿ, ಯುವನಿಧಿಯೊಂದಿಗೆ ಅವರಿಗೆ ಉದ್ಯೋಗ ಒದಗಿಸುವ ಕೆಲಸ ಮಾಡಬೇಕಿದೆ. ಆಯಾ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು, ಕಂಪೆನಿ ಮುಖ್ಯಸ್ಥರ ಸಭೆ ಕರೆದು ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲು ಕ್ರಮ ಕೈಗೊಳ್ಳಿ ಎಂದು ತಾಲ್ಲೂಕು ಇಒ ಗಳಿಗೆ ಸೂಚಿಸಿದರಲ್ಲದೆ ಉದ್ಯೋಗವಕಾಶದಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲು ಕಂಪನಿಗಳಿಗೆ ನಿರ್ದೇಶನ ನೀಡಿ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರ ಗಮನಕ್ಕೆ ತಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಕೂಡ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೇ 29:-
ಕೃಷಿ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ನೇರಗುತ್ತಿಗೆ ಆಧಾರದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅಭ್ಯರ್ಥಿಗಳು ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕನಿಷ್ಠ 01 ವರ್ಷ ಕೃಷಿ ಅಥವಾ ಕೃಷಿ ಸಂಬಂಧಿತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.
ಆಸಕ್ತರು ಅಗತ್ಯ ದಾಖಲಾತಿಗಳು ಹಾಗೂ ತಮ್ಮ ಬಯೋಡೇಟಾದೊಂದಿಗೆ ಜೂ. 6 ರೊಳಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಠಡಿ ಸಂಖ್ಯೆ 208 & 209, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೇ.29:-
ದೇವನಹಳ್ಳಿ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 10 ಅಂಗನವಾಡಿ ಕಾರ್ಯಕರ್ತೆ ಮತ್ತು 58 ಸಹಾಯಕಿ ಹುದ್ದೆಗಳಿಗೆ ಗೌರವ ಸೇವೆಯ ಆಧಾರದ ಮೇಲೆ ಆಯ್ಕೆ ಮಾಡಲು ಅಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದು ಜೂ. 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಎರಡನೇ ಮಹಡಿ, ಅಕ್ಷಯ ಭವನ, ಪಿಎಲ್ ಡಿ ಬ್ಯಾಂಕ್ ಕಟ್ಟಡ ಆವರಣ, ದೇವನಹಳ್ಳಿ ಟೌನ್. ದೂ. ಸಂಖ್ಯೆ: 080-29565103 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ದೇವನಹಳ್ಳಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ. ಮೇ.29:
ದೊಡ್ಡಬಳ್ಳಾಪುರ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 09 ಅಂಗನವಾಡಿ ಕಾರ್ಯಕರ್ತೆ ಮತ್ತು 84 ಸಹಾಯಕಿ ಹುದ್ದೆಗಳಿಗೆ ಗೌರವ ಸೇವೆಯ ಆಧಾರದ ಮೇಲೆ ಆಯ್ಕೆ ಮಾಡಲು ಅಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದು ಜೂ. 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 080-27625228 ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಎ.ಪಿ.ಎಂ.ಸಿ ಬಿಲ್ಡಿಂಗ್ ಒಳಾವರಣ, ದೊಡ್ಡಬಳ್ಳಾಪುರ ಇಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.










