--Ads--

ಸಮಾಜದ ಆಧ್ಯಾತ್ಮಿಕ ಬದುಕಿಗೆ ದಾರಿದೀಪರಾಗಿರುವ ಶಿವಾರ್ಚಕರು ನಟರಾಜ ಸ್ವಾಮೀಜಿಗಳು

On: June 10, 2026 2:21 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸಮಾಜದ ಆಧ್ಯಾತ್ಮಿಕ ಬದುಕಿಗೆ ದಾರಿದೀಪರಾಗಿರುವ ಶಿವಾರ್ಚಕರು ನಟರಾಜ ಸ್ವಾಮೀಜಿಗಳು

ತಾಂಡವಪುರ ಜೂನ್ 10 ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ಸೇವೆಯ ಮಹತ್ವವನ್ನು ಅರಿತು ಸಂಘಟಿತರಾಗಿ ಬದುಕಬೇಕು. ಕಲ್ಲನ್ನೇ ದೇವರ ರೂಪಕ್ಕೆ ತಂದು ಪ್ರತಿಷ್ಠಾಪಿಸುವ ಅಪೂರ್ವ ಶಕ್ತಿ ಶಿವಾರ್ಚಕರಿಗಿದ್ದು, ಸಂಕೋಚ ಬಿಟ್ಟು ಆತ್ಮಗೌರವದಿಂದ ಸಂತೋಷದ ಜೀವನ ನಡೆಸಬೇಕು ಎಂದು ಗಾವಡಗೆರೆ ಕ್ಷೇತ್ರದ ಗುರುಲಿಂಗ ಜಂಗಮದೇವರ ಮಠಾಧ್ಯಕ್ಷರಾದ ಶ್ರೀ ನಟರಾಜ ಸ್ವಾಮೀಜಿ ಕರೆ ನೀಡಿದರು.

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಆಯೋಜಿಸಲಾಗಿದ್ದ ನಂಜನಗೂಡು ತಾಲ್ಲೂಕು ಶಿವಾರ್ಚಕರ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ ಶ್ರೀಗಳು “ಬೇರೆಯವರಿಗೆ ವರವಾಗಿರುವ ಶಿವಾರ್ಚಕರು ತಮ್ಮ ಹಕ್ಕುಗಳು, ಸೌಲಭ್ಯಗಳು ಮತ್ತು ಸಂಘಟನೆಯ ಅಗತ್ಯವನ್ನು ಸರಿಯಾಗಿ ಅರಿತುಕೊಳ್ಳಬೇಕಾಗಿದೆ.

ಮನುಕುಲದ ಕಲ್ಯಾಣಕ್ಕಾಗಿ ಶ್ರಮಿಸುವ ಅರ್ಚಕರು ಗುರುಗಳ ಸ್ಥಾನಕ್ಕೆ ಸಮಾನರಾಗಿದ್ದಾರೆ. ಜೀವನದ ಸಂಕಷ್ಟಗಳ ನಡುವೆಯೂ ಶಿವನ ಧ್ಯಾನದಲ್ಲಿ ತೊಡಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಅರ್ಚಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಪ್ರೊ. ಎಂ. ಮಲ್ಲಣ್ಣ ಮಾತನಾಡಿ, ಶಿವಾರ್ಚಕರ ಸೇವೆ ದೇಶದ ಗಡಿಗಳನ್ನು ಮೀರಿ ವಿಶ್ವದಾದ್ಯಂತ ವ್ಯಾಪಿಸಿದೆ ಎಂದು ತಿಳಿಸಿದರು.

“ಅರ್ಚಕರು ಎಂದರೆ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರಿಗೆ ಜಾತಿ, ಮತ, ಭೇದಭಾವ ಎಂಬುದಿಲ್ಲ. ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವುದು ಅರ್ಚಕರ ವಿಶೇಷತೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಹಾಗೂ ಸಾಮಾನ್ಯ ಜನರೆಲ್ಲರೂ ಧಾರ್ಮಿಕ ವಿಧಿವಿಧಾನಗಳನ್ನು ಅರ್ಚಕರ ಮೂಲಕವೇ ನೆರವೇರಿಸಿಕೊಳ್ಳುತ್ತಾರೆ.

ಆದರೂ ಯಾಂತ್ರಿಕ ಬದುಕಿನ ಇಂದಿನ ಸಮಾಜದಲ್ಲಿ ಅರ್ಚಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಅವರಿಗೆ ಸೂಕ್ತ ಸ್ಥಾನಮಾನ ಮತ್ತು ಗೌರವ ದೊರೆಯಬೇಕಾದರೆ ಸಂಘಟನೆಯ ಅಗತ್ಯ ಅತ್ಯಂತ ಮುಖ್ಯವಾಗಿದೆ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಶಿವಾರ್ಚಕರ ಸಂಘದ ಕಚೇರಿಗಾಗಿ ನಿವೇಶನ ನೀಡುವಂತೆ ಸಲ್ಲಿಸಿರುವ ಮನವಿಯನ್ನು ಶಾಸಕರ ಗಮನಕ್ಕೆ ತಂದು, ನಿವೇಶನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ಆಧ್ಯಾತ್ಮಿಕ ಚಿಂತಕರಾದ ಡಾ. ವಿನಯ್ ಗುರೂಜಿ, ಕಾಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಪುರಸಭೆಯ ಮಾಜಿ ಅಧ್ಯಕ್ಷ ಎನ್. ನರಸಿಂಹಸ್ವಾಮಿ, ವೀರಶೈವ ಮಹಾಸಭಾದ ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಸ್ವಾಮಿ ಸೇರಿದಂತೆ ಹಲವರು ಸಮಾರಂಭದ ಔಚಿತ್ಯದ ಬಗ್ಗೆ ಮಾತನಾಡಿ, ಶಿವಾರ್ಚಕರ ಸೇವೆಯನ್ನು ಸ್ಮರಿಸಿದರು.

ಸಮಾರಂಭದಲ್ಲಿ ಸಂಘದ ನಿರ್ದೇಶಕ ಸಿಂದುವಳ್ಳಿ ಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಸ್ಥಾಪನೆಯ ಉದ್ದೇಶಗಳನ್ನು ವಿವರಿಸಿದರು. ಬಸವಣ್ಣ ಸ್ವಾಗತ ಕೋರಿದರು. ಸಂಘದ ಅಧ್ಯಕ್ಷ ಮಣೆಗಾರ್ ಎಸ್.ಪಿ. ಶಿವಶಂಕರ್ (ಸಿಂದುವಳ್ಳಿ) ಅಧ್ಯಕ್ಷತೆ ವಹಿಸಿ, ಸಂಘದ ಧ್ಯೇಯೋದ್ದೇಶಗಳು, ಶಿವಾರ್ಚಕರ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆಗಾಗಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಪ್ರೇಮ ರಾಜೇಶ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಏಚಗಳ್ಳಿ ಮಹದೇವಪ್ಪ, ದೇಬೂರು ಚಿನ್ನಸ್ವಾಮಪ್ಪ, ಉಪಾಧ್ಯಕ್ಷ ನವೀನ್ ಕುಮಾರ್, ಕಾರ್ಯದರ್ಶಿ ಹಲ್ಲರೆ ಬಸವಣ್ಣ, ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಒಂದು ಸಾವಿರಕ್ಕೂ ಹೆಚ್ಚು ಶಿವಾರ್ಚಕ ಬಂಧುಗಳು ಸಮಾರಂಭದಲ್ಲಿ ಭಾಗವಹಿಸಿ, ನಂಜನಗೂಡು ತಾಲ್ಲೂಕು ಶಿವಾರ್ಚಕರ ಸಂಘದ ಉದ್ಘಾಟನೆಯನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಿದರು.

ಶಿವಭಕ್ತಿಯೊಂದಿಗೆ ಸಮಾಜ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಸಂಘಟಿತ ಶಕ್ತಿ ನೀಡುವ ನಿಟ್ಟಿನಲ್ಲಿ ಈ ಸಂಘದ ಆರಂಭ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

WhatsApp

Join Now

Telegram

Join Now

Instagram

Join Now