ವಿಜಯ ದರ್ಪಣ ನ್ಯೂಸ್…
ಬೆಸ್ಕಾಂ ಖಾಸಗೀಕರಣಕ್ಕೆ ನೌಕರರು ,ಗುತ್ತಿಗೆದಾರರಿಂದ ವಿರೋಧ !

ಶಿಡ್ಲಘಟ್ಟ : ಟಾಟಾ ಕಂಪನಿಯು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿರುವ ಅರ್ಜಿಯ ಮೂಲಕ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಖಾಸಗೀಕರಣದ ಮೂಲಕ ವಿದ್ಯುತ್ ಸೇವೆ ನೀಡಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಪ್ರಾಥಮಿಕ ಸಮಿತಿ ಕಾರ್ಯದರ್ಶಿ ಜಿ.ಆರ್.ಶ್ರೀಧರ್ ತಿಳಿಸಿದರು.
ನಗರದ ಬೆಸ್ಕಾಂ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯು ಶಿಡ್ಲಘಟ್ಟ ಉಪವಿಭಾಗದ ಕೇಂದ್ರ ಸಮಿತಿ ಹಾಗೂ ಸ್ಥಳೀಯ ಸಮಿತಿಯ ನಿರ್ದೇಶನದಂತೆ ನಡೆಯಿತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸೇವೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ನಗರದಲ್ಲಿ ಬೆಸ್ಕಾಂ ನೌಕರರು, ಅಧಿಕಾರಿಗಳು ಹಾಗೂ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಶಾಂತಿಯುತ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ ,ಗ್ರಾಮೀಣ ಭಾಗದಲ್ಲಿಯೂ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲಾಗುತ್ತಿದೆ ಖಾಸಗೀಕರಣ ಜಾರಿಯಾದರೆ ಸಾರ್ವಜನಿಕ ಸೇವೆಯ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದರು.
ಸಹಾಯಕ ಅಭಿಯಂತರ ವೇದಕಿರಣ್ ಮಾತನಾಡಿ, ಹಲವು ನೌಕರರ ತ್ಯಾಗ ಮತ್ತು ಪರಿಶ್ರಮದಿಂದ ಬೆಳೆದಿರುವ ಸರ್ಕಾರಿ ಸಂಸ್ಥೆಗಳನ್ನು ಡಿ-ಲೈಸೆನ್ಸಿಂಗ್ ಮೂಲಕ ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಖಾಸಗೀಕರಣದಿಂದ ಸರ್ಕಾರಿ ಸಂಸ್ಥೆಗಳ ಆದಾಯ ಕುಸಿದು ಮುಂದಿನ ದಿನಗಳಲ್ಲಿ ಬೆಸ್ಕಾಂ ಹಾಗೂ ಇತರ ಎಸ್ಕಾಂಗಳ ಸ್ಥಿತಿ ಬಿ.ಎಸ್.ಎನ್.ಎಲ್.ನಂತಾಗುವ ಭೀತಿ ಇದೆ ಎಂದು ಹೇಳಿದರು.
ಪ್ರತಿಭಟನಾಕಾರರು, ಖಾಸಗೀಕರಣದಿಂದ ಸಾರ್ವಜನಿಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳುವ ಸಾಧ್ಯತೆ ಇದ್ದು, ನೌಕರರ ಸೇವಾ ಭದ್ರತೆಯೂ ಹದಗೆಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಅಧ್ಯಕ್ಷ ಡಿ.ಎನ್. ಶ್ರೀನಿವಾಸ್, ಕಾರ್ಯದರ್ಶಿ ಜಿ.ಆರ್.ಶ್ರೀಧರ್,
ಸಹಾಯಕ ಅಭಿಯಂತರ ಆರ್.ಸಿ.ಅನಂತಗೌಡ, ವೇದಕಿರಣ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಿ.ಕೃಷ್ಣಪ್ಪ, ಕಾರ್ಯದರ್ಶಿ ನಾಗಪ್ಪ, ತಾಲ್ಲೂಕು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ಜಿ.ಶಶಿಕುಮಾರ್, ಕಾರ್ಯದರ್ಶಿ ನಾಗರಾಜ್, ಜಿಲ್ಲಾ ನಿರ್ದೇಶಕ ವಿ.ಕೆ.ಶ್ರೀನಿವಾಸ್ ಇನ್ನೀತರರು ಹಾಜರಿದ್ದರು.










