ವಿಜಯ ದರ್ಪಣ ನ್ಯೂಸ್…..
ಹೋರಾಟದ ಹೆಸರಿನಲ್ಲಿ ವೈಯಕ್ತಿಕ ನಿಂದನೆ ಸಹಿಸುವುದಿಲ್ಲ: ಶಾಸಕ ಬಿ ಎನ್ ರವಿಕುಮಾರ್

ಶಿಡ್ಲಘಟ್ಟ : ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ, ಕೈಗಾರಿಕೆಗಳ ಸ್ಥಾಪನೆಗೆ, ಒಂದು ಗುಂಪು ಹೋರಾಟ ಮಾಡುತ್ತಿದೆ, ಕೈಗಾರಿಕೆಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಮತ್ತೊಂದು ಗುಂಪು ಹೋರಾಟ ಮಾಡುತ್ತಿದೆ. ಹೋರಾಟ ಮಾಡುವುದು ಸಂವಿಧಾನ ನೀಡಿರುವ ಹಕ್ಕು. ಆದರೆ, ಹೋರಾಟದ ಹೆಸರಿನಲ್ಲಿ ಜನಪ್ರತಿನಿಧಿಗಳ ಬಗ್ಗೆ ಇಲ್ಲ, ಸಲ್ಲದ ಆರೋಪಗಳು ಮಾಡುವುದು ಸರಿಯಲ್ಲ ಎಂದು ಶಾಸಕ ಬಿ.ಎನ್.ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.
ಮೇಲೂರಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜನರಿಂದ ಆಯ್ಕೆಯಾಗಿ ಬಂದಿದ್ದೇನೆ. ನನಗೆ ಮತ ಕೊಟ್ಟಿರುವ ಮತದಾರರ ಗೌರವ ಕಳೆಯುವಂತಹ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎನ್ನುವ ಕನಸು ಹೊತ್ತು ಬಂದಿದ್ದೇನೆಯೇ ಹೊರತು, ದುಡ್ಡು ಮಾಡಲಿಕ್ಕೆ ಬಂದಿಲ್ಲ. ನಾನು ವಿರೋಧ ಪಕ್ಷದಲ್ಲಿದ್ದರೂ, ನೂರಾರು ಕೋಟಿ ರೂಪಾಯಿಗಳ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇನೆ. ನಾನು ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಬೇಧ ಮಾಡಿಲ್ಲ. ಯಾವುದೇ ಪಕ್ಷದವರು ಬಂದರೂ ನಮ್ಮ ಕ್ಷೇತ್ರದವರು, ನನ್ನ ಜನರೆಂದು ಪ್ರೀತಿಯಿಂದ ಸ್ವಾಗತಿಸುತ್ತೇನೆ.
ಆದರೆ, ಹೋರಾಟದ ಹೆಸರಿನಲ್ಲಿ ಹಸಿರು ಶಾಲು ಹೆಗಲ ಮೇಲೆ ಹಾಕಿಕೊಂಡು, ಮಾಡಬಾರದು. ಜನಪ್ರತಿನಿಧಿಗಳನ್ನು ವೈಯಕ್ತಿಕವಾಗಿ ನಿಂದನೆ ಮಾಡುವುದನ್ನು ಸಹಿಸಲು ಸಾಧ್ಯವಾಗಲ್ಲ, ತಾಳ್ಮೆಯನ್ನು ಪರೀಕ್ಷೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಡಿಯಲ್ಲಿ, ನ್ಯಾಯ ಕೇಳುವುದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ಅದನ್ನು ವೈಯಕ್ತಿಕ ನಿಂದನೆಗಳು ಮಾಡುವುದಕ್ಕಾಗಿ ದುರ್ಬಳಕೆ ಮಾಡಬಾರದು. ನಾನೂ ರೈತನಾಗಿ, ರೈತನ ಮಗನಾಗಿ ರೈತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇಂದಿಗೂ ಕೃಷಿಯನ್ನೆ ನಂಬಿಕೊಂಡು ಜೀವನ ರೂಪಿಸಿಕೊಂಡಿದ್ದೇನೆ. ನನ್ನ ಕುಟುಂಬವೂ ಸಹಾ ಕೃಷಿಯಿಂದ ಜೀವನ ನಡೆಸುತ್ತಿದ್ದೇನೆ. ರೈತ ಹೋರಾಟಗಾರರು, ನಿಮ್ಮ ಹಕ್ಕು. ನೀವು ಪ್ರತಿಪಾದನೆ ಮಾಡಿ, ಆದರೆ, ಅವಹೇಳನಕಾರಿಯಾಗಿ ಮಾತನಾಡುವುದಕ್ಕಾಗಿ ಅಮಾಯಕರನ್ನು ಪ್ರಚೋದನೆ ಮಾಡಬೇಡಿ. ವೈಯಕ್ತಿಕ ನಿಂದನೆ ಮಾಡುವಾಗ, ಎಲ್ಲರಿಗೂ ಕೋಪ ಬರುವುದು ಸಹಜ. ಆದರೆ, ಶಾಂತಿ ಕಾಪಾಡಬೇಕೆನ್ನುವ ಉದ್ದೇಶದಿಂದ, ಯಾರ ಬಗ್ಗೆಯೂ ಟೀಕೆ ಮಾಡುವುದಾಗಲಿ, ಕೋಪಾವೇಶದಿಂದ ನಡೆದುಕೊಳ್ಳುವುದಾಗಲಿ, ಗಲಾಟೆ ಮಾಡುವುದಾಗಲಿ ಮಾಡಬೇಡಿ ಎಂದು ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದೇನೆ.
ವೈಯಕ್ತಿಕ ನಿಂದನೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಇದನ್ನು ಹೋರಾಟಗಾರರೂ ಅರ್ಥ ಮಾಡಿಕೊಳ್ಳಬೇಕು ಎಂದರು.











