ವಿಜಯ ದರ್ಪಣ ನ್ಯೂಸ್…..
ಶಿಕ್ಷಣದ ಪಾತ್ರ ಮಹತ್ವದ್ದು: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ತಾಂಡವಪುರ ಜೂನ್ 20: ಜ್ಞಾನವನ್ನು ಸಾರ್ವತ್ರಿಕಗೊಳಿಸುವ ಮತ್ತು ಶಿಕ್ಷಣವನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವಲ್ಲಿ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ತಿಳಿಸಿದರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ “ಪ್ರವೇಶದಿಂದ ಶ್ರೇಷ್ಠತೆಯೆಡೆಗೆ: ದೂರ ಶಿಕ್ಷಣದ ಭವಿಷ್ಯದ ಹಾದಿಗಳು” ವಿಷಯದ ಶೈಕ್ಷಣಿಕ ಸಭೆ ಹಾಗೂ ಮಾಜಿ ಕುಲಪತಿ ಪ್ರೊ.ಎನ್.ಎಸ್.ರಾಮೇಗೌಡ ರಚಿಸಿರುವ “ಶಿಕ್ಷಣ: ಔಪಚಾರಿಕ, ಮುಕ್ತ ಮತ್ತು ದೂರಶಿಕ್ಷಣದ ಅವಲೋಕನ” ಕೃತಿ ಬಿಡುಗಡೆ ಗೊಳಿಸಿದ ಬಳಿಕ ಸಮಾರಂಭದಲ್ಲಿ ರಾಜ್ಯಪಾಲರು ಮಾತನಾಡುತ್ತ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಕೆಎಸ್‌ಒಯು ಉಪಕುಲಪತಿ ಪ್ರೊ. ಶರಣಪ್ಪ ವಿ.ಹಲ್ಸೆ ಹಾಗೂ ಅವರ ತಂಡದ ಕಾರ್ಯವೈಕರಿಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಚರ್ಚೆಯ ವಿಷಯವು ಭಾರತದ ಉನ್ನತ ಶಿಕ್ಷಣದ ಭವಿಷ್ಯದೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ್ದು, ಶಿಕ್ಷಣವನ್ನು ಪ್ರಜಾಪ್ರಭುತ್ವೀಕರಿಸುವ ಹಾಗೂ ಜ್ಞಾನವನ್ನು ಸಾರ್ವತ್ರಿಕಗೊಳಿಸುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ” ಎಂದು ತಿಳಿಸಿದ ಅವರು ಶಿಕ್ಷಣ ಕ್ಷೇತ್ರವು ತಂತ್ರಜ್ಞಾನ, ಡಿಜಿಟಲ್ ಸಂಪನ್ಮೂಲಗಳು ಮತ್ತು ನವೀನ ಬೋಧನಾ ವಿಧಾನಗಳಿಂದ ಅಭೂತಪೂರ್ವ ಬದಲಾವಣೆಗಳನ್ನು ಅನುಭವಿಸುತ್ತಿದೆ. ಇದರಿಂದ ಶಿಕ್ಷಣವು ಹೆಚ್ಚು ಸುಲಭವಾಗಿ ಲಭ್ಯವಾಗುವ, ಸಮಗ್ರ ಮತ್ತು ಪರಿಣಾಮಕಾರಿ ವ್ಯವಸ್ಥೆಯಾಗಿ ರೂಪುಗೊಂಡಿದೆ. ಅಲ್ಲದೆ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಗಳು ಸಾಮಾಜಿಕ, ಆರ್ಥಿಕ ಹಾಗೂ ಭೌಗೋಳಿಕ ಕಾರಣಗಳಿಂದ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಬಾಗಿಲುಗಳನ್ನು ತೆರೆದಿವೆ ಎಂದು ಅವರು ಹೇಳಿದರು
ಮಹಿಳಾ ಸಬಲೀಕರಣದಲ್ಲಿ ದೂರ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದ ರಾಜ್ಯಪಾಲರು, ಕುಟುಂಬದ ಜವಾಬ್ದಾರಿಗಳಿಂದ ಅನೇಕ ಮಹಿಳೆಯರು ನಿಯಮಿತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ದೂರ ಶಿಕ್ಷಣದ ಮೂಲಕ ಅವರು ಮನೆಯಿಂದಲೇ ಶಿಕ್ಷಣವನ್ನು ಪಡೆದು ಸ್ವಾವಲಂಬಿಗಳಾಗಬಹುದು ಎಂದರು.
ಇದೇ ರೀತಿ ಅಂಗವಿಕಲರು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೂ ಇದು ಮಹತ್ವದ ಕೊಡುಗೆ ನೀಡುತ್ತದೆ ಎಂದು ಹೇಳಿದರು.
ಮಾಜಿ ಕುಲಪತಿ ಪ್ರೊ. ಎನ್.ಎಸ್. ರಾಮೇಗೌಡ ಅವರ *“ಶಿಕ್ಷಣ: ಔಪಚಾರಿಕ, ಮುಕ್ತ ಮತ್ತು ದೂರಶಿಕ್ಷಣದ ಅವಲೋಕನ” ಕೃತಿ ಕುರಿತು ಮಾತನಾಡಿ, ಈ ಪುಸ್ತಕವು ಔಪಚಾರಿಕ, ಮುಕ್ತ ಹಾಗೂ ದೂರ ಶಿಕ್ಷಣದ ಪರಿಕಲ್ಪನೆಗಳು, ಅವುಗಳ ಬೆಳವಣಿಗೆ, ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳ ಕುರಿತು ಸಮಗ್ರ ಪರಿಚಯ ನೀಡುತ್ತದೆ ಎಂದು ಹೇಳಿದರು. ಶಿಕ್ಷಣ ಕ್ಷೇತ್ರದ ನೀತಿ ನಿರೂಪಕರು, ಸಂಶೋಧಕರು ಮತ್ತು ಶಿಕ್ಷಣ ತಜ್ಞರಿಗೆ ಇದು ಉಪಯುಕ್ತ ಮಾರ್ಗದರ್ಶಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಮುಕ್ತಿದಾನಂದ ಮಹಾರಾಜ, ಶಾಸಕ ಕೆ.ಹರೀಶ್ ಗೌಡ, ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಾಲ್ಸೆ, ರಿಜಿಸ್ಟ್ರಾರ್ ಪ್ರೊ.ಎಸ್.ಕೆ.ನವೀನ್ ಕುಮಾರ್, ಡೀನ್ ಅಕಾಡೆಮಿಕ್ಸ್ ಪ್ರೊ. ಎಂ. ರಾಮನಾಥಂ ನಾಯ್ಡು, ವಿಶ್ರಾಂತ ಕುಲಪತಿಗಳಾದ ಪ್ರೊ.ಎನ್.ಎಸ್.ರಾಮೇಗೌಡ, ಪ್ರೊ.ಕೆ.ಎಸ್. ರಂಗಪ್ಪ, ಮಾಜಿ ಡೀನ್ ಪ್ರೊ.ಚಂಬಿ ಪುರಾಣಿಕ್ ಹಾಗೂ ಮುಂತಾದವರು ಹಾಜರಿದ್ದರು










