ವಿಜಯ ದರ್ಪಣ ನ್ಯೂಸ್….
ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಪಾರ್ಶ್ವವಾಯು ಮತ್ತು ಎದೆನೋವು ಆರೈಕೆಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಿಂದ ಎರಡು ಪ್ರಮಾಣೀಕರಣ ಪಡೆದ ಮೊದಲ ಸಂಸ್ಥೆಯಾಗಿದೆ

ಬೆಂಗಳೂರು, ಜೂನ್ 30, 2026: ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಅಮೆರಿಕನ್ ಹಾರ್ಟ್ ಅಸೋಸಿಯೇಷನ್®️ (ಎ.ಎಚ್.ಎ) ನಿಂದ ಸಮಗ್ರ ಪಾರ್ಶ್ವವಾಯು ಕೇಂದ್ರ ಮತ್ತು ಸಮಗ್ರ ಎದೆನೋವು ಕೇಂದ್ರದ ಪ್ರಮಾಣೀಕರಣಗಳನ್ನು ಪಡೆದ ಭಾರತದ ಮೊದಲ ಆಸ್ಪತ್ರೆ ಎನಿಸಿದ್ದು ಇದು ಎರಡು ಅತ್ಯಂತ ಸಮಯ ಸೂಕ್ಷ್ಮತೆಯ ವೈದ್ಯಕೀಯ ಪರಿಸ್ಥಿತಿಗಳ ನಿರ್ವಹಣೆಯಲ್ಲಿ ತುರ್ತು ಆರೈಕೆಯಲ್ಲಿ ಮಹತ್ತರ ಮೈಲಿಗಲ್ಲಾಗಿಸಿದೆ.
ಭಾರತದಲ್ಲಿ ಸಾವು ಸಂಭವಿಸಲು ಪಾರ್ಶ್ವವಾಯು ನಾಲ್ಕನೇ ಪ್ರಮುಖ ಕಾರಣವಾಗಿದ್ದು, ಅಂಗವೈಕಲ್ಯಕ್ಕೆ ಐದನೇ ಪ್ರಮುಖ ಕಾರಣವಾಗಿದೆ. ಹಾಗೆಯೇ, 30 ರಿಂದ 69 ವರ್ಷದೊಳಗಿನ ವಯಸ್ಕರಲ್ಲಿ ಸಂಭವಿಸುವ ಒಟ್ಟು ಸಾವುಗಳಲ್ಲಿ ಸುಮಾರು 36% ರಷ್ಟು ಸಾವುಗಳು ಹೃದಯ ಸಂಬಂಧಿ ಕಾಯಿಲೆಗಳಿಂದಲೇ ಸಂಭವಿಸುತ್ತವೆ. ಈ ಆರೋಗ್ಯ ಸಮಸ್ಯೆಗಳ ಹೊರೆ ದಿನೇದಿನೇ ಹೆಚ್ಚಾಗುತ್ತಿರುವುದರಿಂದ, ಆಸ್ಪತ್ರೆಗಳ ಸನ್ನದ್ಧತೆಯನ್ನು ಸುಧಾರಿಸುವುದು ಹಾಗೂ ರೋಗಿಗಳಿಗೆ ರೋಗನಿರ್ಣಯ ಮತ್ತು ಚಿಕಿತ್ಸೆ ನೀಡಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು, ರೋಗಿಗಳ ಬದುಕುಳಿಯುವಿಕೆ ಮತ್ತು ಚೇತರಿಕೆಯ ಪ್ರಮಾಣವನ್ನು ಉತ್ತಮಗೊಳಿಸುವಲ್ಲಿ ಅತ್ಯಂತ ನಿರ್ಣಾಯಕವಾಗಿದೆ.
ಕರ್ನಾಟಕದಲ್ಲಿ ಸುಮಾರು 5,00,000 ಜನರು ಪಾರ್ಶ್ವವಾಯು ಸಮಸ್ಯೆಯೊಂದಿಗೆ ಬದುಕುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇದು ರಾಜ್ಯದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಗಮನಾರ್ಹ ಹೊರೆಯನ್ನು ಉಂಟುಮಾಡಿದೆ. ಅದೇ ಸಮಯದಲ್ಲಿ, ಅಪೋಲೋ ಆಸ್ಪತ್ರೆಯ ‘ಹೆಲ್ತ್ ಆಫ್ ದಿ ನೇಷನ್ 2026’ ವರದಿಯ ಪ್ರಕಾರ, ಯಾವುದೇ ರೋಗಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ‘ಕೊರೊನರಿ ಕ್ಯಾಲ್ಸಿಯಂ ಸ್ಕೋರಿಂಗ್’ ಪರೀಕ್ಷೆ ಮಾಡಿದಾಗ, ಅವರಲ್ಲಿ ಶೇಕಡಾ 45% ರಷ್ಟು ಜನರಲ್ಲಿ ಈಗಾಗಲೇ ಅಪಧಮನಿ ಕ್ಯಾಲ್ಸಿಯಂ ಶೇಖರಣೆಯಾಗಿರುವುದು ಕಂಡುಬಂದಿದೆ.
ಇದು ತೀವ್ರವಾದ ಹೃದಯ ಕಾಯಿಲೆಯು ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆಯೇ ಹೇಗೆ ಬೆಳವಣಿಗೆಯಾಗುತ್ತದೆ ಮತ್ತು ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿಯನ್ನು ತಂದೊಡ್ಡುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಈ ಹಿನ್ನೆಲೆಯಲ್ಲಿ, ಪಾರ್ಶ್ವವಾಯು ಅಥವಾ ತೀವ್ರವಾದ ಹೃದಯಾಘಾತದ ಶಂಕೆಯಿರುವ ರೋಗಿಗಳು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಾದ ಕ್ಷಣದಿಂದ ಹಿಡಿದು ರೋಗನಿರ್ಣಯ, ಚಿಕಿತ್ಸೆ ಮತ್ತು ತೀವ್ರ ನಿಗಾ ಆರೈಕೆಯವರೆಗಿನ ಎಲ್ಲಾ ಹಂತಗಳನ್ನು ನಿಭಾಯಿಸಲು ಆಸ್ಪತ್ರೆಯು ಹೊಂದಿರುವ ಸನ್ನದ್ಧತೆಯ ಬಗ್ಗೆ ಸ್ವತಂತ್ರ ಮೌಲ್ಯಮಾಪನ ನಡೆದ ಬಳಿಕವೇ ಈ ಎರಡು ಪ್ರಮಾಣೀಕರಣವನ್ನು ನೀಡಲಾಗಿದೆ.
ಪಾರ್ಶ್ವವಾಯು ಮತ್ತು ತೀವ್ರವಾದ ಹೃದಯಾಘಾತ ಎರಡರಲ್ಲೂ, ಪ್ರತಿಯೊಂದು ನಿಮಿಷವೂ ರೋಗಿಯ ಬದುಕುಳಿಯುವಿಕೆ ಮತ್ತು ದೀರ್ಘಕಾಲೀನ ಚೇತರಿಕೆಯ ಸಾಧ್ಯತೆಗಳ ಮೇಲೆ ಪ್ರಭಾವ ಬೀರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ನಿರಂತರವಾಗಿ ಗಮನಾರ್ಹ ಹೊರೆಯನ್ನು ಉಂಟುಮಾಡುತ್ತಿರುವುದರಿಂದ, ತುರ್ತು ಸನ್ನದ್ಧತೆಯನ್ನು ಸುಧಾರಿಸುವುದು ವಿಶೇಷ ಚಿಕಿತ್ಸೆಗಳ ಲಭ್ಯತೆಯನ್ನು ವಿಸ್ತರಿಸುವಷ್ಟೇ ಪ್ರಮುಖವಾಗಿದೆ.

ಕೇವಲ ಪ್ರತ್ಯೇಕ ವಿಭಾಗಗಳನ್ನು ಮೌಲ್ಯಮಾಪನ ಮಾಡುವ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ಈ ಪ್ರಮಾಣೀಕರಣಗಳು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಇಡೀ ಆಸ್ಪತ್ರೆಯು ಒಟ್ಟಾರೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತವೆ. ವಿಳಂಬವನ್ನು ಕಡಿಮೆ ಮಾಡಲು ಮತ್ತು ರೋಗಿಗಳ ಚೇತರಿಕೆಯ ಫಲಿತಾಂಶಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಪ್ರಮಾಣಿತ ಆರೈಕೆ ವಿಧಾನಗಳ ಮೂಲಕ ತುರ್ತು ಚಿಕಿತ್ಸಾ ವೈದ್ಯರು, ನರರೋಗ ತಜ್ಞರು, ಹೃದ್ರೋಗ ತಜ್ಞರು, ವಿಕಿರಣಶಾಸ್ತ್ರಜ್ಞರು, ಇಂಟರ್ವೆನ್ಷನಲ್ ಸ್ಪೆಷಲಿಸ್ಟ್ ಗಳು, ತೀವ್ರ ನಿಗಾ ತಂಡಗಳು ಮತ್ತು ಶುಶ್ರೂಷಾ ಸಿಬ್ಬಂದಿ ಎಷ್ಟು ಸುಗಮವಾಗಿ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಅವರ ಸಾಮರ್ಥ್ಯವನ್ನು ಇಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.
ಎಫ್.ಎ.ಎಚ್.ಎ., ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಇಂಟರ್ನ್ಯಾಷನಲ್ ಕಮಿಟಿಯ ನಿಯೋಜಿತ ಅಧ್ಯಕ್ಷ, ಡಿ.ಪಿ. ಸುರೇಶ್, ಎಂ.ಡಿ. ಅವರು “ಪಾರ್ಶ್ವವಾಯು ಅಥವಾ ತೀವ್ರವಾದ ಹೃದಯಾಘಾತವನ್ನು ಅನುಭವಿಸುತ್ತಿರುವ ಜನರಿಗೆ, ಸಕಾಲಿಕ ರೋಗನಿರ್ಣಯ ಮತ್ತು ಸಂಘಟಿತ ಚಿಕಿತ್ಸೆಯು ಅವರ ಚೇತರಿಕೆಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಪ್ರಮಾಣೀಕರಣ ಕಾರ್ಯಕ್ರಮಗಳು, ತುರ್ತು ಆರೈಕೆಯ ಎಲ್ಲಾ ಹಂತಗಳಲ್ಲೂ ಅಂತಾರಾಷ್ಟ್ರೀಯವಾಗಿ ಅಂಗೀಕೃತ ಮಾನದಂಡಗಳನ್ನು ನಿರಂತರವಾಗಿ ಪಾಲಿಸುವ ಆಸ್ಪತ್ರೆಗಳನ್ನು ಗುರುತಿಸುತ್ತವೆ.
ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಸಮಗ್ರ ಪಾರ್ಶ್ವವಾಯು ಕೇಂದ್ರ ಮತ್ತು ಸಮಗ್ರ ಎದೆನೋವು ಕೇಂದ್ರ ಎರಡರ ಪ್ರಮಾಣೀಕರಣಕ್ಕಾಗಿ ನಿಗದಿಪಡಿಸಲಾದ ಕಟ್ಟುನಿಟ್ಟಿನ ಅಗತ್ಯಗಳನ್ನು ಯಶಸ್ವಿಯಾಗಿ ಪೂರೈಸಿದೆ” ಎಂದು ಹೇಳಿದರು.
ಈ ಮೈಲಿಗಲ್ಲಿನ ಕುರಿತು ಕರ್ನಾಟಕದ ಅಪೋಲೋ ಆಸ್ಪತ್ರೆಯ ತುರ್ತು ನಿಗಾ ವಿಭಾಗಗಳ ಪ್ರಾದೇಶಿಕ ನಿರ್ದೇಶಕರು, ಮುಖ್ಯಸ್ಥರು ಹಾಗೂ ಹಿರಿಯ ಸಮಾಲೋಚಕರಾದ ಡಾ. ಎ.ಎನ್. ವೆಂಕಟೇಶ್ ಅವರು, “ಯಾರಾದರೂ ಪಾರ್ಶ್ವವಾಯು ಅಥವಾ ಹೃದಯಾಘಾತದ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬಂದಾಗ, ಪ್ರತಿಯೊಂದು ವೈದ್ಯಕೀಯ ನಿರ್ಧಾರವನ್ನೂ ಅತ್ಯಂತ ವೇಗವಾಗಿ ಮತ್ತು ಸಂಘಟಿತ ಕ್ರಮದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಅನುಭವಿ ತಂಡಗಳು, ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಚಿಕಿತ್ಸಾ ವಿಧಾನಗಳು ಮತ್ತು ವಿವಿಧ ವೈದ್ಯಕೀಯ ವಿಭಾಗಗಳ ನಡುವೆ ತಡೆರಹಿತ ಸಹಯೋಗದ ಅಗತ್ಯವಿರುತ್ತದೆ. ಈ ಮೈಲಿಗಲ್ಲು ನಮ್ಮ ತುರ್ತು ಸ್ಪಂದನಾ ಪ್ರಕ್ರಿಯೆಗಳನ್ನು ಬಲಪಡಿಸಲು ನಾವು ವರ್ಷಗಳಿಂದ ನಡೆಸಿದ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ; ಇದರಿಂದಾಗಿ ರೋಗಿಗಳಿಗೆ ಸಾಧ್ಯವಾದಷ್ಟು ಬೇಗ ಸೂಕ್ತ ಚಿಕಿತ್ಸೆ ದೊರೆಯುತ್ತದೆ” ಎಂದರು.
ಸಮಗ್ರ ಪಾರ್ಶ್ವವಾಯು ಕೇಂದ್ರದ ಪ್ರಮಾಣೀಕರಣವು ಸುಧಾರಿತ ಇಮೇಜಿಂಗ್, ವಿಶೇಷ ನರರೋಗ ಪರಿಣತಿ, ತುರ್ತು ಚಿಕಿತ್ಸೆಗಳು ಮತ್ತು ಸತತ ಮೇಲ್ವಿಚಾರಣೆ ಮೂಲಕ ಜಟಿಲವಾದ ಪಾರ್ಶ್ವವಾಯು ಪ್ರಕರಣಗಳನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳನ್ನು ಗುರುತಿಸುತ್ತದೆ. ಅದೇ ರೀತಿ, ಸಮಗ್ರ ಎದೆನೋವು ಕೇಂದ್ರದ ಪ್ರಮಾಣೀಕರಣವು ಎಸ್.ಟಿ.- ಎಲಿವೇಶನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (ಎಸ್.ಟಿ.ಇ.ಎಂ.ಐ) ಸೇರಿದಂತೆ ತೀವ್ರವಾದ ಕೊರೊನರಿ ಸಿಂಡ್ರೋಮ್ ಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಗಳನ್ನು ಗುರುತಿಸುತ್ತದೆ; ಇಂತಹ ತುರ್ತು ಸಂದರ್ಭಗಳಲ್ಲಿ ರಕ್ತದ ಹರಿವನ್ನು ಯಾವುದೇ ತಡ ಮಾಡದೆ ಉಳಿಸುವುದು ಅತ್ಯಂತ ನಿರ್ಣಾಯಕವಾಗಿರುತ್ತದೆ.
ಕರ್ನಾಟಕ ವಲಯದ ಅಪೋಲೋ ಹಾಸ್ಪಿಟಲ್ಸ್ ಸಿಇಒ ಅಕ್ಷಯ್ ಒಲೇಟಿ ಅವರು, “ಇಂದಿನ ದಿನಗಳಲ್ಲಿ ವೈದ್ಯಕೀಯ ಶ್ರೇಷ್ಠತೆ ಎಂಬುದು ಕೇವಲ ವೈದ್ಯರ ಪರಿಣತಿಗೆ ಮಾತ್ರ ಸೀಮಿತವಾಗಿರದೆ, ರೋಗಿಗಳ ಆರೈಕೆಯನ್ನು ಬೆಂಬಲಿಸುವ ವ್ಯವಸ್ಥೆಗಳ ಬಲವನ್ನೂ ಒಳಗೊಂಡಿರುತ್ತದೆ. ಅಂತಾರಾಷ್ಟ್ರೀಯವಾಗಿ ಮನ್ನಣೆ ಪಡೆದ ಮಾನದಂಡಗಳಿಗೆ ಅನುಗುಣವಾಗಿ ನಮ್ಮನ್ನು ನಾವು ಸಜ್ಜುಗೊಳ್ಳುವುದು ನಿರಂತರ ಸುಧಾರಣೆಗೆ, ಆರೈಕೆ ನೀಡಿಕೆಯಲ್ಲಿ ಹೆಚ್ಚಿನ ಸ್ಥಿರತೆಗೆ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸದೃಢ ಸಾಂಸ್ಥಿಕ ಸನ್ನದ್ಧತೆಗೆ ಪ್ರೇರಣೆ ನೀಡುತ್ತದೆ. ಈ ಸಾಧನೆಯು ಪ್ರತಿಯೊಂದು ನಿಮಿಷವೂ ಅತ್ಯಂತ ಪ್ರಮುಖವಾಗಿರುವ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸಬಲ್ಲ ಸದೃಢ ಆರೈಕೆ ಮಾದರಿಗಳನ್ನು ರೂಪಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದರು.
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಮಾಣೀಕರಣ ಕಾರ್ಯಕ್ರಮಗಳು ಆಸ್ಪತ್ರೆಗಳಿಗೆ ಹೃದಯ ಮತ್ತು ಪಾರ್ಶ್ವವಾಯು ತುರ್ತು ಪರಿಸ್ಥಿತಿಗಳಲ್ಲಿ ಜಾಗತಿಕವಾಗಿ ಮಾನದಂಡವಾಗಿ ಅಳವಡಿಸಿಕೊಂಡ ವಿಧಾನಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತವೆ. ತುರ್ತು ಸನ್ನದ್ಧತೆ, ಬಹುಶಿಸ್ತೀಯ ಸಹಯೋಗ, ಕ್ಲಿನಿಕಲ್ ನಿರ್ವಹಣೆ ಮತ್ತು ಸತತ ಗುಣಮಟ್ಟ ಸುಧಾರಣೆಯನ್ನು ಮೌಲ್ಯಮಾಪನ ಮಾಡುವುದರಿಂದ ಈ ಕಾರ್ಯಕ್ರಮಗಳು ಜೀವಕ್ಕೆ ಕಂಟಕವಾದ ಹೃದಯ ಮತ್ತು ನರರೋಗಗಳ ತುರ್ತು ಸನ್ನಿವೇಶಗಳಲ್ಲಿ ರೋಗಿಗಳಿಗೆ ಫಲಿತಾಂಶಗಳನ್ನು ಸುಧಾರಿಸುವ ರಚನಾತ್ಮಕ ವ್ಯವಸ್ಥೆಗಳನ್ನು ಉತ್ತೇಜಿಸುತ್ತವೆ.










