ವಿಜಯ ದರ್ಪಣ ನ್ಯೂಸ್…..
ಖಾಜಿ ಹೊಸಹಳ್ಳಿಯಲ್ಲಿ ಭಗತ್ ಸಿಂಗ್ ಪ್ರತಿಮೆ ಅನಾವರಣ

ತಾವರೆಕೆರೆ : ಹೊಸಕೋಟೆ ತಾಲೂಕಿನ ಖಾಜಿ ಹೊಸಹಳ್ಳಿ ಗ್ರಾಮದಲ್ಲಿ ಸಮಾಜಸೇವಕ ಜಿ. ನಾಗರಾಜ್ ಹಾಗೂ ಸಂಘದ ವತಿಯಿಂದ ಹಾಗೂ ಜಿ ನಾಗರಾಜ್ ಮತ್ತು ಪುಷ್ಪಾ ನಾಗರಾಜ್ ಅವರ ಸಂತಾನದಿಂದ ಪುತ್ತಳಿ ನಿರ್ಮಾಣ ಮಾಡಿಕೊಟ್ಟಿದ್ದು ದೇಶದ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಭಗತ್ ಸಿಂಗ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ನಿವೃತ್ತ ಸೈನಿಕರಾದ ಕೆ.ಎಲ್. ಕೃಷ್ಣ ಸಿಂಗ್ ಅವರು ಭಗತ್ ಸಿಂಗ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಗತ್ ಸಿಂಗ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿ ಎಂದು ಸ್ಮರಿಸಿದರು.
ಭಗತ್ ಸಿಂಗ್ ಅವರ ದೇಶಪ್ರೇಮ, ಧೈರ್ಯ, ತ್ಯಾಗ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ಹೋರಾಟ ಇಂದಿನ ಯುವಜನತೆಗೆ ಸದಾ ಪ್ರೇರಣೆಯಾಗಬೇಕು. ದೇಶದ ಬಗ್ಗೆ ಕಾಳಜಿ, ಸಮಾಜದ ಬಗ್ಗೆ ಜವಾಬ್ದಾರಿ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಭಗತ್ ಸಿಂಗ್ ಅವರು ತಮ್ಮ ವೈಯಕ್ತಿಕ ಜೀವನಕ್ಕಿಂತ ದೇಶದ ಸ್ವಾತಂತ್ರ್ಯ ಮತ್ತು ಜನರ ಹಿತಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಜೀವನವು ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. ಇಂತಹ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಡೆಯಬೇಕಿದೆ ಎಂದು ಕೃಷ್ಣ ಸಿಂಗ್ ಅಭಿಪ್ರಾಯಪಟ್ಟರು.

ಹೊಸಕೋಟೆ ತಾಲೂಕಿನಲ್ಲಿ ಭಗತ್ ಸಿಂಗ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಸಮಾಜಸೇವಕ ಜಿ. ನಾಗರಾಜ್ ಅವರು ಕೈಗೊಂಡಿರುವ ಕಾರ್ಯವು ಗಮನಾರ್ಹವಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳು ಮತ್ತು ದೇಶಭಕ್ತಿಯ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನವಾಗಿರುವ ಈ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜಿ ನಾಗರಾಜ್ ಅವರ ಅಪ್ಪಟ ಬೆಂಬಲಿಗರು ಮತ್ತು ಅಭಿಮಾನಿಗಳು ಮತ್ತು ಸಂಘದ ಪದಾಧಿಕಾರಿಗಳು ಭಗತ್ ಸಿಂಗ್ ಅವರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಿದ್ದು ಅಪಾರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಹಿ ಹಂಚಿ ಪಟಾಕಿ ತಿಳಿಸಿ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಅನ್ನಸತರ್ಪಣೆ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಖಾಜಿ ಹೊಸಹಳ್ಳಿ ಗ್ರಾಮದ ಸುತ್ತಮುತ್ತಲಿನ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಯುವಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.









