ವಿಜಯ ದರ್ಪಣ ನ್ಯೂಸ್….
ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಚಿಮುಲ್ ಗೆ ರೈತ ಸಂಘದಿಂದ ಮನವಿ

ಶಿಡ್ಲಘಟ್ಟ : ಮುಂಗಾರು ಮಳೆಯ ಕೊರತೆಯಿಂದ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಮೇವು ಅಭಾವ ಉಂಟಾಗಿದೆ ಪಶು ಆಹಾರ, ಫೀಡ್, ಚಕ್ಕೆ, ಬೂಸಾ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಹಾಲು ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದ್ದು ಪ್ರತಿ ಲೀಟರ್ ಗೆ ಕನಿಷ್ಠ 10 ರೂ.ಗಳು ಹೆಚ್ಚುವರಿ ಖರೀದಿ ದರ ನಿಗದಿಪಡಿಸಬೇಕು ಎಂದು
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಚಿಮುಲ್) ನಗರದ ಉಪ ಕಚೇರಿ ಶಿಬಿರ ಘಟಕದ ವ್ಯವಸ್ಥಾಪಕ ಡಾ. ರವಿಕಿರಣ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಹಾಲಿನ ಖರೀದಿ ದರವನ್ನು ತಕ್ಷಣ ಹೆಚ್ಚಿಸಬೇಕು ಹಾಗೂ ಪಶು ಆಹಾರದ ಬೆಲೆಯನ್ನು ನಿಯಂತ್ರಿಸಿ ಕಡಿಮೆ ಮಾಡಬೇಕು ,ಹಾಲಿನ ಖರೀದಿ ದರ ಕಡಿಮೆಯಾಗಿರುವುದರಿಂದ ಹಾಲು ಉತ್ಪಾದಕ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಹಾಲಿನ ಖರೀದಿ ದರವನ್ನು ಹೆಚ್ಚಿಸುವ ಬದಲು ಕಡಿತಗೊಳಿಸಿರುವುದು ರೈತರಿಗೆ ಮತ್ತಷ್ಟು ಹೊರೆ ತಂದಿದೆ ಎಂದು ಅವರು ಹೇಳಿದರು.
ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಗೆ ಕನಿಷ್ಠ 10 ರೂ.ಗಳು ಹೆಚ್ಚುವರಿ ಖರೀದಿ ದರ ನಿಗದಿಪಡಿಸಬೇಕು ,ಜತೆಗೆ ಪಶು ಆಹಾರದ ಬೆಲೆಯನ್ನು ನಿಯಂತ್ರಿಸಿ ಕಡಿಮೆ ಮಾಡುವ ಮೂಲಕ ಹಾಲು ಉತ್ಪಾದಕರನ್ನು ರಕ್ಷಿಸಿ, ಪಶು ಸಂಗೋಪನೆಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಚಿಮುಲ್ ಶಿಡ್ಲಘಟ್ಟ ಉಪ ಕಚೇರಿ ಶಿಬಿರ ಘಟಕದ ವ್ಯವಸ್ಥಾಪಕ ಡಾ.ರವಿಕಿರಣ್, ರೈತ ಸಂಘ ಸಲ್ಲಿಸಿರುವ ಮನವಿಯನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು. ಮಳೆಯ ಕೊರತೆಯಿಂದ ಹಾಲು ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಮನವಿಯನ್ನು ರವಾನಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಟಿ.ಬುಸ್ಸನಹಳ್ಳಿ ದೇವರಾಜ್,ಗುಡಿಹಳ್ಳಿ ಕೆಂಪಣ್ಣ, ವೇಣುಗೋಪಾಲ್,ದೇವರಾಜ್, ಕೆಂಪರೆಡ್ಡಿ , ರೈತ ಸಂಘದ ಪದಾಧಿಕಾರಿಗಳು ಹಾಗೂ ಹಾಲು ಉತ್ಪಾದಕರು ಪಾಲ್ಗೊಂಡಿದ್ದರು.









