--Ads--

ಮಾಡಿದ್ದುಣ್ಣೋ ಮಹಾರಾಯ……. ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ…….

On: July 30, 2026 3:43 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮಾಡಿದ್ದುಣ್ಣೋ ಮಹಾರಾಯ…….

ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ…….

ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ……..

ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುವ ಮಂದಿಯ ವಿರುದ್ಧ ದೂರು ಕೊಡಬೇಕಿದೆ,

ಅದೇ ಸಿನಿಮಾಗಳಲ್ಲಿ ಮಚ್ಚು, ಲಾಂಗು ಬಾಂಬು, ಬಂದೂಕು, ರಕ್ತ, ಹಿಂಸೆ, ಸೇಡು ತೋರಿಸಿ ಸಮಾಜವನ್ನು ದಾರಿ ತಪ್ಪಿಸುವವರ ವಿರುದ್ಧ ದೂರು ನೀಡಬೇಕಿದೆ,

ಧಾರವಾಹಿಗಳಲ್ಲಿ ಮಾನವೀಯ ಮೌಲ್ಯಗಳನ್ನು ನಾಶಪಡಿಸಿ ಅದರ ವಿರುದ್ಧ ಮೌಲ್ಯಗಳನ್ನು ಪ್ರತಿಪಾದಿಸುವ, ಕೌಟುಂಬಿಕ ಮೌಲ್ಯಗಳನ್ನು ಅಪವಿತ್ರಗೊಳಿಸಿ ಅನೈತಿಕ ಸಂಬಂಧಗಳನ್ನು ನೈತಿಕ ಗೊಳಿಸುವ ಕಥೆಗಳ ವಿರುದ್ಧ ದೂರು ನೀಡಬೇಕಿದೆ,

ರಿಯಾಲಿಟಿ ಶೋಗಳ ಹೆಸರಿನಲ್ಲಿ ಬಿಗ್ ಬಾಸ್ ರೀತಿಯ ಅತ್ಯಂತ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವವರ ವಿರುದ್ಧ ದೂರು ನೀಡಬೇಕಿದೆ,

ಸರ್ಕಾರದ ಪ್ರತಿ ಕಚೇರಿಯಲ್ಲಿ ಲಂಚಕ್ಕಾಗಿ ಒತ್ತಾಯಿಸುವ, ಕಿರುಕುಳಕೊಡುವ ಅಧಿಕಾರಿಗಳ ವಿರುದ್ಧ ದೂರು ನೀಡಬೇಕಿದೆ,

ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಸಾಮಾನ್ಯ ಅಂಗಡಿಗಳಲ್ಲಿಯೇ ಮಾದಕ ದ್ರವ್ಯ ಮಾರಾಟ ಮಾಡುವ ದಗಾಕೋರರ ವಿರುದ್ಧ ದೂರು ನೀಡಬೇಕಾಗಿದೆ,

ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಲ್ಲಿ ಅತ್ಯಂತ ಕೆಟ್ಟ ರೀತಿಯ ಸುದ್ದಿಗಳನ್ನು ಬ್ರೇಕಿಂಗ್ ನ್ಯೂಸ್ ಮಾಡುವ, ತೀರಾ ಮೂರನೆಯ ದರ್ಜೆ ಭಾಷೆ ಬಳಸುವ ಪತ್ರಕರ್ತರ ವಿರುದ್ಧ ದೂರು ನೀಡಬೇಕಿದೆ,

ಎಲ್ಲಾ ಧರ್ಮಗಳ ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ಜನರ, ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಅವರಲ್ಲಿ ಮೌಢ್ಯ ಬಿತ್ತಿ ಶೋಷಿಸುತ್ತಿರುವ ಧರ್ಮಾಧಿಕಾರಿಗಳ ವಿರುದ್ಧ ದೂರು ನೀಡಬೇಕಿದೆ,

ಇಡೀ ಸಮಾಜವನ್ನೇ ನಿಯಂತ್ರಣಕ್ಕೆ ಪಡೆದು ಹೆಜ್ಜೆ ಹೆಜ್ಜೆಗೂ ಜನರನ್ನು ವಂಚಿಸುತ್ತಿರುವ, ಭ್ರಷ್ಟಗೊಳಿಸುತ್ತಿರುವ ಭೂ ಮಾಫಿಯಾ, ವೈದ್ಯಕೀಯ ಮಾಫಿಯಾ, ಶಿಕ್ಷಣ ಮಾಫಿಯಾ ವಿರುದ್ಧ ದೂರು ನೀಡಬೇಕಿದೆ……

ಚುನಾವಣೆಗಳಲ್ಲಿ ಸುಳ್ಳು ಭರವಸೆ ನೀಡಿ, ಹಣ ಹೆಂಡ ಸೀರೆ ಪಂಚೆ ಕೊಟ್ಟು, ಜಾತಿ ಧರ್ಮದ ಹೆಸರಿನಲ್ಲಿ ವಿಭಜಿಸಿ, ಮತ ಪಡೆದು ಜನಪ್ರತಿನಿಧಿಗಳಾಗುತ್ತಿರುವ ಕೆಟ್ಟ ರಾಜಕೀಯ ನಾಯಕರ ವಿರುದ್ಧ ದೂರು ನೀಡಬೇಕಾಗಿದೆ,

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ, ಮತದಾನವನ್ನು ಪವಿತ್ರ ಗೊಳಿಸುವ ನೀತಿಗೆ, ಜವಾಬ್ದಾರಿಗೆ ವಿರುದ್ಧವಾಗಿ ರಾಜಕಾರಣಿಗಳ ಆಮಿಷಕ್ಕೆ ಬಲಿಯಾಗಿ ತಮ್ಮ ವ್ಯಕ್ತಿತ್ವವನ್ನೇ, ಮನುಷ್ಯತ್ವವನ್ನೇ ಮಾರಿಕೊಳ್ಳುತ್ತಿರುವ ಮತದಾರರ ವಿರುದ್ಧ ದೂರು ನೀಡಬೇಕಿದೆ,

ಸರ್ಕಾರಿ ಜಮೀನುಗಳನ್ನು, ಕೆರೆ ಕಾಲುವೆಗಳನ್ನು ಅನಧಿಕೃತವಾಗಿ ಆಕ್ರಮಿಸಿ. ವಂಚಿಸುತ್ತಿರುವ ಖದೀಮರ ವಿರುದ್ಧ ದೂರು ನೀಡಬೇಕಾಗಿದೆ,……,

ಹೀಗೆ ದೂರು ನೀಡುತ್ತಾ ಹೋದರೆ ನೂರಾರು ದೂರುಗಳು ದಾಖಲಾಗುತ್ತವೆ. ಆದರೆ ಹೀಗೆ ಈ ಸಮಾಜ ಕಲುಷಿತವಾಗಲು ಕಾರಣರಾದವರು ಯಾರು ಗೊತ್ತಾ, ಇದೇ ರಾಜಕಾರಣಿಗಳು, ಇದೇ ಅಧಿಕಾರಿಗಳು, ಇದೇ ಸಿನಿಮಾ, ಧಾರಾವಾಹಿ ನಟ ನಟಿಯರು, ಇದೇ ಪತ್ರಕರ್ತರು, ಇದೇ ಸ್ವಾಮೀಜಿಗಳು ಇದೇ ಇತರರು,…..,

ರಾಜ್ಯದ ಎಲ್ಲಾ ಸಂಪನ್ಮೂಲಗಳ ಮೇಲೆ ಅಧಿಕಾರ ಹೊಂದಿರುವ, ಜನರ ಮೇಲೆ ಹಿಡಿತ ಸಾಧಿಸುವ, ಸಮಾಜವನ್ನು ಸರಿ ದಿಕ್ಕಿಗೆ ಮುನ್ನಡೆಸಿಕೊಂಡು ಹೋಗುವ ಬಹುತೇಕ ನಾಯಕತ್ವ ಇವರುಗಳಲ್ಲೇ ಕೇಂದ್ರೀಕೃತವಾಗಿದೆ. ಇವರೇ ಸಮಾಜವನ್ನು ಹಾದಿ ತಪ್ಪಿಸಿ ಈಗ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕೆಲವರು ಇವರದೇ ಭಾಷೆಯಲ್ಲಿ, ಇವರದೇ ಪ್ರತಿಬಿಂಬಿತವಾಗಿ ಒಂದಷ್ಟು ಕೆಟ್ಟ, ಕೊಳಕ, ಅಶ್ಲೀಲ ಪ್ರತಿಕ್ರಿಯೆ ನೀಡಿದರೆ ಅವರ ವಿರುದ್ಧ ಅದೇ ದುಷ್ಟಕೂಟಕ್ಕೆ ಇದೇ ಜನ ದೂರು ನೀಡುತ್ತಾರೆ. ನ್ಯಾಯಾಲಯಗಳ ಮುಖಾಂತರ ಸುದ್ದಿ ಪ್ರಸಾರಕ್ಕೆ ನಿರ್ಬಂಧ ತರುತ್ತಾರೆ.

ಕೇಳಿನೋಡಿ,
ಈ ಸಿನಿಮಾ ನಟ ನಟಿಯರು, ರಾಜಕಾರಣಿಗಳು, ಧರ್ಮಾಧಿಕಾರಿಗಳು, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳನ್ನು,
ಈ ಸಮಾಜಕ್ಕೆ ಇವರ ಕೊಡುಗೆ ಏನು, ಈ ಮಣ್ಣಿನ ಮೌಲ್ಯಗಳನ್ನು ಉಳಿಸಲಿಕ್ಕೆ ಇವರು ಮಾಡಿರುವ ಘನ ಕಾರ್ಯಗಳೇನು, ಸಿನಿಮಾಗಳ ಮುಖಾಂತರ ಈ ಸಮಾಜಕ್ಕೆ ಇವರು ನೀಡಿರುವ ಸಂದೇಶವೇನು, ಧಾರ್ಮಿಕ ಕ್ಷೇತ್ರಗಳ ಮೂಲಕ ಈ ಸಮಾಜದ ಜನರ ನಡುವೆ ಉಳಿಸಿರುವ ಸೌಹಾರ್ದತೆ ಏನು, ಈ ಅಧಿಕಾರಿಗಳು ಈ ಸಮಾಜಕ್ಕೆ ಎಷ್ಟು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ, ಈ ಪತ್ರಕರ್ತರು ಈ ಸಮಾಜದ ಯಾವ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ,…..,

ಅದಕ್ಕಾಗಿ,……

ಬೆಟ್ಟವನ್ನು ಏರಬೇಕಾಗಿದೆ,……

ಬಹುದೊಡ್ಡ ಬೆಟ್ಟವೊಂದನ್ನು,
ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು,
ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು,….

ಬುದ್ದ, ಯೇಸು, ಪೈಗಂಬರ್, ಬಸವ, ಗಾಂಧಿ, ಅಂಬೇಡ್ಕರ್, ಗುರುನಾನಕ್, ವಿವೇಕಾನಂದ ಮುಂತಾದ ಘಟಾನುಘಟಿಗಳು ಅರ್ಧ ದಾರಿಯಲ್ಲೇ ನಿಲ್ಲಿಸಿದ ಬೆಟ್ಟವನ್ನು ಏರಬೇಕಾಗಿದೆ….

ಖುರಾನ್, ಬೈಬಲ್, ವೇದ ಉಪನಿಷತ್ತುಗಳು ಮಾರ್ಗ ತೋರುವಲ್ಲಿ, ಪರಿಣಾಮ ಬೀರುವಲ್ಲಿ, ಫಲಿತಾಂಶ ನೀಡುವಲ್ಲಿ ವಿಫಲವಾದ ಬೆಟ್ಟವನ್ನು……

ಅದಕ್ಕಾಗಿ….

ಜನರ ಮನಸ್ಸುಗಳ ಒಳಗೆ ಇಳಿಯಬೇಕಿದೆ….

ಅವರ ಹೃದಯದ ಬಾಗಿಲನ್ನು ತಟ್ಟಬೇಕಿದೆ…

ಅವರ ಪ್ರತಿರೋಧವನ್ನು ಎದುರಿಸಬೇಕಿದೆ….

ಅವರ ನಿಂದನೆಯನ್ನು ಸಹಿಸಬೇಕಿದೆ…..

ಅವರ ಆರೋಪಗಳನ್ನು ಕೇಳಿಸಿಕೊಳ್ಳಬೇಕಿದೆ….

ಅವರ ಅಜ್ಞಾನಕ್ಕೆ ಮರುಕಪಡಬೇಕಾಗಿದೆ….

ಅವರ ಉಡಾಫೆತನವನ್ನು ನಿರ್ಲಕ್ಷಿಸಬೇಕಾಗಿದೆ…..

ಅವರ ಮೌಢ್ಯವನ್ನು ಅರ್ಥಮಾಡಿಸಬೇಕಿದೆ…

ಅವರ ನಂಬಿಕೆಯನ್ನು ಪ್ರಶ್ನಿಸಬೇಕಿದೆ….

ಅವರು ನೀಡುವ ನೋವನ್ನು ನುಂಗಬೇಕಿದೆ…

ಅವರಿಗೆ ಪ್ರೀತಿಯನ್ನು ಹಂಚಬೇಕಿದೆ…….

ಅದಕ್ಕಾಗಿ…….

ವಿಶ್ರಾಂತಿ ಪಡೆಯುವಂತಿಲ್ಲ,…

ಸುಖ ಬಯಸುವಂತಿಲ್ಲ…

ತಾಳ್ಮೆಗೆಡುವಂತಿಲ್ಲ…..

ಪ್ರಶಸ್ತಿ ಸ್ವೀಕರಿಸುವಂತಿಲ್ಲ…

ಸನ್ಮಾನಕ್ಕೆ ಹಾತೊರೆಯುವಂತಿಲ್ಲ…

ಅಧಿಕಾರಕ್ಕಾಗಿ ಹೊಡೆದಾಡುವಂತಿಲ್ಲ…..

ಪ್ರಚಾರಕ್ಕೆ ಹಲ್ಲುಗಿಂಜುವಂತಿಲ್ಲ…..

ಆ ಮಾರ್ಗದಲ್ಲಿ……..

ಬ್ರಾಹ್ಮಣರನ್ನು ಟೀಕಿಸಬೇಕಾಗುತ್ತದೆ…..

ದಲಿತರನ್ನೂ ಪ್ರಶ್ನಿಸಬೇಕಾಗುತ್ತದೆ……

ಒಕ್ಕಲಿಗರನ್ನು ನಿಂದಿಸಬೇಕಾಗುತ್ತದೆ…

ಲಿಂಗಾಯಿತರನ್ನು ಎಚ್ಚರಿಸಬೇಕಾಗುತ್ತದೆ…..

ಕುರುಬರನ್ನು ಕುಟುಕಬೇಕಾಗುತ್ತದೆ….

ಎಲ್ಲಾ ಜಾತಿಗಳವರನ್ನು ಹೀಗಳೆಯಬೇಕಾಗುತ್ತದೆ….

ಮಹಿಳೆಯರಿಗೂ ಬುದ್ದಿ ಹೇಳಬೇಕಾಗುತ್ತದೆ….

ಪುರುಷರಿಗೆ ಗದರಿಸಬೇಕಾಗುತ್ತದೆ…..

ಮಕ್ಕಳಿಗೆ ಕಲಿಸಬೇಕಾಗುತ್ತದೆ…..

ರೈತರನ್ನು ದಡ್ಡರೆನ್ನಬೇಕಾಗುತ್ತದೆ….

ಕಾರ್ಮಿಕರನ್ನು ಜಗಳಗಂಟರು ಎಂದು ದೂರಬೇಕಾಗುತ್ತದೆ….

ಧಾರ್ಮಿಕ ನಾಯಕರ ಮುಖವಾಡ ಕಳಚಬೇಕಾಗುತ್ತದೆ….

ಸಿನಿಮಾ ನಟನಟಿಯರ ಬಣ್ಣ ಬಯಲುಮಾಡಬೇಕಾಗುತ್ತದೆ…

ದೇವರ ಅಸ್ತಿತ್ವವನ್ನೂ ಕೇಳಬೇಕಾಗುತ್ತದೆ…..

ರಾಜಕಾರಣಿಗಳ ಭ್ರಷ್ಟತೆ ಎತ್ತಿ ತೋರಿಸಬೇಕಾಗುತ್ತದೆ….

ಅಧಿಕಾರಿಗಳ ಹಣದ ಮೋಹ ಖಂಡಿಸಬೇಕಾಗುತ್ತದೆ….

ಸಮಾಜ ಸೇವಕರ ಗೋಮುಖ ವ್ಯಾಘ್ರತನ ವರ್ಣಿಸಬೇಕಾಗುತ್ತದೆ…

ಮತದಾರರ ಸ್ವಾರ್ಥ ಹೇಳಲೇಬೇಕಾಗುತ್ತದೆ…

ಇದರ ನಡುವೆ………..

ಎಡಬಿಡಂಗಿ ಎನ್ನುವರು,
ದೇಶದ್ರೋಹಿ ಎನ್ನುವರು,
ಧರ್ಮ ವಿರೋಧಿ ಎನ್ನುವರು,
ಮುಭಕ್ತನೆನ್ನುವರು,
ಗಂಜಿಗಿರಾಕಿ ಎನ್ನುವರು,
ತಟ್ಟೆ ಕಾಸಿನ ಭಿಕ್ಷುಕ ಎನ್ನುವರು,
ಹಿಜಡಾ ಎನ್ನುವರು,
ಎಡಪಂಥೀಯ ಎನ್ನುವರು,
ಬಲಪಂಥೀಯ ಎನ್ನುವರು,
ತೆವಲು ಬರಹಗಾರ ಎನ್ನುವರು,
ಪಲಾಯನವಾದಿ ಎನ್ನುವರು,
ಪ್ರಚೋದಿಸುವರು,
ಹುಚ್ಚನೆನ್ನುವರು,
ವೈಯಕ್ತಿಕವಾಗಿ ನಿಂದಿಸುವರು…….

ಆಗಲೂ…..

ತುಂಬು ಹೃದಯದಿಂದ ಸ್ವಾಗತಿಸುವವರು,
ಪ್ರೋತ್ಸಾಹಿಸುವವರು,
ಬೆನ್ನು ತಟ್ಟುವವರು,
ಜೊತೆಯಲ್ಲಿ ಬರುವವರು ಇದ್ದೇ ಇರುತ್ತಾರೆ…..

ನಿರ್ಲಿಪ್ತರು,
ನಿರ್ಲಕ್ಷಿಸುವವರು,
ಗಮನಿಸುವವರು,
ಕುತೂಹಲಿಗಳು,
ಎಚ್ಚರಿಸುವವರು,
ಉದಾಸೀನ ಮಾಡುವವರು,
ಇರುತ್ತಾರೆ…..

ಜೊತೆಗೆ
ಬೆಟ್ಟವನ್ನು ಹತ್ತಲು ಬಿಡದೆ….

ಕಾಲೆಳೆಯುವವರು,
ಕಲ್ಲು ಎಸೆಯುವವರು,
ಬಾಣ ಬಿಡುವವರು,
ಹಿತಶತ್ರುಗಳು,
ಮಜಾ ನೋಡುವವರು,
ನಾಶ ಮಾಡಲು ಯತ್ನಿಸುವವರು,
ಕೊಂದೇ ಬಿಡುವವರು,
ಇರುತ್ತಾರೆ…….

ಏಕೆಂದರೆ….

ಅದು ಅಂತಿಂಥ ಬೆಟ್ಟವಲ್ಲ…

ಮಾನವೀಯತೆಯ ಬೆಟ್ಟ,
ಜೀವಪರ ಬೆಟ್ಟ,
ಮಾನವ ಧರ್ಮದ ಬೆಟ್ಟ,
ಪ್ರಕೃತಿ ಸಹಜ‌ ಸೃಷ್ಟಿಯ ಬೆಟ್ಟ,

ಅಲ್ಲಿಗೆ ತಲುಪಿದ್ದೇ ಆದರೆ,……

ಈ ಪಟ್ಟಭದ್ರ ಹಿತಾಸಕ್ತಿಗಳ ಮಾನವ ನಿರ್ಮಿತ ಚಿಕ್ಕ ಚಿಕ್ಕ ಬೆಟ್ಟಗಳು ಕುಸಿಯುತ್ತವೆ,
ಕೃತಕ ಗೋಡೆಗಳು ಉದುರಿ ಬೀಳುತ್ತವೆ.
ಅಸ್ತಿತ್ವವೇ ಇಲ್ಲವಾಗುತ್ತದೆ.

ಆದರೂ……

ಹತ್ತಲೇ ಬೇಕಿದೆ ಆ ಬೆಟ್ಟವನ್ನು,
ಆ ಕನಸಿನಾ ಬೆಟ್ಟವನ್ನು,
ಬನ್ನಿ ನನ್ನೊಂದಿಗೆ…..
ನಾನು ನಿಮ್ಮೊಂದಿಗೆ…..
ಪ್ರಯತ್ನಿಸುತ್ತಲೇ ಇರೋಣ….
ನಿರಂತರವಾಗಿ….
ಬೆಟ್ಟದ ತುದಿ ತಲುಪುವವರೆಗೂ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9844013068…….
9663750451…….

WhatsApp

Join Now

Telegram

Join Now

Instagram

Join Now