ವಿಜಯ ದರ್ಪಣ ನ್ಯೂಸ್….
86ನೇ ವರ್ಷದ ನಂದಿಗಿರಿ ಪ್ರದಕ್ಷಿಣೆ : ಭಕ್ತಿ ಭಾವ ಪರವಶದಿಂದ ಹೆಜ್ಜೆ ಹಾಕಿದ ಸಹಸ್ರಾರು ಭಕ್ತಾದಿಗಳು

ಶಿಡ್ಲಘಟ್ಟ /ಚಿಕ್ಕಬಳ್ಳಾಪುರ : ಆಷಾಢ ಮಾಸದ ಕೊನೆಯ ಸೋಮವಾರದಂದು ನಡೆಯುವ 86ನೇ ವರ್ಷದ ನಂದಿಗಿರಿ ಪ್ರದಕ್ಷಿಣೆ ಸೋಮವಾರ ಭಕ್ತಿಭಾವದಿಂದ ನಡೆಯಿತು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಆಗಮಿಸಿದ್ದ ಸಾವಿರಾರು ಭಕ್ತರು ಗಿರಿಪ್ರದಕ್ಷಿಣೆಯಲ್ಲಿ ಪಾಲ್ಗೊಂಡರು.
ಶ್ರೀ ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಂದಿಯ ಐತಿಹಾಸಿಕ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬೆಳಗ್ಗೆ 6.30ಕ್ಕೆ ಗಿರಿಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು.
ಆಷಾಢ ಮಾಸದ ಕೊನೆಯ ಸೋಮವಾರ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ, ಚೆನ್ನಗಿರಿ ಹಾಗೂ ಸ್ಕಂದಗಿರಿ ಸೇರಿದಂತೆ ಪಂಚಗಿರಿಗಳನ್ನು ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಸಾವಿರಾರು ಮಂದಿ ನಂದಿಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸುತ್ತಾರೆ.

ಬೆಂಗಳೂರು, ದೊಡ್ಡಬಳ್ಳಾಪುರ,ನೆಲಮಂಗಲ, ದೇವನಹಳ್ಳಿ,ಶಿಡ್ಲಘಟ್ಟ, ವಿಜಯಪುರ, ಮಾಗಡಿ, ತುಮಕೂರು, ಕೋಲಾರ ತಾಲ್ಲೂಕುಗಳವರು ,ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧಡೆಯಿಂದ ಅಬಾಲ ವೃದ್ದರಾದಿಯಾಗಿ ಆಗಮಿಸಿದ ಭಕ್ತರು ವಿವಿಧ ಭಜನಾ ತಂಡಗಳೊಂದಿಗೆ ದೇವರ ಹಾಡುಗಳನ್ನು ಹಾಡುತ್ತ ಹೆಜ್ಜೆ ಹಾಕಿದರು.
ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯದಿಂದ ಆರಂಭವಾದ ಪ್ರದಕ್ಷಿಣೆ ಅಂಗಟ್ಟ, ಈರೇನಹಳ್ಳಿ, ಕುಡುವತಿ, ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಗಾಂಧಿಪುರ, ಕಣಿವರ ಬಸವಣ್ಣ ಹಾಗೂ ಸುಲ್ತಾನ್‌ಪೇಟೆ ಮಾರ್ಗವಾಗಿ ಸಾಗಿತು,ಸುಮಾರು 17 ಕಿ.ಮೀ. ದೂರವನ್ನು ಭಕ್ತರು ಕಾಲ್ನಡಿಗೆಯಲ್ಲಿ ಕ್ರಮಿಸಿದರು.

ಪ್ರದಕ್ಷಿಣೆಯ ಮಾರ್ಗದಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರು ಭಕ್ತರಿಗೆ ಸೇವೆ ಸಲ್ಲಿಸಿದರು. ಕಾಫಿ, ಟೀ, ಬಾದಾಮಿ ಹಾಲು, ಮಜ್ಜಿಗೆ, ಬಿಸ್ಕತ್, ಕಲ್ಲಂಗಡಿ ಹಣ್ಣು, ಓ.ಆರ್.ಎಸ್.ಜ್ಯೂಸ್ ಹಾಗೂ ಲಘು ಉಪಾಹಾರ ವಿತರಿಸಿ ದಣಿದ ಭಕ್ತರಿಗೆ ನೆರವಾದರು.
ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಗಮಿಸಿದ್ದ ಭಕ್ತರು ನಂದಿಬೆಟ್ಟದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಪ್ರದಕ್ಷಿಣೆ ಹಾಕಿದರು, ದಾರಿಯುದ್ದಕ್ಕೂ ಬೆಟ್ಟದ ರಮಣೀಯ ದೃಶ್ಯಗಳನ್ನು ವೀಕ್ಷಿಸುತ್ತಾ ಹಲವರು ಛಾಯಾಚಿತ್ರಗಳನ್ನು ತೆಗೆದುಕೊಂಡರು.
ಯಲಹಂಕ ಕ್ಷೇತ್ರದ ಶಾಸಕರಾದ ಎಸ್.ಆರ್.ವಿಶ್ವನಾಥ್ ,ದೊಡ್ಡಬಳ್ಳಾಪುರ ಶಾಸಕರಾದ ಮುನಿರಾಜು ಮತ್ತು ಭಗತ್ ಸಿಂಗ್ ಚಾರಿಟಬಲ್ ಅಧ್ಯಕ್ಷ ಸಂದೀಪ. ಬಿ.ರೆಡ್ಡಿ ತಮ್ಮ ಅಪಾರ ಆಭಿಮಾನಿಗಳೊಂದಿಗೆ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಗಿರಿ ಪ್ರದಕ್ಷಣೆಯಲ್ಲಿ ಪಾಲ್ಗೊಂಡಿದ್ದರು.
ಭಕ್ತಿ ಮತ್ತು ಸೇವಾ ಮನೋಭಾವದೊಂದಿಗೆ ನಡೆದ 86ನೇ ವರ್ಷದ ನಂದಿಗಿರಿ ಪ್ರದಕ್ಷಿಣೆಯಲ್ಲಿ ಪಕ್ಷ ಬೇಧ ಮರೆತು ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ತಮಿಳುನಾಡಿನ ತಿರುವಣಾಮಲೈನಲ್ಲಿ ಪ್ರತಿ ಪೌರ್ಣಮಿಗೆ ಅರುಣಾಚಲ ಗಿರಿಯ ಪ್ರದಕ್ಷಣೆ ಮಾಡಿದರೆ ಕೈಲಾಸವನ್ನು ಪ್ರದಕ್ಷಿಣೆ ಮಾಡಿದಷ್ಟೇ ಪುಣ್ಯ ಎಂಬ ನಂಬಿಕೆ ಇಂದಿಗೂ ಇದೆ, ಆದರೆ ದೂರದ ತಿರುವಣಾಮಲೈಗೆ ತೆರಳಲು ಆಗದು ಎಂದು ನಂದಿಗಿರಿಗೆ ಪ್ರದಕ್ಷಿಣೆ ಮಾಡಿದರೆ ಅದೇ ಪುಣ್ಯಲಭಿಸುತ್ತದೆ ಎಂದು 1928ರಲ್ಲಿ ದೊಡ್ಡಬಳ್ಳಾಪುರದ ಸುಬ್ಬರಾಯಪ್ಪ ಮತ್ತು ಗೌರಿಬಿದನೂರು ತಾಲ್ಲೂಕು ನಾಮಗೊಂಡ್ಲು ಚಿಕ್ಕಣ್ಣ ಎಂಬುವರಿಂದ ಪ್ರಾರಂಭವಾಯಿತು,ಈ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವಿದೆ ,ಪ್ರತಿ ವರ್ಷ ಆಷಾಢ ಮಾಸದ ಕೊನೆಯ ಸೋಮವಾರ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ ಹಾಗು ಗೋರ್ವಧನ ಗಿರಿ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದು.
ಈ ವೇಳೆ ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಒ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ವೇಣು, ಖಜಾಂಚಿ ಬಿ.ಜಿ.ಶ್ರೀನಿವಾಸ್, ಸಂಚಾಲಕ ಸಿ.ಎಸ್. ಮಧುಸೂಧನ್, ಟ್ರಸ್ಟಿಗಳಾದ ,ಜಿ.ಎನ್.ಚಂದ್ರಶೇಖರ್, ಎನ್.ಎಸ್.ಚಿಕ್ಕಣ್ಣ, ಕೆ.ಎಸ್.ಗೋಪಿ,ಪ್ರಭಾಕರ್,, ಕೆ.ಆರ್.ವಿಶ್ವನಾಥ್, ಉಮಾಕಾಂತ್,ಎನ್.ಜಿ.ಕುಮಾರ್, ಎಸ್.ಎನ್.ನಟರಾಜ್, ವಿ.ಎಸ್. ರಾಘವೇಂದ್ರ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.










