ವಿಜಯ ದರ್ಪಣ ನ್ಯೂಸ್….
ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಿ :
ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ

ಶಿಡ್ಲಘಟ್ಟ : ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವಂತೆ ಕಳೆದ ಹತ್ತು ವರ್ಷಗಳಿಂದ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿತ್ತು ವಿಳಂಭವಾದರು ಈಗ ಸಂಘ ಆರಂಭವಾಗುತ್ತಿರುವುದು ಸಂತಸ ತಂದಿದೆ ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಬಿನ್ನಮಂಗಲ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದುವರೆಗೆ ಉತ್ಪಾದಿಸಿದ ಹಾಲನ್ನು ಖಾಸಗಿ ಡೇರಿಗಳಿಗೆ ಸರಬರಾಜು ಮಾಡುತ್ತಿದ್ದ ಗ್ರಾಮಸ್ಥರು, ಇನ್ನು ಮುಂದೆ ತಮ್ಮದೇ ಸಹಕಾರ ಸಂಘದ ಮೂಲಕ ಹಾಲು ಪೂರೈಸುವುದರಿಂದ ಒಕ್ಕೂಟದಿಂದ ದೊರೆಯುವ ಪ್ರೋತ್ಸಾಹಧನದ ಜತೆಗೆ ಜಾನುವಾರುಗಳಿಗೆ ವಿಮೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದು ಎಂದು ಹೇಳಿದರು.
ಸಂಘ ಆರಂಭಗೊಂಡ ಮೊದಲ ದಿನವೇ ಸುಮಾರು 120 ಲೀಟರ್ ಹಾಲು ಸಂಗ್ರಹವಾಗಿದೆ ಮುಂದಿನ ಒಂದು ವರ್ಷದೊಳಗೆ ಪ್ರತಿದಿನ ಒಂದು ಸಾವಿರ ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಬೇಕು ಈ ಗುರಿ ಸಾಧನೆಗೆ ಒಕ್ಕೂಟದಿಂದ ದೊರೆಯುವ ಎಲ್ಲಾ ಸಹಕಾರವನ್ನು ಪ್ರಾಮಾಣಿಕವಾಗಿ ಗ್ರಾಮಸ್ಥರಿಗೆ ತಲುಪಿಸಲು ಬದ್ಧನಾಗಿರುವುದಾಗಿ ತಿಳಿಸಿದರು.
ಸಹಕಾರ ಸಂಘಗಳು ಉಳಿದು ಬೆಳೆಯಬೇಕಾದರೆ
ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಅವಕಾಶ ನೀಡದೆ, ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ ಹಾಲು ಉತ್ಪಾದಕರು ಆರ್ಥಿಕವಾಗಿ ಸದೃಡರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕ ಹುಜಗೂರು ರಾಮಯ್ಯ, ಬಿನ್ನಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ನರಸಿಂಹಪ್ಪ ,ಮುಖಂಡ ಪ್ರಭಾಕರ್ ರೆಡ್ಡಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎನ್.ನಾಗೇಶ್, ಶಿಬಿರ ಕಚೇರಿ ಉಪವ್ಯವಸ್ಥಾಪಕ ರವಿಕಿರಣ್, ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.











