ವಿಜಯ ದರ್ಪಣ ನ್ಯೂಸ್….
ಚಿತ್ರದುರ್ಗ ಮಡಿಲಿಗೆ “ಭದ್ರಾ ನದಿ ನೀರು ಹರಿಸಿ ನಿಮ್ಮ ಬದುಕು ಸುಭದ್ರ ಮಾಡಿದ್ದೇವೆ” : ಸಿಎಂ ಡಿ ಕೆ ಶಿವಕುಮಾರ್

ಚಿತ್ರದುರ್ಗ ಜಿಲ್ಲೆಯ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಗುರುವಾರ ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ಈ ಕೈ ಅಧಿಕಾರಕ್ಕೆ ಬಂದಿರುವ ಕಾರಣ ನಾವು ರಾಜ್ಯಕ್ಕೆ ಐದು ಗ್ಯಾರಂಟಿ ನೀಡಿದ್ದು, ಇವುಗಳ ಜತೆಗೆ ಭೂಮಿ ಹಾಗೂ ನೀರಿನ ಗ್ಯಾರಂಟಿ ನೀಡುತ್ತಿದ್ದೇವೆ. ಭೀಕರ ಬರಗಾಲ ಹಾಗೂ ಕಸ್ತೂರಿ ರಂಗನ್ ವಿಚಾರದಲ್ಲಿ ಬಿಜೆಪಿಯವರಿಗೆ ಆಸಕ್ತಿ ಇಲ್ಲ. ಈ ವಿಚಾರದಲ್ಲಿ ಚರ್ಚೆ ಮಾಡಲು ಅವರಿಗೆ ಬದ್ಧತೆ ಇಲ್ಲ. ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲವಾದರೂ ಅವರಿಂದ ರಾಜೀನಾಮೆ ಪಡೆದೆವು. ಆದರೂ ನೀಚ ರಾಜಕಾರಣಕ್ಕಾಗಿ ಅವರು ಯಾತ್ರೆ ಮಾಡಿದ್ದಾರೆ” ಎಂದು ಕಿಡಿಕಾರಿದರು.
“ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಚರಿತ್ರೆ ಇರುವ ಪಕ್ಷ. ಈ ಸರ್ಕಾರ ಯಾವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಜನ ನೂರು ದಿನಗಳ ಆಡಳಿತದಲ್ಲಿ ಗಮನಿಸಿದ್ದಾರೆ. ಸಂಘರ್ಷದಿಂದ ಪ್ರಯೋಜನವಿಲ್ಲ ಎಂದು ನಾನು ಹೃದಯ ಶ್ರೀಮಂತಿಕೆಯಿಂದ ವಿರೋಧ ಪಕ್ಷದವರನ್ನು ಒಟ್ಟಾಗಿ ಕರೆದೊಯ್ಯಲು ಮುಂದಾದೆ. ಸಂಘರ್ಷಕ್ಕೆ ಈ ಡಿ ಕೆ ಶಿವಕುಮಾರ್ ಆಗಲಿ, ಕಾಂಗ್ರೆಸ್ ಪಕ್ಷವಾಗಲಿ ಹೆದರುವುದಿಲ್ಲ. ರೈತರ ಬೆವರಿನಿಂದ ನಾವು ಬದುಕುತ್ತಿದ್ದೇವೆ. ರೈತರ ಶ್ರಮಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದರು.
ಕೇಂದ್ರದಿಂದ 1 ರೂ. ಅನುದಾನ ತರಲಿಲ್ಲ
“ದೇಶಕ್ಕೆ ಪ್ರಧಾನಮಂತ್ರಿಗಳು ಪ್ರತಿನಿಧಿ, ರಾಜ್ಯಕ್ಕೆ ಮುಖ್ಯಮಂತ್ರಿ ಪ್ರತಿನಿಧಿ, ಶಾಸಕರು ಕ್ಷೇತ್ರಗಳಿಗೆ ಪ್ರತಿನಿಧಿ, ರೈತರು ವಿಶ್ವಕ್ಕೆ ಪ್ರತಿನಿಧಿ. ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಹಣಕಾಸು ಸಚಿವರು, ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಗೋವಿಂದ ಕಾರಜೋಳ ಅವರು ನೀರಾವರಿ ಸಚಿವರಾಗಿದ್ದರು. ಆಗ ಕೇಂದ್ರ ಹಾಗೂ ರಾಜ್ಯ ಬಜೆಟ್ ನಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5400 ಕೋಟಿ ಘೋಷಣೆ ಮಾಡಿದರು. ಬೊಮ್ಮಾಯಿ ಅವರೇ, ಗೋವಿಂದ ಕಾರಜೋಳ ಅವರೇ, ಅಶೋಕಣ್ಣ, ವಿಜಯೇಂದ್ರಣ್ಣ ನಿಮ್ಮಿಂದ ಒಂದೇ ಒಂದು ರೂಪಾಯಿ ಅನುದಾನ ಕೊಡಿಸಲು ಆಗಿಲ್ಲ. ಬಿಜೆಪಿ ನಾಯಕರು ಜನಪ್ರತಿನಿಧಿ ಎಂದು ಹೇಳಿಕೊಳ್ಳುವ ಹಕ್ಕಿಲ್ಲ. ನುಡಿದಂತೆ ನಡೆಯಲು ಆಗಿಲ್ಲ” ಎಂದು ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಜನರ ಸೇವೆ ಮಾಡುತ್ತಿದೆ. ನಿಜಲಿಂಗಪ್ಪ ಅವರು ಕಂಡ ಭದ್ರಾ ಕನಸನ್ನು ಕೃಷ್ಣ ಅವರು ಚಾಲನೆ ನೀಡಿದರು. ನಿಮ್ಮ ಕೆರೆಗಳನ್ನು ತುಂಬಿಸಲು ಡಿ ಕೆ ಶಿವಕುಮಾರ್ ಸಂಕಲ್ಪ ಮಾಡಿದ್ದಾನೆ. ವೀರೇಂದ್ರ ಪಪ್ಪಿ ಅವರು ತಮ್ಮ ಕ್ಷೇತ್ರದ ಕೆರೆಗಳ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ನಾನು ಅವರಿಗೆ ಹೇಳಿದೆ, ನಾನು ಈಗಲೂ ಮುಖ್ಯಮಂತ್ರಿ, ಮುಂದೆಯೂ ಮುಖ್ಯಮಂತ್ರಿಯಾಗಿರುತ್ತೇನೆ ಚಿಂತಿಸಬೇಡ ಎಂದು ಹೇಳಿರುವೆ. ಗೋವಿಂದಪ್ಪನವರ ಭಾವನೆ, ಗೋಪಾಲಕೃಷ್ಣ ಅವರು ಬೇಡಿಕೆಗಳ ಬಗ್ಗೆ ನಮಗೆ ಅರಿವಿದೆ” ಎಂದು ಭರವಸೆ ನೀಡಿದರು.
ಭದ್ರಾ ಯೋಜನೆ ಒಂದು ಭಾಗಕ್ಕೆ ಸುಧಾಕರ್ ಹೆಸರಿಡಲು ಮನವಿ ಇದೆ
“ನನ್ನ ಆತ್ಮೀಯ ಮಿತ್ರ ಡಿ ಸುಧಾಕರ್ ನಮ್ಮ ಜತೆಗಿಲ್ಲ. ಅವರ ಸ್ಥಾನವನ್ನು ರಘುಮೂರ್ತಿ ಅವರು ವಹಿಸಿಕೊಂಡಿದ್ದಾರೆ. ನಾವು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಸುಧಾಕರ್ ಅವರ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯ. ಆ ಮೂಲಕ ನಿಮ್ಮ ಋಣ ತೀರಿಸುತ್ತೇವೆ. ಸುಧಾಕರ್ ಇಂದು ಇದ್ದಿದ್ದರೆ ನನಗೆ ದೊಡ್ಡ ಬಲವಿರುತ್ತಿತ್ತು. ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ಸರಿ, ನೀನು ಮುಖ್ಯಮಂತ್ರಿಯಾಗಬೇಕು ಎಂದು ನನಗೆ ಹೇಳುತ್ತಿದ್ದರು. ಭದ್ರಾ ಯೋಜನೆಯ ಒಂದು ಭಾಗಕ್ಕೆ ಅವರ ಹೆಸರಿಡಲು ನಮ್ಮಮುಂದೆ ಬೇಡಿಕೆ ಇದ್ದು, ಇಂದು ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರೈತರ ಪರವಾಗಿ ನೂರು ದಿನಗಳಲ್ಲಿ ನಾಲ್ಕೈದು ಯೋಜನೆ ಘೋಷಣೆ ಮಾಡಿರುವೆ. ಸಣ್ಣ ರೈತರ ಬದುಕಿಗಾಗಿ ತೇಗದ ಸಿರಿ ಯೋಜನೆ, ಬಡ ರೈತರಿಗೆ ಹೊಲ ಉಳುಮೆ ಮಾಡಿಕೊಡುವ ಯೋಜನೆ, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ ಘೋಷಣೆ ಮಾಡಲಾಗಿದೆ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸದೇ ಮುಂದುವರಿಸುತ್ತಿದ್ದೇವೆ” ಎಂದು ತಿಳಿಸಿದರು.
“ಟಿ ಬಿ ಜಯಚಂದ್ರ ಅವರು ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಸಚಿವರಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯನ್ನು ಅವರ ಗಮನಕ್ಕೆ ತಂದರು. ಅನೇಕ ನಾಯಕರು ಸೇರಿ 60 ವರ್ಷದ ಯೋಜನೆ ಕನಸು ನನಸು ಮಾಡುವಂತೆ ಮಾಡಿದ್ದಾರೆ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ರೈತನೇ ಈಶ್ವರ. ಅನ್ನದಾತ ಎನ್ನುವ ಪದವಿ ಸುಲಭವಾಗಿ ದೊರೆಯುವುದಿಲ್ಲ. ಅನ್ನ ನೀಡುವ ಕೈಗಳ ಭವಿಷ್ಯ ಭದ್ರ ಮಾಡುವುದೇ ನಮ್ಮ ಸಂಕಲ್ಪ” ಎಂದರು.
“ರೈತ ನಕ್ಕರೇ ಇಡೀ ನಾಡು ನಗುತ್ತದೆ. ರೈತ ದೇಶದ ಬೆನ್ನೆಲುಬು ಎಂದು ಬಾಯಲ್ಲಿ ಹೇಳದೇ ಕಾರ್ಯ ರೂಪಕ್ಕೆ ತರಬೇಕು. ಈ ರಾಜ್ಯದ ಪಾಲಿನ ಒಂದೇ ಒಂದು ಹನಿ ನೀರೂ ಸಹ ಬೇರೆಯವರ ಪಾಲಾಗದಂತೆ ನಾವು ನೋಡಿಕೊಳ್ಳುತ್ತೇವೆ. ನದಿ ಜೋಡಣೆ, ತುಂಗಾಭದ್ರಾ, ಕೃಷ್ಣಾ ನೀರು, ಮಹದಾಯಿ ಹೀಗೆ ಎಲ್ಲಾ ಯೋಜನೆಗಳು ನಮ್ಮ ರೈತರ ಉದ್ದಾರಕ್ಕೆ ಬಳಸಿಕೊಳ್ಳುತ್ತೇವೆ” ಎಂದರು.
ರೈತರು ಬೀಜ ಬಿತ್ತಿ ಬೆಳೆ ಮಾತ್ರವಲ್ಲ, ಭವಿಷ್ಯ ಬೆಳೆಯುತ್ತಿದ್ದಾರೆ
“ಬಂಗಾರದ ರಥ ಏರಿ ನಮ್ಮನ್ನು ಕರೆತರಬಹುದು. ಬಂಗಾರದ ರಥಕ್ಕಿಂತ ರೈತರ ಎತ್ತಿನ ಬಂಡಿ ನಮ್ಮ ಪಾಲಿನ ನಿಜವಾದ ರಥ ಎಂದು ಭಾವಿಸಿದ್ದೇವೆ. ಬೀಜ ಬಿತ್ತುವ ಕೈಗಳಲ್ಲಿ ಬೆಳೆ ಮಾತ್ರವಲ್ಲ, ನಮ್ಮ ಭವಿಷ್ಯವನ್ನೇ ಬೆಳೆಸುತ್ತಿದ್ದೀರಿ. ರೈತರ ಪಂಪ್ ಸೆಟ್ ಗೆ ನೀಡುವ ಉಚಿತ ವಿದ್ಯುತ್ ಗೆ 24 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದು ಬಿಜೆಪಿ ಕೊಟ್ಟ ಯೋಜನೆಯೇ? ಉಳುವವನಿಗೆ ಭೂಮಿ, ಅರಣ್ಯ ಹಕ್ಕು ಕೊಟ್ಟಿದ್ದು ಬಿಜೆಪಿನಾ? ನೀವು ಬಿಜೆಪಿಯವರಿಗೆ ತಕ್ಕ ಉತ್ತರ ನೀಡಬೇಕು. ಯಡಿಯೂರಪ್ಪ ಅವರ ಕಾಲದಲ್ಲಿ ಸೈಕಲ್, ಸೀರೆ ಕೊಟ್ಟಿದ್ದು ಬಿಟ್ಟರೆ ಬೇರೆ ಯಾವುದಾದರೂ ಕಾರ್ಯಕ್ರಮ ನೀಡಿದ್ದಾರಾ? ನಾವು ರೈತರ ಬದುಕಿನಲ್ಲಿ ಬದಲಾವಣೆಗೆ ಯೋಜನೆ ತಂದಿದ್ದೇವೆ. ಎಲ್ಲಾ ವರ್ಗದ ಜನರ ಬದುಕಿಗೆ ನ್ಯಾಯ ಒದಗಿಸಿದ್ದೇವೆ” ಎಂದು ತಿಳಿಸಿದರು.
“ದೇಶ ಹಾಗೂ ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ನೀವು ನಮಗೆ ಬೆಂಬಲ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಸುಧಾಕರ್ ಅವರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಅವರ ಚಿಹ್ನೆಯಡಿ ಯಾರು ಸ್ಪರ್ಧಿಸುತ್ತಾರೋ ಅವರಿಗೆ ನೀವು ಬೆಂಬಲ ನೀಡಿ. ನಾವು ರೈತರ ಜೊತೆ ನಿಲ್ಲಬೇಕು ಎಂದು ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಚಿತ್ರದುರ್ಗದ ಮದಕರಿ ನಾಯಕ, ಓಬವ್ವನ ವೀರ ಭೂಮಿಯಲ್ಲಿ ಅನೇಕ ಮಠಮಾನ್ಯಗಳು ಸೇರಿ ಸೇವೆ ಸಲ್ಲಿಸುತ್ತಿವೆ. ನಮ್ಮ ಹಿಂದೆ ಗುರುಗಳು, ಅವರ ಹಿಂದೆ ನಿಮ್ಮ ಬದುಕು ಹಸನಾಗಿಸುವ ಗುರಿ ಇದೆ” ಎಂದು ಹೇಳಿದರು.
“ಸೈನಿಕ, ಕಾರ್ಮಿಕ, ಶಿಕ್ಷಕ, ಕೃಷಿಕ ಈ ದೇಶದ ಆಧಾರ ಸ್ತಂಭಗಳು. ದೀಪವನ್ನು ಎಲ್ಲಾ ಕೃಷಿಕರು ಸೇರಿ ಬೆಳಗಿದರು. ಈ ದೀಪ ಕತ್ತಲನ್ನು ಕರಗಿಸುತ್ತದೆ. ಕಾಂಗ್ರೆಸ್ ಸರ್ಕಾರ ಜನರ ಕಷ್ಟಗಳನ್ನು ಕರಗಿಸುತ್ತದೆ” ಎಂದರು.






