ವಿಜಯ ದರ್ಪಣ ನ್ಯೂಸ್……
ನಮ್ಮ ಕೈಯಲ್ಲಿ ಮೊಬೈಲೋ, ಅಥವಾ ಮೊಬೈಲ್ ಕೈಯಲ್ಲಿ ನಾವೋ?
ಲೇಖನ: ಜಯಶ್ರೀ ಜೆ ಅಬ್ಬಿಗೇರಿ
|
ಮೊಬೈಲ್ ಇರದಾಗ ಹೇಗೆ ಬದುಕುತ್ತಿದ್ದೆವು ಎಂದು ನೆನೆದರೆ ಆ ದಿನಗಳು ಮತ್ತೆ ಮರಕಳಿಸಬೇಕಲ್ಲವೇ ಎಂದು ಮನಸ್ಸು ಹಂಬಲಿಸುತ್ತದೆ. ಅಂಥ ಚೆಂದದ ದಿನಗಳನ್ನು ಕಳೆದುಕೊಂಡಿದ್ದಕ್ಕೆ ಮರ ಮರ ಮರಗುತ್ತೇವೆ. ಈಗ ಮೊಬೈಲ್ ಯಾರಿಗೆ ಬೇಡ ಹೇಳಿ. ಆಗ ತಾನೆ ತೊದಲ್ನುಡಿಗಳನ್ನು ಕಲಿತ ಮಗುವಿನಿಂದ ಹಿಡಿದು ಹಿರಿಯ ಜೀವಗಳವರೆಗೂ ಎಲ್ಲರಿಗೂ ಬೇಕಾದ, ಅವಶ್ಯಕ ವಸ್ತು, ಇದೆಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಜೀವ, ಜೀವನದ ಪ್ರಮುಖ ಭಾಗವಾಗಿಯೇ ಬೆಸೆದುಕೊಂಡಿರುವ ಜಂಗಮವಾಣಿ ಮನುಷ್ಯನ ಎಲ್ಲ ಸಂಬಂಧಿಗಳಿಗಿಂತಲೂ ಮುಖ್ಯ ಎಂಬ ಸ್ಥಾನವನ್ನು ಪಡೆದುಕೊಂಡಿದೆ. ಮೊಬೈಲನ್ನು ನಮ್ಮ ಸುಖ, ದುಃಖಗಳಲ್ಲಿ ಭಾಗಿಯಾಗುವ ಉತ್ತಮ ಸಂಗಾತಿ, ನಂಬಿಕೆಯ ಗೆಳೆಯ, ಬೇಕಾದಾಗ ಸಲಹೆ ನೀಡುವ ಅತ್ಯುತ್ತಮ ಮಾರ್ಗದರ್ಶಿ ಅಂದುಕೊಳ್ಳುವುದು ಶುದ್ಧ ಮೂರ್ಖತನ. ಎಂಬದು ನಮಗೆಲ್ಲ ಗೊತ್ತಿಲ್ಲ ಅಂತೇನಿಲ್ಲ. ಆದರೂ ಪ್ರತಿಯೊಂದಕ್ಕೂ ಮೊಬೈಲ್‌ನ್ನು ಅವಲಂಬಿಸುತ್ತಿದ್ದೇವೆ. ಮೊಬೈಲ್‌ನ್ನು ಅತಿಯಾಗಿ ಅವಲಂಬಿಸಿ ಇಂದು ಮೊಬೈಲಿಲ್ಲದೆ ನಾವಿಲ್ಲ ಎನ್ನುವ ಸ್ಥಿತಿಗೆ ಬಂದು ತಲುಪಿದ್ದೇವೆ. ಎಷ್ಟರ ಮಟ್ಟಿಗೆ ಎಂದರೆ, ಮೊಬೈಲ್ ಈ ಪ್ರಪಂಚಕ್ಕೆ ಕಾಲಿಡುವುದಕ್ಕಿಂತ ಮೊದಲು ನಮ್ಮ ಪೂರ್ವಜರು ಅದು ಹೇಗೆ ಬದುಕಿದರೋ ಎಂಬ ಅನುಮಾನ ಬರುವಷ್ಟು.

ಡಿಜಿಟಲ್ ಮುಕ್ತತೆ
ಡಿಜಿಟಲ್ ಮುಕ್ತತೆ ಅಥವಾ ಡಿಜಿಟಲ್ ಡಿಟ್ಯಾಚ್ಮೆಂಟ್ ಇಂದಿನ ಜನತೆಗೆ ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆಗಾಗಿ ಅತ್ಯಗತ್ಯವಾಗಿ ಬೇಕಾಗಿದೆ. ಸ್ಮಾರ್ಟ್ಸನ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೂರವಿರುವುದು, ನೈಜ ಪ್ರಪಂಚ ದೊಂದಿಗೆ ಬೆರೆಯುವುದು ಮತ್ತು ಸೃಜನಶೀಲತೆಯನ್ನು ಮರಳಿ ಪಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಮೊಬೈಲ್ ಈ ಪ್ರಪಂಚಕ್ಕೆ ಕಾಲಿಟ್ಟಾಗ ನಾವೆಲ್ಲರೂ ಮನುಷ್ಯನ ಜಾಣತನಕ್ಕೆ ಹೆಮ್ಮೆಯಿಂದ ಬೀಗಿದೆವು ಇನ್ನು ಮುಂದೆ ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿ ಇರುತ್ತೆ ಅಂತ. ಆದರೆ, ಇಂದು ತದ್ದಿರುದ್ಧವಾಗಿ ಆ ಮೊಬೈಲ್ ಅಂಗೈಯಲ್ಲಿ ನಾವೆಲ್ಲರೂ ಇರುವಂತಾಗಿದೆ. ಇದಕ್ಕೆಲ್ಲಾ ಮೊಬೈಲ್ ಅನ್ನೋ ಮಾಯಾವಿಯನ್ನು ನಾವು ನಮ್ಮ ಬದುಕಿನೊಳಗೆ ಮಿತಿಗಿಂತ ಹೆಚ್ಚು ಬಿಟ್ಟುಕೊಂಡಿದ್ದೇ ಕಾರಣ. ಮೊಬೈಲ್ ಇಂದು ಕೇವಲ
ಫೋನ್ ಮಾಡಲು ಮತ್ತು ಮೆಸೇಜ್ ಮಾಡಲಷ್ಟೇ ಉಳಿದಿಲ್ಲ. ಅದಕ್ಕಷ್ಟೇ ಉಳಿದಿದ್ದರೆ ಬಹುಷ ಮೊಬೈಲ್‌ನ ಅಮಲು ಇಷ್ಟೊಂದು ಬರುತ್ತಿರಲಿಲ್ಲ.
ಕಡ್ಡಿಪೊಟ್ಟಣದ ಕಡ್ಡಿಯಂತೆ
ಇಂದು ಮೊಬೈಲ್ ಮಾಡಬೇಕಾದ ಕೆಲಸವನ್ನಷ್ಟೇ ಮಾಡದೆ ರೇಡಿಯೋ, ಟಿವಿ, ಕ್ಯಾಮರಾ, ಸುದ್ದಿ ಪತ್ರಿಕೆ, ಪುಸ್ತಕ, ಹೀಗೆ ಅನೇಕ ವಸ್ತುಗಳ ಕೆಲಸವನ್ನು ಕಸಿದುಕೊಂಡು ಅವರ ಕೆಲಸವನ್ನೂ ‘ಪಾರ್ಟ್ ಟೈಮ್ ‘ ಲೆಕ್ಕದಲ್ಲಿ ಮಾಡುತ್ತಿದೆ. ಇದು ಒಂದು ರೀತಿ ಒಳ್ಳೆಯದೇ. ಯಾಕೆಂದರೆ ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಮೊಬೈಲ್‌ಅನ್ನು ಜೀವನಕ್ಕೆ ಸೇರಿಸಿಕೊಂಡಿದ್ದು ಸರಿಯಾಗಿಯೇ ಇದೆ. ಆದರೆ ಅದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಮೊಬೈಲ್ ಒಂದು ಕಡ್ಡಿಪೊಟ್ಟಣದಲ್ಲಿನ ಕಡ್ಡಿಯಿದ್ದಂತೆ ಅದರಿಂದ ಮನೆಯ ದೀಪವನ್ನೂ ಹಚ್ಚಬಹುದು. ಮನೆಯನ್ನೂ ಸುಡಬಹುದು. ಹೀಗಾಗಿ ಮೊಬೈಲ್ ಬಳಕೆದಾರರು
ಅದನ್ನು ಸದುಪಯೋಗಪಡಿಸಿಕೊಳ್ಳುವ ರೀತಿಯನ್ನು ಕಲಿಯಬೇಕು. ಹೇಗೆ? ಮೊಬೈಲ್ ಅತಿಯಾದ ಅವಲಂಬನೆ ಕಡಿಮೆ ಮಾಡುವುದು ಎನ್ನುವ ಪ್ರಶ್ನೆ ನಮ್ಮ ಮುಂದೆ ಭೂತಾಕಾರವಾಗಿ ನಿಲ್ಲುತ್ತದೆ. ಅದಕ್ಕೆ ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು.

ಉತ್ತಮ ಗೆಳೆಯ
‘ಮೊಬೈಲ್ ನಮ್ಮ ಕೈಯಲ್ಲಿರುವಾಗ ನಾವು ಜಗತ್ತನ್ನು ಕನೆಕ್ಟ್ ಮಾಡಿದೆವು ಅಂದುಕೊಂಡೆವು. ಆದರೆ ನಮ್ಮ ಪಕ್ಕದಲ್ಲೇ ಕೂತಿರುವವರ ಜೊತೆಗಿನ ಕನೆಕ್ಷನ್ ಕಳೆದುಕೊಂಡೆವು.’ ಎಂಬ ಸತ್ಯದ ನುಡಿಯನ್ನು ನಮ್ಮ ದುಡಿಮೆಗೆ ಮತ್ತು ಲಾಭಕ್ಕಷ್ಟೇ ಉಪಯೋಗಿಸಿ, ನಮ್ಮ ಒತ್ತಡದ ನುಡಿಯನ್ನು ನೆನಪಿನಲ್ಲಿಡಬೇಕು. ಮೊಬೈಲ್ ನಮಗೆ ನಿಜವಾಗಿಯೂ ಉತ್ತಮ ಗೆಳೆಯನಾಗಬಲ್ಲ. ಯಾವಾಗೆಂದರೆ ನಾವು ಮೊಬೈಲ್‌ನ್ನು ಜೀವನದ ನಡುವೆ ಸಿಕ್ಕ ಸ್ವಲ್ಪ ಸಮಯವನ್ನು ನಮ್ಮವರಿಗೋಸ್ಕರ ಮೀಸಲಿಟ್ಟು, ಜೀವನವನ್ನು ಸಮಾಜದೊಂದಿಗೆ ಬೆರೆಸಿ ನಮ್ಮಿಂದ ನಾಲ್ಕು ಜನಕ್ಕೆ ಉಪಯೋಗವಾಗುವಂತೆ ಬದುಕಿದಾಗ ಮಾತ್ರ. ಅದು ಬಿಟ್ಟು, ಮೊಬೈಲ್ ನಶೆ ಹತ್ತಿಸಿಕೊಂಡು ಅದೇ ಸರ್ವಸ್ವ ಎಂದು ಭಾವಿಸಿ ದಿನ ಕಳೆಯತೊಡಗಿದರೆ ನಮಗೆ ಸಿಗುವುದು ಒತ್ತಡ, ದೃಷ್ಟಿ ಸಮಸ್ಯೆ, ಕೋಪ ಮಾತ್ರ. ಆದ್ದರಿಂದ ಮೊಬೈಲ್‌ನ್ನು ಉತ್ತಮ ಗೆಳೆಯನನ್ನಾಗಿ ಬಳಸುವುದನ್ನು ಕಲಿಯಬೇಕು.
ಬೇಡ ಅತಿಯಾದ ಸೆಳೆತ
‘ಅತಿಯಾದ ತಂತ್ರಜ್ಞಾನದ ಬಳಕೆ ನಿಮ್ಮನ್ನು ಜಗತ್ತಿಗೆ ಪರಿಚಯಿಸಬಹುದು, ಆದರೆ ನಿಮ್ಮನ್ನು ನಿಮಗೇ ಅಪರಿಚಿತನನ್ನಾಗಿ ಮಾಡುತ್ತದೆ.’ ಪ್ರಸಿದ್ಧ ತಂತ್ರಜ್ಞಾನ ಲೇಖಕ ಕಾಲ್ ನ್ಯೂಪೋರ್ಟ್ ಹೇಳುವಂತೆ: “ನಾವು ನಮ್ಮ ಸ್ವಂತ ಯೋಚನೆಗಳೊಂದಿಗೆ ಒಂದು ರೂಮ್‌ನಲ್ಲಿ ಕೆಲ ನಿಮಿಷಗಳ ಕಾಲ ಮೊಬೈಲ್ ಇಲ್ಲದೆ ಕುಳಿತುಕೊಳ್ಳಲು ಆಗದಷ್ಟು ದಾಸರಾಗುತ್ತಿದ್ದೇವೆ.” ದಿನದ ಅನೇಕ ಗಂಟೆಗಳನ್ನು ಸ್ತ್ರೀನ್ ನೋಡುತ್ತಲೇ ಕಳೆಯಲಾಗುತ್ತಿದೆ. ಎಚ್ಚರವಾದ ತಕ್ಷಣ ನೋಡುವುದು
ಡಿಜಿಟಲ್ ಮಾರ್ಕೆಟಿಂಗ್
ಮೊಬೈಲ್ ಪರದೆಯನ್ನು ಮತ್ತು ರಾತ್ರಿ ಮಲಗುವಾಗ ಕೂಡ ಅದೇ. ಇದು ನಮ್ಮ ಮೆದುಳಿನ ಮೇಲೆ ನಿರಂತರ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ ಅತಿಯಾದ ಸೆಳೆತದಿಂದ ಹೊರಬರಬೇಕು. ನೈಜ ಬದುಕಿನತ್ತ ಹೊರಳಬೇಕು. ಮರಳಿ ಅರಳಬೇಕು.

ಏಕಾಗ್ರತೆ
ಮೊಬೈಲ್ ನಮ್ಮ ಏಕಾಗ್ರತೆಗೆ ಭಂಗ ತರುತ್ತಿದೆ ಎಂದರೆ ನಂಬಲಾಗುವುದಿಲ್ಲ ಅಲ್ಲವೇ? ಆದರೆ ಮೊಬೈಲ್ ಸ್ಕಿನ್ ಮೇಲಿನ ನಿರಂತರವಾದ ನೋಟಿಫಿಕೇಶನ್ಗಳು ಮತ್ತು ಆನ್‌ಲೈನ್ ಗಜಿಬಿಜಿ ನಮ್ಮ ಗಮನವನ್ನು ಚದುರಿಸುತ್ತವೆ. ಓದುವುದು ಆಡುವುದು ಅಥವಾ ಪ್ರಕೃತಿಯನ್ನು ಸವಿಯುವುದು ಕಡಿಮೆಯಾಗುತ್ತಿದೆ. ಡಿಜಿಟಲ್ ಸಂಪರ್ಕವು ನಮಗೆ ನಕಲಿ ಲೋಕದ ಭ್ರಮೆಯನ್ನು ನೀಡುತ್ತದೆಯೆ ಹೊರತು ಆಳವಾದ ಮಾನಸಿಕ ಸಂತೃಪ್ತಿಯನ್ನಲ್ಲ. ಕೆಲಸದ ಮೇಲೆ ಒಂದೆಡೆ ಮನಸ್ಸನ್ನು ನಿಲ್ಲಿಸಲು ಮೊಬೈಲ್‌ನ್ನು ನಮ್ಮಿಂದ ಆದಷ್ಟು ದೂರ ಇಡಬೇಕು. ಮೈಕ್ರೋಸಾಫ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಸ್ಟೀವ್ ಜಾಬ್ ತಮ್ಮ ಮಕ್ಕಳ ಮೊಬೈಲ್ ಬಳಕೆಯನ್ನು ತಂತ್ರಜ್ಞಾನದಿಂದ ಸೀಮಿತಗೊಳಿಸಿದ್ದರು ಎಂಬುದು ಗಮನಾರ್ಹ. ಪ್ರಸಿದ್ಧ ಲೇಖಕಿ ಅನ್ನಿ ಲ್ಯಾಮಟ್ ಹೇಳುವಂತೆ: “ನಿಮ್ಮನ್ನು ಒಳಗೊಂಡಂತೆ ಪ್ರತಿಯೊಂದು ವಸ್ತುವೂ ಸ್ವಲ್ಪ ಸಮಯ ಆಫ್‌ಲೈನ್‌ಲ್ಲಿದ್ದರೆ ಸರಿಯಾಗಿ ಕೆಲಸ ಮಾಡುತ್ತದೆ.

ಸಮಯದ ಮಿತಿ
ದಿನದಲ್ಲಿ ನಿರ್ದಿಷ್ಟ ಗಂಟೆಗಳನ್ನು ಮೊಬೈಲ್ ಮುಕ್ತ ಸಮಯವನ್ನಾಗಿ ಮೀಸಲಿಡಿ. ಇಲ್ಲದಿದ್ದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುವುದು. ದಿನಕ್ಕೆ 2-3 ಗಂಟೆ ಮಾತ್ರ ಡಿಜಿಟಲ್ ಬಳಕೆಗೆ ಸೀಮಿತಗೊಳಿಸಿ. ಉಳಿದ ಸಮಯವನ್ನು ದೈಹಿಕ ಕಸರತ್ತಿಗೆ, ನಡಿಗೆ, ವ್ಯಾಯಾಮ, ಕಲೆಗೆ, ಮೈಂಡ್ ಗೇಮ್ ಮನೆ ಮಂದಿಗೆ ಗೆಳೆಯರಿಗೆ ಆಪ್ತರಿಗೆ ಮೀಸಲಿಡಬೇಕು. ಇದರಿಂದ ಸಮತೋಲಿತ ವ್ಯಕ್ತಿತ್ವ ಬೆಳವಣಿಗೆ ಸಾಧ್ಯವಾಗುವುದು, ಆರೈನಾ ಹಫಿಂಗ್ಟನ್ ಹೇಳುವಂತೆ: “ನಮ್ಮಿಂದ ಮತ್ತು ನಮ್ಮ ತಂತ್ರಜ್ಞಾನದಿಂದ ತುಸು ದೂರ ಸರಿದು ನಮಗೆ ನಾವೇ ಮರುಸಂಪರ್ಕ ಸಾಧಿಸುವುದು ಬುದ್ದಿವಂತಿಕೆಗೆ ಅತ್ಯಗತ್ಯ. ಅಗತ್ಯವಿಲ್ಲದ ನೋಟಿಫಿಕೇಶನ್ ಆಫ್ ಮಾಡಿ. ನೋಟಿಫಿಕೇಷನ್‌ಗಳ ಶಬ್ದಕ್ಕೆ ಓಡುವ ನಾವು, ನಮ್ಮ ಮನಸ್ಸಿನ ಶಾಂತಿಯ ಧ್ವನಿಯನ್ನು ಕೇಳಿಸಿಕೊಳ್ಳುವುದನ್ನೇ ಮರೆತುಬಿಟ್ಟಿದ್ದೇವೆ.
ಕೊನೆ ಹನಿ
‘ಮೊಬೈಲ್ ಪರದೆಯ ಆಳದಲ್ಲಿ ಕಳೆದುಹೋಗುವ ಮುನ್ನ ಯೋಚಿಸು: ನಿನ್ನ ನಿಜವಾದ ಬದುಕು ಹೊರಗಿನ ಜಗತ್ತಿನಲ್ಲಿದೆ ಬಣ್ಣದ ಪಿಕ್ಸೆಲ್‌ಗಳಲ್ಲಲ್ಲ.’ಡಿಜಿಟಲ್ ಜಗತ್ತಿನಲ್ಲಿ ಲೈಕ್ಸ್ ಗಳಿಸುವುದರಲ್ಲೇ ಬ್ಯುಸಿಯಾಗಬೇಡ, ನಿಜ ಜೀವನದಲ್ಲಿ ನಿನ್ನ ವ್ಯಕ್ತಿತ್ವವನ್ನು ಎಲ್ಲರೂ ಪ್ರೀತಿಸುವಂತೆ ರೂಪಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಮೊಬೈಲ್ ನಮ್ಮನ್ನು ನಿಯಂತ್ರಿಸಬಾರದು, ನಾವೇ ಮೊಬೈಲ್‌ಅನ್ನು ನಿಯಂತ್ರಿಸಬೇಕು.

ಲೇಖನ :ಜಯಶ್ರೀ.ಜೆ. ಅಬ್ಬಿಗೇರಿ. ಉಪನ್ಯಾಸಕರು ಬೆಳಗಾವಿ : 9449234142











