ವಿಜಯ ದರ್ಪಣ ನ್ಯೂಸ್……
ಹೆಲಿಕ್ಯಾಪ್ಟರ್‌ನಲ್ಲಿ ಬರಗಾಲ ವೀಕ್ಷಿಸಿದ ಏಕೈಕ ಸಿಎಂ ಯಾರಾದರೂ ಇದ್ದರೆ ಅದು ಡಿ.ಕೆ.ಶಿವಕುಮಾರ್ ಮಾತ್ರ : ಬಿ.ವೈ.ವಿಜಯೇಂದ್ರ

ಶಿಡ್ಲಘಟ್ಟ : ಹೆಲಿಕ್ಯಾಪ್ಟರ್‌ನಲ್ಲಿ ಬರಗಾಲ ವೀಕ್ಷಿಸಿದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಡಿ.ಕೆ.ಶಿವಕುಮಾರ್ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ
ಬಿ.ವೈ.ವಿಜಯೇಂದ್ರ ದೂರಿದರು.
ನಗರದ ಮಯೂರ ವೃತ್ತದಲ್ಲಿನ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ “ಸೇವಾ ಸಂಕಲ್ಪ ಅಭಿಯಾನ”ದ ಅಡಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅತಿವೃಷ್ಠಿ ಉಂಟಾದಾಗ ಹೆಲಿಕ್ಯಾಪ್ಟರ್‌ನಲ್ಲಿ ಅಥವಾ ವೈಮಾನಿಕ ಸಮೀಕ್ಷೆ ನಡೆಸುವುದು ಸಾಮಾನ್ಯ ಆದರೆ ಅದ್ಯಾವ ಪುಣ್ಯಾತ್ಮ ಐಡಿಯಾ ಕೊಟ್ಟರೋ ಏನೋ ಬರದ ಪರಿಸ್ಥಿತಿಯನ್ನು ಹೆಲಿಕ್ಯಾಪ್ಟರ್‌ನಲ್ಲಿ ವೀಕ್ಷಿಸಿದ ಡಿಕೆಶಿಗೆ ರೈತರ ಸಂಕಷ್ಟಕ್ಕಿಂತಲೂ ಹೆಲಿಕ್ಯಾಪ್ಟರ್‌ನಲ್ಲಿ
ಸುತ್ತಾಡುವುದು ಇಷ್ಟ ಎಂದು ಕಾಣುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬರಗಾಲದಿಂದಾಗಿ ಈ ನಾಡಿಗೆ ಅನ್ನ ನೀಡುವ ರೈತನು ಸಂಕಷ್ಟದಲ್ಲಿದ್ದಾನೆ ರೈತನ ನೆರವಿಗೆ ಬನ್ನಿ ಎಂದರೆ
ಎಸಿ ಕಚೇರಿಯಲ್ಲಿ ಕೂತು ಡಿಸಿಗಳ ಜತೆ ವೀಡಿಯೋ ಕಾನ್ಫರೆನ್ಸ್ ಮೀಟಿಂಗ್ ನಡೆಸ್ತಾರೆ ಎಂದು ಹೇಳಿದರು.
ಬೆಳಿಗ್ಗೆ ೪ ಗಂಟೆಗೆ ಎದ್ದು ಎಲ್ಲೆಲ್ಲಿ ಸೈಟು, ಜಮೀನು ಇದೆ
ಎಂದು ನೋಡಿ ವ್ಯಾಪಾರ ಕುದುರಿಸಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಪುರುಸೊತ್ತು ಇದೆ ಆದರೆ ಉತ್ತರ ಕರ್ನಾಟಕ್ಕೆ ಹೋಗಿ ರೈತರ ಕಷ್ಟ, ಬರಗಾಲ ವೀಕ್ಷಿಸಲು ಮಾತ್ರ ಪುರುಸೊತ್ತು ಇಲ್ಲದಾಗಿದೆ ಎಂದು ಆಪಾದಿಸಿದರು.
ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಸರಕಾರವು ಈ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲು ಹೊರಟಿದೆ ಅಬಕಾರಿ ಇಲಾಖೆಗೆ ೪೫ ಸಾವಿರ ರೂ.ಗಳ ಆದಾಯ ಸಂಗ್ರಹಿಸುವ ಗುರಿ ನೀಡಿ ಹಳ್ಳಿ ,ಹಳ್ಳಿಯ ದಿನಸಿ ಅಂಗಡಿ, ಪೆಟ್ಟಿಗೆ ಅಂಗಡಿಯಲ್ಲೂ ಹೆಂಡ ಸಾರಾಯಿ ಸಿಗುವಂತೆ ಮಾಡಿದ ಕುಖ್ಯಾತಿ ಈ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ ವ್ಯಂಗ್ಯವಾಡಿದರು.
ಮುಖ್ಯಮಂತ್ರಿಯವರೆ ನೀವು ಈ ರಾಜ್ಯದ ಮುಖ್ಯಮಂತ್ರಿಯೋ ಅಥವಾ ಕಾಂಗ್ರೆಸ್ ಪಕ್ಷದ
ಮುಖ್ಯಮಂತ್ರಿಯೋ ಎಂದು ಡಿಕೆಶಿಯನ್ನು ಪ್ರಶ್ನಿಸಿದ ಅವರು, ಈ ರಾಜ್ಯದ ಮುಖ್ಯಮಂತ್ರಿಯಾಗಿ
ನೀವು ರಾಜ್ಯ ಚುನಾವಣಾ ಕಚೇರಿ ಎದುರು ಪ್ರತಿಭಟನೆ ಮಾಡುವುದು ಸರಿಯೆ ? ಇದು ಜನರನ್ನು ದಿಕ್ಕು ತಪ್ಪಿಸಿದಂತಾಗುವುದಿಲ್ಲವೇ ಎಂದರು.
ಗೃಹ ಲಕ್ಷ್ಮಿಗೆ ೨ ಸಾವಿರ ರೂ.ಗಳು ಕೊಡುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಈ ರಾಜ್ಯ ಸರ್ಕಾರಕ್ಕೆ ಗ್ರಾಮೀಣಭಾಗದಲ್ಲಿ ವಿದ್ಯಾರ್ಥಿಗಳು, ಯುವಕರು, ದಿನ ನಿತ್ಯ ಕೂಲಿ ನಾಲಿ ಕೆಲಸಕ್ಕೆ ಹೋಗುವವರಿಗೆ ಬಸ್ ಸಿಗುತ್ತಿದೆಯಾ ? ಇಲ್ಲ. ಇದನ್ನು ಗಮನಿಸುತ್ತಿಲ್ಲ ಪ್ರಯಾಣಿಕರು ಪಡಬಾರದ ಕಷ್ಟ ಪಡುತ್ತಿದ್ದಾರೆ ಎಂದು ಆಪಾದಿಸಿದರು.
ಇತ್ತ ಗೃಹಿಣಿಯರಿಗೆ ೨ ಸಾವಿರ ಕೊಡುತ್ತಾರೆ ಅತ್ತ ಗಂಡಸರಿಂದ ಹತ್ತು ಸಾವಿರ ಕಿತ್ತುಕೊಳ್ಳುತ್ತಾರೆ
ಎಂದು ವ್ಯಂಗ್ಯವಾಡಿದ ಅವರು, ಬಿ.ಎಸ್.ಯಡಿಯೂಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಾಡಿನಲ್ಲಿ ಹುಟ್ಟಿದ ಪ್ರತಿ ಮಗುವಿನ ಹೆಸರಿನಲ್ಲೂ ಭಾಗ್ಯಲಕ್ಷ್ಮಿ ಬಾಂಡ್‌ಗೆ ಸರಕಾರವೇ ಠೇವಣಿ ಇಟ್ಟು ಆ ಮಗು ಪ್ರೌಢ ವಯಸ್ಸಿಗೆ ಬಂದಾಗ ೧.೨೫ ಲಕ್ಷ ಸಿಗುವಂತೆ ಮಾಡಿದ್ದರು ಹಾಗು
ಇಡೀ ದೇಶದಲ್ಲಿಯೆ ಮೊದಲ ಬಾರಿಗೆ ರೈತರಿಗೆ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡಿಸಿದ್ದರು
ಅದು ಅವರಿಗೆ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.
ಒಂದೊಮ್ಮೆ ನೀವು ಹೇಳಿದಂತೆ ಅಲ್ಪ ಸಂಖ್ಯಾತ ಮುಸ್ಲಿಂರನ್ನು ಗುರಿಯಾಗಿಸಿಕೊಂಡು
ಬಿಜೆಪಿಯವರು ಏನಾದರೂ ಎಸ್‌ಐಆರ್‌ನ ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮ ಎಸಗಿದ್ದು
ಸಾಭೀತಾದಲ್ಲಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಎಸೆದರು.
ಬಿಜೆಪಿ ಜಿಲ್ಲಾದ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಈ ಭಾಗದ ರೈತರು 1 ಸಾವಿರದ 500 ಅಡಿಯಿಂದ ಫ್ಲೋರೈಡ್ ನೀರು ತೆಗೆದು ವಿಷಪೂರಿತ ಹಣ್ಣು, ಹಾಲು ,ತರಕಾರಿ ಹಾಗು ಹೂವು ಬೆಳೆಯುವಂತಾಗಿದೆ ವಿದಿಯಿಲ್ಲದೆ ಆ ತರಕಾರಿ ತಿಂದ ನಾಗರಿಕರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ತಾವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಗ್ಯಾರಂಟಿ ದಯಮಾಡಿ ನದಿ ಮೂಲಗಳಿಂದ ನಮ್ಮ ಬಯಲುಸೀಮೆಗೆ ಶಾಶ್ವತ ನೀರಾವರಿ ಒದಗಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ನಗರ ಸಮೀಪದ ಹಂಡಿಗನಾಳ ಬಳಿಯಿಂದ
ಬಿಜೆಪಿ ರಾಜ್ಯ ಘಟಕ ಅದ್ಯಕ್ಷ ವಿಜಯೇಂದ್ರ ಅವರನ್ನು ಭೈಕ್ ರ್ಯಾಲಿ ಮೂಲಕ ಕಾರ್ಯಕರ್ತರು ಕೋಟೆ ಸರ್ಕಲ್ ವರೆಗೆ ಬಂದರು.
ಕೋಟೆ ಸರ್ಕಲ್ ನ ಶ್ರೀಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ , ತೆರೆದ ಜೀಪಿನಲ್ಲಿ
ಅಶೋಕ ರಸ್ತೆ ಮೂಲಕ ಮಯೂರ ವೃತ್ತದ ಬಿಜೆಪಿ ಸೇವಾಸೌದದ ಕಛೇರಿವರೆಗೆ ಮಹಿಳೆಯರು ಪೂರ್ಣ ಕುಂಭ, ಮಂಗಳವಾದ್ಯಗಳೊಂದಿಗೆ ಸಾವಿರಾರು ಕಾರ್ಯಕರ್ತರು ಸ್ವಾಗತಿಸಿದರು.
ಸಭೆಯ ನಂತರ ವಾಸವಿ ಶಾಲೆಯ ಆವರಣದಲ್ಲಿ ರೈತ ಮುಖಂಡರೊಂದಿಗೆ ವಿಜಯೇಂದ್ರ ಅವರು ಸಂವಾದ
ನಡೆಸಿದ ಅವರು ರೈತರ ಜೀವನಾಡಿಯಾಗಿರುವ ಕೆ.ಸಿ. ವ್ಯಾಲಿ ನೀರಿನ ಹಕ್ಕಿಗಾಗಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಅವರ ಜ್ವಲಂತ ಸಮಸ್ಯೆಗಳ ಕುರಿತಂತೆ ಅವರಿಂದಲೇ ಮಾಹಿತಿ ಪಡೆದರು.
ನೆಮ್ಮದಿಯ ಜೀವನ ಮತ್ತು ಶಾಶ್ವತ ನೀರಾವರಿಗಾಗಿ ಅನ್ನದಾತ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿ ರೈತರ ಹಿತರಕ್ಷಣೆ ನಿಟ್ಟಿನಲ್ಲಿ ಸ್ವಾಮಿನಾಥನ್ ವರದಿ ಜಾರಿ, ಬೆಳೆ ನಷ್ಟ ಪರಿಹಾರ, ರೈತರಿಗೆ ಹೆಚ್ಚಿನ ನೆರವು ಹಾಗೂ ಕೃಷ್ಣಾ ನದಿಯ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ತರುವ ಕುರಿತಾದ ಅವರ ನ್ಯಾಯಯುತ ಬೇಡಿಕೆಗಳಿಗೆ ಕೇಂದ್ರ ಸರ್ಕಾರದೊಂದಿಗೆ ನಮ್ಮ ಅನ್ನದಾತರ ಹಕ್ಕೊತ್ತಾಯಕ್ಕೆ ಧ್ವನಿಯಾಗುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ,ಕಾರ್ಯದರ್ಶಿ ತಮ್ಮೇಶ್ ಗೌಡ,
ಮಾಜಿ ಸಂಸದರಾದ ಮುನಿಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ, ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಉಸ್ತುವಾರಿ ಬ್ಯಾಟರಂಗೇಗೌಡ,ಮಹಾಲಿಂಗಪ್ಪ ,ಹೆಚ್.ಎನ್.
ಕದಿರೇಗೌಡ,ಬಿ.ಸಿ.ನಂದೀಶ್ ,ಗ್ರಾಮಾಂತರ ಮಂಡಲ ಅದ್ಯಕ್ಷ ಆನಂದ್ ಗೌಡ ,ನಗರ ಮಂಡಲ ಅಧ್ಯಕ್ಷ ದೇವರಾಜ್,ಮುಖಂಡರಾದಕನಕಪ್ರಸಾದ್ ,ಕೆ.ಸುರೇಂದ್ರಗೌಡ,ಆಂಜನೇಯಗೌಡ,ಕೆ.ರವಿಚಂದ್ರ, ಚಾತುರ್ಯ ಮತ್ತಿತರರು ಪಾಲ್ಗೊಂಡಿದ್ದರು.










