ವಿಜಯ ದರ್ಪಣ ನ್ಯೂಸ್….
ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್……

ಜಪಾನಿನ ಐಚಿ – ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಎಂಬ ಮನರಂಜನಾ ಕಾರ್ಯಕ್ರಮಕ್ಕೂ ಸಾಕಷ್ಟು ಹೋಲಿಕೆ ಇದೆ. ಭಿನ್ನತೆ, ಸಾಮ್ಯತೆ, ವ್ಯತ್ಯಾಸ, ಆತ್ಮ ವಂಚನೆ ಎಲ್ಲವೂ ಇದೆ. ಇದು ನಿಮಗೆಲ್ಲ ವಿಚಿತ್ರವೆನಿಸಬಹುದು. ಆದರೆ ಇದು ನಿಜ.
ಮೊದಲನೆಯದಾಗಿ,
ಕ್ರೀಡೆ ಎಂಬುದು ಮನುಷ್ಯನ ನಿಜವಾದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಅಗ್ನಿಪರೀಕ್ಷೆ. ಅದು ಯಾವುದೇ ಕ್ರೀಡೆಯಾಗಿರಲಿ, ಅಥ್ಲೆಟಿಕ್ಸ್ , ಗುಂಪು ಪಂದ್ಯಾವಳಿ, ಚೆಸ್ ಮುಂತಾದ ಯಾವುದೇ ಆಟವಿರಲಿ ಮಾನಸಿಕ ಮತ್ತು ದೈಹಿಕ ದೃಢತೆ ಬಹಳ ಮುಖ್ಯ. ವ್ಯಕ್ತಿಯ ನಿಜವಾದ ಸಾಮರ್ಥ್ಯ ಹೊರಬರುವುದೇ ಕ್ರೀಡೆಗಳಲ್ಲಿ.
ಇನ್ನೊಂದು ಕಡೆ,
ಬಿಗ್ ಬಾಸ್ ಎಂಬ ಮನರಂಜನಾ ಕಾರ್ಯಕ್ರಮದಲ್ಲಿ ಬಹುತೇಕ ಮನುಷ್ಯರನ್ನು ಪಶುಗಳಂತೆ, ಜೋಕರ್ ಗಳಂತೆ, ಕ್ಷುದ್ರ ಜೀವಿಗಳಂತೆ ಉಪಯೋಗಿಸಿಕೊಂಡು, ಕೃತಕವಾಗಿ ದೃಶ್ಯಗಳನ್ನು ಜೋಡಿಸಿ, ಇಡೀ ಸಮಾಜದ ಮೌಲ್ಯಗಳಿಗೆ ವಿರುದ್ಧ ಮೌಲ್ಯಗಳನ್ನು ಅವರೊಳಗೆ ತುಂಬಿ, ಒಂದು ರೀತಿ ವಿಕೃತ ಮನರಂಜನೆ ನೀಡುವ ಕಾರ್ಯಕ್ರಮ.
ನಮ್ಮ ಸಮಾಜದ ದುರಂತ ನೋಡಿ. ಬಹುತೇಕ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಟಿವಿಯಲ್ಲಿ ವೀಕ್ಷಿಸುವವರ ಸಂಖ್ಯೆ ತುಂಬಾ ತುಂಬಾ ಕಡಿಮೆ ಇದೆ. ಕನಿಷ್ಠ ಭಾರತ ಭಾಗವಹಿಸುವ ಕ್ರೀಡೆಗಳನ್ನಾದರೂ ಆಸಕ್ತಿಯಿಂದ ನೋಡುವವರು ಅದರಲ್ಲಿ ಭಾಗವಹಿಸಿರುವ ಕುಟುಂಬದವರು ಅಥವಾ ಅವರ ಹತ್ತಿರದ ಪರಿಚಿತರು, ಸಂಬಂಧಿಕರನ್ನು ಹೊರತುಪಡಿಸಿದರೆ ಸಾಮಾನ್ಯ ಜನ ಅಷ್ಟೇನೂ ಇಲ್ಲವೇ ಇಲ್ಲ.
ಆದರೆ ಅದೇ ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಕೋಟಿಗಳನ್ನು ದಾಟುತ್ತದೆ. ಎಲ್ಲಾ ಭಾಷೆಗಳಲ್ಲೂ ಸಹ ಈ ಮನರಂಜನಾ ಕಾರ್ಯಕ್ರಮ ಅತಿ ಹೆಚ್ಚು ಟಿಆರ್‌ಪಿ ಗಳಿಸುತ್ತದೆ. ಆ ಮೂಲಕ ಜಾಹೀರಾತು ಆಕರ್ಷಿಸಿ ಹಣ ಮಾಡುತ್ತದೆ.
ಈಗ ಈ ಹೋಲಿಕೆ ನಿಮಗೆ ಅರ್ಥವಾಗಿರಬಹುದು. ಏಕೆಂದರೆ ಸದ್ಯದ ಜಪಾನ್ ಏಷ್ಯನ್ ಗೇಮ್ಸ್ ಪದಕಗಳ ಪಟ್ಟಿಯಲ್ಲಿ ಭಾರತ ಮಲೇಶಿಯಾ, ಬಹರೇನ್, ಯುದ್ಧಪೀಡಿತ ಇರಾನ್, ಉಜ್ಬೇಕಿಸ್ತಾನ, ಖಜಕಿಸ್ತಾನ್, ಸರ್ವಾಧಿಕಾರಿ ದೇಶ ಉತ್ತರ ಕೊರಿಯಾಗಿಂತ ಕೆಳಗಿನ ಸ್ಥಾನದಲ್ಲಿದೆ. ಇನ್ನು ಚೀನಾ, ಜಪಾನ್ ಮತ್ತು ಭಾರತದ ನಡುವಿನ ಅಂತರ ತುಂಬಾ ತುಂಬಾ ದೊಡ್ಡದಿದೆ. ಅಂತಿಮವಾಗಿ ಅಕ್ಟೋಬರ್ 4ರಂದು ಮುಕ್ತಾಯವಾದಾಗ ಈ ಪಟ್ಟಿಯಲ್ಲಿ ಅಂತಹ ಗಮನಾರ್ಹ ಬದಲಾವಣೆ ಏನೂ ಇರುವುದಿಲ್ಲ. ಭಾರತದ ಸ್ಥಾನ ಇನ್ನೊಂದೆರಡು ಹೆಜ್ಜೆ ಮೇಲೆ ಹೋಗಬಹುದು ಅಷ್ಟೇ.
ಬಹುಶಃ ಚೀನಾ ಹೊರತುಪಡಿಸಿ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿರುವ ಇತರ ಎಲ್ಲಾ ದೇಶಗಳ ಜನಸಂಖ್ಯೆಗೆ ಭಾರತದ ಜನಸಂಖ್ಯೆ ಸಮನಾಗಬಹುದು ಅಥವಾ ನಾವೇ ಇನ್ನು ಹೆಚ್ಚಾಗಿರಬಹುದು. ಇಷ್ಟು ದೊಡ್ಡ ಜನಸಂಖ್ಯೆಗೆ ಇಷ್ಟು ಕಡಿಮೆ ಪದಕಗಳು.
ಈಗ ನಿಮಗೆ ಇನ್ನೂ ಸ್ಪಷ್ಟವಾಗಿ ಅರ್ಥವಾಗಿರಬಹುದು. ಭಾರತದ ಜನರ ಆಸಕ್ತಿ, ಸಾಮರ್ಥ್ಯ ಯಾವ ದಿಕ್ಕಿನತ್ತ ಸಾಗಿದೆ ಎಂಬುದು. ಒಂದು ದೇಶದ ನಿಜವಾದ ಸಾಮರ್ಥ್ಯ ಆದೇಶದ ಒಟ್ಟು ಸುಸ್ಥಿರ ಬೆಳವಣಿಗೆಯಲ್ಲಿ ಅಡಗಿರುತ್ತದೆಯೇ ಹೊರತು, ಕೇವಲ ಎಷ್ಟು ಟ್ರಿಲಿಯನ್ ಎಕಾನಮಿ, ಎಷ್ಟು ಶ್ರೀಮಂತರಿಗೆ ಪಟ್ಟಿಯಲ್ಲಿ ಸ್ಥಾನವಿದೆ ಅಥವಾ ಎಷ್ಟು ವಿಮಾನಗಳ ನಿಲ್ದಾಣಗಳಿವೆ ಎಂಬುದಲ್ಲ.
ಒಟ್ಟಾರೆಯಾಗಿ,
ಆ ದೇಶದ ಪರಿಸರದ ಗುಣಮಟ್ಟ, ಮಾನವೀಯ ಮೌಲ್ಯಗಳ ಗುಣಮಟ್ಟ, ನಾಗರಿಕ ಮೌಲ್ಯಗಳ ಗುಣಮಟ್ಟ, ಸಂವಿಧಾನಾತ್ಮಕ ಮೌಲ್ಯಗಳ ಗುಣಮಟ್ಟ, ಅಲ್ಲಿನ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಗುಣಮಟ್ಟ, ಅಲ್ಲಿನ ಮಣ್ಣಿನ ಸಂಸ್ಕೃತಿಯ ತಿಳುವಳಿಕೆ ಮತ್ತು ನಡವಳಿಕೆಯ ಗುಣಮಟ್ಟ ಯಾವ ಹಂತದಲ್ಲಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಅದನ್ನು ಹೊರತು ಪಡಿಸಿದ ಅಭಿವೃದ್ಧಿ ಸಾಧ್ಯವೇ ಇಲ್ಲ.
ಕ್ರೀಡೆ ಎಂಬ ಅದ್ಭುತ ಪರಿಕಲ್ಪನೆಯ ಬಗ್ಗೆ ಆಸಕ್ತಿ ಕಳೆದುಕೊಂಡ ದೇಶ ಬಿಗ್ ಬಾಸ್ ಅಥವಾ ಆ ರೀತಿಯ ಕೆಟ್ಟ ಮನರಂಜನಾ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾ ಸಾಗುತ್ತಿರುವುದು ಈ ದೇಶದ ಭವಿಷ್ಯದ ಮುಂದಿನ ದಿನಗಳ ದುರಂತವನ್ನು ಸೂಚಿಸುತ್ತದೆ. ಈ ಹಂತದಲ್ಲಿ ಇಡೀ ವ್ಯವಸ್ಥೆಯನ್ನು ಪುನರೂಪಿಸಿಕೊಳ್ಳಬೇಕಿದೆ.
ಜನ ಸಮುದಾಯ ಬಿಗ್ ಬಾಸ್ ಹಿಂದೆ ಬಿದ್ದರೆ, ಯುವ ಪೀಳಿಗೆ ಆ ವಿಕೃತ ಕಾರ್ಯಕ್ರಮವನ್ನೇ ನೋಡುತ್ತಾ ಬೆಳೆದರೆ, ಕೊನೆಗೆ ಮಕ್ಕಳು ನಮ್ಮ ಕೈಗೆ ಸಿಗುವುದಿಲ್ಲ. ಅದೇ ಕ್ರೀಡೆ, ಸಂಗೀತ, ಸಾಹಿತ್ಯ, ವಿಜ್ಞಾನ, ಲಲಿತ ಕಲೆಗಳು, ರಾಜಕೀಯ, ಉದ್ಯಮ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಯುವ ಜನಾಂಗ ಆಸಕ್ತಿ ಬೆಳೆಸಿಕೊಂಡರೆ ಅದಕ್ಕಿಂತ ಸಂತೋಷದ ಸಂಗತಿ ಬೇರೊಂದಿಲ್ಲ.
ಇದು ಎಲ್ಲೋ, ಯಾವಾಗಲೋ ಘಟಿಸುತ್ತಿರುವ ವಿಷಯವಲ್ಲ. ಈ ಕ್ಷಣದಲ್ಲಿ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ದುರ್ಘಟನೆ. ವಿಕೃತ ಮನಸ್ಥಿತಿಯ ಮನರಂಜನೆಯ ಬಗ್ಗೆ ಬೆಳೆಸಿಕೊಂಡಿರುವ ಆಸಕ್ತಿ ಕ್ರೀಡೆಯ ಬಗ್ಗೆ ಇಲ್ಲದಿರುವುದು ತುಂಬಾ ನೋವಿನ ಸಂಗತಿ.
ಜಪಾನ್ ಏಷ್ಯನ್ ಗೇಮ್ಸ್ ನೋಡಿ, ಹಾಗೆಯೇ ದೇಶದ ವಿವಿಧ ಭಾಷೆಗಳ ಬಿಗ್ ಬಾಸ್ ಕಾರ್ಯಕ್ರಮದ ಟಿ ಆರ್ ಪಿ ಯನ್ನು ನೋಡಿ. ಎರಡೂ ಹೋಲಿಸಿಕೊಂಡರೆ ತಲೆತಗ್ಗಿಸುವಂತಹ ಪರಿಸ್ಥಿತಿ ನಮ್ಮದಾಗುತ್ತದೆ.
ಗೆದ್ದು ಬಾ ಭಾರತ ಗೆದ್ದು ಬಾ….
ಏಷ್ಯನ್ ಗೇಮ್ಸ್ ನಲ್ಲಿ ಕ್ರೀಡಾ ಪದಕಗಳನ್ನು ಹೊತ್ತು ಬಾ ಇಂಡಿಯಾ… ಇಂಡಿಯಾ…. ಇಂಡಿಯಾ…….
ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನೋಡಿ. ಭಾವನೆಗಳನ್ನು ಬದಿಗಿಡಿ….
ಎಲ್ಲಿದೆ ನಮ್ಮಲ್ಲಿ ಕ್ರೀಡಾ ಸಂಸ್ಕೃತಿ,
ಎಲ್ಲಿದೆ ನಮ್ಮಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ,
ಎಲ್ಲಿದೆ ನಮ್ಮಲ್ಲಿ ವಿಶ್ವದರ್ಜೆಯ ಆಹಾರದ ಗುಣಮಟ್ಟ,
ಎಲ್ಲಿದೆ ನಮ್ಮಲ್ಲಿ ಆಧುನಿಕ ತರಬೇತಿಯ ತಂತ್ರಜ್ಞಾನ,
ಎಲ್ಲಿದೆ ನಮ್ಮಲ್ಲಿ ಕ್ರೀಡೆಗೆ ಪೂರಕ ವಾತಾವರಣ………
( ಇತ್ತೀಚೆಗೆ ಕೆಲವು ಕ್ರೀಡೆಗಳು ಮತ್ತು ಕ್ರೀಡಾಂಗಣಗಳಲ್ಲಿ ಕೆಲವರಿಗೆ ಮಾತ್ರ ಒಂದಷ್ಟು ಸುಧಾರಣೆ ಆಗುತ್ತಿದೆ. ಆದರೆ ಅದು ದೇಶಾದ್ಯಂತ ಸಹಜವಾಗಿ ಸಾಮಾನ್ಯ ಜನರ ಮಟ್ಟದಲ್ಲಿ ಎಲ್ಲರಿಗೂ ತಲುಪುವಂತೆ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಈ ಮಾತುಗಳು……)
ಜಾತಿ ವ್ಯವಸ್ಥೆ ದೇಶದ ಬಹುತೇಕ ಜನರ ರಕ್ತದಲ್ಲಿ ಸೇರಿ ಹೋಗಿದೆ, ಭ್ರಷ್ಟಾಚಾರ ನರನಾಡಿಗಳಲ್ಲಿ ಬೆರೆತು ಹೋಗಿದೆ……
ಕ್ರೀಡೆ ಎಂಬುದು ರಾಜಕೀಯವಲ್ಲ. ಅಲ್ಲಿ ಸಂಖ್ಯೆಗೆ, ಭಾವನೆಗಳಿಗೆ ಮಾತುಗಳಿಗೆ ಬೆಲೆ ಇಲ್ಲ. ಅದು ದೇಹ ಮತ್ತು ಮನಸ್ಸುಗಳ ಅತ್ಯುತ್ತಮ ಸಮನ್ವಯದ ಕ್ರಿಯೆ…..
ಕೇವಲ ಆ ಕ್ಷಣದ ಪ್ರೋತ್ಸಾಹದಿಂದ ಯಾವುದೇ ಕ್ರೀಡೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅದೊಂದು ನಿರಂತರ ತಪಸ್ಸು. ಅದೊಂದು ಸಂಸ್ಕೃತಿ. ಅದೊಂದು ಜೀವನ ವಿಧಾನ. ಇಡೀ ಸಮಾಜ ಅದಕ್ಕೆ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ.
ಗೆದ್ದು ಬಾ ಎಂಬುದು ಕೇವಲ ನಮ್ಮ ಆಶಯ ಮತ್ತು ಆಸೆ ಮಾತ್ರ……
2020 ವರೆಗೆ ಅಂದರೆ ಟೋಕಿಯೋ ಒಲಿಂಪಿಕ್ಸ್ ವರೆಗೆ, ಇಡೀ ಒಲಿಂಪಿಕ್ ಇತಿಹಾಸದಲ್ಲಿ ಅಮೆರಿಕ ಒಟ್ಟು 2667 ಪದಕಗಳನ್ನು ಗಳಿಸಿದೆ. ನಂತರದಲ್ಲಿ ರಷ್ಯಾ, ಬ್ರಿಟನ್ ಸ್ಥಾನ ಗಳಿಸಿವೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಭಾರತ 2020 ರವರೆಗೆ ಕೇವಲ 35 ಪದಕಗಳನ್ನು ಮಾತ್ರ ಗಳಿಸಿದೆ. ಇದು ನಮ್ಮ ಸಾಧನೆ.
ಭಾರತದಲ್ಲಿ ಕೇವಲ ಕ್ರೀಡೆ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲಿ ವಿಶಾಲ ಮನೋಭಾವದ ಕೊರತೆ ಎದ್ದು ಕಾಣುತ್ತದೆ. ಸಣ್ಣತನ, ಅಸೂಯೆ ಬಹುತೇಕ ಜನರನ್ನು ಆಕ್ರಮಿಸಿದೆ. ಫಲಿತಾಂಶಗಳ ಆಧಾರದ ಮೇಲೆ, ಹಣ, ಅಧಿಕಾರ, ಪ್ರಚಾರದ ಆಧಾರದ ಮೇಲೆ ಯಶಸ್ಸನ್ನು ಅಳೆಯುವ ಮನಸ್ಥಿತಿಯೇ ಹೆಚ್ಚಾಗಿದೆ. ನಿಜವಾದ ಒಳ್ಳೆಯ ಗುಣಮಟ್ಟದ ವ್ಯಕ್ತಿತ್ವವನ್ನು ಗುರುತಿಸುವ, ಪ್ರೋತ್ಸಾಹಿಸುವ ಬೆಳೆಸುವ ವ್ಯವಸ್ಥೆ ಇಲ್ಲದಂತಾಗಿದೆ….
ಚುನಾವಣಾ ರಾಜಕೀಯದಲ್ಲಿಯೇ ತಮ್ಮ ಅವಧಿಯನ್ನು ಮುಗಿಸಲು ತಮ್ಮೆಲ್ಲಾ ಸಾಮರ್ಥ್ಯ ಉಪಯೋಗಿಸುವ ಈ ಜನರಿಂದ ಪದಕ ಗೆಲ್ಲುವ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಹಣ ಹಂಚಿ, ಜಾತಿ ಧರ್ಮದ ಹೆಸರೇಳಿ ಗೆಲ್ಲುವವರಿಂದ, ಗೆದ್ದ ನಂತರ ಮತ್ತೆ ಹಣ ಮಾಡುವ, ವಿರೋಧಿಗಳನ್ನು ತುಳಿಯುವ ನಿರಂತರ ಕೆಲಸಗಳನ್ನೇ ಮಾಡುವ ಜನರಿಂದ ಪದಕಗಳನ್ನು ನಿರೀಕ್ಷಿಸುವುದು ಮೂರ್ಖತನ….
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ನಿಜವಾದ ಸಾಮರ್ಥ್ಯ ಉಪಯೋಗವಾದರೆ ಖಂಡಿತ ಇನ್ನು 10 ವರ್ಷಗಳಲ್ಲಿ ಏಷಿಯನ್ ಮತ್ತು ಒಲಿಂಪಿಕ್ ಪದಕ ಪಟ್ಟಿಯಲ್ಲಿ 5 ರ ಒಳಗಿನ ಸ್ಥಾನ ಪಡೆಯುವುದು ಕಷ್ಟವೇನಲ್ಲ. ಆದರೆ ಅದಕ್ಕಾಗಿ ಇಡೀ ವ್ಯವಸ್ಥೆಯ ಶುದ್ದೀಕರಣ ಕ್ರಿಯೆ ಆಗಬೇಕಿದೆ…..
ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಒಂದು ಸಣ್ಣ ಕ್ರೀಡಾ ಸಂಕೀರ್ಣ, ತಾಲ್ಲೂಕು ಮಟ್ಟದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಕ್ರೀಡಾಂಗಣ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ನಿರ್ಮಿಸಿ ಅತ್ಯುತ್ತಮ ತರಬೇತಿ ನೀಡುವ ಅಂದರೆ ಆಹಾರದಿಂದ ವಿಶ್ರಾಂತಿಯವರೆಗೆ, ಪ್ರಾರಂಭದಿಂದ ಪದಕದವರೆಗೆ, ವ್ಯಕ್ತಿಯಿಂದ ವ್ಯವಸ್ಥೆಯವರೆಗೆ ಎಲ್ಲವನ್ನೂ ಸರಿಪಡಿಸಬೇಕು. ಕ್ರೀಡಾಪಟುವಿನ ಕೌಟುಂಬಿಕ, ಮಾನಸಿಕ ಆರೋಗ್ಯವನ್ನು ಸಹ ಅತ್ಯುತ್ತಮ ಮಟ್ಟದಲ್ಲಿ ಇರುವಂತೆ ವೈಯಕ್ತಿಕ ಆಸಕ್ತಿ ವಹಿಸಬೇಕು…
ಎಳವೆಯಿಂದಲೇ ಮಕ್ಕಳ ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಕ್ರೀಡೆಯನ್ನೇ ಬದುಕಾಗಿಸುವ, ಅದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಆಗದಿರುವ ಅನುಕೂಲ ವಾತಾವರಣ ನಿರ್ಮಿಸಬೇಕು. ಕೇವಲ ಉದ್ಯೋಗಕ್ಕಾಗಿ ಕ್ರೀಡೆಯಲ್ಲಿ ಆಸಕ್ತಿ ಹೊಂದುವ ಮನೋಭಾವ ಬೆಳೆಸಬಾರದು.
ಇಷ್ಟೆಲ್ಲಾ ಸಾಧ್ಯವಾದರೆ ಮಾತ್ರ ಏನಾದರೂ ಒಂದಷ್ಟು ಬದಲಾವಣೆ ಸಾಧ್ಯವಾಗಬಹುದು. ಇಲ್ಲದಿದ್ದರೆ ಗೆದ್ದು ಬಾ ಎನ್ನುವ ಕೂಗು ಒಂದು ಹಾಸ್ಯಾಸ್ಪದ ಭಾವನೆಯಾಗಬಹುದು….
ಏಕೆಂದರೆ ಕ್ರೀಡೆಗಳಲ್ಲಿ ಯಾವುದೇ ಅಡ್ಡ ದಾರಿ ಇರುವುದಿಲ್ಲ. ಕೆಟ್ಟ ರಾಜಕೀಯ ಪ್ರಭಾವ ಇರುವುದಿಲ್ಲ. ದೇಹ ಮನಸ್ಸುಗಳ ಸಮನ್ವಯ ಮಾತ್ರ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಲು ಸಾಧ್ಯ.
ನಮಗೂ ಭಾರತದ ಮಾನವ ಸಂಪನ್ಮೂಲ ಅತ್ಯುತ್ತಮ ರೀತಿಯಲ್ಲಿ ಉಪಯೋಗವಾಗಲಿ ಎಂಬ ಮಹದಾಸೆ ಇದೆ. ಆದರೆ ಅದು ಕೇವಲ ಭಾವನಾತ್ಮಕವಾಗದೆ ವಾಸ್ತವವಾಗಲಿ ಎಂಬ ಕಳಕಳಿಯಿಂದ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….











