ವಿಜಯ ದರ್ಪಣ ನ್ಯೂಸ್……
1001 ಕೆಜಿ ಹಣ್ಣಿನ ಅಲಂಕಾರದಲ್ಲಿ ಕಂಗೊಳಿಸಿದ ಅಭಯ ಶನೇಶ್ವರ ಸ್ವಾಮಿ ದೇವಾಲಯ

ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಮೂರನೇ ಶ್ರಾವಣ ಶನಿವಾರದ ಅಂಗವಾಗಿ ಶ್ರೀ ಶನಿಮಹಾತ್ಮ ಸ್ವಾಮಿಗೆ 1001 ಕೆಜಿ ವಿವಿಧ ಬಗೆಯ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಯಿತು.
ಶ್ರಾವಣ ಶನಿವಾರದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ನೂರಾರು ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಧರ್ಮದರ್ಶಿಗಳಾದ ಡಾ. ಡಿ.ಎಲ್. ವೀರಬ್ರಹ್ಮಚಾರ್ ಗುರೂಜಿಗಳು ಮಾತನಾಡಿ, ದೇವಾಲಯದಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರಾವಣ ಶನಿವಾರದ ಆಚರಣೆ ನಡೆಯುತ್ತಾ ಬಂದಿದೆ. ಅದರಂತೆ ಈ ವರ್ಷವೂ ಪ್ರತಿ ಶ್ರಾವಣ ಶನಿವಾರದಂದು ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ಹಮ್ಮಿಕೊಳ್ಳಲಾಗಿದೆ. ಮೂರನೇ ಶ್ರಾವಣ ಶನಿವಾರದಂದು ಶ್ರೀ ಶನಿಮಹಾತ್ಮ ಸ್ವಾಮಿಗೆ 1001 ಕೆಜಿ ಹಣ್ಣುಗಳಿಂದ ವಿಶೇಷ ಅಲಂಕಾರ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ಕಡೆಯ ಶ್ರಾವಣ ಶನಿವಾರದಂದು ಶ್ರೀ ಶನಿಮಹಾತ್ಮ ಸ್ವಾಮಿಯ ಅದ್ದೂರಿ ಪಲ್ಲಕ್ಕಿ ಉತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಶಾಕಂಬರಿ ಅಲಂಕಾರ ಅಂದರೆ ವಿವಿಧ ಬಗೆಯ ತರಕಾರಿಗಳಿಂದ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಇದು ಈ ವರ್ಷದ ಶ್ರಾವಣ ಶನಿವಾರದ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶ್ರಾವಣ ಶನಿವಾರದ ಧಾರ್ಮಿಕ ಮಹತ್ವ ಹಾಗೂ ಶನಿ ಮಹಾತ್ಮನ ಆರಾಧನೆಯ ಮಹತ್ವವನ್ನು ಭಕ್ತರಿಗೆ ವಿವರಿಸಿದ ಅವರು, ಭಕ್ತರು ಶ್ರದ್ಧಾ-ಭಕ್ತಿಯಿಂದ ದೇವರ ಆರಾಧನೆ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕ ವೃಂದ ಹಾಗೂ ನೂರಾರು ಸಂಖ್ಯೆಯ ಭಕ್ತ ಸಮೂಹ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.











