ವಿಜಯ ದರ್ಪಣ ನ್ಯೂಸ್…..
ಹರಿಕಥಾ ವಿದ್ವಾನ್ ಸೋಸಲೆ ನಾರಾಯಣದಾಸ್ ಪ್ರಶಸ್ತಿ ಸ್ವೀಕರಿಸಿದ ಜಿ.ವಿ. ಶ್ರೀನಿವಾಸಮೂರ್ತಿ

ಬೆಂಗಳೂರು ; ಸೋಸಲೆ ಪ್ರಕಾಶ್ ಮತ್ತು ಕುಟುಂಬದವರು ತಮ್ಮ ತೀರ್ಥರೂಪರಾದ ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣ ದಾಸ್ ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ಪ್ರಾರಂಭಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ/ಸಲ್ಲಿಸುತ್ತಿರುವ ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದಾರೆ.
ನಾಡಿನ ಹೆಸರಾಂತ ಗಾಯಕರಿಗೆ, ಕಲಾವಿದರಿಗೆ, ರಾಜಕೀಯ ಧುರೀಣರಿಗೆ ಈ ಪ್ರಶಸ್ತಿಯನ್ನು ಹಲವಾರು ವರ್ಷಗಳಿಂದ ನೀಡಲಾಗುತ್ತಿದ್ದು, ಈ ವರ್ಷದ (2026) ಪ್ರಶಸ್ತಿಯನ್ನು ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಜಿ.ವಿ. ಶ್ರೀನಿವಾಸ ಮೂರ್ತಿಯವರಿಗೆ ನೀಡಲಾಗಿದೆ.
ಈ ಪ್ರಶಸ್ತಿಯನ್ನು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆಯಂದು ನೀಡಿದ್ದು ಮತ್ತೊಂದು ವಿಶೇಷ.
ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ :
ಖ್ಯಾತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರು ಹಾಡಿರುವ “ಮಧ್ವನಾಮ” ಧ್ವನಿ ಸುರುಳಿ ಇಂದ ಮಧ್ವನಾಮ ಮೂರ್ತಿ ಎಂದೇ ಪ್ರಸಿದ್ಧರಾದ ಶ್ರೀಯುತರು “ದೇವರು ಕೊಟ್ಟಾನು”, “ಗಜೇಂದ್ರ ಮೋಕ್ಷ”, ಮುಂತಾದ 75ಕ್ಕೂ ಹೆಚ್ಚು ಧ್ವನಿಸುರುಳಿಗಳನ್ನು ಹೊರತಂದಿದ್ದು ಇಂದಿಗೂ ಜನಪ್ರಿಯವಾಗಿ ಉಳಿದಿವೆ. ಅಲ್ಲದೇ “ಕರ್ನಾಟಕದ ಹರಿದಾಸರು” ಎಂಬ ಸುಮಾರು 45 ಹರಿದಾಸರ ಜೀವನ ಚರಿತ್ರೆಯನ್ನು ತಿಳಿಸುವ ಪ್ರವಚನಗಳನ್ನು ಹರಿದಾಸರ ಬಗ್ಗೆ ಪಿ.ಎಚ್.ಡಿ. ಮಾಡಿರುವ ಹಾಗೂ ನಾಡಿನ ಹಿರಿಯ ವಿದ್ವಾಂಸರಿಂದ ಮಾಡಿಸಿರುವುದು ವಿಶೇಷ. 2001ರಲ್ಲಿ “ಹರಿದಾಸ ಸಂಪದ ಟ್ರಸ್ಟ್” ಎಂಬ ಸಂಸ್ಥೆಯನ್ನು ಗೆಳೆಯರೊಂದಿಗೆ ಸೇರಿ “ಹರಿದಾಸ ಹಬ್ಬ” ಎಂಬ ಶೀರ್ಷಿಕೆಯಲ್ಲಿ ಏಳು ದಿನಗಳ ಕಾಲ ಹರಿದಾಸರ ಪದಗಳನ್ನು ಹಾಗೂ ಪ್ರವಚನಗಳನ್ನು ನಗರದ ಪ್ರತಿಷ್ಠಿತ ವೇದಿಕೆಯಾದ “ಗಾಯನ ಸಮಾಜ”ದಲ್ಲಿ ನಾಡಿನ ಎಲ್ಲಾ ಪ್ರಸಿದ್ಧ ಗಾಯಕ-ಗಾಯಕಿಯರಲ್ಲದೆ ಯುವ ಪ್ರತಿಭೆಗಳು ಸಹ ಅಲ್ಲಿ ಹಾಡುವಂತೆ ಮಾಡಿರುವುದು ಇಂದಿಗೂ ಜನಪ್ರಿಯವಾಗಿದೆ.
ಹರಿದಾಸರ ಸಂದೇಶಗಳನ್ನು ಸಾರುವ ‘T-shirt’ಗಳನ್ನು ಮಾಡಿ ಅದು ಬಹು ಜನಪ್ರಿಯವಾಗಿರುವುದು ಅಲ್ಲದೇ ಎಲ್ಲಾ ಹರಿದಾಸರ ಭಾವಚಿತ್ರಗಳಿರುವ ಕ್ಯಾಲೆಂಡರುಗಳನ್ನು ಮಾಡಿಸಿ ದೇಶ-ವಿದೇಶಗಳಲ್ಲಿ ಎಲ್ಲಾ ಹರಿದಾಸರ ಬಂಧುಗಳ ಮನೆ-ಮಠದಲ್ಲಿ ರಾರಾಜಿಸುತ್ತಿವೆ.
ಹರಿದಾಸ ಸಂಪದ ಟ್ರಸ್ಟ್, ಹರಿದಾಸ ಸೇವಾ ಸಂಘ, ದಾಸವಾಣಿ ಕರ್ನಾಟಕ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಲ್ಲದೇ ಕಳೆದ 35 ವರ್ಷಗಳಿಂದ ಹರಿದಾಸ ಸಾಹಿತ್ಯಕ್ಕೆ ತಮ್ಮದೇ ಆದ ವಿಶೇಷ-ವಿಶಿಷ್ಟ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಜಿ.ವಿ. ಶ್ರೀನಿವಾಸ ಮೂರ್ತಿಯವರಿಗೆ “ಹರಿದಾಸ ಸಾಹಿತ್ಯ ಸೇವಾ ಧುರಂಧರ” ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.
#######@@@@@#############
ಸೆಪ್ಟೆಂಬರ್ 04 ರಿಂದ ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟಗಳು ಆರಂಭ
ಬೆಂಗಳೂರು ಗ್ರಾಮಾಂತರ ಜಿಲ್ಲೆ. ಸೆ.01:
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 2026-27ನೇ ಸಾಲಿಗೆ ದಸರಾ ಕ್ರೀಡಾ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗೆ ಆಯೋಜಿಸಲಾಗುತ್ತಿದ್ದು ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸೆಪ್ಟೆಂಬರ್ 04 ರಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಗಳು ಆರಂಭವಾಗಲಿದ್ದು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 04 ಮತ್ತು 05 ರಂದು ದೊಡ್ಡಬಳ್ಳಾಪುರ ಟೌನಿನ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ನೆಲಮಂಗಲ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 8 ಮತ್ತು 9 ರಂದು ನೆಲಮಂಗಲ ಟೌನ್ ನ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಹೊಸಕೋಟೆ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 12 ರಿಂದ 13 ರವರೆಗೆ ಹೊಸಕೋಟೆ ಟೌನ್ ನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಾಗೂ ದೇವನಹಳ್ಳಿ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 16 ರಿಂದ 17 ವರೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಸಲಾಗುವುದು.
ತಾಲ್ಲೂಕು ಮಟ್ಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಪುಟ್ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಮತ್ತು ಯೋಗಾಸನ ಜಿಲ್ಲಾ ಮಟ್ಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಪುಟ್ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್, ಯೋಗಾಸನ, ಬಾಸ್ಕೆಟ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್ ಮತ್ತು ನೆಟ್ ಬಾಲ್ ಅನ್ನು ಸ್ಪರ್ಧೆ ಏರ್ಪಡಿಸಲಾಗುವುದು. ಜೊತೆಗೆ ಟೆನ್ನಿಸ್, ಈಜು, ಟೇಕ್ವಾಂಡೋ, ಜುಡೋ, ವುಷು,ಕರಾಟೆ ಕ್ರೀಡೆಯನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.
ಜಿಲ್ಲೆಯ ಅರ್ಹ, ಆಸಕ್ತ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಆನ್ಲೈನ್ ಲಿಂಕ್ https://dasaracmcup.in ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊ.ಸಂ 9845608598, 9632778567 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









