ವಿಜಯ ದರ್ಪಣ ನ್ಯೂಸ್…..
1 ಕೋಟಿ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ವಾಸವಿ ರಸ್ತೆ ಸ್ಥಳಿಯರಿಂದ “ವಿನೂತನ ರಸ್ತೆ ಹಬ್ಬ ಸಂಭ್ರಮಾಚರಣೆ ” ಶಾಸಕ ರವಿಕುಮಾರ್ ಗೆ ಗೌರವ ಸನ್ಮಾನ

ಶಿಡ್ಲಘಟ್ಟ : ತಾಲ್ಲೂಕಿನ ಸುಮಾರು 56 ಸಾವಿರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ನಗರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ವಾಸವಿ ರಸ್ತೆಯ ಸ್ಥಳೀಯರು ಹಾಗೂ ವ್ಯಾಪಾರಸ್ಥರು ಒಗ್ಗೂಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಸವಿ ರಸ್ತೆಗೆ 1 ಕೋಟಿ ರೂ.ಗಳ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣದ ಸಲುವಾಗಿ ‘ ವಿನೂತನ ವಾಸವಿ ರಸ್ತೆ ಹಬ್ಬ ಆಚರಣೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮಸಮುದ್ರ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಅಮೃತ್-2 ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಸುಮಾರು 93 ಕೋಟಿ ರೂ. ವೆಚ್ಚದ ಯೋಜನೆಯಡಿ ಶುದ್ದ ಕುಡಿಯುವ ನೀರು ಕಲ್ಪಿಸಲಾಗುವುದು ಎಂದರು.
ನಗರದ ಮುಂದಿನ 40 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸುಮಾರು 70 ಕೋಟಿ ರೂ.ಗಳ ವೆಚ್ಚದಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಇದರಿಂದ ನಗರದ ಸುಮಾರು 12,650 ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿಯೂ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ನಾಲ್ಕು ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ನಗರದ 25, 26 ಹಾಗೂ 28ನೇ ವಾರ್ಡ್ಗಳಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಂದ ದೊರೆತ ಅನುದಾನ ಸೇರಿದಂತೆ ವಿವಿಧ ಅನುದಾನಗಳಡಿ ಸುಮಾರು 3 ಕೋಟಿ ರೂ. ಮೊತ್ತದ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದರು.
ಜನರ ದಿನನಿತ್ಯದ ಬದುಕಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ನನ್ನ ಆದ್ಯತೆ, ಜನರ ಅನುಕೂಲ ಕಲ್ಪಿಸುವುದೇ ಅಭಿವೃದ್ಧಿಯ ನಿಜವಾದ ಮಾನದಂಡ ಶಿಡ್ಲಘಟ್ಟ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದರು.
ಇದೇ ವೇಳೆ ಹಲವು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ನಗರದ ವಾಸವಿ ರಸ್ತೆಗೆ ಸುಮಾರು ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಾನುವಾರ ಸಂಜೆ “ವಾಸವಿ ರಸ್ತೆ ಹಬ್ಬ” ಆಚರಿಸಿ ಸಂಭ್ರಮಿಸಿದರು.
ಮಹಿಳೆಯರು ಆರತಿ ಬೆಳಗಿ, ಮಂಗಳವಾದ್ಯದೊಂದಿಗೆ ಶಾಸಕರಾದ ಬಿ.ಎನ್.ರವಿಕುಮಾರ್ ಅವರನ್ನು ಸ್ವಾಗತಿಸಿದರು ,ಬಳಿಕ ಶ್ರೀ ಕನ್ನಿಕಾಪರಮೇಶ್ವರಿ ಹಾಗೂ ಶ್ರೀ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.
ನಂತರ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಅಭಿವೃದ್ಧಿಪಡಿಸಿದ್ದಕ್ಕಾಗಿ ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು ,ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು.
ರಸ್ತೆ ಅಭಿವೃದ್ಧಿ ಕಾಮಗಾರಿಯಡಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸುವುದರ ಜತೆಗೆ ಒಳಚರಂಡಿ ಪೈಪ್ ಲೈನ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಕಾಮಗಾರಿ ಗುಣಮಟ್ಟದಿಂದ ಕೂಡಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ, ಎಸ್.ಎಂ. ರಮೇಶ್, ಅನಿಲ್ ಕುಮಾರ್, ಲಕ್ಷ್ಮಿನಾರಾಯಣ (ಲಚ್ಚಿ) ಮನೋಹರ್ (ಪುಡ್), ಡಿ.ಎಂ.ಜಗದೀಶ್ವರ್,
ಮಹೇಶ್, ಟಿ.ಎಲ್.ಬಾಬು, ವಾಸುದೇವರಾವ್, ಎಸ್.ಎಸ್.ನಾಗರಾಜ್, ಎ.ಎಸ್. ರವಿ,
ರೂಪಸಿರಮೇಶ್,ಜೆ.ವಿ.ಸುರೇಶ್, ಶ್ರೀನಿವಾಸ್, ವಿಜಯಕುಮಾರ್, ಗೋಪಾಲ್ ಹಾಜರಿದ್ದರು.











