ವಿಜಯ ದರ್ಪಣ ನ್ಯೂಸ್……
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಪ್ರತಿನಿಧಿಸಲು 3 ಶಿಕ್ಷಕರಿಗೆ ಅವಕಾಶ

ಶಿಡ್ಲಘಟ್ಟ : ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನವದೆಹಲಿ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಸೆಪ್ಟೆಂಬರ್-8, 9ರಂದು ಜನರಿಗಾಗಿ, ಭೂಗ್ರಹಕ್ಕಾಗಿ ಹಾಗೂ ಸಮೃದ್ಧಿಗಾಗಿ ಸಾಕ್ಷರತೆ ಥೀಮ್‌ನಡಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಉಲ್ಲಾಸ್ ಮೇಳ ಆಯೋಜಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ 3 ಶಿಕ್ಷಕರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಲ್.ವಿ.ವೆಂಕಟರೆಡ್ಡಿ, ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ, ಕೌಶಲಾಭಿವೃದ್ಧಿ ಇಲಾಖೆ ರಾಜ್ಯ ಸಚಿವರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕೇಂದ್ರ ನಿರ್ದೇಶಕರು, ಮತ್ತಿತರರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ಕರ್ನಾಟಕ ರಾಜ್ಯದಲ್ಲಿನ ಸಾಕ್ಷರತಾ ಕಾರ್ಯಕ್ರಮ, ಯಶೋಗಾಥೆ ಕುರಿತು ವಿಷಯ ಮಂಡಿಸಲಿದ್ದು, ಸಾಕ್ಷರಭಾರತ್, ಪಡ್ನಲಿ ಅಭಿಯಾನ್, ಜನಜನ್ ಸಾಕ್ಷರ್, ಉಲ್ಲಾಸ್ ಕಾರ್ಯಕ್ರಮಗಳ ಬಗ್ಗೆ ವಿಷಯ ಮಂಡಿಸಲಿದ್ದಾರೆ.
ಎಚ್.ಎಸ್. ರುದ್ರೇಶಮೂರ್ತಿ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಲು ಅವಕಾಶ ಪಡೆದ ಜಿಲ್ಲೆ ಮೊದಲ ಶಿಕ್ಷಕರಾಗಲಿದ್ದು, ರಿಹರ್ಸಲ್ ಹಾಗೂ ಧ್ವನಿ ಸ್ಕೀನಿಂಗ್ ನಡೆದಿದೆ ಎಂದು ತಿಳಿದುಬಂದಿದೆ, 9 ರಂದು ನಡೆಯಲಿರುವ ಉಲ್ಲಾಸ್ ಅಂಡರ್ ಸ್ಟಾಂಡಿಂಗ್ ಆಫ್ ಲೈಫ್‌ಲಾಂಗ್ ಲರ್ನಿಂಗ್ ಫಾರ್ ಆಲ್ ಇನ್ ಸೊಸೈಟಿ ಮೇಳದಲ್ಲಿ ಕರ್ನಾಟಕದಲ್ಲಿ ಶಿಕ್ಷಣ ನಡೆದುಬಂದ ಹಾದಿ,ಸಾಕ್ಷರತಾ ಕಾರ್ಯಕ್ರಮಗಳು, ನವಸಾಕ್ಷರರಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಯೋಜನೆಗಳ ಕುರಿತು ವಸ್ತುಪ್ರದರ್ಶನವಿರಲಿದೆ ,
ಇದರ ನೇತೃತ್ವವನ್ನು ರಾಜ್ಯ ಡಿಎಸ್‌ಇಆರ್‌ಟಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಹಿರೇಮರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ ವಹಿಸಿಕೊಳ್ಳಲಿದ್ದು, ಎಲ್.ವಿ.ವೆಂಕಟರೆಡ್ಡಿ ಪ್ರತಿನಿಧಿಸಲಿದ್ದಾರೆ ,ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ.










