ವಿಜಯ ದರ್ಪಣ ನ್ಯೂಸ್….
ಜನರ ಬಳಿಗೆ ಆಡಳಿತ ಕೊಂಡೊಯ್ಯುವುದೇ ಪ್ರಜಾಸೇವೆ ಉದ್ದೇಶ: ಸಚಿವ ಚಲುವರಾಯಸ್ವಾಮಿ

ಕೆ.ಆರ್.ಪೇಟೆಯಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಕಾರ್ಯಕ್ರಮ ಉದ್ಘಾಟನೆ – ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಸಚಿವರು
ಕೆ ಆರ್ ಪೇಟೆ(ಮಂಡ್ಯ) ಸೆ.19: “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಎಂಬ ಆಶಯದೊಂದಿಗೆ ಹಮ್ಮಿಕೊಳ್ಳಲಾಗುತ್ತಿರುವ ಪ್ರಜಾಸೇವೆ ಕಾರ್ಯಕ್ರಮವು ಜನಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಿ, ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವ ಉದ್ದೇಶ ಹೊಂದಿದೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಇಂದು ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಪ್ರಜಾಸೇವೆ ಎಂಬುದು ಕೇವಲ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯವಲ್ಲ. ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಜನರ ಸಮಸ್ಯೆ ಆಲಿಸಿ, ಅವರ ಹಕ್ಕುಗಳನ್ನು ಗೌರವಿಸಿ, ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಿಸುವುದು ನಿಜವಾದ ಪ್ರಜಾಸೇವೆ. ಈ ಕಾರ್ಯಕ್ರಮ ಸರ್ಕಾರ ಮತ್ತು ಜನರ ನಡುವೆ ನೇರ ಸಂಪರ್ಕ ಕಲ್ಪಿಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಗ್ರಾಮಗಳಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಕುಡಿಯುವ ನೀರು, ರೈತರ ಹೊಲಗಳಿಗೆ ಸಂಪರ್ಕ ರಸ್ತೆ, ವಿದ್ಯುತ್, ಮೂಲಸೌಕರ್ಯ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.
ರೈತರ ಸಮಸ್ಯೆಗೆ ವಿಳಂಬ ಸಲ್ಲದು – ಅಧಿಕಾರಿಗಳಿಗೆ ತರಾಟೆ
ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳ ವಿಚಾರದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ತೋರಿದ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡ ಸಚಿವರು, ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಜನಸೇವೆಯೇ ಜನಾರ್ಧನ ಸೇವೆ. ರೈತಾಪಿ ವರ್ಗದ ಹಿತ ಕಾಪಾಡುವುದು ಹಾಗೂ ಪ್ರತಿಯೊಬ್ಬ ಪ್ರಜೆಯ ಅಹವಾಲಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಮ್ಮದೇ ಸಮಸ್ಯೆಗಳೆಂದು ಪರಿಗಣಿಸಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
ಪ್ರಜಾಸೇವೆ ಕಾರ್ಯಕ್ರಮದಲ್ಲಿ ಕಂದಾಯ, ಗ್ರಾ.ಪಂ, ಕೃಷಿ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಒಂದೇ ವೇದಿಕೆಯಲ್ಲಿ ಆಲಿಸಲಾಗುತ್ತಿದೆ. ಪಿಂಚಣಿ, ಖಾತೆ, ಪಹಣಿ, ವಸತಿ ಸೇರಿದಂತೆ ವಿವಿಧ ಸೇವೆಗಳ ಕುರಿತು ಮಾರ್ಗದರ್ಶನ ನೀಡುವುದು ಹಾಗೂ ರಸ್ತೆ, ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಸಮಸ್ಯೆಗಳನ್ನು ಪರಿಹರಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್ ಟಿ ಮಂಜು,ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ತಹಶೀಲ್ದಾರ್ ವಿ.ಎಸ್.ಶ್ರೇಯಸ್, ತಾ.ಪಂ ಇಒ ಕೆ.ಸುಷ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.











