ವಿಜಯ ದರ್ಪಣ ನ್ಯೂಸ್……
ಜಗತ್ತಿನ ಯುದ್ಧ ದಾಹಕ್ಕೆ ಇಂದು ಗಾಂಧಿ ತತ್ವ ಸಿದ್ಧಾಂತ
ಅಳವಡಿಕೆಯೇ ಪರಿಹಾರ : ಚಿಂತಕ ಡಾ.ಸಿಸಿರಾ

ಬೆಂಗಳೂರು : ಜಗತ್ತಿನ ನಡೆಯುತ್ತಿರುವ ಬಲಾಡ್ಯ ರಾಷ್ಟ್ರಗಳ ಯುದ್ಧ ದಾಹಕ್ಕೆ ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತಗಳ ಅಳವಡಿಕೆಯೇ ಪರಿಹಾರ ಎಂದು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಚಿಂತಕ ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ) ಅಭಿಪ್ರಾಯಪಟ್ಟರು.
ಅವರು ನಗರದ ಹೊರವಲಯ ಹಾರೋಹಳ್ಳಿ ಸಮೀಪದ ವಡೇರಹಳ್ಳಿ ಸುವರ್ಣಮುಖಿ ಸಂಸ್ಕೃತಿ ಧಾಮ ವಿದ್ಯಾಸಂಸ್ಥೆ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಜಗತ್ತಿನ ಬಲಿಷ್ಠ ರಾಷ್ಟ್ರಗಳು ಸಣ್ಣ ಸಣ್ಣ ದೇಶಗಳ ಸಂಪತ್ತನ್ನು ಲೂಟಿ ಮಾಡುವ ಹಾಗೂ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಅರಾಜಕತೆಗಳನ್ನು ಸೃಷ್ಟಿಸತ್ತಿವೆ. ಅಮೇರಿಕಾ, ಚೀನಾ, ರಷ್ಯಾದಂತವು ಮನುಷ್ಯ ಮನುಷ್ಯರ ನಡುವೆ ಮದ್ದು, ಗುಂಡು,ಬಂದೂಕೇ ಕೊನೆಯ ಅಸ್ತ್ರವಾಗಿ ಬಳಸುತ್ತಿದ್ದಾರೆ,
ಎರಡು ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್, ಇರಾನ್ ಇಸ್ರೇಲ್ ದೇಶಗಳ ಯುದ್ಧೋನ್ಮಾದವು ಭೂಮಂಡಲವನ್ನು ನಾಶಗೊಳಿಸುವುದೇ ಆಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತವು ವಿಶ್ವದ ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಗಾಂಧೀಜಿಯವರ ಆದರ್ಶ, ಚಿಂತನೆ, ಶಾಂತಿ, ಸಹನೆ, ಸಹಬಾಳ್ವೆ, ಪ್ರೀತಿ, ಪ್ರೇಮವನ್ನು ಹಂಚುವ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಬೇಕಿದೆ ಎಂದರು.

ಮಕ್ಕಳಿಗೆ ಸತ್ಯ ಮತ್ತು ಪ್ರಾಮಾಣಿಕತೆ, ಅಹಿಂಸೆ, ಸರಳತೆ, ಸತ್ಯಾಗ್ರಹದ ಮಹತ್ವವನ್ನು ತಿಳಿಸಬೇಕು ಬಡವರು, ಶ್ರೀಮಂತರ ನಡುವೆ ಅಂತರ ದಿನೇ ದಿನೇ ಹೆಚ್ಚುತ್ತಿದೆ, ರಾಜಕಾರಣಿಗಳು ಹಾಗೂ ಉದ್ಯಮಿಗಳು, ಅಧಿಕಾರಿಗಳೇ ಸಮಾಜದಲ್ಲಿ ಅಸಮಾನತೆ ಸೃಷ್ಟಿಸುತ್ತಿದ್ದಾರೆ. ಸಮಾಜದ ಹಾದಿಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕಬೇಕಾದರೆ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಇವು ಶ್ರೀಸಾಮಾನ್ಯನಿಗೆ ಸುಲಭವಾಗಿ ದೊರೆಯುವಂತೆ ಮಾಡಬೇಕು ಎಂದರು.
ಆವಾಗಲೇ ಗಾಂಧಿಜಿ ಮತ್ತು ಶಾಸ್ತ್ರಿ ಜೀ ಅವರ ಆದರ್ಶಮಯ ಜೀವನ ಎಲ್ಲರದ್ದಾಗುತ್ತದೆ ಅಲ್ಲದೆ ಅವರನ್ನು ಸ್ಮರಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು. ಸಂಸ್ಥೆಯ ಅಧ್ಯಕ್ಷರಾದ ಆಚಾರ್ಯ ಡಾ.ಎಂ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು, ಪ್ರಾಂಶುಪಾಲ ಪ್ರೊ.ಶಿವರಾಜು, ಮುಖ್ಯೋಪಾಧ್ಯಾಯ ಚಂದ್ರಶೇಖರ್ ಸೇರಿದಂತೆ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಂದ ಗಾಂಧೀಜಿಯವರ ಇಷ್ಟದ ಭಜನೆಗಳನ್ನು, ದೇಶಭಕ್ತಿ ಗೀತೆಗಳನ್ನು ಹಾಡಿದರು.









