ವಿಜಯ ದರ್ಪಣ ನ್ಯೂಸ್……
ಎಸ್ ಐ ಆರ್……..

ಲೇಖನ ವಿವೇಕಾನಂದ ಎಚ್ ಕೆ
ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು……
ಮತದಾರರ ಪಟ್ಟಿಯ ತೀವ್ರ ಮತ್ತು ವಿಶೇಷ ಪರಿಷ್ಕರಣೆ
( S I R
special intensive revision…)
ಎಸ್ ಐ ಆರ್ ಅಂದರೆ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ದಿನದಿಂದ ದಿನಕ್ಕೆ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಘರ್ಷಣೆಗೆ ಕಾರಣವಾಗುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಹುದೊಡ್ಡ ಸಂಘರ್ಷ ನಡೆಯುತ್ತಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಚುನಾವಣಾ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸಾಮಾನ್ಯ ಜನರಲ್ಲಿ ವಿಶ್ವಾಸವು ಕಡಿಮೆಯಾಗುತ್ತಿದೆ.
ಮೇಲ್ನೋಟಕ್ಕೆ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಅತ್ಯಂತ ಕ್ರಮಬದ್ಧ ಸುಧಾರಣೆ ಎಂದು ಅನಿಸುತ್ತದೆ. ಆದರೆ ಅದರ ಹಿಂದಿನ ಹುನ್ನಾರ ಸಹ ಗಮನಿಸಬೇಕಾಗುತ್ತದೆ. ಅಕ್ರಮ ವಲಸಿಗರ ಮತದಾನದ ಹಕ್ಕನ್ನು ನಾಶಪಡಿಸುವುದು, ಸತ್ತಿರುವ ಮತ್ತು ಎರಡು ಮೂರು ಮತ ಕ್ಷೇತ್ರಗಳಲ್ಲಿ ಹೆಸರು ನೋಂದಾಯಿಸಿರುವ ಜನರನ್ನು ತೆಗೆದುಹಾಕುವುದು ನಿಜಕ್ಕೂ ಉತ್ತಮ ನಿರ್ಧಾರ. ಆದರೆ ಆ ನೆಪದಲ್ಲಿ ತಮ್ಮ ಪ್ರತಿಸ್ಪರ್ಧಿ ಮತದಾರರ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಘನಘೋರ ಅನ್ಯಾಯ ಮಾಡಿದಂತೆ. ಏಕೆಂದರೆ ಭಾರತದಲ್ಲಿ ಈಗಲೂ ಎಷ್ಟೋ ಅವಿದ್ಯಾವಂತ, ಅನಾಮಿಕ, ಕಡುಬಡವರು ಸಾಕಷ್ಟು ಜನರಿದ್ದಾರೆ. ಆಡಳಿತ ವ್ಯವಸ್ಥೆ ಅವರಿಗೆ ಇನ್ನೂ ತಲುಪಿಯೇ ಇಲ್ಲ. ಅಂತಹವರು ಈ ಒಂದು ಸರ್ಕಾರಿ ಪ್ರಾಯೋಜಿತ ಮತ ಪರಿಷ್ಕರಣೆಯ ದಾಖಲೆಗಳನ್ನು ನೀಡಲು ವಿಫಲರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಮತದಾನದ ಮೂಲಭೂತ ಹಕ್ಕುಗಳಿಂದಲೇ ವಂಚಿತರಾಗುತ್ತಾರೆ. ಇವರೆಲ್ಲಾ ಸಾಮಾನ್ಯವಾಗಿ ಒಂದು ರಾಷ್ಟ್ರೀಯ ಪಕ್ಷದ ಪರವಾಗಿ ಮತ ಹಾಕುವವರು ಎನ್ನುವ ಭಾವನೆಯಿಂದ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಆರೋಪ ಇದೆ.
ಅದು ಸತ್ಯವಾಗಿದ್ದಲ್ಲಿ ನಿಜಕ್ಕೂ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ ಎಂದು ಹೇಳಬೇಕಾಗುತ್ತದೆ. ಚರ್ಚೆಯನ್ನು ಯಾವ ನಿಟ್ಟಿನಲ್ಲಿ ಬೇಕಾದರೂ ಮಾಡಬಹುದು. ಸಮರ್ಥನೆ ಅಥವಾ ವಿರೋಧಕ್ಕೆ ಸಾಕಷ್ಟು ಅಂಶಗಳಿರುತ್ತವೆ. ಆದರೆ ದೇಶ ಮತ್ತು ಸಂವಿಧಾನದ ಹಿತಾಸಕ್ತಿಯನ್ನು ಹೃದಯಪೂರ್ವಕವಾಗಿ ರಕ್ಷಿಸುವ ನಿಟ್ಟಿನಲ್ಲಿ ಯೋಚಿಸಿದರೆ ಆಗ ಸತ್ಯ ಮತ್ತು ವಾಸ್ತವ ಅರ್ಥವಾಗುತ್ತದೆ….
ಅತ್ಯಂತ ಸರಳವಾಗಿ ನಡೆಯಬೇಕಾಗಿದ್ದ ಈ ಮತ ಪರಿಷ್ಕರಣೆ ಯಾಕೋ ತುಂಬಾ ಸಂಕೀರ್ಣವಾಗುತ್ತಿದೆ ಕೇಂದ್ರ ಚುನಾವಣಾ ಆಯೋಗವೇ ಗೊಂದಲಕ್ಕೆ ಒಳಗಾದಂತೆ ತನ್ನ ನಿಯಮಗಳನ್ನು ಆಗಾಗ ಬದಲಾಯಿಸುತ್ತಲೇ ಇದೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಒಳಗಾಗಿದೆ ಸ್ಥಳೀಯ ಆಡಳಿತ ಕೆಲವೇ ದಿನಗಳಲ್ಲಿ ತಮ್ಮ ಪ್ರದೇಶದ ವ್ಯಾಪ್ತಿಯ ಅಕ್ರಮ ವಲಸಿಗರು, ಸತ್ತವರು ಎರಡು ಕಡೆ ಮತ ಹೊಂದಿರುವವರನ್ನು ಗುರುತಿಸಿ ತೆಗೆದು ಹಾಕಿದ್ದರೆ ಅದು ಅತ್ಯಂತ ಸಹಜವಾಗಿ ನಡೆಯುವ ಕ್ರಿಯೆಯಾಗಿತ್ತು. ಆದರೆ ಚುನಾವಣಾ ಆಯೋಗ ಅನಾವಶ್ಯಕ ವಿಷಯಗಳನ್ನು ಅದರಲ್ಲಿ ಸೇರಿಸಿ ಗೊಂದಲಮಯಗೊಳಿಸಿತು.
ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ವೈವಿಧ್ಯಮಯ ದೇಶ. ಇಲ್ಲಿ ಜನರನ್ನು ವೈಯಕ್ತಿಕ ನೆಲೆಯಲ್ಲಿ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವುದು ಅಷ್ಟು ಸುಲಭವಲ್ಲ. ಆಧುನಿಕ ತಂತ್ರಜ್ಞಾನವಿದ್ದರೂ ಅದನ್ನು ಕೈಗೊಳ್ಳಲು ಸಂಪನ್ಮೂಲಗಳ ಕೊರತೆ ಇರುತ್ತದೆ. ಜೊತೆಗೆ ಮಾನವ ಸಂಪನ್ಮೂಲಗಳು ದಕ್ಷ ಮತ್ತು ಪ್ರಾಮಾಣಿಕವಾಗಿ ಇರುವುದಿಲ್ಲ. ಇದು ಪರಿಷ್ಕರಣೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ.
ಮತ ಪರಿಷ್ಕರಣೆಯಲ್ಲಿ ಭಾಗಿಯಾಗಿರುವ ಅನೇಕ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರನ್ನು ಆಗಾಗ ಮಾತನಾಡಿಸುತ್ತಲೇ ಇರುತ್ತೇನೆ. ಅವರು ವಾಸ್ತವ ನೆಲೆಯಲ್ಲಿ ಹೇಳುವ ಸಮಸ್ಯೆಗಳಿಗೆ ಮೇಲಧಿಕಾರಿಗಳು ಸ್ಪಂದಿಸುತ್ತಿಲ್ಲ. ಅದಕ್ಕಿಂತ ಮೇಲಿನ ಅಧಿಕಾರಿಗಳು ತಾವು ಅಧಿಕಾರದ ಹುದ್ದೆಯಿಂದಲೇ ಎಲ್ಲವೂ ಬಲ್ಲವರು ಎಂದು ತಿಳಿದುಕೊಂಡು ತಾವೇ ನಿರ್ಧಾರ ಕೈಗೊಳ್ಳುತ್ತಾರೆ. ಕೆಲವೊಮ್ಮೆ ಕಾನೂನಿನ ಕಠಿಣ ನಿಯಮಗಳನ್ನೇ ಮುಂದೆ ಮಾಡುತ್ತಾರೆ. ಮತ್ತೆ ಕೆಲವೊಮ್ಮೆ ತಮಗೆ ಅನುಕೂಲಕರ ಅಂಶಗಳನ್ನು ಮಾತ್ರ ಪರಿಗಣಿಸುತ್ತಾರೆ. ಕೆಲವೊಮ್ಮೆ ಆ ಕ್ಷಣದಲ್ಲಿ ಕೆಲಸ ಮುಗಿಯಲಿ ಎಂದು ಹೇಗೋ ನಿರ್ವಹಿಸುತ್ತಾರೆ. ಈ ಎಲ್ಲದರ ಪರಿಣಾಮ ರಾಜಕೀಯ ಪಕ್ಷಗಳಿಗೆ ಕೆಲವು ತಪ್ಪುಗಳು ಬಹುದೊಡ್ಡದಾಗಿ ಕಾಣಿಸಿ ಮಾಧ್ಯಮಗಳು ಅದಕ್ಕೆ ಸುಣ್ಣಬಣ್ಣ ಬಳಿದು ಇಡೀ ವ್ಯವಸ್ಥೆ ಕುಸಿಯುವಂತಾಗಿದೆ.
ಅಕ್ರಮ ವಲಸೆಗಾರರು ನುಸುಳದಂತೆ ತಡೆಯುವಲ್ಲಿ ವಿಫಲವಾಗುವುದು, ಅದನ್ನು ಮುಚ್ಚಿಕೊಳ್ಳಲು ಮತ್ತೊಂದು ಕಾರ್ಯ ಯೋಜನೆ ರೂಪಿಸುವುದು, ಮತದಾನದ ಹಕ್ಕನ್ನೇ ಮೂಲಭೂತ ನಾಗರಿಕ ಹಕ್ಕು ಎಂಬುದಾಗಿ ತಪ್ಪಾಗಿ ಅರ್ಥೈಸುವುದು, ದೊಡ್ಡ ದೊಡ್ಡ ಪದಗಳ ಮೂಲಕ ಶಾಸಕಾಂಗ ಮತ್ತು ಕಾರ್ಯಾಂಗ ಮತದಾನದ ಹಕ್ಕನ್ನು ಪಾವಿತ್ರ್ಯಗೊಳಿಸುವುದು ಪ್ರಜಾಪ್ರಭುತ್ವಕ್ಕೆ ನಿಜವಾದ ಅಪಾಯ ಎಂಬುದನ್ನು ವಾಸ್ತವಿಕ ನೆಲೆಯಲ್ಲಿ ನಾವು ಮರೆಯುತ್ತಿದ್ದೇವೆ. ಮತದಾನದ ಪಾವಿತ್ರ್ಯ ಉಳಿಯುವುದು ಮತ ಹಾಕುವ ಸಂದರ್ಭದಲ್ಲಿ ನಮ್ಮ ವಿವೇಚನೆ, ಪ್ರಾಮಾಣಿಕತೆ, ನಿಷ್ಠೆ ಮುಖ್ಯವೇ ಹೊರತು ಮತ ಮಾರಾಟವಲ್ಲ.
ಮತದಾನ ಒಂದು ಮೂಲಭೂತ ಹಕ್ಕು ಮತ್ತು ಪ್ರಜೆಗಳ ಕರ್ತವ್ಯ ಎಂಬುದೇನೋ ನಿಜ. ಆದರೆ ಅದಕ್ಕಿಂತ ಹೆಚ್ಚಾಗಿ ಮತ ಹಾಕಿಸಿಕೊಂಡವರು, ಸರ್ಕಾರಿ ಉದ್ಯೋಗ ಪಡೆದವರು ಮತ್ತು ಮತ ಹಾಕಿದವರು ಅತ್ಯಂತ ಪ್ರಾಮಾಣಿಕವಾಗಿ, ದಕ್ಷವಾಗಿ ಜನರ ಮತ್ತು ರಾಷ್ಟ್ರದ ಹಿತಾಸಕ್ತಿಯಿಂದ ತಮ್ಮ ಮೂಲಭೂತ ಕರ್ತವ್ಯವನ್ನು ಮಾಡಬೇಕೆಂಬುದೂ ಅಷ್ಟೇ ಸತ್ಯ. ಅದರಲ್ಲಿ ವಿಫಲವಾದರೆ ಈ ರೀತಿಯ ಎಸ್ಐಆರ್ ನಂತಹ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಘರ್ಷಣೆ ಗೊಂದಲಗಳಿಗೆ ಕೊನೆಯೇ ಇರುವುದಿಲ್ಲ.
ಸ್ಥಳೀಯ ಆಡಳಿತವೇ ಮಾಡಬಹುದಾದ ಕೆಲಸವನ್ನು ಕೇಂದ್ರ ಚುನಾವಣಾ ಆಯೋಗ ಶತ್ರುಗಳ ವಿರುದ್ಧದ ಯುದ್ಧವೆಂಬಂತೆ ಕೆಲವೇ ಮತಗಳ ಪರಿಷ್ಕರಣೆಗಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಯೋಜನೆಯ ಅವಶ್ಯಕತೆ ಇರಲಿಲ್ಲ. ತಲೆತಲಾಂತರದ ಹುಟ್ಟು ಸಾವುಗಳು ಇಲ್ಲೇ ನಡೆಯುತ್ತಿದ್ದರೂ ಈ ನೆಲ ಬಿಟ್ಟು ಬೇರೆ ನೆಲವನ್ನು ನೋಡದೆ ಇರುವ ನಮ್ಮನ್ನು ಮತ್ತೆ ಮತ್ತೆ ನಮ್ಮ ಹುಟ್ಟು, ಅಸ್ತಿತ್ವ, ಗುರುತಿನ ಬಗ್ಗೆ ನಮ್ಮದೇ ಸರ್ಕಾರಗಳು ಪ್ರಶ್ನಿಸುವುದು, ದಾಖಲೆ ನೀಡಿ ಎಂದು ಹೇಳುವುದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಲ್ಲವೇ. ಕಳ್ಳರನ್ನು, ಭ್ರಷ್ಟರನ್ನು, ದುಷ್ಟರನ್ನು, ವಂಚಕರನ್ನು, ಅಕ್ರಮ ವಲಸಿಗರನ್ನು ಸರ್ಜಿಕಲ್ ಸ್ಟ್ರೈಕ್ ಮಾಡಿ, ಟಾರ್ಗೆಟ್ ಮಾಡಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನಮ್ಮಂತ ಸಾಮಾನ್ಯ ಜನರ ದಿನನಿತ್ಯದ ಚಟುವಟಿಕೆಗೆ ತೊಂದರೆ ನೀಡುವ ಎಸ್ಐಆರ್ ತೀರ ಅನಾವಶ್ಯಕವೆನಿಸುತ್ತದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎಂಬ ಭಿನ್ನತೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಭಿನ್ನತೆ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ವ್ಯಕ್ತಪಡಿಸುವ ಕೆಲವು ವಿವೇಚನಾರಹಿತ,, ಗೊಂದಲಕಾರಿ, ತಮ್ಮ ಮೂಗಿನ ನೇರದ ಅಭಿಪ್ರಾಯಗಳು ಒಂದು ರೀತಿ ಆಂತರಿಕ ಯುದ್ಧ ಎಂಬಂತೆ ಚಿತ್ರಿತವಾಗಿರುವುದು ನಿಜಕ್ಕೂ ಭಾರತದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಹೊಡೆತ. ಮತ ಪರಿಷ್ಕರಣೆಯನ್ನು ಸೌಹಾರ್ದಯುತವಾಗಿ ಮಾಡಲು ಸಾಧ್ಯವಾಗದ ಈ ಸಮಾಜದ ನಾಗರೀಕ ನಡವಳಿಕೆ ಪ್ರಶ್ನಾರ್ಹ. ಅಕ್ಷರ ಜ್ಞಾನದ ತಿಳುವಳಿಕೆ ವಿಫಲವಾಗಿದೆ ಎಂದೇ ಕರೆಯಬಹುದು. ಕೃತಕ ಬುದ್ಧಿಮತ್ತೆಯ ( Artificial intelligence ) ಕಾಲದಲ್ಲೂ ಈ ಗೊಂದಲದ ಅವಶ್ಯಕತೆ ಇರಲಿಲ್ಲ.
ಇನ್ನಾದರೂ ಮತ ಪರಿಷ್ಕರಣೆ ಒಂದು ಸಹಜಕ್ರಿಯೆ ಎಂಬಂತೆ ಸ್ಥಳೀಯವಾಗಿಯೇ ಆಡಳಿತ ವ್ಯವಸ್ಥೆ ನಿರ್ವಹಿಸಿ ಮತದಾರರ ಸ್ವಾಭಿಮಾನ, ಪ್ರಜಾಪ್ರಭುತ್ವದ ಮೌಲ್ಯ, ನಾಗರೀಕ ಸಮಾಜದ ಗುಣಲಕ್ಷಣಗಳನ್ನು ಕಾಪಾಡೋಣ. ನಾವು ಶತ್ರುಗಳಲ್ಲ, ವಿರೋಧಿಗಳಲ್ಲ. ಸಂವಿಧಾನದ ಪೀಠಿಕೆಯಲ್ಲಿ ಹೇಳಿದಂತೆ
” ಭಾರತೀಯರಾದ ನಾವು……. ” ಎಂಬುದಷ್ಟೇ ಸತ್ಯ ಮತ್ತು ವಾಸ್ತವ. ನಮಗೂ, ಅಕ್ರಮ ವಲಸಿಗರಿಗೂ ಯಾವುದೇ ಸಂಬಂಧವಿಲ್ಲ. ನಾವು ಈ ನೆಲದ, ಈ ಮಣ್ಣಿನ ನಿಜ ಮತದಾರರು. ನಮ್ಮನ್ನು ದಯವಿಟ್ಟು ಪ್ರಶ್ನಿಸಬೇಡಿ. ನಾವು ವಂಚಕರಲ್ಲ, ಭಾರತೀಯರು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….










