ವಿಜಯ ದರ್ಪಣ ನ್ಯೂಸ್…..
ಬೇಡ ಬ್ರೋ… ಬೇಡ ಬ್ರೋ.. ಡ್ರಗ್ಸ್ ಬೇಡ ಬ್ರೋ…
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಬೃಹತ್ ಬೈಕ್ ರ್ಯಾಲಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ. ಅ.16 :
ಸಾವಿರಾರು ಕಂಠಗಳಲಿ ಮೊಳಗಿದ ಒಂದೇ ಕೂಗು ದೈಹಿಕ, ಮಾನಸಿಕ ಹಾಗೂ ಆರ್ಥಿಕ ಹಾನಿ ಉಂಟುಮಾಡುವ ಡ್ರಗ್ಸ್ ನಿಂದ ದೂರವಿರು ಬ್ರೋ ಎಂಬುದು.
ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಸಮೀಪ ಎಂವಿಎಂ ಕನ್ವೆನ್ಷನ್ ಹಾಲ್ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ನೆಲಮಂಗಲ ತಾಲೂಕು ಆಡಳಿತದ ವತಿಯಿಂದ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಆಯೋಜಿಸಲಾದ ಏಕತಾ ಬೈಕ್ ರ್ಯಾಲಿಗೆ ಸಾವಿರಾರು ಮಂದಿ ಸಾಕ್ಷಿಯಾದರು.

ಕಿವಿಗಡಚಿಕ್ಕುವ ಬುಲೆಟ್ ಬೈಕ್ ಗಳ ಶಬ್ದದೊಂದಿಗೆ ಸದ್ದು ಮಾಡುತ್ತಾ ಹೊರಟ ಬೈಕ್ ಸವಾರರು ದೇಶದ ಯುವ ಸಮೂಹ ಡ್ರಗ್ಸ್ ರಾಕ್ಷಸನಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ ಎಂಬ ಸಂದೇಶ ಸಾರುತ್ತಾ ಗುಜರಾತ್ ನ ಏಕತಾ ಪ್ರತಿಮೆ ಬಳಿ ವಿವಿಧ ರಾಜ್ಯಗಳ ಬೈಕ್ ಸವಾರರೊಂದಿಗೆ ಸಮಾಗಮಗೊಳ್ಳಲಿದ್ದಾರೆ.

ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕಾದ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಪೋಷಕರ ಕನಸುಗಳಿಗೆ ದನಿಯಾಗಿ. ಒಂದು ವೇಳೆ ಯಾರಾದರೂ ಈ ಜಾಲದಲ್ಲಿ ಸಿಲುಕಿದ್ದರೆ, ನಿಮ್ಮ ಸಮಸ್ಯೆಯನ್ನ ಯಾರು ಬಳಿಯೂ ಹೇಳಿಕೊಳ್ಳಲಾಗದಿದ್ದರೆ ಉಚಿತ ಸಹಾಯವಾಣಿ 1446 ಕ್ಕೆ ಕರೆಮಾಡಿ. ಜಿಲ್ಲಾಡಳಿತ, ಸರ್ಕಾರ ಸದಾ ನಿಮ್ಮ ನೆರವಿಗೆ ನಿಲ್ಲಲಿದೆ ಎಂದರು.
ನಿಮ್ಮೊಳಗೆ ಒಂದು ವಾಟ್ಸಾಪ್ ಗುಂಪು ರಚಿಸಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮಾತನಾಡಿ ಪೊಲೀಸ್ ಇಲಾಖೆ ವತಿಯಿಂದ ಹಲವಾರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಲಕ್ಷಾಂತರ ಬೆಲೆಯ ಡ್ರಗ್ಸ್ ಸಾಗಾಟ ತಡೆಯಲಾಗಿದೆ ಎಂದರು.
ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವುದು, ಅವುಗಳ ಬಳಕೆಯನ್ನು ತಡೆಗಟ್ಟುವುದು ಮತ್ತು ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸುವುದು ಈ ರ್ಯಾಲಿಯ ಪ್ರಮುಖ ಉದ್ದೇಶವಾಗಿದೆ.
ರಾಷ್ಟ್ರೀಯ ಏಕತೆ ಮತ್ತು ಮಾದಕ ದ್ರವ್ಯ ಮುಕ್ತ ಭವಿಷ್ಯದ ಸಂದೇಶವನ್ನು ಹೊತ್ತು ರ್ಯಾಲಿ ಗುಜರಾತ್ ತಲುಪಲಿದೆ ಎಂದರು.
ಈ ಸಂದರ್ಭದಲ್ಲಿ ಎಎಸ್ಪಿ ಲಕ್ಷ್ಮಿನಾರಾಯಣ, ಡಿವೈಎಸ್ಪಿ ಪಾಂಡುರಂಗ, ಉಮಾರಾಣಿ, ನೆಲಮಂಗಲ ತಹಶೀಲ್ದಾರ್ ಮಲ್ಲೇಶ್, ಇಒ ಬಿಂದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.











