--Ads--

ಆ ” ವ್ಯಕ್ತಿಗೆ ” ಕನಿಷ್ಠ ಎರಡು ವರ್ಷ ನಿಷೇಧ ಬೇಡವೇ……

On: October 24, 2026 8:21 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಆ ” ವ್ಯಕ್ತಿಗೆ ” ಕನಿಷ್ಠ ಎರಡು ವರ್ಷ ನಿಷೇಧ ಬೇಡವೇ……..

ಆತನ ಪ್ರಶ್ನಿಸುವ ಧೈರ್ಯವನ್ನು ಪ್ರಶಂಶಿಸುತ್ತಾ, ಆದರೆ…….

ಕರ್ನಾಟಕದ ಎಲ್ಲಾ ರೀತಿಯ ಪತ್ರಕರ್ತ ಸಂಘಟನೆಗಳ ಪದಾಧಿಕಾರಿಗಳೇ ಮತ್ತು ಸದಸ್ಯರುಗಳೇ……

ನಿಮ್ಮ ಘನತೆ, ಮಾಧ್ಯಮದ ಪಾವಿತ್ರ್ಯತೆ, ಜನರ ವಿಶ್ವಾಸ ಮರಳಿ ಗಳಿಸುವ ಒಂದು ಅವಕಾಶ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ,
ವಾಣಿಜ್ಯೋದ್ಯಮಿಗಳ ಸಂಘ, ವರ್ತಕರ ಸಂಘ, ಕಾರ್ಮಿಕ ಸಂಘ, ರೈತ ಸಂಘ ಹೀಗೆ ಸಾವಿರಾರು ಸಂಘಟನೆಗಳು ಸ್ವಯಂ ಪ್ರೇರಿತವಾಗಿ ನೊಂದಣಿ ಮಾಡಿಕೊಂಡು ಅಸ್ತಿತ್ವದಲ್ಲಿವೆ. ತಮ್ಮ ಕ್ಷೇತ್ರದ ಬೇಕು ಬೇಡಗಳನ್ನು ಪರಿಹರಿಸಿಕೊಳ್ಳಲು, ತಮ್ಮ ನಡುವಿನ ವಿವಾದವನ್ನು ಬಗೆಹರಿಸಿಕೊಳ್ಳಲು, ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಈ ರೀತಿಯ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡುತ್ತವೆ.

ಒಂದು ವೇಳೆ ಈ ರೀತಿಯ ಸಂಘಟನೆಗಳಲ್ಲಿ ಯಾವುದಾದರೂ ಸದಸ್ಯರಿಂದ ಅಕ್ರಮವಾದರೆ, ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ, ಸಂಘದ ನೀತಿ ನಿಯಮಗಳನ್ನು ಮೀರಿದರೆ ಅವರನ್ನು ಕೆಲವೊಮ್ಮೆ ತಾತ್ಕಾಲಿಕವಾಗಿ, ಮತ್ತೆ ಕೆಲವೊಮ್ಮೆ ಶಾಶ್ವತವಾಗಿ ಬಹಿಷ್ಕರಿಸಲಾಗುತ್ತದೆ ಅಥವಾ ಹೊರಹಾಕಲಾಗುತ್ತದೆ. ಇದೇ ವಾಸ್ತವದ ನೀತಿ ನಿಯಮವಲ್ಲವೇ….

ಹಾಗಾದರೆ ಇವತ್ತಿನ ಮುಖ್ಯ ಪ್ರಶ್ನೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವಿದೆ, ವರದಿಗಾರರ ಒಕ್ಕೂಟವಿದೆ, ಮಾಧ್ಯಮ ಅಕಾಡೆಮಿ ಇದೆ, ಪ್ರೆಸ್ ಕ್ಲಬ್ ಇದೆ, ಪತ್ರಿಕಾ ಸಂಪಾದಕರ ಮಂಡಳಿ ಇದೆ. ಜೊತೆಗೆ ಇನ್ನೂ ಅನೇಕ ಸಣ್ಣ, ದೊಡ್ಡ ಪತ್ರಿಕೆ, ಟಿವಿ ಮಾಧ್ಯಮಗಳ ಸಂಘಟನೆಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿ ಒಂದಷ್ಟು ಯಶಸ್ವಿಯಾಗಿದೆ. ಪತ್ರಕರ್ತರ ಬೇಡಿಕೆಗಳಿಗೆ ಸಾಮಾನ್ಯವಾಗಿ ಸರ್ಕಾರ ಬೇಗ ಸ್ಪಂದಿಸುತ್ತದೆ. ಏಕೆಂದರೆ ಅವರು ಸ್ವಲ್ಪ ಹೆಚ್ಚು ಪ್ರಭಾವಶಾಲಿಗಳು ಎನ್ನುವ ಹಿನ್ನೆಲೆಯಲ್ಲಿ. ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ.

ಇದು ಅವರ ಹಕ್ಕುಗಳನ್ನು ಪಡೆಯುವ ರೀತಿಯಾದರೆ, ಈ ಪತ್ರಕರ್ತರ ಸಂಘಟನೆಗಳಿಗೆ ಕರ್ತವ್ಯವೂ ಇದೆ. ಈ ಕ್ಷಣದಲ್ಲಿ ಅವರು ಮಾಡಬೇಕಾದ ಬಹು ಮುಖ್ಯ ಕರ್ತವ್ಯವೆಂದರೆ ಒಬ್ಬ ವ್ಯಕ್ತಿ ಟಿವಿ ಮಾಧ್ಯಮದ ಭಾಷೆಯನ್ನು ಮೀರಿ ಅತ್ಯಂತ ಕೆಟ್ಟ, ಕೊಳಕ, ಹೀನಾಯ, ಅತಿರೇಕದ, ಅನೈತಿಕ, ಅಮಾನವೀಯ ಭಾಷೆಯನ್ನು ತಮ್ಮ ಸುದ್ದಿ ವಾಹಿನಿಯಲ್ಲಿ ಸಾರ್ವಜನಿಕವಾಗಿಯೇ ಉಪಯೋಗಿಸುತ್ತಿದ್ದಾರೆ. ಆತನ ಮೇಲೆ ಮಾಧ್ಯಮ ಲೋಕ ತತ್ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಮಾಧ್ಯಮ ಎಂಬುದು ಅಕ್ಷರ ಮತ್ತು ಆಧುನಿಕ ಕಾಲದಲ್ಲಿ ಮಾತಿನ ಮೂಲಕ ವ್ಯಕ್ತಪಡಿಸುವ ಒಂದು ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆ. ಪ್ರಜಾಪ್ರಭುತ್ವದಲ್ಲಿಯಂತೂ ಅದು ನಾಲ್ಕನೇ ಅಂಗದ ರೀತಿ. ಜೊತೆಗೆ ಕಾವಲುಗಾರನಂತೆ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಒಂದಷ್ಟು ಆದರ್ಶಗಳನ್ನು ಪಾಲನೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತದೆ. ನೈತಿಕತೆ ಅದರ ಬಹುದೊಡ್ಡ ಲಕ್ಷಣ.

ಶಾಸಕಾಂಗ ಮಿತಿಮೀರಿದರೆ ಅವರನ್ನು ಹದ್ದುಬಸ್ತಿನಲ್ಲಿ ಇಡಲು ಮತದಾರರಿದ್ದಾರೆ. ಕಾರ್ಯಾಂಗ ಮತ್ತು ನ್ಯಾಯಾಂಗ ಹದ್ದುಮೀರಿದರೆ ಸ್ವತಃ ಸಂವಿಧಾನಾತ್ಮಕ ಕಾನೂನುಗಳೇ ಅವರನ್ನು ನಿಯಂತ್ರಣಕ್ಕೆ ಪಡೆಯುತ್ತದೆ ಮತ್ತು ಶಿಕ್ಷಿಸುತ್ತದೆ. ಆದರೆ ಮಾಧ್ಯಮ ರಂಗ ಮತದಾರ ಮತ್ತು ಕಾನೂನಿನ ನೇರ ವ್ಯಾಪ್ತಿಗೆ ಒಳಪಡುವುದಿಲ್ಲ. ಕಾನೂನು ಪತ್ರಕರ್ತರಿಗೂ ಸಮ ಪ್ರಮಾಣದಲ್ಲಿಯೇ ಇದೆಯಾದರೂ ಹದ್ದು ಮೀರುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಗುರುತಿಸುವುದು ಸ್ವಲ್ಪ ಕಷ್ಟ. ಜೊತೆಗೆ ರಾಜಕಾರಣಿಗಳ ಪ್ರಭಾವವು ಕೆಲಸ ಮಾಡುವುದರಿಂದ ಅದನ್ನು ಜಾರಿ ಮಾಡುವುದು ಇನ್ನೂ ಕಷ್ಟವಾಗಿದೆ. ಮಾನನಷ್ಟ ಮೊಕದ್ದಮೆ ಎಂಬ ಒಂದು ಕಾನೂನು ಇದ್ದರೂ ಅದು ಅಷ್ಟು ಪರಿಣಾಮಕಾರಿ ಅಲ್ಲ ಮತ್ತು ದೀರ್ಘಕಾಲ ಹಿಡಿಯುತ್ತದೆ. ಅಷ್ಟು ಹೊತ್ತಿಗೆ ಆಗಬೇಕಾದ ಅನಾಹುತ ಆಗೇ ಹೋಗಿರುತ್ತದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇತ್ತೀಚಿಗೆ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಎಂಬುದು ಅಸಹ್ಯಕರ ರೂಪ ಪಡೆಯುತ್ತಿದೆ. ಮಾಧ್ಯಮದ ಇತಿಮಿತಿಗಳನ್ನು ದಾಟುತ್ತಿದೆ. ರಾಜಕಾರಣಿಗಳು ಈ ಸ್ಟಿಂಗ್ ಪತ್ರಕರ್ತರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸ್ಟಿಂಗ್ ಅಂದರೆ ಕುಟುಕು ಕಾರ್ಯಾಚರಣೆ ಎಂಬುದು ಅನೈತಿಕ ಸಂಬಂಧಗಳ ಅನಾವರಣಕ್ಕೆ ಮಾತ್ರ ಸೀಮಿತವಾಗಿದೆ.

ಅದೇನೇ ಇರಲಿ ಪತ್ರಕರ್ತನೊಬ್ಬ ತಾನು ಪ್ರಸ್ತಾಪಿಸಬೇಕಾದ ವಿಷಯವನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ನೇರವಾಗಿ ಪ್ರಶ್ನಿಸಿದರೆ ಯಾರದು ಅಭ್ಯಂತರವಿಲ್ಲ. ಅವರು ಎಷ್ಟೇ ದೊಡ್ಡವರಾಗಿರಲಿ, ಪ್ರಧಾನಿಯಾಗಿರಲಿ, ಮಾಜಿ ಪ್ರಧಾನಿಯಾಗಿರಲಿ, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಆಗಿರಲಿ, ದೊಡ್ಡ ನ್ಯಾಯಾಧೀಶರೋ, ಸರ್ಕಾರಿ ಅಧಿಕಾರಿಯೋ ಆಗಿರಲಿ. ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಪತ್ರಕರ್ತ ತೀರಾ ಕೆಳಹಂತಕ್ಕೆ ಇಳಿದು ಮಾತನಾಡಿದ ರೀತಿ ಸಹಿಸಲಸಾಧ್ಯ. ಈ ಹುಚ್ಚು ಮತ್ತಷ್ಟು ಜನರಿಗೆ ಹಬ್ಬುವ ಮೊದಲು ಅದನ್ನು ನಿಯಂತ್ರಿಸಬೇಕಿದೆ.

ಇಲ್ಲಿ ಕಾನೂನು ಏನು ಕ್ರಮ ಕೈಗೊಳ್ಳುತ್ತದೆಯೋ ಅದಕ್ಕಿಂತ ಮುಖ್ಯ ಪತ್ರಕರ್ತ, ಸಂಪಾದಕ ಮಂಡಳಿ ಮುಂತಾದ ಸಂಬಂಧಪಟ್ಟ ಸಂಘಟನೆಗಳು ಈ ವ್ಯಕ್ತಿಯನ್ನು ಕನಿಷ್ಠ ಎರಡು ವರ್ಷದ ಅವಧಿಗಾದರೂ ನಿಷೇಧಿಸುವ ಕ್ರಮ ಕೈಗೊಂಡಲ್ಲಿ ಖಂಡಿತವಾಗಲೂ ಪತ್ರಕರ್ತ ಸಂಘ ಸಂಸ್ಥೆಗಳಿಗೆ ಸ್ವಲ್ಪ ಮಾನ ಮರ್ಯಾದೆ ಉಳಿಯಬಹುದು. ದರ್ಶನ್ ಎಂಬ ಸಿನಿಮಾ ನಟ ಕುಡಿದು ಪತ್ರಕರ್ತರ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಪತ್ರಕರ್ತರು ಆತನನ್ನು ಬಹಿಷ್ಕರಿಸಿದರು. ಎಷ್ಟೋ ಪ್ರಕರಣದಲ್ಲಿ ಸಿನಿಮಾ ನಟ, ನಟಿ ನಿರ್ಮಾಪಕರು ತಪ್ಪು ಮಾಡಿದಾಗ ವಾಣಿಜ್ಯ ಮಂಡಳಿ ಅವರನ್ನು ಬಹಿಷ್ಕರಿಸಿದೆ.

ಇಂತಹ ಸಂದರ್ಭದಲ್ಲಿ ಪತ್ರಕರ್ತರಾದವರು ಕನಿಷ್ಠ ಪ್ರಮಾಣದ ಕ್ರಮವನ್ನು ಕೈಗೊಳ್ಳದೆ ಆ ಪತ್ರಕರ್ತನನ್ನು ನಿರ್ಲಕ್ಷಿಸಿ, ತಮ್ಮ ವ್ಯಕ್ತಿತ್ವದ ಮೇಲೆ ತಾವೇ ಬಂಡೆ ಎಳೆದುಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ

ಪತ್ರಿಕೆಗಳಲ್ಲಿ ಬರೆಯುವ, ಟಿವಿಗಳಲ್ಲಿ ಮಾತನಾಡುವ ದೊಡ್ಡ ದೊಡ್ಡ ಪತ್ರಕರ್ತರು ಕೇವಲ ರಾಜಕಾರಣಿಗಳನ್ನು, ಸರ್ಕಾರಿ ಅಧಿಕಾರಿಗಳನ್ನು, ಕೆಟ್ಟ ಸ್ವಾಮೀಜಿಗಳನ್ನು ಅಥವಾ ಇನ್ಯಾರೋ ಕೊಲೆಗಡುಕರನ್ನು ಪ್ರಮುಖವಾಗಿ ಟೀಕೆ ಮಾಡುತ್ತಾರೆ. ಆದರೆ ತಮ್ಮದೇ ಸಹೋದ್ಯೋಗಿ ಒಬ್ಬ ಹದ್ದು ಮೀರಿರುವುದನ್ನು ಖಂಡಿಸುವ, ನಿಷೇಧಿಸುವ ಕನಿಷ್ಠ ಪ್ರಜ್ಞೆಯನ್ನು ಕಳೆದುಕೊಂಡರೆ ಅವರು ಇತರರಿಗೆ ಬುದ್ಧಿ ಹೇಳುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಾರೆ

ಮಾನ್ಯ ಪತ್ರಕರ್ತ ಮಿತ್ರರೇ, ಸಂಘಟನೆಗಳ ಪದಾಧಿಕಾರಿಗಳೇ, ದಯವಿಟ್ಟು ಒಂದು ಸಣ್ಣ ಪ್ರಯತ್ನವಾಗಿ ಆ ವ್ಯಕ್ತಿಯನ್ನು ಕೆಲವೇ ತಿಂಗಳುಗಳ ಮಟ್ಟಿಗೆ ನಿಷೇಧಿಸಿ ಅಥವಾ ಆತನಿಗೆ ಒಂದು ಶೋಕಾಸ್ ನೋಟಿಸ್ ನೀಡಿ ಉತ್ತರ ಪಡೆಯಿರಿ. ಆತ ಬೇಕಾದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿ. ಆದರೆ ನಿಮ್ಮ ಕರ್ತವ್ಯವನ್ನು ನೀವು ಮಾಡಿ

ಇಲ್ಲಿ ಸ್ಪಷ್ಟವಾಗಿ ಹೇಳುವುದೆಂದರೆ,
ಆ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಾ, ಆ ವ್ಯಕ್ತಿ ನೇರವಾಗಿ ಯಾವ ವಿಷಯ ಪ್ರಸ್ತಾಪಿಸುತ್ತಿದ್ದಾರೋ ಅದರ ಬಗ್ಗೆ ಕೇಳುವ ಅಧಿಕಾರ ನಮಗಾರಿಗೂ ಇಲ್ಲ. ನಾವು ಕೇಳುತ್ತಿರುವುದು ಕೇವಲ ಆತನ ಭಾಷೆ, ವರ್ತನೆ, ನಿರೂಪಣಾ ಶೈಲಿಯ ಅಮಾನವೀಯತೆಯ ಬಗ್ಗೆ ಮಾತ್ರ, ಅಸಭ್ಯತನದ ಬಗ್ಗೆ ಮಾತ್ರ, ಅಸಹ್ಯದ ಬಗ್ಗೆ ಮಾತ್ರ. ಉಳಿದದ್ದು ಆತನ ಪ್ರಶ್ನಿಸುವ ಧೈರ್ಯವನ್ನು ಪ್ರಶಂಸಿಸುತ್ತಾ, ಸದ್ಯಕ್ಕೆ ಆತ ನಿಷೇಧಕ್ಕೆ ಒಳಗಾಗಲೇಬೇಕಾದ ಪತ್ರಕರ್ತ ಎಂಬುದನ್ನು ಮತ್ತೊಮ್ಮೆ ಹೇಳುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now