ವಿಜಯ ದರ್ಪಣ ನ್ಯೂಸ್……
ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ :ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ

ಶಿಡ್ಲಘಟ್ಟ : ಮಕ್ಕಳ ಮೇಲೆ ಅನುಚಿತ ವರ್ತನೆ ನಡೆದಾಗ ಭಯಪಡದೆ ಪಾಲಕರು, ಶಿಕ್ಷಕರು ಅಥವಾ ನಂಬಿಕಸ್ಥ ಹಿರಿಯರ ಗಮನಕ್ಕೆ ತರಬೇಕು ಇಂತಹ ಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ವಾತಾವರಣ, ಮನೋಭಾವ ನಾಗರಿಕರಲ್ಲಿ ಬೆಳೆಯಬೇಕು ಎಂದು ಜೆ.ಎಂ.ಎಪ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಬಳಿಯ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ರಕ್ಷಣೆಗಾಗಿ ಇರುವ ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ನಿಷೇಧ ಹಾಗೂ ಕಾನೂನುಬದ್ದ ವಯಸ್ಸಿಗೆ ಮುನ್ನ ವಾಹನ ಚಾಲನೆ ಮಾಡುವುದರ ಪರಿಣಾಮಗಳ ಕುರಿತು ಹೇಳಿದರು.
ಅಪ್ರಾಪ್ತ ಮಕ್ಕಳ ಮೇಲೆ ನಡೆಯಬಹುದಾದ ಲೈಂಗಿಕ ದೌರ್ಜನ್ಯವನ್ನು ತಡೆಗೆ ನಮ್ಮೆಲ್ಲರಿಗೂ ಕಾನೂನಿನ ಅರಿವು ಅಗತ್ಯ ಎಂದ ಅವರು ಬಾಲ್ಯವಿವಾಹದ ಮಾಹಿತಿ ದೊರೆತರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು ಎಂದು ಸಲಹೆ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಮೀನಾ ಜೈನ್ ಅವರು ಗ್ರಾಮಾಂತರ ಟ್ರಸ್ಟ್‌ನ ಮಾಸ್ಟರ್ ಟ್ರೈನರ್ ಆಗಿ ಭಾಗವಹಿಸಿ ಮಾತನಾಡಿ,ಮಕ್ಕಳ ಹಕ್ಕುಗಳು, ಸುರಕ್ಷತೆ, ಸಂಕಷ್ಟದ ಸಂದರ್ಭಗಳಲ್ಲಿ ನೆರವು ಪಡೆಯುವ ವಿಧಾನಗಳನ್ನು ವಿವರಿಸಿದರು, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸ್) ಹಾಗೂ ಬಾಲಾಪರಾ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಸರಳ ಉದಾಹರಣೆಗಳೊಂದಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾವನಾ, ಸಹಾಯಕ ಸರಕಾರಿ ಅಭಿಯೋಜಕ ಮೊಹಮ್ಮದ್ ಖಾಜಾ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ,ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ವಕೀಲರಾದ ಚಂದ್ರಶೇಖರ್, ತಾಸೀನ್ ತಾಜ್ ಮತ್ತು ವೀಣಾ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣಮೂರ್ತಿ, ಗ್ರಾಮಾಂತರ ಟ್ರಸ್ಟ್‌ನ ಉಷಾಶೆಟ್ಟಿ, ಅನಂತಲಕ್ಷ್ಮಿ ಮತ್ತೀತರರು ಹಾಜರಿದ್ದರು.











