ವಿಜಯ ದರ್ಪಣ ನ್ಯೂಸ್……
ಕನ್ನಡದಂಗಳದಲ್ಲಿ ಪುಸ್ತಕಗಳ ಅನಾವರಣ; ತೇಜಸ್ವಿ ಸಾಹಿತ್ಯ ಪುರಸ್ಕಾರ ಪ್ರದಾನ
ಲಿಖಿತ್ ಹೊನ್ನಾಪುರ ಅವರ ಎಂಟನೇ ಕೃತಿ ‘ದಿ ಕಲರ್ಸ್ ಆಫ್ ಲವ್’, ರಕ್ಷಿತಾ ಗೌಡ ಅವರ ಚೊಚ್ಚಲ ಕೃತಿ ‘ಮಿಡಿತ’ ಲೋಕಾರ್ಪಣೆ

ತುಮಕೂರು: ಕನ್ನಡದ ಕಂಪು, ಕಾವ್ಯದ ಸೊಗಡು ಹಾಗೂ ಸಾಹಿತ್ಯದ ಸಂಭ್ರಮವನ್ನು ಒಟ್ಟುಗೂಡಿಸಿದ ‘ಕನ್ನಡದಂಗಳ’ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ತುಮಕೂರಿನ ಶ್ರೀರಂಗ ಅಕಾಡೆಮಿ ಆಫ್ ಯೋಗ ಅಂಡ್ ಆರ್ಟ್ಸ್ನಲ್ಲಿ ಯಶಸ್ವಿಯಾಗಿ ಜರುಗಿತು.
ಯಶೋಮಾರ್ಗ ಸೇವಾ ಫೌಂಡೇಶನ್ ಹಾಗೂ ಕನ್ನಡಮ್ಮ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಯುವಕವಿ ಲಿಖಿತ್ ಹೊನ್ನಾಪುರ ಅವರ ಎಂಟನೇ ಕೃತಿ ‘ದಿ ಕಲರ್ಸ್ ಆಫ್ ಲವ್’ ಹಾಗೂ ಲೇಖಕಿ ರಕ್ಷಿತಾ ಗೌಡ ಅವರ ಚೊಚ್ಚಲ ಕೃತಿ ‘ಮಿಡಿತ – ಮೌನದೊಳಗಿನ ಭಾವನೆಗಳದು’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ 2026ನೇ ಸಾಲಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮವೂ ನಡೆಯಿತು.
ಕನ್ನಡ ಸಾಹಿತಿ, ಸಂಶೋಧಕಿ, ಇತಿಹಾಸ ತಜ್ಞೆ ಹಾಗೂ ಪ್ರಾಂಶುಪಾಲರಾದ ಡಾ. ವೇದಾವತಿ ಎಸ್. ಅವರು ಕನ್ನಡದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿದ್ದು, ಯುವಜನತೆ ಓದು ಮತ್ತು ಬರವಣಿಗೆಯ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾಲೇಜು, ತುಮಕೂರಿನ ಪ್ರಾಂಶುಪಾಲ ಡಾ. ಜಗದೀಶ ಜಿ.ಟಿ., ಸಾಹಿತಿ ವಿದ್ವಾನ್ ಹರಳೂರು ಶಿವಕುಮಾರ, ಸಮಾಜಸೇವಕರು ಹಾಗೂ ಮಾತೃಶ್ರೀ ರೇಣುಕಮ್ಮ ಸೇವಾ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಚ್.ಆರ್., ಯೋಗ ತಜ್ಞರು ಹಾಗೂ ಜೀವನಶೈಲಿ ತರಬೇತುದಾರ ಪುನೀತ್ ಕೆ., ವಿದ್ಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಶೈಕ್ಷಣಿಕ ನಿರ್ದೇಶಕ ರಾಜೇಶ್ ಕೆ.ಎಸ್. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಯುವಕವಿ ಲಿಖಿತ್ ಹೊನ್ನಾಪುರ ಅವರ ಎಂಟನೇ ಕೃತಿ ‘ದಿ ಕಲರ್ಸ್ ಆಫ್ ಲವ್’ ಪ್ರೀತಿ, ಭಾವನೆ ಮತ್ತು ಮಾನವ ಸಂಬಂಧಗಳ ವಿವಿಧ ಆಯಾಮಗಳನ್ನು ಅಭಿವ್ಯಕ್ತಿಸುವ ಕೃತಿಯಾಗಿದ್ದು, ಅವರ ಸಾಹಿತ್ಯ ಪಯಣದ ಮತ್ತೊಂದು ಮೈಲಿಗಲ್ಲಾಗಿದೆ. ಇನ್ನು ರಕ್ಷಿತಾ ಗೌಡ ಅವರ ‘ಮಿಡಿತ’ ಕೃತಿಯು ಮೌನದೊಳಗೆ ಅಡಗಿರುವ ಸ್ತ್ರೀಮನದ ಭಾವನೆಗಳು, ಕನಸುಗಳು, ಸಂಬಂಧಗಳು ಹಾಗೂ ಬದುಕಿನ ತಲ್ಲಣಗಳಿಗೆ ಅಕ್ಷರ ರೂಪ ನೀಡುವ ಪ್ರಯತ್ನವಾಗಿದೆ. ಇಬ್ಬರೂ ಲೇಖಕರ ಸಾಹಿತ್ಯ ಪಯಣಕ್ಕೆ ಗಣ್ಯರು ಶುಭ ಹಾರೈಸಿದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಪುರಸ್ಕಾರ – 2026
ಕನ್ನಡದ ಮಹತ್ವದ ಸಾಹಿತಿ, ಚಿಂತಕ, ಪರಿಸರಪ್ರೇಮಿ ಹಾಗೂ ವೈಚಾರಿಕ ಬರಹಗಾರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನವಾದ ಸೆಪ್ಟೆಂಬರ್ 8ರ ಅಂಗವಾಗಿ ಯಶೋಮಾರ್ಗ ಸೇವಾ ಫೌಂಡೇಶನ್ ಹಾಗೂ ಕನ್ನಡಮ್ಮ ಪ್ರಕಾಶನ ಯುವ ಕವಿ ಲಿಖಿತ್ ಹೊನ್ನಾಪುರ ರವರ ಸಾರಥ್ಯದಲ್ಲಿ ಘೋಷಿಸಲಾಗಿದ್ದ 2026ನೇ ಸಾಲಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾದ ಕೃತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕವಿತೆ ವಿಭಾಗದಲ್ಲಿ ಕ್ಷಮಾ ವಿ. ಭಾನುಪ್ರಕಾಶ್ ಅವರ ‘ಭಾವೋನ್ಮಾದಿನಿ’,
ಕಥಾ ವಿಭಾಗದಲ್ಲಿ ರಾಜು ಪುಸ್ತಕಗ್ರಾಮ್ ಅವರ ‘ಲಂಚ್ ಬಾಕ್ಸ್’,
ಕಾದಂಬರಿ ವಿಭಾಗದಲ್ಲಿ ಶಶಿಧರ ಹಾಲಾಡಿ ಅವರ ‘ನದಿ ದಾಟಿ ಬಂದವರು’,
ವಿಮರ್ಶಾ ಸಾಹಿತ್ಯ ವಿಭಾಗದಲ್ಲಿ ರಾಮಕೃಷ್ಣ ಎನ್. ಅವರ ‘ಪುರುಷಾರ್ಥ ವಿಮರ್ಶೆ’,
ಮಕ್ಕಳ ಸಾಹಿತ್ಯ ವಿಭಾಗದಲ್ಲಿ ಅಶ್ವಿನಿ ಶಾನುಭಾಗ್ ಅವರ ‘ಪುಟಾಣಿ ಪಂಟರ್ಸ್’
ವಿಶೇಷ ಕೃತಿ ವಿಭಾಗದಲ್ಲಿ ದರ್ಶನ್ ಜಿ. ಶ್ಯಾನುಭೋಗ್ ಅವರ ‘ಗಂಧರ್ವ: ಅನುಭವದ ಅವಚ್ಛೇದನ’ ಕೃತಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿದ್ದವು.
ತೇಜಸ್ವಿ ಅವರ ಸಾಹಿತ್ಯವು ಓದುಗರಲ್ಲಿ ಪ್ರಶ್ನಿಸುವ ಮನೋಭಾವ, ವೈಚಾರಿಕ ಸ್ವಾತಂತ್ರ್ಯ ಹಾಗೂ ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧದ ಕುರಿತು ಹೊಸ ದೃಷ್ಟಿಕೋನವನ್ನು ಬೆಳೆಸಿದೆ. ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪುರಸ್ಕಾರವು ಸಮಕಾಲೀನ ಕನ್ನಡ ಸಾಹಿತ್ಯದ ವಿಭಿನ್ನ ಧಾರೆಗಳನ್ನು ಗುರುತಿಸುವುದರ ಜೊತೆಗೆ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮಹತ್ವದ ಪ್ರಯತ್ನವಾಗಿದೆ.
ಕನ್ನಡಾಭಿಮಾನದ ಸಂಭ್ರಮಕ್ಕೆ ಕವಿಗೋಷ್ಠಿಯ ಮೆರುಗು
ಕಾರ್ಯಕ್ರಮದಲ್ಲಿ ಜಾಮೀನು ಮೂಲಕ ಕನ್ನಡಾಭಿಮಾನದ ಕಿಚ್ಚನ್ನು ಅಚ್ಚಿಸಿದ ಪೂಜಾ ಹುಳಿಯಾರ್ ಅವರ ಕನ್ನಡಪರ ಅಭಿವ್ಯಕ್ತಿ ವಿಶೇಷ ಗಮನ ಸೆಳೆಯಿತು. ಅವರ ಕನ್ನಡಾಭಿಮಾನದ ಪ್ರಸ್ತುತಿ ಸಭಿಕರಲ್ಲಿ ನಾಡುನುಡಿಯ ಬಗೆಗಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿಗಳು ತಮ್ಮ ಸ್ವರಚಿತ ಕವಿತೆಗಳ ಮೂಲಕ ಸಾಹಿತ್ಯದ ಸೊಬಗನ್ನು ಹಂಚಿಕೊಂಡರು. ಗಾಯಕರ ಕನ್ನಡ ಗೀತೆಗಳು ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ‘ಕನ್ನಡದಂಗಳ’ ಕಾರ್ಯಕ್ರಮವು ಪುಸ್ತಕ ಪ್ರೀತಿ, ಸಾಹಿತ್ಯ ಗೌರವ ಹಾಗೂ ಕನ್ನಡಾಭಿಮಾನವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ಆಯೋಜಕರಾದ ಲಿಖಿತ್ ಹೊನ್ನಾಪುರ, ಶ್ರೀಧರ್, ಇಂಚರ, ಮಹಿಮಾ, ಸ್ಫೂರ್ತಿ, ಸುಪ್ರಿತ ಹಾಗೂ ಸೂರ್ಯ ಸಿಂಹ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸಾಹಿತ್ಯಾಸಕ್ತರು, ಕವಿಗಳು, ಗಾಯಕರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಕನ್ನಡದಂಗಳದ ಮೂಲಕ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಹಿರಿಯ ಸಾಹಿತ್ಯ ಪರಂಪರೆಯನ್ನು ಗೌರವಿಸುವ ಸಾರ್ಥಕ ಪ್ರಯತ್ನಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.











