ವಿಜಯ ದರ್ಪಣ ನ್ಯೂಸ್…..
ರಂಗಭೂಮಿಯ ಸಂಗ ಬಿಡದ ಮಾವೂರಿನ ಲಿಂಗಯ್ಯನವರು!

ಇತ್ತೀಚೆಗಷ್ಟೆ ವಯಸ್ಸು 74 ದಾಟಿದೆ. ಮನೆ ಬಾಗಿಲು ದಾಟಿ ಬರಲು ಹಗ್ಗದ ಆಸರೆ ಇದೆ. ಆದರೆ ಬದುಕಿಗೆ ಆಸರೆಯಾಗಿದ್ದ ಮಡದಿ ಮಡಿದು 26 ವರ್ಷ ಗತಿಸಿದೆ. ಆಸರೆ ಆಗಬೇಕಿದ್ದ ಇಬ್ಬರು ಮಕ್ಕಳು ಬಾಲ್ಯದಲ್ಲೇ ಅಕಾಲಿಕವಾಗಿ ಅಗಲಿದ್ದಾರೆ. ಸದ್ಯ ಕಿರಿದಾದ ಕೋಣೆಯಲ್ಲಿ ಸಂಧ್ಯಾಕಾಲ ಕಳೆಯುತ್ತಿದ್ದಾರೆ. ಆದರೂ ರಂಗಭೂಮಿಯ ಒಲವನ್ನು ಇನ್ನೂ ಉಳಿಸಿಕೊಂಡಿದ್ದಾರೆ.
ಈ ಮೇಲಿನ ಪರೋಕ್ಷ ನುಡಿಗಳು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾವೂರಿನ ಲಿಂಗಯ್ಯ ವೀರಭದ್ರಯ್ಯ ನಂದಿಹಳ್ಳಿಮಠ ಅವರಿಗೆ ಸಂಬಂಧಿಸಿದ್ದು.
ಗುತ್ತಲದ ಸೋಮಯ್ಯನವರು ಸಂಗಮೇಶ್ವರ ನಾಟ್ಯ ಸಂಘದಲ್ಲಿ ಹಾರ್ಮೋನಿಯಂ ಮಾಸ್ತರ್ ಆಗಿದ್ದರು. ಅವರ ಪರಿಚಯದೊಂದಿಗೆ 1973ರ ಸುಮಾರಿಗೆ ಗುಡಗೇರಿ ಬಸವರಾಜರ ಜೊತೆಗೆ ವಿಜಯಪುರದ ಕಡೆಗೆ ತೆರಳಿದ್ದ ಲಿಂಗಯ್ಯನವರಿಗೆ ಮೊದಮೊದಲು ನಾಲ್ಕು ತಿಂಗಳವರೆಗೂ ನಾಟಕಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿರಲಿಲ್ಲ. ಆದರೂ ನಿರಾಶೆ ಮಾಡಿಕೊಳ್ಳಲಿಲ್ಲ.
ಮುಂದೆ ಕರ್ಜಗಿ ಶಂಕರಣ್ಣ ಅವರೊಂದಿಗೆ ವಿಜಯಪುರದ ಕೊರ್ತಿ ಕೊಲ್ಹಾರ ಕಡೆಗೆ ತೆರಳಿದರು. ಅಲ್ಲಿ ಪುಂಡಲೀಕಪ್ಪ ಧುತ್ತರಗಿಯವರ ಸಂಪತ್ತಿಗೆ ಸವಾಲ್ ನಾಟಕದಲ್ಲಿ ಗುಂಡನ ಪಾತ್ರಕ್ಕೆ ಜೀವ ತುಂಬಿದರು. ಅಲ್ಲಿಂದ ಅವರ ರಂಗಭೂಮಿಯ ಪಯಣ ಮುಂದುವರೆಯಿತು.
ಎನ್.ಬಸವರಾಜರ ಕಂಪನಿ, ದೊಡ್ಡವಾಡ ಕಂಪನಿ, ಇಳಕಲ್ ಕಂಪನಿ, ಕಮತಗಿ ಕಂಪನಿಗಳಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡರು. ಯಲಿವಾಳ ಸಿದ್ದಯ್ಯನವರ, ಬೆಳವಡಿ ವಿರಕ್ತಯ್ಯನವರ ಹಾಗೂ ಗುಡಗೇರಿ ಬಸವರಾಜರ ಮಾರ್ಗದರ್ಶನ ಮತ್ತು ಮಂತ್ರೋಡಿಯ ಪಕ್ಕಣ್ಣ ಅರಗೋಳರ ಸಹವಾಸದಿಂದ ಹಲವು ನಾಟಕಗಳಲ್ಲಿ ನಾಯಕ, ಕಥಾ ನಾಯಕ, ಖಳನಾಯಕ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು.
ಚಿತ್ರ ನಟರಾದ ಅಶ್ವಥ್, ಶಕ್ತಿ ಪ್ರಸಾದ, ಸುಧೀರ್ ಅವರಂಥ ಕಲಾವಿದರರೊಂದಿಗೆ ಬಣ್ಣ ಹಚ್ಚಿಕೊಂಡಿದ್ದರು. ತಮ್ಮ ರಂಗಭೂಮಿಯ ಪಯಣದಲ್ಲಿ ಕೊಂಡು ತಂದ ಗಂಡ ಹಾಗೂ ಹಳ್ಳಿ ಹುಡುಗಿ ಮೊಸರು ಗಡಗಿ ನಾಟಕದಲ್ಲಿ ತಂದೆಯ ಪಾತ್ರ, ಶಿವಶರಣೆ ಅಕ್ಕಮಹಾದೇವಿ ನಾಟಕದಲ್ಲಿ ಅಮರಯ್ಯಶಾಸ್ತ್ರೀ, ಬಂಜೆ ತೊಟ್ಟಿಲು ನಾಟಕದಲ್ಲಿ ಬಲವಂತಪ್ಪ, ತವರು ಮನೆ ನಾಟಕದಲ್ಲಿ ಖಳನಾಯಕ ನಾಗರಾಜ ಪಾತ್ರಗಳಲ್ಲಿ ಮಿಂಚಿದರು.
ಗೌಡ್ರ ಗದ್ದಲ ನಾಟಕದ ಬಸಲಿಂಗಪ್ಪಗೌಡ್ರ ಪಾತ್ರದಲ್ಲಿ ಅಭಿನಯಿಸುವಾಗ ಯಲಿವಾಳ ಸಿದ್ದಯ್ಯನವರು ದೇವೇಗೌಡರ ಪಾತ್ರದಲ್ಲಿದ್ದರು. ಒಂದೇ ಒಂದು ಸಂಭಾಷಣೆ ತಪ್ಪು ಉಚ್ಚಾರ ಮಾಡಿದ್ದಕ್ಕೆ ಸಿದ್ದಯ್ಯನವರು ಬೂಟುಗಾಲಿನಿಂದ ಒದ್ದಿದ್ದು ಲಿಂಗಯ್ಯನವರ ಮನಸ್ಸಿಗೆ ಘಾಸಿ ಮಾಡಿತ್ತು. ನಾಟಕ ಮುಗಿದ ಬಳಿಕ ಹತ್ತಾರು ಬಾರಿ ಅದೇ ಸಂಭಾಷಣೆ ತಿದ್ದಿಕೊಂಡು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು. ಮುಂದೆ ಸಿಂಧೂರ ಲಕ್ಷ್ಮಣ, ರೈತನ ಮಕ್ಕಳು, ದುಡ್ಡಿನ ದರ್ಪ, ಸತ್ಯ ಸತ್ತಿತು ನಾಟಕಗಳಲ್ಲಿ ಅಭಿನಯಿಸಿದರು.
ಗದುಗಿನ ಪುಟ್ಟರಾಜ ಗವಾಯಿಗಳ ಕಂಪನಿಯಲ್ಲಿ ನೆಲ್ಲೂರ ನೆಂಬಕ್ಕ, ಶಿವಶರಣೆ ಅಕ್ಕಮಹಾದೇವಿ, ಶಿರೂರಿನ ವಿಶ್ವಭಾರತಿ ರಮ್ಯ ನಾಟಕ ಸಂಘದಲ್ಲಿ ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ, ಶಿರಹಟ್ಟಿ ಫಕೀರೇಶ್ವರದಂತ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಆದರೆ ಇತ್ತೀಚಿನ ಸಾಮಾಜಿಕ ನಾಟಕಗಳಲ್ಲಿರುವ ಅಶ್ಲೀಲ ಸಂಭಾಷಣೆಗಳ ಬಗ್ಗೆ ಬೇಸರಗೊಂಡಿರುವರು.
ಇದೇ ವರ್ಷದ ಬಸವ ಜಯಂತಿ ಸಂದರ್ಭದಲ್ಲಿ ನಮ್ಮೂರು ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಜರುಗಿದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಮಧುವರಸರ ಪಾತ್ರದಲ್ಲಿ ಅವರ ಕಲಾ ಅಭಿವ್ಯಕ್ತಿ ಅನುಭವಿಸಿರುವೆ. ಅದು ನನ್ನ ಹಾಗೂ ನನ್ನಂಥ ಕಲಾ ರಸಿಕರ ಸುದೈವವೂ ಹೌದು.
ಹಿರಿಯರಿಂದ ಬಳುವಳಿಯಾಗಿ ಬಂದಿರುವ ಎರಡೂವರೆ ಎಕರೆ ಜಮೀನನ್ನು ಲಾವಣಿ ನೀಡಿದ್ದಾರೆ. 2010ರಿಂದ ಪ್ರತಿ ತಿಂಗಳು 2500 ರೂ. ಕಲಾವಿದರ ಮಾಸಾಶನ ಪಡೆಯುತ್ತಿದ್ದಾರೆ. ಅವರಿಗೆ ರಂಗಭೂಮಿಯೇ ಆಸ್ತಿ. ವೃದ್ಧಾಪ್ಯದಲ್ಲೂ ರಂಗಭೂಮಿಯ ಸಂಗ ಬಿಡದ ಮಾವೂರಿನ ಲಿಂಗಯ್ಯನವರು ಮತ್ತೆ ಬಸ್ ಟಿಕೆಟ್ ತೆಗೆಸಲು ಸಜ್ಜಾಗುತ್ತಿದ್ದಾರೆ ನಾಟಕದಲ್ಲಿ ಅಭಿನಯಿಸಲು. ಅವರ ಕಲಾ ಪಯಣಕ್ಕೆ ಶುಭ ಹಾರೈಸೋಣ ಕಲಾ ರಸಿಕರಾಗಿ ಮತ್ತು ಕಲಾ ಪೋಷಕರಾಗಿ
🙏🙏
ಚಂದ್ರಮ ಸುಳಿದಾನ

ಉಷೆಯಿಳಿದು ಹೋದಾಗ ನಿಶೆಯಳಿಸ ಬರುತಾನ
ಹೊಂಗನಸ ಬುವಿಯಾಗ ನಸು ನಗುತಾ ಬೀರ್ಯಾನ
ಕಂಗೊಳಿಸಿ ಜಗದಾಗ ಹೊಸಹೊಳಪ ತರುತಾನ
ಸಂಜಿಗೆ ಸುಳಿದಾನ ಚಂದ್ರಾಮ ಧರೆಗೆ
ಬೆಳ್ಳಿ ಹಾಲಿನ ಗಿಂಡಿ ಹೊತ್ತು ತಾ ತರುತಾನ
ತಂಗಾಳಿ ತಂಪಾಗಿ ರಂಗೇರಿಸಿ ಮುಗಿಲಾಗ
ಬಾನಾಡಿ ಬುವಿಗಾಗಿ ಇಳಿದಂಗ ಕಾಣ್ತಾನ
ಮಲ್ಲಿಗೆ ದಂಡೆಯ ಘಮಲನು ಹರಡಿ
ಜೋಗುಳದ ಪದದಾಗ ನಿದಿರೆಯ ನೀಡ್ಯಾನ
ಮೌನದ ಮನಿಯಾಗ ಕತ್ತಲ ಅಳಿಸ್ಯಾನ
ಕಲ್ಪನೆ ಕಡಲಾಗ ಇಳಿಸುತ ತಣಿಸ್ಯಾನ
ಬಿದಿಗಿ ಚಂದ್ರಾಮ ಇಳಿದಾನ ಇಳೆಗೆ
ಬೆಳದಿಂಗಳ ರಾತ್ರೀಲಿ ನಶೆಯೇರಿಸಿ ನಗುತಾನ
ಚುಮು ಚುಮು ಚಳಿಯಾಗ ಹೊಂಬೆಳಕ ಹರಡ್ಯಾನ
ಪ್ರೇಮ ಪಲ್ಲಕ್ಕೀಲಿ ಉತ್ಸವ ಹೊರಟಾನ
ಮೂಡಿ ಬರುತಾನ ದೀವೀಗಿ ಹಿಡಿದು
ರಾಧಿಕಾ ವಿಶ್ವನಾಥ್, ಮಡಿಕೇರಿ







