--Ads--

ಕಣಿ………

On: November 19, 2026 5:47 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕಣಿ………

ಕಣಿ ಹೇಳ್ತೀನಿ ಅಣ್ಣ ಕಣಿ,
ಕಣಿ ಹೇಳ್ತೀನಿ ಅಕ್ಕ ಕಣಿ,

ನೋಟಿನ ಬೆಲೆ ಬದಲಾಗೈತಿ
ಮನ್ಸರ ಬದುಕೂ ಬದಲಾಗ್ತೈತಿ,
ರಾಜನ ಪ್ರಭುತ್ವ ಕುಣಿತೈತಿ,
ಭ್ರಷ್ಟರ ಮನಸ್ಸು ಕುದಿತೈತಿ,
ಬಡವನ ಪ್ರಾಣ ಕುಸಿತೈತಿ.

ಕಣಿ ಹೇಳ್ತೀನಿ ಅಕ್ಕ ಕಣಿ,

ತರಕಾರಿ ಮಾರೌರ್ರು,
ಹಣ್ಣು ಮಾರೌರ್ರು,
ಮೀನು ಕೋಳಿ ಮಾರೌರ್ರು,
ಪಾತ್ರೆ ಪಗಡೆ ಮಾರೌರ್ರು,
ಕೂಲಿ ಮಾಡೌರ್ರು,
ಮಂತ್ರ ತಂತ್ರ ಮಾಡೌರ್ರು,
ಕಟಿಂಗ್ ಮಾಡೌರ್ರು,
ಇಸ್ತ್ರೀ ಮಾಡೌರ್ರು,
ಬದುಕು ಕುಣಿತೈತಿ ,

ಕಂಪ್ಯೂಟರ್ ಮಾರೌರ್ರು,
ಆನ್ ಲೈನ್ ವ್ಯಾಪಾರ ಮಾಡೌರ್ರು,
ಈಗಾಗ್ಲೇ ಕಲಿತೌರ್ರು,
ಒಂದಕ್ಕೆರಡು ಲಾಭ ಮಾಡೌರ್ರು,
ಮನಸ್ಸು ಕುಣಿತೈತಿ.

ಕಣಿ ಹೇಳ್ತೀನಿ ತಾಯಿ ಕಣಿ,

ಕಾಂಚಾನ ಕುಣಿತೈತಿ,
ಮನ್ಸತ್ವ ನೆಗಿತೈತಿ,
ರಾಜಾನ ಕನಸು ದೊಡ್ಡದೈತಿ,
ಬಡವನ ಆಯಸ್ಸು ಸಣ್ಣದೈತಿ,

ನೂರ್ಕಳ್ರು ತಪ್ಪಿಸ್ಕಂಡ್ರು ಅಮಾಯಕನಿಗೆ ಹೊಡಿಬ್ಯಾಡ್ರಿ ಅಂತೈತಿ,
ಕಾಲ ಬದಲಾಗೈತಿ,
ಒಬ್ ಕಳ್ಳನ್ ಹಿಡಿಯಾಕ ಸಾವ್ರ ಅಮಾಯಕ್ರಿಗೆ ಹೊಡ್ದೈತಿ,

ಕಣಿ ಹೇಳ್ತೀನಿ ಯಪ್ಪಾ ಕಣಿ,

ಬಡವಾನ ಮನ್ಸಾಗ ಗೊಂದಲೈತಿ,
ವ್ಯಾಪಾರಿ ಮುಖದಾಗ ನಗುವೈತಿ,
ಹಾಲು ವಿಷವಾಗ್ತೈತಿ,
ಕಾಲ ಉರುಳಾಗ್ತೈತಿ,
ಕಳ್ರು ಸುಳ್ರು ಜಾಸ್ತಿಯಾಗ್ತೈತಿ,
ಪೂಜೆ ಪುನಸ್ಕಾರ ಹೆಚ್ಚಾಗ್ತೈತಿ,

ರಾಜನ್ಗೂ ಕುತೈತಿ,
ಬಡವನ್ಗೂ ಕುತೈತಿ,
ಕಲಿಗಾಲ ಮುಗಿತೈತಿ.
ಹುಷ್ಷಾರ್ರಿ ಅಣ್ಣ ಹುಷ್ಷಾರ್ರಿ ಅಕ್ಕ
ಹುಷ್ಷಾರ್ರಿ ಅಪ್ಪ ಹುಷ್ಷಾರ್ರಿ ಅವ್ವ,

ಬದಲಾಗ್ಲಿ ಮನ್ಸು,
ಬದಲಾಗ್ಲಿ ಮನ್ಷ್ಯ,
ಆಗ ಕಾಣ್ತೈತಿ ಮನ್ಸಾಗೆ ಖುಸಿ.

ವಾಸ್ತವದಲ್ಲಿ…….

ನೀವು ನಮ್ಮ ದೇಶದ ಯಾವುದೇ ದೇವಸ್ಥಾನ, ಮಂದಿರ, ಮಸೀದಿ, ಚರ್ಚ್, ಜೈನ್ ಮಂದಿರ, ಗುರುದ್ವಾರ, ಬೌದ್ಧ ಸ್ತೂಪ ಹೀಗೆ ಎಲ್ಲೇ ಹೋಗಿ ಅವುಗಳ ಮುಂದೆ ಭಿಕ್ಷುಕರು ಭಿಕ್ಷೆ ಬೇಡುತ್ತಲೇ ಇರುತ್ತಾರೆ.

ನೀವು ಯಾವುದೇ ರೈಲ್ವೇ ಸ್ಟೇಷನ್ ಗೆ ಹೋಗಿ, ಬಹುತೇಕ ಕಡೆ ಅನಾಥರಂತೆ ಒಂದು ಬದಿಯಲ್ಲಿ ಯಾರೂ ದಿಕ್ಕಿಲ್ಲದ ಜನ ನಿಮಗೆ ಕಾಣಿಸುತ್ತಾರೆ.

ನೀವು ಯಾವುದೇ ಪ್ರಮುಖ ಬಸ್ ನಿಲ್ದಾಣಗಳಿಗೆ ಹೋಗಿ ನೋಡಿ, ಹೊಟ್ಟೆ ಪಾಡಿನ ವೇಶ್ಯೆಯರು ಇದ್ದೇ ಇರುತ್ತಾರೆ.

ನೀವು ಯಾವುದೇ ಮಧ್ಯಮ ಮತ್ತು ಸಣ್ಣ ಪ್ರಮಾಣದ ಹೋಟೆಲ್ ಗಳಲ್ಲಿ ಗಮನಿಸಿ ನೋಡಿ ಅಲ್ಲಿನ ಕ್ಲೀನಿಂಗ್ ಕೆಲಸಗಳಲ್ಲಿ ಬಾಲ ಕಾರ್ಮಿಕರು ಇದ್ದೇ ಇರುತ್ತಾರೆ.

ನಮ್ಮೆಲ್ಲರ ಬಹುತೇಕರ ಮನೆಗಳಿಗೆ ಪ್ರತಿನಿತ್ಯ ಪತ್ರಿಕೆಗಳನ್ನು ಹಾಕುವುದು ಕೂಡ ಕಾನೂನು ಬಾಹಿರವಾಗಿ ಪುಟ್ಟ ಮಕ್ಕಳೇ ಆಗಿರುತ್ತಾರೆ.

ನಮ್ಮ ದೇಶದ ಚುನಾವಣೆಗಳಲ್ಲಿ ಶೇಕಡ 50% ಕ್ಕಿಂತ ಹೆಚ್ಚು ಜನರು ಮತ ಹಾಕುವುದು ಹಣ, ಹೆಂಡ, ಸೀರೆ, ಪಂಚೆ ತೆಗೆದುಕೊಂಡ ಮೇಲೆಯೇ. ಧರ್ಮ, ಜಾತಿ ನೋಡಿಯೇ….

ಈ ಕೆಲವೇ ಉದಾಹರಣೆಗಳು ಸಾಕು ನಮ್ಮ ದೇಶ ಆಂತರಿಕವಾಗಿ ಎಷ್ಟು ಹಿಂದೆ ಉಳಿದಿದೆ ಎಂದು ಅರ್ಥಮಾಡಿಕೊಳ್ಳಲು.

ಅದರಲ್ಲೂ ಉತ್ತರ ಭಾರತದ ಬಡತನ ಮತ್ತು ಅಪರಾಧದ ಅಂಕಿ ಸಂಖ್ಯೆಗಳು ಎಲ್ಲರನ್ನೂ ಚಿಂತೆಗೀಡುಮಾಡುತ್ತದೆ.

ಆದರೂ ಕೆಲವು ಪಂಡಿತೋತ್ತಮರು ಭಾರತ ವಿಶ್ವದ ಬಲಿಷ್ಠ ನಾಯಕನಾಗಿದೆ ಎಂದೇ ಹೇಳುತ್ತಾರೆ.
ಇದು ಆತ್ಮವಂಚನೆಯಲ್ಲವೆ ?,

ಭಾರತ ವಿಶ್ವ ಗುರುವಾಗಬೇಕೆಂದು ನಮ್ಮೆಲ್ಲರ ಆಶಯವೂ ಕೂಡ.

ಆದರೆ ಕೇವಲ ಕೆಲವೇ ಜನ ಶ್ರೀಮಂತರಾಗಿ, ವಿಮಾನಗಳಲ್ಲಿ ಓಡಾಡುತ್ತಾ, ವಿದೇಶ ಪ್ರವಾಸಗಳನ್ನು ಮಾಡುತ್ತಾ, ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾ, ಭವ್ಯ ಭಂಗಲೆಗಳಲ್ಲಿ ವಾಸಮಾಡುತ್ತಾ, ಪ್ರತಿವರ್ಷ ತಮ್ಮ ಆದಾಯವನ್ನು ಕೋಟಿಗಟ್ಟಲೆ ಹೆಚ್ಚಿಸಿಕೊಳ್ಳುತ್ತಾ ಇದ್ದ ಮಾತ್ರಕ್ಜೆ ಭಾರತ ಶ್ರೀಮಂತ ರಾಷ್ಟ್ರ ಎಂದು ಒಪ್ಪಿಕೊಳ್ಳಲು ಖಂಡಿತ ಸಾಧ್ಯವಿಲ್ಲ.

ಮೇಲೆ ಹೇಳಿದ ಅಸಹಾಯಕರ ಎಲ್ಲಾ ವಿಷಯಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ.

ನಿಜವಾದ ಅಭಿವೃದ್ಧಿ ಎಂದರೆ ಕೇವಲ ತೋರಿಕೆಯ ಪ್ರಗತಿಯಾಗಿರದೆ ಈ ರೀತಿಯ ಸಮಾಜದ ನಿರ್ಲಕ್ಷಿತ ಅಸಂಖ್ಯಾತ, ಅಸಂಘಟಿತ ಜನರ ಜೀವನಮಟ್ಟ ಸುಧಾರಿಸಿದಾಗ ಮಾತ್ರ ನಾವು ಧೈರ್ಯವಾಗಿ ಆತ್ಮಸಾಕ್ಷಿಯಿಂದ ನಮ್ಮ ದೇಶ ಅಭಿವೃದ್ಧಿ ಆಗಿದೆ ಎಂದು ಹೇಳಿಕೊಳ್ಳಬಹುದು.

ಮಾನವೀಯ ಕಾಳಜಿಯ ದಕ್ಷ ನಿಷ್ಕಳಂಕ, ನಿಸ್ವಾರ್ಥ ವ್ಯಕ್ತಿಗಳ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಇದೆಲ್ಲಾ ಸಾಧ್ಯ

ಆ ದಿನಗಳ ನಿರೀಕ್ಷೆಯಲ್ಲಿ
ಒಂದಷ್ಟು ಪ್ರಯತ್ನಗಳೊಂದಿಗೆ ನಿಮ್ಮ ಜೊತೆ………………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now