ವಿಜಯ ದರ್ಪಣ ನ್ಯೂಸ್……
ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ಫ.ಗು.ಹಳಕಟ್ಟಿ ಜೀವನ-ಸಾಧನೆ ಅಭಿಯಾನ ಕಾರ್ಯಕ್ರಮ : ಸಚಿವ ಎಂ ಬಿ ಪಾಟೀಲ

ತಾಂಡವಪುರ ನವಂಬರ್ 19 : ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜೀವನ ಮತ್ತು ಸಾಧನೆಗಳನ್ನು ಸುತ್ತೂರು ಮಠದ ನೇತೃತ್ವ ಮತ್ತು ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರಸಾರ ಮಾಡಲಾಗುವುದು. ಇದರ ಅಂಗವಾಗಿ ಮೈಸೂರಿನಲ್ಲಿ 2027ರ ಜ.3ರಂದು ಪ್ರಥಮ ಕಾರ್ಯಕ್ರಮ ನಡೆಯಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು
ಅವರು ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳನ್ನು ಭೇಟಿ ಆಶೀರ್ವಚನ ಪಡೆದರು. ಈ ಸಂದರ್ಭದಲ್ಲಿ ಅವರು ಹಳಕಟ್ಟಿ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಸಂಪಾದಿತ 6 ಸಂಪುಟಗಳನ್ನು ಶ್ರೀಗಳಿಗೆ ಸಮರ್ಪಿಸಿ ಸಚಿವರು ಆಶೀರ್ವಾದ ಪಡೆದರು
ಕಾರ್ಯಕ್ರಮದ ರೂಪುರೇಷೆಗಳನ್ನು ಸಚಿವರು ಸ್ವಾಮೀಜಿ ಜತೆ ಚರ್ಚೆ ನಡೆಸಿದರು. ಹಳಕಟ್ಟಿ ಅವರ ಜೀವನ ಮತ್ತು ಸಾಧನೆ ಕುರಿತ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಎಲ್ಲ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಮತ್ತು ಉಪನ್ಯಾಸಗಳು ನಡೆಯಲಿವೆ. ಏಪ್ರಿಲ್ 26ರಂದು ವಿಜಯಪುರದಲ್ಲಿ ಕೊನೆಯ ಜಿಲ್ಲಾ ಮಟ್ಟದ ಸಮಾರಂಭ ನಡೆಯಲಿದೆ. ಅಂತಿಮವಾಗಿ ರಾಜ್ಯ ಮಟ್ಟದ ಕಾರ್ಯಕ್ರಮವು 2027ರ ಮೇ 16ರಂದು ಬೆಂಗಳೂರಿನಲ್ಲಿ ಜರುಗಲಿದೆ. ಅಂದು, “ಶಿವಾನುಭವ” ಪತ್ರಿಕೆಯ ಎಲ್ಲಾ 35 ಸಂಪುಟಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜತೆಯಲ್ಲಿ ಹಿರಿಯ ವಿದ್ವಾಂಸ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗೂ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಪದಾಧಿಕಾರಿಗಳು, ಬೆಂಗಳೂರು ನಗರದ ಮಾಜಿ ಉಪ ಮೇಯರ್ ಸಿ ಎಸ್ ಪುಟ್ಟರಾಜು, ಮುಖಂಡರಾದ ಮಲ್ಲಿಕಾರ್ಜುನ, ಮಹಾಂತೇಶ ಬಿರಾದರ ವೀರಶೈವ ಮುಖಂಡ ವರುಣ ಮಹೇಶ್ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು











