ವಿಜಯ ದರ್ಪಣ ನ್ಯೂಸ್….
ಕನ್ನಡ ಸಾಹಿತ್ಯ ಸಮ್ಮೇಳನ ಅದ್ಯಕ್ಷರಿಗೆ ಶಾಸಕ ಬಿ.ಎನ್.ರವಿಕುಮಾರ್ ಅಧಿಕೃತ ಆಹ್ವಾನ

ಶಿಡ್ಲಘಟ್ಟ : ಕನ್ನಡ ಸಾಹಿತ್ಯ ಸಮ್ಮೇಳನಗಳಂತಹ ಕನ್ನಡ ಪರ ಕಾರ್ಯಕ್ರಮಗಳು, ಚಟುವಟಿಕೆಗಳು ಪೂರಕವಾಗಿವೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಶಾಸಕ
ಬಿ.ಎನ್.ರವಿಕುಮಾರ್ ಮನವಿ ಮಾಡಿದರು.
ನವೆಂಬರ್ 24ರಂದು ನಗರದಲ್ಲಿ ನಡೆಯುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡ ಪಂಡಿತ, ನಿವೃತ್ತ ಶಿಕ್ಷಕ ವೈ.ಎನ್.ದಾಶರಥಿ ನಿವಾಸಕ್ಕೆ ತೆರಳಿ ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಫಲ ತಾಂಬೂಲ ವೀಳ್ಯ ನೀಡಿ ಅಧಿಕೃತವಾಗಿ ಆಹ್ವಾನ ನೀಡಿ, ಸಮ್ಮೇಳನ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.
ವೈ.ಎನ್.ದಾಶರಥಿ ಅವರು 34 ವರ್ಷಗಳ ಕಾಲ ಪ್ರೌಢ ಶಾಲಾ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ “ಶಾಲೆಗೊಂದು ಕನ್ನಡ” ಕಾರ್ಯಕ್ರಮ ಆರಂಭಿಸಿ, ಶಾಲೆಗಳಿಗೆ ಕಿರುಹೊತ್ತಿಗೆಗಳನ್ನು ವಿತರಿಸಿದ್ದರು ,ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕಾರ್ಯದರ್ಶಿಯಾಗಿ ತಮ್ಮ ಇತಿ ಮಿತಿಯಲ್ಲಿಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಆ ಮೂಲಕ ಅನೇಕರಿಗೆ ಕನ್ನಡ ಚಟುವಟಿಕೆಗಳಲ್ಲಿ ಭಾಗವಹಿಸಲು, ಕನ್ನಡ ಸಾಹಿತ್ಯ ಓದಲು ಪ್ರೇರೇಪಿಸಿದವರು ಎಂದರು.
ಸುಮಾರು 11 ತಿಂಗಳು ಅಮೆರಿಕದಲ್ಲಿ ನೆಲೆಸಿದ್ದಾಗಲೂ ಅಲ್ಲಿನ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಸೇವೆಗಾಗಿ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಗಗನಸಿಂಧು,
ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ,ಬಿಇಒ ಪಿ.ಸ್ವಾಮಿ, ಚಿಮುಲ್ ನಿರ್ದೇ ಶಕ ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ತಾಲ್ಲೂಕು ಕಸಾಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಕಾರ್ಯದರ್ಶಿ ಟಿ.ಟಿ.ನರಸಿಂಹಪ್ಪ ಹಾಗು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.










