ವಿಜಯ ದರ್ಪಣ ನ್ಯೂಸ್……
ಪಾಲೀಶ್ ಮಾಡಿಕೊಡುವ ನೆಪದಲ್ಲಿ, 30 ಗ್ರಾಂ ಚಿನ್ನ ಕದ್ದ ಕಳ್ಳರು.

ವಿಜಯಪುರ: ಪಾಲೀಶ್ ಮಾಡಿಕೊಡುವ ನೆಪದಲ್ಲಿ, ಬಂದಿದ್ದ ಕಳ್ಳರು, ಪಾತ್ರೆಗಳು, ಬೆಳ್ಳಿ ಚೈನುಗಳನ್ನು ಪಾಲೀಶ್ ಮಾಡಿಕೊಟ್ಟು, ಪಾಲೀಶ್ ಗಾಗಿ ಕೊಟ್ಟ 30 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ 17 ನೇ ವಾರ್ಡಿನ ಪಂಚಮುಖಿ ಗಣಪತಿ ದೇವಾಲಯದ ರಸ್ತೆಯಲ್ಲಿರುವ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಬಂದಿರುವ ಕಳ್ಳರು, ಮೊದಲಿಗೆ, ನಿಮ್ಮ ಮನೆಯಲ್ಲಿನ ಪಾತ್ರೆಗಳನ್ನು ಸುಲಭವಾಗಿ ತೊಳೆಯುವ ಪೌಡರ್ ನಮ್ಮಲ್ಲಿದೆ. ಪರೀಕ್ಷಿಸಲು, ಯಾವುದಾದರೂ ಪಾತ್ರೆ ಕೊಡಿ ಎಂದು ಕೇಳಿದ್ದಾರೆ.
ಅವರ ಮಾತನ್ನು ನಂಬಿ ಪಾತ್ರೆಯನ್ನು ಕೊಟ್ಟ ಮಹಿಳೆ, ಪಾತ್ರೆಯನ್ನು ಶುಭ್ರವಾಗಿ ತೊಳೆದಿರುವುದನ್ನು ಕಂಡು, ತನ್ನ ಕಾಲಿನಲ್ಲಿದ್ದ ಬೆಳ್ಳಿ ಚೈನುಗಳು ಕೊಟ್ಟು, ಪಾಲೀಶ್ ಮಾಡಿಸಿದ್ದಾರೆ. ನಂತರ, ನಮ್ಮಲ್ಲಿ ಬಂಗಾರದ ಒಡವೆಗಳನ್ನೂ ಪಾಲೀಶ್ ಮಾಡುವ ಪೌಡರ್ ಇದೆ ಎಂದು ಹೇಳಿ, ಚೈನ್, ಡಾಲರ್, ಒಂದು ಜೊತೆ ಓಲೆ, ಜುಮುಕಿ ಒಟ್ಟು 30 ಗ್ರಾಂ ತೆಗೆದುಕೊಂಡು, ಪಾಲೀಶ್ ಮಾಡಿರುವ ನೆಪದಲ್ಲಿ, ಕವರೊಂದನ್ನು ಮಹಿಳೆಗೆ ಕೊಟ್ಟು, ಇದನ್ನು 5 ನಿಮಿಷ ನಂತರ ಹೊರಗೆ ತೆಗೆಯಿರಿ, ನಾವು ಮುಂದಿನ ವಾರ ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ.

ಮಹಿಳೆ, 5 ನಿಮಿಷದ ನಂತರ ಅವರು ಕೊಟ್ಟಿದ್ದ ಕವರ್ ತೆರೆದು ನೋಡಿದಾಗ, ಅದರಲ್ಲಿ ಪೌಡರ್ ತುಂಬಿದ್ದ ಒಂದು ಡಬ್ಬಿ ಇರುವುದನ್ನು ಕಂಡು, ಚೀರಾಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ, ಸ್ಥಳೀಯರು, ತಕ್ಷಣ 112 ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ, ಕಳ್ಳರು, ಪರಾರಿಯಾಗಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಒಡವೆಗಳನ್ನು ಪಾಲೀಶ್ ಮಾಡಿಸಲು ಹೋಗಿ, ಚಿನ್ನಾಭರಣ ಕಳೆದುಕೊಂಡಿರುವ ಮಹಿಳೆ, ಒಡವೆಗಾಗಿ ಕಣ್ಣೀರಿಡುತ್ತಿದ್ದಾರೆ.
ವಿಜಯಪುರ ಪೊಲೀಸರು, ಸ್ಥಳಕ್ಕೆ ಬಂದು, ಘಟನೆಯ ಕುರಿತು, ಮಹಿಳೆಯರಿಂದ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು, ಕಳ್ಳರಿಗಾಗಿ ಹುಡುಕಾಡುತ್ತಿದ್ದಾರೆ.










