--Ads--

ಮೈಸೂರಿನ ಎಲ್ಲೆಡೆ ಶ್ರೀರಾಮನವಮಿ ಸಂಭ್ರಮ: ಮಜ್ಜಿಗೆ ಪಾನಕ ವಿತರಣೆ 

On: March 27, 2026 3:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಮೈಸೂರಿನ ಎಲ್ಲೆಡೆ ಶ್ರೀರಾಮನವಮಿ ಸಂಭ್ರಮ: ಮಜ್ಜಿಗೆ ಪಾನಕ ವಿತರಣೆ 

ಪಾಂಡವಪುರ: ಮಾರ್ಚ್ 27 ದೇಶಾದ್ಯಂತ ಇಂದು ಶ್ರೀ ರಾಮನವಮಿಯ ಸಂಭ್ರಮ ಮನೆ ಮಾಡಿದ್ದು, ಸಾಂಸ್ಕೃತಿಕ ನಗರಿಯಲ್ಲೂ ಸಹ ಸಂಭ್ರಮದಿಂದ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದ್ದು, ರಾಮ ಮಂದಿರಗಳಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ಭಕ್ತರಿಗೆ ಪಾನಕ ಹಾಗೂ ಕೊಸಂಬರಿ ವಿತರಿಸಿ ಸಂಭ್ರಮಿಸಿದರು.

ಸಾಂಸ್ಕೃತಿಕ ನಗರಿಯ ವಿವಿಧ ಬಡಾವಣೆಗಳಲ್ಲಿ ಶ್ರೀರಾಮ ಮಂದಿರಗಳಿದ್ದು, ಬೆಳಗಿನಿಂದಲೇ ಮಂದಿರಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ ನೆರವೇರಿಸಿ ನಂತರ ಭಕ್ತಾದಿಗಳಿಗೆ ಪಾನಕ ಹಾಗೂ ಮಜ್ಜಿಗೆಯನ್ನು ವಿತರಿಸಲಾಯಿತು. ಮೈಸೂರಿನ ಶಿವರಾಂ ಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀರಾಮ ಮಂದಿರದಲ್ಲಿ ಕಳೆದ 100ಕ್ಕೂ ಹೆಚ್ಚು ವರ್ಷಗಳಿಂದ ಪೂಜೆ ಸಲ್ಲಿಸಿತ್ತಿರುವುದು ವಿಶೇಷ. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ರಾಮ ನವಮಿ ಅಂಗವಾಗಿ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಇದೇ ಜಾಗದಲ್ಲಿ ರಾಮ ನವಮಿಯನ್ನು ಆಚರಿಸುತ್ತ ಬಂದಿದ್ದು, ಅದನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಇಂದಿನಿಂದ ಪ್ರಾರಂಭಿಸಿ ಸುಮಾರು 10 ದಿನಗಳ ಕಾಲ ರಾಮೋತ್ಸವವನ್ನು ಆಚರಿಸಲಾಗುತ್ತದೆ. ಶ್ರೀ ರಾಮನ ಪಟ್ಟಾಭಿಷೇಕದಲ್ಲಿ 1000 ಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆಂದರು.

ಈ ಪೂಜಾ ಕಾರ್ಯಕ್ರಮದ ಜೊತೆಗೆ ಪಕ್ಕದ ಭವನದಲ್ಲಿ 10 ದಿನಗಳ ಕಾಲ ಸಂಗೀತೋತ್ಸವ ನಡೆಸಲಾಗುತ್ತದೆ. ದೇಶ ವಿದೇಶಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ನಂತರ ಹನುಮಂತೋತ್ಸವ, ಶಯನೋತ್ಸವ ನಡೆಯಲಿದ್ದು, ಕೊನೆಯಲ್ಲಿ ಶಂಕರ ಜಯಂತಿ ಉತ್ಸವದೊಂದಿಗೆ ಈ ವರ್ಷದ ರಾಮೋತ್ಸವವನ್ನು ಸಮಾಪ್ತಿ ಮಾಡಲಾಗುತ್ತದೆ.

ಇಂದು ಬೆಳಗ್ಗಿನಿಂದಲೇ ದೇವರಿಗೆ ಅಭಿಷೇಕ, ಪೂಜೆ ನೆರವೇರಿಸಲಾಗುತ್ತಿದ್ದು, ರುದ್ರಾಭಿಷೇಕ, ಅಷ್ಟೋತ್ತರ ಕೊನೆಯದಾಗಿ ದೇವರಿಗೆ ಮಂಗಳಾರತಿ ಮಾಡಿ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸಲಾಗುತ್ತಿದೆ ಎಂದು ದೇವಸ್ಥಾನದ ಪ್ರಮುಖ ಡಾ.ಶ್ರೀರಾಮ್ ತಿಳಿಸಿದರು.

ಉದಯಗಿರಿಯ ಶ್ರೀರಾಮಮಂದಿರದಲ್ಲಿ 32ನೇ ವರ್ಷದ ರಾಮನವಮಿ ಉತ್ಸವ ನಡೆಯಿತು. ಇದರ ಅಂಗವಾಗಿ ಮುಂಜಾನೆಯಿಂದ ಪುಣ್ಯಾಹ, ನಾಂದಿ ಕಲಶ ಪ್ರತಿಷ್ಠಾಪನೆ ಮಹಾಸಂಕಲ್ಪ, ನವಗ್ರಹ ಹೋಮ ಮತ್ತು ಶ್ರೀರಾಮತಾರಕ ಹೋಮ ನಡೆಯಿತು. ಚಾಮರಾಜ ಮೊಹಲ್ಲಾದ ಜಾನಕಿ ರಾಮಮಂದಿರದಲ್ಲಿ ಜಾನಕಿ ರಾಮ ಸೇವಾ ಸಮಿತಿ ವತಿಯಿಂದ ರಾಮ ನವಮಿ ಪ್ರಯುಕ್ತ ವಿಶೇಷಪೂಜೆ, ಪ್ರಸಾದ ವಿನಿಯೋಗ ಮುಂಜಾನೆ ನಡೆಯಿತು.

ಸಂಜೆ ಕಲಾವಿದರಿಂದ ದೇವರನಾಮ ಪ್ರಸ್ತುತಗೊಂಡಿತು. ಶಿವಛತ್ರಪತಿ ಅಂಬಾಭವಾನಿ ಟ್ರಸ್ಟ್‌ ವತಿಯಿಂದ ರಾಮನವಮಿ ಅಂಗವಾಗಿ ಮುಂಜಾನೆ ವೀರಾಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ತಾರಕ ಹೋಮ, ಭಜನೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ರಾಮಕೃಷ್ಣನಗರದಲ್ಲಿ ರಾಮನವಮಿ ಪ್ರಯುಕ್ತ ಶ್ರೀರಾಮ ಪಟ್ಟಾಭಿಷೇಕ ನಡೆಯಿತು.

ಕೆ.ಟಿ.ಸ್ಟ್ರೀಟ್‌ ಗರಿಗೇಶ್ವರಿ ಚೌಕದಲ್ಲಿ ಕರ್ನಾಟಕ ವೀರಕೇಸರಿ ವೇದಿಕೆ ವತಿಯಿಂದ ರಾಮನವಮಿ ಪೂಜಾ ಕಾರ‍್ಯಕ್ರಮ ನಡೆಯಿತು. ಸೀತಾರಾಮ ದೇವಸ್ಥಾನ ಟ್ರಸ್ಟ್‌ ವತಿಯಿಂದ ರಾಮನವಮಿ ಮಹೋತ್ಸವ ಪ್ರಯುಕ್ತ ಸಭಾ ಅನುಜ್ಞೆ, ರಕ್ಷಾ ಬಂಧನ, ಅಂಕುರಾರ್ಪಣೆ, ಗಣಪತಿ ಹೋಮ, ಮಹಾಮಂಗಳಾರತಿ ದೇವಸ್ಥಾನದ ಆವರಣದಲ್ಲಿ ಆಯೋಜನೆಗೊಂಡಿತು. ಸರಸ್ವತಿಪುರಂನ ತೆಂಗಿನ ತೋಪಿನ ಸಮುದಾಯ ಭವನದಲ್ಲಿ ಶಂಕರ ಜಯಂತಿ ಸಭಾ ವತಿಯಿಂದ ರಾಮ ನವಮಿ ನಡೆಯಿತು.

ಈ ಸಂದರ್ಭ ಶಂಕರ ಭಜನಾ ಮಂಡಳಿ ಅವರಿಂದ ಭಕ್ತಿಗೀತೆ ಗಾಯನ, ವಿಜೇಶ್‌ ಆರ್‌.ಸಿ.ವೃಂದದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಜೆ ಪ್ರಸ್ತುತಗೊಂಡಿತು. ನಾರಾಯಣ ಶಾಸ್ತ್ರೀ ರಸ್ತೆಯಲ್ಲಿರುವ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಶ್ರೀರಾಮ ನವಮಿ ಸಂಗೀತೋತ್ಸವ ನಡೆಯಿತು.

ಕೃಷ್ಣಮೂರ್ತಿ ಪುರಂನ ಭಗಿನೀ ಸೇವಾ ಸಮಾಜ ವತಿಯಿಂದ ನಿತ್ಯೋತ್ಸವ ಭವನದಲ್ಲಿ ರಾಮೋತ್ಸವ ಅಂಗವಾಗಿ ಸಂಗೀತ ಹಬ್ಬ ಸಂಜೆ ನಡೆಯಿತು. ಅರಮನೆ ಕೋಟೆ ಉತ್ತರ ಬಾಗಿಲು ಬಳಿ ಇರುವ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಮಹೋತ್ಸವ ನಡೆಯಿತು. ರಾಮಕೃಷ್ಣನಗರದ ಗಣಪತಿ ದೇವಸ್ಥಾನದ ರಜತ ಸಭಾಮಂಟಪದಲ್ಲಿ ರಾಮೋತ್ಸವ ನಡೆಯಿತು.

 

 

 

WhatsApp

Join Now

Telegram

Join Now

Instagram

Join Now