ವಿಜಯ ದರ್ಪಣ ನ್ಯೂಸ್……
ದೈನಂದಿನ ಜೀವನದಲ್ಲಿ ಬದಲಾವಣೆಗಳ ಮೂಲಕ ಸಾಕಷ್ಟು ನೀರು ಉಳಿಸಬಹುದು: ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ

ಶಿಡ್ಲಘಟ್ಟ : ನೀರಿನ ಮರುಬಳಕೆ, ಮಳೆ ನೀರು ಕೊಯ್ಲು ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಜತೆಗೆ ನಮ್ಮ ದೈನಂದಿನ ಜೀವನದಲ್ಲಿ ಬದಲಾವಣೆಗಳ ಮೂಲಕ ಮನೆಗಳಲ್ಲಿ ಸಾಕಷ್ಟು ನೀರು ಉಳಿಸಬಹುದು
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ತಿಳಿಸಿದರು.
ನಗರದ ನ್ಯಾಯಾಲಯದ 2 ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ರಾಹಕರ ದಿನ ಮತ್ತು ವಿಶ್ವ ಜಲ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ, ನಾವು ವ್ಯರ್ಥ ಮಾಡುವ ಪ್ರತಿಯೊಂದು ನೀರಿನ ಹನಿಯೂ ಭವಿಷ್ಯದ ದೊಡ್ಡ ಬರಗಾಲಕ್ಕೆ ಕಾರಣವಾಗಬಹುದು, ನೀರಿನ ಸಂರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ ಅದು ಪ್ರತಿ ಮನೆಯ ಜವಾಬ್ದಾರಿ ಮುಂದಿನ ಪೀಳಿಗೆಗೆ ನೀರು ಉಳಿಸಿಕೊಡುವುದು ನಮ್ಮ ಆದ್ಯ ಕರ್ತ ವ್ಯವಾಗಲಿ ಎಂದು ಹೇಳಿದರು.
ನೀರು ಇಲ್ಲದಿದ್ದರೆ ಜೀವನವೇ ಇಲ್ಲ ಎಂಬ ಮಾತು ಎಷ್ಟು ಸತ್ಯವೊ, ನೀರನ್ನು ವ್ಯರ್ಥ ಮಾಡುವುದು ಅಷ್ಟೇ ದೊಡ್ಡ ಅಪರಾಧ ನಾವು ಮನೆಯ ಹಂತದಲ್ಲೇ ನೀರನ್ನು ಉಳಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ ಸಿ.ಎಸ್. ಅವರು ಮಾತನಾಡಿ, ನಾವು ದುಡಿಮೆಯಿಂದ ಸಂಪಾದಿಸಿದ ಹಣದಿಂದ ಖರೀದಿಸುವ ಸಾಮಾನುಗಳು ನಮ್ಮ ಸುರಕ್ಷತೆಗೆ ಧಕ್ಕೆ ತರುವಂತಿಲ್ಲ ಮೋಸವಾದರೆ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಬೇಕು ನಮ್ಮ ಹಕ್ಕುಗಳನ್ನು ತಿಳಿದು, ಜಾಗೃತರಾಗಬೇಕು ಎಂದು ಹೇಳಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚಾಗುತ್ತಿದೆ ಇಂತಹ ಸಮಯದಲ್ಲಿ ನಕಲಿ ವಸ್ತುಗಳು, ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಡೇಟಾ ಸುರಕ್ಷತೆಯ ಬಗ್ಗೆ ಗ್ರಾಹಕರು ಹೆಚ್ಚು ಎಚ್ಚರದಿಂದಿರಬೇಕು. ‘ಗ್ರಾಹಕನೇ ಮಾರುಕಟ್ಟೆಯ ರಾಜ ‘ಎಂಬ ಮಾತು ನಿಜವಾಗಬೇಕಾದರೆ, ನಮಗೆ ನಮ್ಮ ಹಕ್ಕುಗಳ ಅರಿವಿರಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಖಾಜಾ, ರೂಪ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್,ಸತ್ಯನಾರಾಯಣ,ಆರ್.ಮುನಿಶಾಮಿಗೌಡದ್ಯಾವಪ್ಪ,ರಾಘವೇಂದ್ರ, ಶಾಬುದ್ದೀನ್ ಮುಂತಾದವರು ಹಾಜರಿದ್ದರು.











