ವಿಜಯ ದರ್ಪಣ ನ್ಯೂಸ್…..
ಅದ್ದೂರಿಯಾಗಿ ನಡೆದ ಶ್ರೀದೌಪತಮ್ಮ ಹಾಗು ಶ್ರೀಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ

ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರಿನಲ್ಲಿ ಶ್ರೀದೌಪತಮ್ಮ ಹಾಗು ಶ್ರೀಧರ್ಮರಾಯಸ್ವಾಮಿ ದೇವರ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಗ್ರಾಮದ ರಾಜಬೀದಿ ಹಾಗು ಪ್ರಮುಖ ವೃತ್ತಗಳಲ್ಲಿ ಕರಗವು ಸಾಗಿತು, ತಮಟೆ ವಾದ್ಯ ಹಾಗು ಮಂಗಳವಾದ್ಯಗಳ ನಾದಕ್ಕೆ ತಕ್ಕಂತೆ ಕರಗದ ಪೂಜಾರಿ ಮೇಲೂರಿನ ಅಭಿಲಾಶ್ ಅವರು ಎರಡನೇ ಬಾರಿ ಹೂವಿನ ಕರಗವನ್ನು ಹೊತ್ತು ನರ್ತಿಸಿ, ಭಕ್ತರನ್ನು ರಂಜಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ, ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು. ಕರಗ ಮಹೋತ್ಸವದ ಅಂಗವಾಗಿ ಗ್ರಾಮದ ರಾಜಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ವಹ್ನಿಕುಲ ಕ್ಷತ್ರಿಯ ತಿಗಳ ಸಮುದಾಯದ ವೀರಕುಮಾರರು, ಗೋವಿಂದ ನಾಮಸ್ಮರಣೆಯೊಂದಿಗೆ ಕರಗವನ್ನು ಹಿಂಬಾಲಿಸಿ, ಡೀ, ಡಿಕ್ ಎಂದು ಕತ್ತಿಗಳ ಮುಖಾಂತರ ಆಲಗು ಸೇವೆಯನ್ನು ಸಮರ್ಪಣೆ ಮಾಡಿದರು.

ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ ,ಗಂಗನಹಳ್ಳಿ ,
ಮುತ್ತೂರು, ಅಪ್ಪೇಗೌಡನಹಳ್ಳಿ,ಭಕ್ತರಹಳ್ಳಿ, ಬೆಳ್ಳೂಟಿ,
ಹಂಡಿಗನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಕರಗದ ವೀಕ್ಷಣೆಯನ್ನು ಮಾಡಿದರು,ಕರಗ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಶಾಸಕ ಬಿ.ಎನ್.ರವಿಕುಮಾರ್ ,ಎಬಿಡಿ ಟ್ರ್ರಸ್ಟ್ ಅದ್ಯಕ್ಷ ರಾಜೀವ್‌ಗೌಡ ಸೇರಿದಂತೆ ವಿವಿಧ ಗಣ್ಯರು ಕರಗ ಮಹೋತ್ಸವಕ್ಕೆ ಆಗಮಿಸಿ ಶುಭಕೋರಿದರು.
ಹೂವಿನ ಕರಗ ಸಂಚರಿಸಿದ ಬೀದಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಮನೆಗಳ ಮುಂದೆ ರಂಗೋಲಿ ಗಳನ್ನು ಬಿಡಿಸಿ, ಭಕ್ತಿ ಭಾವದಿಂದ ಮಲ್ಲಿಗೆ ಹೂಗಳನ್ನು ಎರಚಿ ಕರಗವನ್ನು ಪೂಜಿಸುದರೊಂದಿಗೆ ಆಶೀರ್ವಾದ ಪಡೆದುಕೊಂಡರು.










