--Ads--

ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನದಂದು “ಸಮಾನತೆಯ ದಿನ” ವನ್ನಾಗಿ ಸರ್ಕಾರ ಘೋಷಣೆ : ಶಾಸಕ ಬಿ.ಎನ್.ರವಿಕುಮಾರ್ 

On: April 14, 2026 4:46 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನದಂದು
“ಸಮಾನತೆಯ ದಿನ” ವನ್ನಾಗಿ ಸರ್ಕಾರ ಘೋಷಣೆ : ಶಾಸಕ ಬಿ.ಎನ್.ರವಿಕುಮಾರ್ 

ಶಿಡ್ಲಘಟ್ಟ : ಸಂವಿಧಾನದ ಆಶಯವಾದ ಸಮಾನತೆಯು ಎಲ್ಲರಿಗೂ ಸಿಗಲಿ ಎಂಬ ಕಾರಣದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನದಂದು
“ಸಮಾನತೆಯ ದಿನ” ವನ್ನಾಗಿ ಸರ್ಕಾರವು ಘೋಷಿಸಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬಾ ಜಗಜೀವನ್ ರಾಂ ಅವರ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ದೇಶದ ಎಲ್ಲಾ ವರ್ಗದವರಿಗೂ ಮುಖ್ಯವಾಗಿ ಶೋಷಿತರು, ಧಮನಿತರು ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಲು, ಎಲ್ಲರಂತೆ ಸ್ವಾಭಿಮಾನದಿಂದ ಸಮಾನತೆಯ ಬದುಕು ನಡೆಸಲು ಅನುಕೂಲ ಆಗುವಂತೆ ಶ್ರೇಷ್ಠ ಸಂವಿಧಾನವನ್ನು ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇ ಚುನಾವಣೆಯಲ್ಲಿ ಸೋಲಿಸಿದ್ದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಯಾರು ಸೋಲಿಸಿದರೋ ಅದೇ ಜನ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟು ಪೂಜಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ದೇಶದ 140 ಕೋಟಿ ಮಂದಿಗೆ ಮತದಾನದ ಹಕ್ಕು ಸಿಕ್ಕಿದೆ ಎಂದರೆ, ಅದಕ್ಕೆ ಅಂಬೇಡ್ಕರ್ ಅವರ “ಸಂವಿಧಾನ” ವೇ ಕಾರಣ ಎಂದರು.

ನಾನು ಒಬ್ಬ ಸಾಮಾನ್ಯ ರೈತನ ಮಗನಾಗಿದ್ದರೂ, 7ನೇ ತರಗತಿಯಷ್ಟೆ ಓದಿದ್ದರೂ ಕೂಡ ಈ ಕ್ಷೇತ್ರದ ಶಾಸಕನಾಗಿದ್ದೇನೆ ಎಂದರೆ ಅದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ‘ಸಂವಿಧಾನ’ ದಿಂದಾಗಿ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಈ ಕ್ಷೇತ್ರದ ಮತದಾರರ ಆಶೀರ್ವಾದದಿಂದಾಗಿ ಎಂದು ನುಡಿದರು.

ಪ್ರದಾನಿ ನರೇಂದ್ರ ಮೋದೀಜಿ ಅವರು ಈ ತಿಂಗಳಲ್ಲಿ ವಿಶೇಷ ಅಧಿವೇಷನ ಕರೆದಿದ್ದು ಸಂಸತ್ ನಲ್ಲಿ “ಮಹಿಳಾ ಮೀಸಲು ವಿಧೇಯಕ”ವನ್ನು ಮಂಡಿಸಲಿದ್ದಾರೆ, ಇದರಿಂದ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಸಿಗಲಿದೆ ,ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಜಾರಿ ಮಾಡಿ ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿದ್ದರು ಎಂದರು.

ನಾವು ‘ಡಾ.ಬಿ.ಆರ್.ಅಂಬೇಡ್ಕರ್’ ಅವರ ಹಾಗೂ ‘ಬಾಬು ಜಗಜೀವನ್ ರಾಂ’ ಅವರ ಜಯಂತಿಯನ್ನು ಆಚರಿಸುವುದರ ಜತೆಗೆ, ಅವರ ತತ್ವ ಆದರ್ಶಗಳನ್ನು ನಮ್ಮ ಬದುಕಿನ ಉದ್ದಕ್ಕೂ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಮತ್ತು ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಅಂಬೇಡ್ಕರ್ ಮತ್ತು ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಲೆಪ್ಟಿನೆಂಟ್ ನರಸಿಂಹಮೂರ್ತಿ ಪ್ರಧಾನ ಭಾಷಣ ಮಾಡಿದರೆ, ಎ.ಆರ್.ಎಂ ಪಿಯು ಕಾಲೇಜು ಪ್ರಿನ್ಸಿಪಾಲ್ ಮೂರ್ತಿ ಸಾಮ್ರಾಟ್ ಅವರು ಬಾಬು ಜಗಜೀವನ್ ರಾಂ ಜೀವನ ಚರಿತ್ರೆ ಕುರಿತು ಮುಖ್ಯ ಭಾಷಣ ಮಾಡಿದರು.

ಅಂತರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಮಳ್ಳೂರು ಎಂ.ರಾಕೇಶ್, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳು, ಉತ್ತಮ ಕಾರ್ಯನಿರ್ವಹಿಸುತ್ತಿರುವ 5 ಮಂದಿ ಪೌರಕಾರ್ಮಿಕರು, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಾರಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ಕಾವೇರಿ ಹ್ಯಾಂಡ್ ಲೂಮ್ಸ್ ನಿಗಮದ ಅಧ್ಯಕ್ಷ ಬಿ.ಜೆ.ಗಣೇಶ್, ವಕೀಲರ ಸಂಘದ ತಾಲ್ಲೂಕು ಅದ್ಯಕ್ಷ ನಾರಾಯಣಸ್ವಾಮಿ , ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಸಫಾಯಿ ಕರ್ಮಚಾರಿ ಪುನರ್ವತಿ ಸಮಿತಿ ಸದಸ್ಯ ಸಿ.ವಿ.ಲಕ್ಷ್ಮಣರಾಜು, ತಹಶೀಲ್ದಾರ್ ಎನ್.ಗಗನಸಿಂಧು, ಇಒ ಹೇಮಾವತಿ, ನಗರಸಭೆ ಪೌರಾಯುಕ್ತೆ ಜಿ.ಅಮೃತ, ಟಿಎಚ್ಒ ಡಾ.ವೆಂಕಟೇಶ್ ಮೂರ್ತಿ,ಬಿಇಒ ನರೇಂದ್ರ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ಎಸ್.ಐ ವೇಣುಗೋಪಾಲ್ ಮುಂತಾದವರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now