ವಿಜಯ ದರ್ಪಣ ನ್ಯೂಸ್…..
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ: ಮೈಸೂರು ಜಿಲ್ಲೆಯಲ್ಲಿ ಮೌನ, ವರುಣದಲ್ಲಿ ಕಣ್ಣೀರು

ತಾಂಡವಪುರ ಮೇ 28: ರಾಜ್ಯ ರಾಜಕೀಯದ ಅತಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅದರಲ್ಲೂ ಮೈಸೂರಿನ ಜಿಲ್ಲೆಯವರೇ ಆಗಿದ್ದ ಡಿ.ದೇವರಾಜ ಅರಸು ಅವರ ನಂತರ ಅತಿಹೆಚ್ಚು ಬಾರಿ ರಾಜ್ಯವನ್ನು ಮುಖ್ಯಮಂತ್ರಿಯಾಗಿ ಮುನ್ನಡೆಸಿ ದಾಖಲೆ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ರವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ ಹೇಳಿದ ಮೇಲೆ ತವರು ಜಿಲ್ಲೆ ಮೈಸೂರಿನಲ್ಲಿ ಮೌನ ಆವರಿಸಿದ್ದರೆ, ಸ್ವಕ್ಷೇತ್ರ ವರುಣಗೆ ಕಣ್ಣೀರು ತರಿಸಿತಲ್ಲದೆ ಹುಟ್ಟೂರು ಸಿದ್ದರಾಮಯ್ಯನ ಹುಂಡಿಯಲ್ಲೂ ಭಾವನಾತ್ಮಕ ಮೌನ ಆವರಿಸಿತು.
ಕಳೆದೆರಡು ದಿನಗಳಿಂದ ಆದ ಬೆಳವಣಿಗೆಯನ್ನು ಟಿವಿಯಲ್ಲೇ ಕುಳಿತು ನೋಡುತ್ತಿದ್ದ ವರುಣ ಹಾಗೂ ಸಿದ್ದರಾಮನಹುಂಡಿಯ ಜನತೆ ಸಿದ್ದರಾಮಯ್ಯನವರ ಬಾಯಿಯಿಂದ ಅಂತಿಮವಾಗಿ ರಾಜೀನಾಮೆ ಮಾತು ಬರುವವರೆಗೂ ಮುಖ್ಯಮಂತ್ರಿಯಾಗಿಯೇ ಉಳಿಯುತ್ತಾರೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯಪಾಲರ ಭೇಟಿ, ಸಚಿವರ ಬ್ರೇಕ್ ಫಾಸ್ಟ್ ನಂತಹ ಬೆಳವಣಿಗೆ ಇಡೀ ದಿನದ ರಾಜಕೀಯ ಬೆಳವಣಿಗೆಯನ್ನು ತಿರುಗಿ ನೋಡುವಂತೆ ಮಾಡಿತ್ತು. ಅಲ್ಲದೆ, ಬಹುತೇಕ ಆತ್ಮೀಯರು ನಿನ್ನೆಯೇ ಬೆಂಗಳೂರಿಗೆ ತೆರಳಿ ಬೆಳವಣಿಗೆ ನೋಡಲಾರಂಭಿಸಿದ್ದರು. ಇನ್ನೂ ಅನೇಕರು ಇಲ್ಲಿಂದಲೇ ಸಿಎಂ ಆಪ್ತರಿಗೆ ಕರೆ ಮಾಡಿ ರಾಜಕೀಯ ಸ್ಪಷ್ಟತೆ ಬಗ್ಗೆ ಆಲೋಚಿಸುವ ಬಗ್ಗೆ ತೀರ್ಮಾನಿಸಿದ್ದರು. ಇನ್ನೂ ಅನೇಕರು ಮೈಸೂರಿನಿಂದ ಮತ್ತೊಬ್ಬ ಮುಖ್ಯಮಂತ್ರಿ ಹೊರಬರಬೇಕಾದರೂ ಇನ್ನೂ ಒಂದೆರಡು ತಲೆಮಾರಿನವರೆಗೆ ಕಾಯಬೇಕಷ್ಟೇ ಎಂಬ ಬೇಸರದ ನುಡಿಗಳನ್ನು ಹಾಕುತ್ತಿದ್ದ ದೃಶ್ಯ ವರುಣ ಕ್ಷೇತ್ರದಲ್ಲಿ ಕಂಡು ಬಂದಿತು.
ಇನ್ನೆರಡು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರನ್ನೇ ಮುಂದುವರೆಸಿ ಮುಂದಿನ ಚುನಾವಣೆಯ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ನೀಡಬಹುದಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ದುಡುಕಿದೆ ಎಂದು ಕೆಲವರು ಆಕ್ರೋಶ ಸಹ ಹೊರಹಾಕಿದರು.
ಸಿದ್ದು ಮಾತಿಗೆ ಎಲ್ಲರೂ ಗಪ್ ಚುಪ್
ಬೆಂಗಳೂರಿನಲ್ಲಿ ಸಿದ್ದರಾಮಯ್ಯ ತಾವೇ ಹೈಕಮಾಂಡ್ ಸೂಚನೆ ಮೇರೆಗೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿದರು. ಅಲ್ಲದೆ, ಕೆಲವು ಆತ್ಮೀಯರು ನಿನ್ನೆಯೇ ಮುಖ್ಯಮಂತ್ರಿ ಹುದ್ದೆ ಮುಂದುವರೆಸಲು ಒತ್ತಡ ಹೇರಲು ಪ್ರತಿಭಟನೆಗೂ ಮುಂದಾಗುವುದಾಗಿ ಸಿಎಂ ಸಿದ್ದು ಬಳಿ ಅವಲತ್ತುಕೊಂಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅದಾವುದಕ್ಕೂ ಆಸ್ಪದ ನೀಡದೇ ನಾನು ಹೇಳುವವರೆಗೂ ಮೌನವಾಗಿ ಇರುವಂತೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಬೇಸರದಲ್ಲೇ ಬೆಂಬಲಿಗರು ಮೌನಕ್ಕೆ ಜಾರಿದ್ದರು.











